ಏಕಕಾಲಕ್ಕೆ ಚುನಾವಣೆ ಕಾರ್ಯಸಾಧ್ಯವೇ?

7

ಏಕಕಾಲಕ್ಕೆ ಚುನಾವಣೆ ಕಾರ್ಯಸಾಧ್ಯವೇ?

ಡಾ. ಸಂದೀಪ್‌ ಶಾಸ್ತ್ರಿ
Published:
Updated:
ಏಕಕಾಲಕ್ಕೆ ಚುನಾವಣೆ ಕಾರ್ಯಸಾಧ್ಯವೇ?

ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವ ಚಿಂತನೆಯನ್ನು ಬಿಜೆಪಿ ಮತ್ತದರ ನಾಯಕತ್ವವು ತೇಲಿ ಬಿಟ್ಟಿದೆ. ಇತರ ರಾಜಕೀಯ ಪಕ್ಷಗಳು ಮತ್ತು ಜನಾಭಿಪ್ರಾಯ ಮೂಡಿಸುವವರು ಕೂಡ ಈ ಚರ್ಚೆಯಲ್ಲಿ ಭಾಗಿಯಾಗಿದ್ದಾರೆ. ಈ ಮಹತ್ವದ ಚುನಾವಣಾ ಸುಧಾರಣಾ ಕ್ರಮವನ್ನು ಬಹುತೇಕರು ಬೆಂಬಲಿಸಿದ್ದಾರೆ. ಒಂದು ವೇಳೆ, ಈ ಹೊಸ ಆಲೋಚನೆ ಬಗ್ಗೆ ರಾಜಕೀಯ ಪಕ್ಷಗಳಲ್ಲಿ ಒಮ್ಮತಾಭಿಪ್ರಾಯ ಮೂಡಿದರೆ ಏಕಕಾಲದಲ್ಲಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲು ತಾನು ಸಂಪೂರ್ಣ ಸಿದ್ಧ ಇರುವುದಾಗಿ ಚುನಾವಣಾ ಆಯೋಗವೂ ತನ್ನ ನಿಲುವನ್ನು ಪ್ರಕಟಪಡಿಸಿದೆ.

ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವ ಬೇಡಿಕೆಯನ್ನು ಹಲವಾರು ನೆಲೆಗಳಲ್ಲಿ ಸಮರ್ಥಿಸಿಕೊಳ್ಳಲಾಗುತ್ತಿದೆ. ಈ ನಿರ್ಧಾರ ಕಾರ್ಯಗತಗೊಂಡರೆ ವರ್ಷದ ಉದ್ದಕ್ಕೂ ಬೇರೆ, ಬೇರೆ ರಾಜ್ಯಗಳಲ್ಲಿ ನಡೆಯುವ ವಿಧಾನಸಭಾ ಚುನಾವಣಾ ಪ್ರಕ್ರಿಯೆಗೆ ಕಡಿವಾಣ ಬೀಳಲಿದೆ. ಪ್ರತಿ ಐದು ವರ್ಷಕ್ಕೊಮ್ಮೆ ಮಾತ್ರ ದೇಶದಲ್ಲಿ ಚುನಾವಣೆ ನಡೆಯಲಿದೆ.

ಇದರಿಂದ ಕೇಂದ್ರ ಮತ್ತು ರಾಜ್ಯಗಳಲ್ಲಿನ ಸರ್ಕಾರಗಳು ಆಡಳಿತ ನಿರ್ವಹಣೆಗೆ ತಮ್ಮೆಲ್ಲ ಗಮನ ಕೇಂದ್ರೀಕರಿಸಲು ಸಾಧ್ಯವಾಗಲಿದೆ. ಪ್ರತಿ ಬಾರಿ ಚುನಾವಣೆ ಘೋಷಣೆಯಾದಾಗ ಹೇರಲಾಗುವ ನೀತಿ ಸಂಹಿತೆ ಜಾರಿಗೆ ಸರ್ಕಾರ ಬದ್ಧತೆ ತೋರುವ ಪ್ರವೃತ್ತಿಗೆ ಇತಿಶ್ರೀ ಹಾಡಲು ಸಾಧ್ಯವಾಗಲಿದೆ.

ಚುನಾವಣಾ ವೆಚ್ಚವನ್ನು ಗಮನಾರ್ಹವಾಗಿ ತಗ್ಗಿಸುವ ಕ್ರಮವೂ ಅದಾಗಿರಲಿದೆ. ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲು ಸರ್ಕಾರ ಮಾಡುವ ಮತ್ತು ಚುನಾವಣಾ ಪ್ರಚಾರಕ್ಕೆ ರಾಜಕೀಯ ಪಕ್ಷಗಳು ಮಾಡುವ ವೆಚ್ಚದಲ್ಲಿ ಭಾರಿ ಉಳಿತಾಯ ಆಗಲಿದೆ.

ಏಕಕಾಲಕ್ಕೆ ಚುನಾವಣೆ ನಡೆಸುವ ವೇಳಾಪಟ್ಟಿಯು  ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯೆ ರಾಜಕೀಯ ಹೊಂದಾಣಿಕೆ ಮೂಡಿಸಲು ಕಾರಣವಾಗಲಿದೆ ಎಂದೂ ಪ್ರತಿಪಾದಿಸಲಾಗುತ್ತಿದೆ. ಇವೆಲ್ಲವೂ ನಿಜವಾಗಿಯೂ ಈ ವಾದ ಬೆಂಬಲಿಸುವ ಸಕಾರಾತ್ಮಕ ಕಾರಣಗಳಾಗಿವೆ.

ಏಕಕಾಲಕ್ಕೆ ಚುನಾವಣೆ ನಡೆಸುವುದು ನಿರ್ವಹಣೆ ದೃಷ್ಟಿಕೋನದಿಂದ ನೋಡಿದಾಗ ಹೆಚ್ಚು ದಕ್ಷತೆಯಿಂದ ಕೂಡಿದ ಮತ್ತು ಪರಿಣಾಮಕಾರಿಯಾದ ಸುಧಾರಣಾ ಕ್ರಮ ಆಗಿರಲಿದೆಯೇ ಅಥವಾ ಅದೊಂದು ಅರ್ಥಪೂರ್ಣ ರಾಜಕೀಯ ನಿರ್ಧಾರವೂ ಆಗಿರಲಿದೆಯೇ ಎನ್ನುವುದನ್ನೂ ಚರ್ಚೆಯ ಮುನ್ನೆಲೆಗೆ ತರುವುದರಿಂದಲೂ ಹೆಚ್ಚು ಪ್ರಯೋಜನಗಳಿವೆ.

ಇಲ್ಲಿ, ತಕ್ಷಣಕ್ಕೆ ಎರಡು ಸಂಗತಿಗಳು ಗಮನ ಸೆಳೆಯಲಿವೆ. ಪ್ರತ್ಯೇಕವಾಗಿ ಚುನಾವಣೆ ನಡೆಸುವುದರಿಂದ ಆಗುವ ಪ್ರಯೋಜನಗಳಾದರೂ ಏನು ಎನ್ನುವ ಪ್ರಶ್ನೆಯನ್ನು ಕೇಳಬೇಕಾಗುತ್ತದೆ.

ಮೊದಲನೆಯದಾಗಿ,1967ರವರೆಗೆ ದೇಶದಲ್ಲಿ ಎರಡೂ ಹಂತದ ಚುನಾವಣೆಯನ್ನು ಏಕಕಾಲಕ್ಕೆ ನಡೆಸಿಕೊಂಡು ಬರಲಾಗುತ್ತಿತ್ತು. 1967ರ ನಂತರ ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ಸೇತರ ಮೈತ್ರಿಕೂಟ ಸರ್ಕಾರಗಳು ಅಸ್ತಿತ್ವಕ್ಕೆ ಬರಲಾರಂಭಿಸಿದವು. ಆದರೆ, ಈ ಸರ್ಕಾರಗಳು ಅನೇಕ ಕಾರಣಗಳಿಗೆ ಪೂರ್ಣಾವಧಿವರೆಗೆ ಅಸ್ತಿತ್ವದಲ್ಲಿ ಇರಲು ವಿಫಲವಾದವು. ಹೀಗಾಗಿ ಅವಧಿಗೆ ಮುಂಚೆಯೇ ವಿಧಾನಸಭೆಗಳನ್ನು ವಿಸರ್ಜಿಸುವ ಅನಿವಾರ್ಯ ಸೃಷ್ಟಿಯಾಯಿತು.

ಇನ್ನೊಂದೆಡೆ ಕೇಂದ್ರ ಸರ್ಕಾರವು ಸಂವಿಧಾನದ 356ನೇ ಕಲಂ ದುರ್ಬಳಕೆ ಮಾಡಿಕೊಂಡು ರಾಜ್ಯಪಾಲರನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರಗಳನ್ನು ವಜಾ ಮಾಡುವ, ರಾಷ್ಟ್ರಪತಿ ಆಡಳಿತ ಹೇರುವ ಮತ್ತು ವಿಧಾನ ಸಭೆಗಳನ್ನು ಹಠಾತ್ತಾಗಿ ವಿಸರ್ಜಿಸುವ ಕೃತ್ಯಕ್ಕೆ ಮುಂದಾಗ

ತೊಡಗಿತ್ತು. ಹೀಗಾಗಿ ಐದು ವರ್ಷಗಳ ಮಧ್ಯದಲ್ಲಿಯೇ ವಿಧಾನಸಭೆಗಳಿಗೆ ಹೊಸದಾಗಿ ಚುನಾವಣೆ ನಡೆಸುವ ಅನಿವಾರ್ಯ ಸೃಷ್ಟಿಯಾಗುತ್ತಿತ್ತು.

ರಾಷ್ಟ್ರೀಯ ಮಟ್ಟದಲ್ಲಿಯೂ ಇದೇ ಬಗೆಯಲ್ಲಿ ಲೋಕಸಭೆಯನ್ನು 1979ರಲ್ಲಿ ವಿಸರ್ಜಿಸಲಾಯಿತು. 1977ರಲ್ಲಿ ಚುನಾವಣೆ ನಡೆದಿತ್ತು. 1980ರಲ್ಲಿ ಮತ್ತೆ ಚುನಾವಣೆ ನಡೆಸಲಾಗಿತ್ತು. 1989 ರಿಂದ 1999ರ ನಡುವಣ ಹತ್ತು ವರ್ಷಗಳ ಅವಧಿಯಲ್ಲಿ ಲೋಕಸಭೆಗೆ ಐದು ಬಾರಿ  ಚುನಾವಣೆ ನಡೆದಿತ್ತು. ಅಧಿಕಾರದಲ್ಲಿದ್ದ ಪಕ್ಷಗಳು ಲೋಕಸಭೆಯಲ್ಲಿ ಬಹುಮತಕ್ಕೆ ಎರವಾಗಿದ್ದವು. ಇನ್ನೊಂದು ಪಕ್ಷ ಅಥವಾ ಮೈತ್ರಿಕೂಟವು ಸರ್ಕಾರ ರಚನೆಗೆ ಅಸಮರ್ಥಗೊಂಡಿದ್ದರಿಂದ ರಾಷ್ಟ್ರಪತಿಯು ಲೋಕಸಭೆಯನ್ನು ಅವಧಿಗೆ ಮುಂಚೆಯೇ ವಿಸರ್ಜಿಸುವ ನಿರ್ಧಾರ ಕಾರ್ಯಗತಗೊಳಿಸಿದ್ದರು.

ಅಧ್ಯಕ್ಷೀಯ ವ್ಯವಸ್ಥೆಯಲ್ಲಿ ನಿರ್ದಿಷ್ಟ ಅವಧಿ ನಿಗದಿಪಡಿಸುವಂತೆ, ಸಂಸದೀಯ ವ್ಯವಸ್ಥೆಯಲ್ಲಿ ಅಧಿಕಾರಕ್ಕೆ ಬರುವ ಸರ್ಕಾರಕ್ಕೆ ಸ್ಪಷ್ಟ ಕಾಲಾವಧಿ ನಿಗದಿಪಡಿಸಲು ಸಾಧ್ಯವಿಲ್ಲ. ಅಧಿಕಾರದಲ್ಲಿ ಇರುವ ಪಕ್ಷ ಅಥವಾ ಮೈತ್ರಿಕೂಟವು ಲೋಕಸಭೆಯಲ್ಲಿ ಬಹುಮತ ಹೊಂದಿರುವುದರ ಆಧಾರದ ಮೇಲೆ ಅದರ ಅಧಿಕಾರಾವಧಿ ಅವಲಂಬಿಸಿರುತ್ತದೆ.

ಎರಡನೆಯದಾಗಿ, ಭಾರತವು ಒಕ್ಕೂಟ ವ್ಯವಸ್ಥೆಯಾಗಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗೆ ನಡೆಯುವ  ಚುನಾವಣೆಯು ವಿಭಿನ್ನ ರಾಜಕೀಯ ತಾತ್ವಿಕ ನೆಲೆಗಟ್ಟನ್ನು ಆಧರಿಸಿರುತ್ತದೆ. ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿನ ರಾಜಕೀಯ ಸ್ವರೂಪವು ತುಂಬ ಭಿನ್ನವಾಗಿರುತ್ತದೆ ಎಂದೂ ಕೆಲವರು ವಾದಿಸುತ್ತಾರೆ.

ಈ ವಾದವನ್ನು ನಾಲ್ಕು ನಿದರ್ಶನಗಳೂ ಸ್ಪಷ್ಟಪಡಿಸುತ್ತವೆ. 1984ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಜೀವ್‌ ಗಾಂಧಿ ಅವರು ಅಭೂತಪೂರ್ವ ಗೆಲುವು ಸಾಧಿಸಿದ್ದರು. ಕರ್ನಾಟಕದಲ್ಲಿ ಆಗ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷ ಅಧಿಕಾರದಲ್ಲಿದ್ದರೂ, ಕಾಂಗ್ರೆಸ್‌ ಪಕ್ಷವು ಬಹುತೇಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.  ಮೂರು ತಿಂಗಳ ನಂತರ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಅದೇ ಮತದಾರರು ಜನತಾ ಪಕ್ಷದ ಕೈಹಿಡಿದು ಗೆಲ್ಲಿಸಿದ್ದರು. ಹೆಗಡೆ ಅವರ ನೇತೃತ್ವದಲ್ಲಿನ ಜನತಾ ಪಕ್ಷವನ್ನು ಸ್ಪಷ್ಟ ಬಹುಮತದಿಂದ ಮರಳಿ ಅಧಿಕಾರಕ್ಕೆ ತಂದಿದ್ದರು.

2004ರಲ್ಲಿ ರಾಜ್ಯದಲ್ಲಿ ಲೋಕಸಭೆ ಮತ್ತು ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆದಿತ್ತು.  ಬಿಜೆಪಿಯು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಲೋಕಸಭಾ ಕ್ಷೇತ್ರಗಳನ್ನು ಗೆದ್ದುಕೊಂಡರೂ, ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯಲು ವಿಫಲಗೊಂಡಿತ್ತು.

2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಬಿಹಾರ ಮತ್ತು ದೆಹಲಿಯಲ್ಲಿ ಗಮನಾರ್ಹ ಸಾಧನೆ ತೋರಿತ್ತು. ಇದರ ಬೆನ್ನಲ್ಲೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಾತ್ರ ಪಕ್ಷವು ಅದೇ ಸಾಧನೆ ಪುನರಾವರ್ತಿಸುವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿತ್ತು. ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಹುದ್ದೆಗೆ ಕ್ರಮವಾಗಿ ನಿತೀಶ್‌ ಕುಮಾರ್‌ ಮತ್ತು ಅರವಿಂದ ಕೇಜ್ರಿವಾಲ್ ಅವರೇ ಸೂಕ್ತ ಅಭ್ಯರ್ಥಿಗಳು ಎಂದು ಮತದಾರರು ತಮ್ಮ ಆಯ್ಕೆಯನ್ನು ಈ ಎರಡೂ ಚುನಾವಣೆಗಳಲ್ಲಿ ಸ್ಪಷ್ಟಪಡಿಸಿದ್ದರು.

ಎರಡು ಭಿನ್ನ ಹಂತಗಳ ಸರ್ಕಾರಗಳನ್ನು ಆಯ್ಕೆ ಮಾಡಲು ನಡೆಯುವ ಚುನಾವಣೆಯಲ್ಲಿ ಸಾಕಷ್ಟು ವ್ಯತ್ಯಾಸ ಇರುವುದು ಇದರಿಂದ ವೇದ್ಯವಾಗುತ್ತದೆ. ವಸ್ತುಸ್ಥಿತಿ  ಹೀಗಿರುವಾಗ, ಏಕಕಾಲದಲ್ಲಿ ಚುನಾವಣೆ ನಡೆಸುವುದರಿಂದ ‘ಒಕ್ಕೂಟ ಸಂಸ್ಕೃತಿ’ ಮೇಲೆ ಅದು ವ್ಯತಿರಿಕ್ತ ಪರಿಣಾಮ ಬೀರುವುದೇ ಎನ್ನುವುದನ್ನೂ ಚರ್ಚಿಸುವುದು ಹೆಚ್ಚು ಉಪಯುಕ್ತ ಆಗಿರಲಿದೆ.

ಬೇರೆ, ಬೇರೆ ಆಸಕ್ತಿದಾಯಕ ನೆಲೆಯಲ್ಲಿ ಮತ್ತು ವಿಭಿನ್ನ ರಾಜಕೀಯ ವಾತಾವರಣದಲ್ಲಿ, ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಪ್ರಚಲಿತ ವಿಷಯಗಳನ್ನು ಮತದಾರರ ಮುಂದಿಟ್ಟು ಮತ ಕೇಳುವುದರಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಒದಗುವುದೇ ಎನ್ನುವುದನ್ನೂ ನಾವಿಲ್ಲಿ ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

ನಾನು ಈ ಮೊದಲೇ ಉಲ್ಲೇಖಿಸಿರುವಂತೆ, ಏಕಕಾಲದಲ್ಲಿ ಚುನಾವಣೆ ನಡೆಸಲು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳು ಐದು ವರ್ಷ ಪೂರ್ಣಗೊಳಿಸುವುದನ್ನು ಖಾತರಿಪಡಿಸುವ ಏಕೈಕ ಉದ್ದೇಶಕ್ಕೆ ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ದುರ್ಬಲಗೊಳಿಸಲು ಹವಣಿಸಬಾರದು. ಅದರಲ್ಲೂ ವಿಶೇಷವಾಗಿ ಯಾವುದೇ ಪಕ್ಷ ಅಥವಾ ಮೈತ್ರಿಕೂಟವು  ಬಹುಮತ ಪಡೆಯದಿದ್ದಾಗ ಅಥವಾ ವಿಧಾನಸಭೆಯಲ್ಲಿ ಬಹುಮತವನ್ನು ಸಾಬೀತುಪಡಿಸಲು ವಿಫಲವಾದಾಗ ಇಂತಹ ಪ್ರಯತ್ನಕ್ಕೆ ಅವಕಾಶವೂ ಇರಬಾರದು.

ಈ ನಿಟ್ಟಿನಲ್ಲಿ ಜರ್ಮನಿಯಲ್ಲಿ ಜಾರಿಯಲ್ಲಿ ಇರುವ ವ್ಯವಸ್ಥೆ ನಮಗೆ ಇಲ್ಲಿ ಹೆಚ್ಚು ಉಪಯುಕ್ತ ಎನಿಸಬಹುದು. ಅಲ್ಲಿ ಅಧಿಕಾರದಲ್ಲಿರುವ ಸರ್ಕಾರವೊಂದನ್ನು ಸದನದಲ್ಲಿ ಮತ ಚಲಾಯಿಸಿ ಕೆಳಗೆ ಇಳಿಸುವಾಗ, ಅದಕ್ಕೆ ಪರ್ಯಾಯವಾಗಿ ಹೊಸ ಸರ್ಕಾರವನ್ನು ಆಯ್ಕೆ ಮಾಡುವುದು ಕಡ್ಡಾಯ ಮಾಡಲಾಗಿದೆ. ಚುನಾಯಿತ ಸಭೆಯು ಪರ್ಯಾಯ ಪಕ್ಷ ಅಥವಾ ಮೈತ್ರಿಕೂಟ ಸರ್ಕಾರವನ್ನು ಅನುಮೋದಿಸುವ ಮೊದಲು ಅಧಿಕಾರದಲ್ಲಿ ಇರುವ ಸರ್ಕಾರವು ರಾಜೀನಾಮೆ ಸಲ್ಲಿಸುವ ಅಗತ್ಯವೂ ಅಲ್ಲಿ ಉದ್ಭವಿಸುವುದಿಲ್ಲ.

ಭಾರತದಲ್ಲಿ, ಚುನಾಯಿತ ಸದಸ್ಯರ ವಿಶ್ವಾಸಮತ ಕಳೆದುಕೊಂಡಾಗ ಇಲ್ಲವೇ ಪ್ರತಿಪಕ್ಷಗಳು ಮಂಡಿಸಿದ ಅವಿಶ್ವಾಸ ನಿರ್ಣಯದಲ್ಲಿ ಸೋಲು ಉಂಟಾದಾಗ ಸರ್ಕಾರವೊಂದು ರಾಜೀನಾಮೆ ಸಲ್ಲಿಸಲು ಮುಂದಾಗುತ್ತದೆ. ಸದನದಲ್ಲಿ ಸದಸ್ಯರ ವಿಶ್ವಾಸಕ್ಕೆ ಎರವಾಗುವ ಸಾಧ್ಯತೆ ಹೆಚ್ಚಿದಾಗ ಸರ್ಕಾರವೇ ರಾಜೀನಾಮೆ ನೀಡಿ ಅಧಿಕಾರದಿಂದ ನಿರ್ಗಮಿಸುತ್ತದೆ.

ಜರ್ಮನಿಯಲ್ಲಿ ಸರ್ಕಾರವೊಂದರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ  ಮತ್ತು ಅದರ ಫಲವಾಗಿ ಅಧಿಕಾರದಲ್ಲಿದ್ದ ಸರ್ಕಾರ ನಿರ್ಗಮಿಸುವ ಮೊದಲೇ, ಚುನಾಯಿತ ಸಭೆಯು ಹೊಸ ನಾಯಕನ ನೇತೃತ್ವದಲ್ಲಿ ನೂತನ ಸರ್ಕಾರವು ಸುಸೂತ್ರವಾಗಿ ಅಧಿಕಾರದ ಸೂತ್ರ ಹಿಡಿಯಲು ಪೂರ್ವಸಿದ್ಧತೆ ಮಾಡಿಕೊಂಡಿರಬೇಕಾಗಿರುತ್ತದೆ.

ಒಂದು ವೇಳೆ ನಮ್ಮಲ್ಲೂ ಅಂತಹ ವ್ಯವಸ್ಥೆಯನ್ನು ಅನುಕರಿಸುವಂತಾದರೆ, ಚುನಾಯಿತ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳು ಐದು ವರ್ಷಗಳ ಅವಧಿ ಪೂರ್ಣಗೊಳಿಸಲು ಸಾಧ್ಯವಾಗಲಿದೆ. ಅಂತಹ ಸಂದರ್ಭದಲ್ಲಿ ಮಾತ್ರ ಏಕಕಾಲಕ್ಕೆ ಚುನಾವಣೆ ನಡೆಸುವುದು ಕಾರ್ಯಸಾಧ್ಯವಾದ ಪರಿಹಾರವಾಗಲಿದೆ.

ಏಕಕಾಲಕ್ಕೆ ಚುನಾವಣೆ ನಡೆಸುವ ಸಲಹೆಯು ರಾಜ್ಯಗಳ ರಾಜಕೀಯದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ  ಅಥವಾ ರಾಷ್ಟ್ರ ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ವಿಶೇಷ ಅನುಕೂಲ ಕಲ್ಪಿಸಿಕೊಡಲಿದೆಯೇ ಎನ್ನುವ ಪ್ರಶ್ನೆಗೂ ಉತ್ತರ ಕಂಡುಕೊಳ್ಳಬೇಕಾಗಿದೆ.

ಅಖಿಲ ಭಾರತ ಮಟ್ಟದ ಚುನಾವಣಾ ಪ್ರಚಾರಕ್ಕೆ ಹೊಸ ಹುರುಪು ನೀಡುವ ರಾಷ್ಟ್ರೀಯ ನಾಯಕರ ಭಾಷಣದ ವೈಖರಿಯು, ಸ್ಥಳೀಯ ಸಂಗತಿಗಳು ಮತ್ತು ಪ್ರಾದೇಶಿಕ ವೈಶಿಷ್ಟ್ಯಗಳನ್ನು  ಮೆಟ್ಟಿನಿಂತು ಗೆಲುವು ತಂದುಕೊಡಲಿದೆ ಎನ್ನುವುದು ಏಕಕಾಲಕ್ಕೆ ಚುನಾವಣೆ ನಡೆಸಬೇಕಾದ ಅಗತ್ಯ ಇದೆ ಎಂದು ಪ್ರತಿಪಾದಿಸುವವರ ಬಲವಾದ ನಂಬಿಕೆಯಾಗಿದೆ.

ಏಕಕಾಲಕ್ಕೆ ಚುನಾವಣೆ ನಡೆಯುವುದರಿಂದ ರಾಜ್ಯಗಳು ‘ರಾಜಕೀಯದ ಕೇಂದ್ರಬಿಂದುವಾಗಿ’ ಹೊರ ಹೊಮ್ಮಲಿವೆ. ರಾಷ್ಟ್ರೀಯ ಚುನಾವಣಾ ಫಲಿತಾಂಶವು, 29 ರಾಜ್ಯಗಳ ಜನಾಭಿಪ್ರಾಯವೂ ಆಗಿರಲಿದೆ. ಈ ವಿಷಯವೂ ಇನ್ನೊಂದು ಚರ್ಚಾ ವಸ್ತು ಆಗಿರಲಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry