ಬಯಲಿನಲ್ಲಿ ಬಯಲಾಗುವುದು

ಬುಧವಾರ, ಮೇ 22, 2019
32 °C

ಬಯಲಿನಲ್ಲಿ ಬಯಲಾಗುವುದು

Published:
Updated:
ಬಯಲಿನಲ್ಲಿ ಬಯಲಾಗುವುದು

ಬಸವಾದಿ ಶಿವಶರಣರು ಪ್ರತಿಪಾದಿಸಿದ ಲಿಂಗಾಯತ ದರ್ಶನದಲ್ಲಿ ಬಯಲು, ನಿರ್ವಯಲು, ಬರಿಬಯಲು, ಬಚ್ಚಬರಿಯ ಬಯಲು ಮುಂತಾದ ಪಾರಿಭಾಷಿಕ ಪದಗಳು ವಿಶೇಷ ಗಮನ ಸೆಳೆಯುತ್ತವೆ. ಶೂನ್ಯ, ನಿಶ್ಶೂನ್ಯ, ಸರ್ವಶೂನ್ಯ ನಿರಾಲಂಬ ಮುಂತಾದ ಪರ್ಯಾಯ ಪದಗಳಿಂದ ಇವು ಗುರುತಿಸಲ್ಪಡುವವು. ಶರಣರು ಪರವಸ್ತುವನ್ನು ಬಯಲು ಎಂದು ಹೆಸರಿಸಿದ್ದಾರೆ. ಅವರ ದೃಷ್ಟಿಯಲ್ಲಿ ಪರವಸ್ತು ಕಾರ್ಯರೂಪವಾದ ವಿಶ್ವ ಹಾಗು ಕಾರಣರೂಪವಾದ ಮಹಾಲಿಂಗ ಇವೆರಡಕ್ಕೂ ಮೂಲವಾದುದು. ಅಂದರೆ ಅದು ಕಾರ್ಯವೂ ಅಲ್ಲ, ಕಾರಣವೂ ಅಲ್ಲ. ಅದು ಏನೂ ಅಲ್ಲದ್ದರಿಂದ ಮತ್ತು ಅದರೊಳಗೆ ಏನೂ ಇಲ್ಲದ್ದರಿಂದ ಅದು ಬರಿಬಯಲು. ವ್ಯಕ್ತಿಯು ಅಧ್ಯಾತ್ಮ ಸಾಧನೆಯ ಮೂಲಕ ಇಂತಹ ಬಯಲಿನಲ್ಲಿ (ಪರವಸ್ತು) ತನ್ನನ್ನು ಸಂಪೂರ್ಣವಾಗಿ ಲೀನಗೊಳಿಸಿ ಅದರಲ್ಲಿ ಸಮರಸವಾಗುವುದಕ್ಕೆ ಬಯಲಿನಲ್ಲಿ ಬಯಲಾಗುವುದು ಎನ್ನುವರು.

ಈ ಸ್ಥಿತಿಯನ್ನು ಕುರಿತು ಷಣ್ಮುಖ ಸ್ವಾಮಿಗಳು- ಆದಿ ಇಲ್ಲದ ಬಯಲು, ಅನಾದಿ ಇಲ್ಲದ ಬಯಲು, ಶೂನ್ಯವಿಲ್ಲದ ಬಯಲು, ನಿಶ್ಶೂನ್ಯವಿಲ್ಲದ ಬಯಲು.... ಮಹಾಘನ ಬಚ್ಚಬರಿಯ ಬಯಲೊಳಗೆ ಎಚ್ಚರವಡಗಿ ನಾನೆತ್ತ ಹೋದೆನೆಂದರಿಯೆ ಎನ್ನುತ್ತಾರೆ. ಅಂದರೆ ಮಹಾಘನ ಮತ್ತು ಬಚ್ಚಬರಿಯ ಬಯಲು ಎನಿಸಿದ ಪರವಸ್ತುವಿನಲ್ಲಿ ಅಡಗಿ ಎತ್ತ ಹೋದೆನೆಂಬ ಭಾವವೂ ಅಳಿದ ಆನಂದದ ನಿಲವು. ಇದನ್ನೇ ಬಚ್ಚಬರಿಯ ಬಯಲೊಳಗೆ ಎಚ್ಚರವಡಗುವುದು, ಲಿಂಗಾಂಗ ಸಾಮರಸ್ಯವನ್ನು ಹೊಂದುವುದು ಅಥವಾ ಮೋಕ್ಷವನ್ನು ಪಡೆಯುವುದು ಎನ್ನಲಾಗಿದೆ.ನಿರಾಕಾರ ಸ್ವರೂಪವಾದ, ಬಚ್ಚಬರಿಯ ಬಯಲೆನಿಸಿದ ಪರವಸ್ತುವನ್ನು ಅಧ್ಯಾತ್ಮ ಸಾಧಕನಾದ ಶರಣನು ಸಾಧನೆಯ ಪ್ರಥಮ ಹಂತದಲ್ಲಿ ಇಷ್ಟಲಿಂಗದ ರೂಪದಲ್ಲಿ ಕಾಣುವನು. ಸಾಧನೆಯ ಮುಂದಿನ ಹಂತದಲ್ಲಿ ಇಷ್ಟಲಿಂಗ ರೂಪದ ಪರವಸ್ತುವನ್ನೇ ಪ್ರಾಣಲಿಂಗದ ರೂಪದಲ್ಲಿ ಬಯಲಾಗಿ ಕಾಣುವನು. ಇದು ಭಾವದಲ್ಲಿ ಭಗವಂತನನ್ನು ಅಭಿವ್ಯಕ್ತಗೊಳಿಸುವ ಮತ್ತು ಆ ಭಾವವನ್ನೇ ಬಯಲುಗೊಳಿಸುವ ಕ್ರಿಯೆಯಾಗಿದೆ. ಪರವಸ್ತುವನ್ನು ಭಾವದೃಷ್ಟಿಯಿಂದ ಕಂಡು ಅಭಿನ್ನಭಾವದಿಂದ ಬೆರೆಸಿ ಅನುಭವಿಸಿದಾಗ ಬೆರೆತೆನೆಂಬ ಭಾವವೂ ಇಲ್ಲ, ಪರವಸ್ತುವೂ ಇಲ್ಲ. ಭಾವ ಬಯಲಾಗಿ ಅರುಹು ಶೂನ್ಯವಾಗಿ ಅಖಂಡ ನಿರಾಳವೆನಿಸುವ ಸ್ಥಿತಿ ಇದು. ಏನೂ ಏನೂ ಇಲ್ಲದ ಬಚ್ಚಬರಿಯ ಬಯಲು.ಬಯಲು ಬಯಲನೆ ಬಿತ್ತಿ, ಬಯಲು ಬಯಲನೆ ಬೆಳೆದು, ಬಯಲು ಬಯಲಾಗಿ ಬಯಲಾಯಿತ್ತಯ್ಯಾ ಎನ್ನುತ್ತಾರೆ ಅಲ್ಲಮಪ್ರಭು. ಬಚ್ಚಬರಿಯ ಬಯಲೆನಿಸಿದ ಪರವಸ್ತುವನ್ನು ಅರಿತು ಅನುಭವಿಸಿದ ಸದ್ಗುರುವು ಶಿಷ್ಯನಲ್ಲಿ ಬಯಲು ಜ್ಞಾನವೆಂಬ ಬೀಜವನ್ನು ಬಿತ್ತಿದಾಗ ಬೆಳೆವ ಜ್ಞಾನ ವೃಕ್ಷದಲ್ಲಿ ಪರವಸ್ತುವೇ ನಾನೆಂಬ ಫಲ ಪ್ರಾಪ್ತಿಯಾಗುತ್ತದೆ. ಆಗ ಶಿಷ್ಯನ ಭಾವನೆಗಳೆಲ್ಲ ಬಯಲಾಗುತ್ತವೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry