7

ವರಸೆ ಬದಲಿಸುವ ರಾಜಕೀಯ ನಡೆಗಳು

Published:
Updated:
ವರಸೆ ಬದಲಿಸುವ ರಾಜಕೀಯ ನಡೆಗಳು

ರಾಜ್ಯವಾಳುವುದು, ಮಠವಾಳುವುದು ಬೇರೆ ಬೇರೆ. ಉತ್ತರ ಪ್ರದೇಶ ಅದೊಂದು ಮಿನಿ ಭಾರತ. ಗಂಗಾ- ಯಮುನೆಯರು ವಾಯವ್ಯ ಮೂಲೆಯಿಂದ ನೆಂಟರನ್ನು, ಬಂಟರನ್ನು, ಅತಿ ಪಟಿಂಗರನ್ನು ಬರಮಾಡಿಕೊಂಡ ಸುಂದರಿಯರು. ಲೋಹಿಯಾ ಮಾತಿನಲ್ಲಿ ಹೇಳುವುದಾದರೆ ದಿಲ್ಲಿ ಕೂಡ ಅತಿ ನಯ, ನಾಜೂಕಿನ ನಾಗಸಾನಿ. ಆಗ್ರಾ ಕೋಟೆ ಶೌರ್ಯದ ಸಂಕೇತವೆನಿಸಿದರೆ, ತಾಜ್ ಪ್ರೀತಿಯ ಮಹಲ್. ಷಹಜಹಾನ್‌ ಆದಿಯಾಗಿ ಮೊಗಲರ ರಕ್ತದಲ್ಲಿ ಇಸ್ಲಾಂ ರಕ್ತಕಣಗಳನ್ನೂ ಸಿಂಧೂ ಹಾದಿಯ ಸನಾತನಿ ಕಣಗಳನ್ನೂ ವಿಭಜಿಸುವುದೆಂತು!

ರಾಜಕಾರಣವೆಂಬುದೇ ಕೊರಳು ಕೊಯ್ಯುವ ಹತಾರ. ಅದಕ್ಕೆ ಮೊಗಲರ ವಂಶ, ಅಶೋಕನ ವಂಶ, ಕುರುವಂಶ ಯಾವುದೂ ಹೊರತಲ್ಲ. ಇದನ್ನೇ ಕೇಟ್‌ಮಿಲೆಟ್ ‘ರಾಜಕೀಯದ ಸಾರವೆಂದರೆ ಅಧಿಕಾರ’ ಎನ್ನುವುದು. ಅಧಿಕಾರ ಎಂಬುದೊಂದು ಅಮಲು. ಹೀಗಾಗಿಯೇ ಮಠದ ಗದ್ದುಗೆಗೆ ಬದಲಾಗಿ ಆದಿತ್ಯನಾಥರು ರಾಜಕೀಯವನ್ನು ಅಧಿಕಾರದ ಸಾರಕ್ಕೆ ಬಳಸಿಕೊಳ್ಳುತ್ತಿರುವುದು. ಅಲ್ಲಿನ ಸರ್ಕಾರವು ಪ್ರವಾಸೋದ್ಯಮ ಇಲಾಖಾ ಪರಿಚಯ ಪುಸ್ತಕದಿಂದ ಜಗದದ್ಭುತ ತಾಜ್‌ಮಹಲನ್ನು ತೆಗೆದುಹಾಕುತ್ತದೆ. ಈ ಈರ್ಷೆಯು ಅದೇ ಸರ್ಕಾರದ ಒಬ್ಬ ಗಲಭೆ ಹಿನ್ನೆಲೆಯ ಶಾಸಕನ ಬಾಯಿಂದ ಮತೀಯ ಭಾವನೆ ಸಿಡಿಸುತ್ತದೆ. ಹಾಗಾಗಿ ಆತ ‘ತಾಜ್‌ಮಹಲ್ ಇತಿಹಾಸದ ಕಪ್ಪು ಚುಕ್ಕೆ’ ಎಂದುಬಿಡುತ್ತಾರೆ. ಅದರ ಹಿಂದೆಯೇ ಆ ಪಕ್ಷದ ಪ್ರಬಲ ಮತೀಯ ಎದುರಾಳಿ ಓವೈಸಿ ಹೇಳಿಕೆ ನೀಡಿ ‘ಐತಿಹಾಸಿಕ ಕೆಂಪುಕೋಟೆ ಮೇಲೆ ಬಾವುಟ ಹಾರಿಸುವುದನ್ನು, ದಿಲ್ಲಿಯ ಹೈದರಾಬಾದ್ ಹೌಸ್‌ನಲ್ಲಿ ಅತಿಗಣ್ಯರಿಗೆ ನೀಡುವ ಆತಿಥ್ಯವನ್ನು ನಿಲ್ಲಿಸುತ್ತೀರೋ?’ ಎಂದು ಸವಾಲು ಒಡ್ಡಿಬಿಡುತ್ತಾರೆ.

ಇವೇ ಸೇರಿಗೆ ಸವ್ವಾಸೇರೆಂಬ ಮತೀಯ ಬಿರುಸು ಬಾಣಗಳು. ಅವೇ ಭಾರತೀಯತೆ ಎಂಬ ಕೃಷಿ ಬಣವೆ ಮೇಲೆ ಬಂದು ಬೀಳುವ ಬೆಂಕಿಕಿಡಿಗಳು. ಈ ನಡೆಗಳು, ತಾಲಬಾನಿಗಳು ಬುದ್ಧ ಪರ್ವತವೆಂಬ ಅಲ್ಲಿನ ಅಂತರರಾಷ್ಟ್ರೀಯ ಪ್ರಭುದ್ಧತೆಯನ್ನು ನಿರ್ನಾಮಗೊಳಿಸಿಕೊಂಡ ರೀತಿಗೆ ಸಮನಾದವು. ಭಾರತ ಸಂವಿಧಾನವು ಕೇವಲ ಸನಾತನಿಗಳ ನಡಾವಳಿಗಳಲ್ಲ. ಶ್ರೀರಾಮ ಕುಬ್ಜನೂ ಅಲ್ಲ; 170 ಲಕ್ಷ ದೀಪಗಳಲ್ಲಿ ಹುಡುಕಿದರೂ ಕಾಣುವವನೂ ಅಲ್ಲ. ಅವೆಲ್ಲವೂ ಗಾಂಧೀಜಿ, ಅಂಬೇಡ್ಕರ್ ಇಂತಹವರು ಚಿಂತಿಸಿ ಮಂಥಿಸಿದ ನೋವುಗಳಲ್ಲಿ ಅಡಕವಾಗಿವೆ.

ಹಿಂದೂ ಎಂದು ಬೀಗುವ ಒಂದು ಪಕ್ಷದ ದನಿಯಲ್ಲಿ ಎಲ್ಲರನ್ನೂ ತಬ್ಬಿನಡೆವ ಉಸಿರು ಇಲ್ಲ. ತಾಕಲಾಟಕ್ಕೆ ವಿಚಾರ ಬೆಚ್ಚಿದಾಕ್ಷಣ ಮಾರನೇ ದಿನವೇ ವರಸೆ ಬದಲಿಸಿದ ದೇಶದ ಪ್ರಧಾನಿ ಹಾಗೂ ರಾಜ್ಯದ ಮುಖ್ಯಮಂತ್ರಿಗಳಿಬ್ಬರೂ ‘ತಾಜ್ ಸಂರಕ್ಷಣೆ ಸರ್ಕಾರದ ಹೊಣೆ’ ಎನ್ನುವುದಲ್ಲದೆ, ತಮ್ಮ ಇತಿಹಾಸ ಪರಂಪರೆ ಬಗ್ಗೆ ಹೆಮ್ಮೆ ಇದೆ ಎಂದುಬಿಡುತ್ತಾರೆ. ಈ ಮಾತಿನ ಹಿಂದೆಯೇ ಸಂಸದರೊಬ್ಬರು ಹಗುರವಾಗಿ ‘ತಾಜ್‌ಮಹಲ್‌ ಇದು ದೇಗುಲವಾಗಿದ್ದ ತೇಜೋಮಹಲ್’ ಎಂದು ಮಾತನಾಡುತ್ತಾರೆ. ಇದು, ಒಂದು ಕಡೆ ಮಗುವನ್ನು ಜಿಗುಟಿ ಮತ್ತೊಂದೆಡೆ ಸುಮ್ಮನಿರಿಸಲು ಮುದ್ದಾಡುವ ಹುಸಿತಾಯಿ ಆಟ. ಅವು ವರಸೆ ಬದಲಾಯಿಸುವ ರಾಜಕೀಯ ನಡೆಗಳು.

ಈ ರೀತಿ ಕಡ್ಡಿಯಾಡಿಸುವ ಆಟ ಹೊಸದೇನಲ್ಲ. ‘ವಂದೇಮಾತರಂ’ ಹೇಳುವುದು ಕಡ್ಡಾಯ, ಎಲ್ಲರ ಕರ್ತವ್ಯ ಎಂದು ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. 1870ರ ಸಮಯದ ಬಂಕಿಮಚಂದ್ರರ ‘ಆನಂದ ಮಠ’ ಕಾದಂಬರಿಯಲ್ಲಿನ ವಂದೇಮಾತರಂ ಗೀತೆಯ ಅರ್ಥ ಹಾಗೂ ಉದ್ದೇಶವನ್ನು ಗಾಂಧೀಜಿ, ಇಡೀ ದೇಶವನ್ನು ಒಂದುಗೂಡಿಸಲು ಅಳವಡಿಸಿಕೊಂಡಿದ್ದರು. ಸ್ವಾತಂತ್ರ್ಯಾನಂತರ ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶಿಸಿ ‘ವಂದೇಮಾತರಂ’ಗೆ ಸಂವಿಧಾನ ಮಾನ್ಯತೆಯಿಲ್ಲ ಎನ್ನಬೇಕಾಯಿತು. ಆದರೂ ಕ್ಯಾತೆ ನಿಂತಿಲ್ಲ. ಹೀಗೆ ಆಗಾಗ್ಗೆ ಸಮಸ್ಯೆಯನ್ನು ಹುಟ್ಟುಹಾಕುತ್ತಾ ಸಾಗುವ ಮನಸ್ಸುಗಳು ರಾಜಕೀಯ ಗದ್ದುಗೆ ಹಿಡಿಯಲು ಹಲವು ವೇಷ ಹಾಕುವುದುಂಟು.

ಶ್ರೀರಾಮ, ಈಶ್ವರಾದಿಗಳೊಡನೆ ದೇಶವು ಭಾರತೀಕರಣಗೊಂಡಿರುವ ವಿಚಾರಗಳನ್ನು ಅತ್ತ ಸರಿಸುತ್ತಾ ಗಾಂಧೀಜಿ, ವಿವೇಕಾನಂದ, ಅಂಬೇಡ್ಕಾರಾದಿಗಳನ್ನು ಬೇಕೆಂಬ ಬಿಲ್ಲು ಬಾಣಕ್ಕೆ ಬಾಗಿಸಿಕೊಳ್ಳುವ ರೀತಿಯೇ ಹಿಂದುತ್ವ ಎನ್ನುವುದಾದರೆ ಶೇಕಡ 90ರಷ್ಟು ಭಾರತೀಯರು ಹೊರಗಿನವರಾಗಿ, ಅಪರಿಚಿತರಾಗಿ ಬಿಡುತ್ತಾರೆ. ಇದನ್ನೇ ‘ನಾವು ಅರ್ಥಮಾಡಿಕೊಂಡಿರುವ ರಾಷ್ಟ್ರೀಯತೆ 20ನೇ ಶತಮಾನದ ಕೇಡು’ ಎಂದು ಮಹರ್ಷಿ ರವೀಂದ್ರರು ಕರೆದಿರುವುದು. ಇಂಥಾದನ್ನು 10ನೇ ಶತಮಾನದಲ್ಲಿ ಕಾಶ್ಮೀರದ ಅಭಿನವಗುಪ್ತ ‘ನಾನೇ ಶಿವ ಎಂದು ಪಟ್ಟವೇರಿದ ಸ್ವಯಂ ಘೋಷಿತ ಗುರುಗಳನ್ನು ಹಿಂಬಾಲಿಸಿ ಗೊಂದಲದಲ್ಲಿ ಬಿದ್ದೆ’ ಎನ್ನುತ್ತಾನೆ. ಹಾಗಾಗಿದೆ ಇಂದು ದೇಶದ ಸ್ಥಿತಿ.

ಅನ್ಯಮತೀಯರು ಈ ದೇಶಕ್ಕೆ ಉಪಯೋಗವಿಲ್ಲ ಎನ್ನುವ ಮನಸ್ಸುಗಳನ್ನು ಇತ್ತೀಚಿನ ಬ್ಲೂವೇಲ್ ಆಟ ತಯಾರಕ ಫಿಲಿಪ್ ಬುಡಕಿನ್ ಎಂಬ ತಲೆಹೋಕನ ಸ್ಥಿತಿಗೆ ಹೋಲಿಸಬಹುದು. ‘ಉಪಯೋಗಕ್ಕೆ ಬಾರದವರನ್ನು ಇಲ್ಲದಂತೆ ಮಾಡಿ ಸಮಾಜವನ್ನು ಶುಚಿಗೊಳಿಸುತ್ತೇನೆ’ ಎಂಬುದು ಆತನ ಮನೋಸ್ಥಿತಿ. ಮಹಾಭಾರತವು ಇಂಥಾದನ್ನು ‘ತಾನು ಎಲ್ಲವನ್ನೂ ಬಲ್ಲೆನೆಂದು ತಿಳಿವುದೇ ಮೂರ್ಖತನ’ ಎನ್ನುತ್ತದೆ. ಅಲ್ಲಿನ ಆಟದ ಕರ್ತೃ ಶ್ರೀಕೃಷ್ಣನನ್ನು ಅರ್ಥಮಾಡಿಕೊಳ್ಳದ ವರ್ತಮಾನದ ಭಾರತ ಮೂರ್ಖತ್ವದ ಕಡೆ ಚಲಿಸುತ್ತಿದೆ.

ದೇಶವಾಳುವುದೆಂದರೆ ಅದೊಂದು ಗೆಳೆತನದ ತತ್ವ. ‘ಗೆಳೆತನವೆಂಬುದು ನಿಧಾನಕ್ಕೆ ಫಲಬಿಡುವ ಮರವಿದ್ದಂತೆ’ ಎನ್ನುವ ಅರಿಸ್ಟಾಟಲನ ಮಾತು ಭೂಮಿತೂಕದ್ದು. ಎಲ್ಲರನ್ನೂ ಆಹ್ವಾನಿಸಿ ಭಾರತೀಕರಣಗೊಳಿಸಿಕೊಂಡಿರುವುದೇ ಭಾರತದ ವೈಶಿಷ್ಟ್ಯ. ಅದರಲ್ಲಿ ಕ್ರೌರ್ಯವೂ ಇದೆ. ಅಭಿವೃದ್ಧಿಯೂ ಇದೆ. ಸಿಹಿ–ಕಹಿಗಳೆರಡೂ ಸಮತೂಕದಲ್ಲಿವೆ. ಗಾಂಧೀಜಿ ಹೇಳುವ ‘ಹಸಿಗಡಿಗೆ ಒಂದಕ್ಕಲ್ಲ ಮತ್ತೊಂದಕ್ಕೆ ತಗಲಿ ಒಡೆದು ಹೋಗುತ್ತದೆ. ಯಾವುದಕ್ಕೂ ತಗಲದಂತೆ ಗಡಿಗೆಯನ್ನು ದೂರ ಇಡುವುದಲ್ಲ ಉಪಾಯ, ಒಡೆಯದಂತೆ ಗಡಿಗೆಯನ್ನು ಸುಡುವುದು’ ಎಂಬ ‘ಹಿಂದ್ ಸ್ವರಾಜ್’ ನುಡಿಗೆ ಶತಮಾನ ಕಳೆದಿದೆ. ಈ ಅವಧೂತನ ಮಾತನ್ನು ಸನ್ಯಾಸಿ, ಬ್ರಹ್ಮಚಾರಿ, ಸಂಸಾರಿ ಯಾರೇ ರಾಜ್ಯವಾಳಲಿ... ಸ್ವೀಕರಿಸಿ ನಡೆದರೆ ಅದೇ ಭಾರತೀಯತೆ. ಇದು ಹೊರತು ಸುಮ್ಮನೆ ಸಮಸ್ಯೆ ಸೃಷ್ಟಿಸುತ್ತಾ ನಡೆವಾತ ಅಲ್ಲಮನು ಹೇಳುವಂತೆ ‘ಸಂಸಾರವೆಂಬ ಹೆಣ ಬಿದ್ದಿದೆ- ತಿನಬಂದನಾಯಿ ಜಗಳವ ನೋಡಿರೆ- ನಾಯ ಜಗಳವನೋಡಿ ಹೆಣನೆದ್ದು ನಗುತಿದೆ’ ಎಂಬ ಅಪಹಾಸ್ಯಕ್ಕೀಡಾಗುವುದು ಖಂಡಿತ.

ಭಾರತದ ಪ್ರಜಾಪ್ರಭುತ್ವವು ದಿನ ಬೆಳಗಾದರೆ ಮಗ್ಗುಲು ಬದಲಾಯಿಸುತ್ತಾ ಬೆಳೆಯುವ ಶಿಶು. ಇಲ್ಲಿನ ಕಾನೂನು ಕಟ್ಟಳೆಗಳು ಪರಂಪರೆಯ ಜ್ಞಾನದ ಟಿಸಿಲುಗಳು. ಅವಕ್ಕೆ ಆಳವಾದ ಬೇರುಗಳಿವೆ. ‘ಕಾನೂನು ಮಲಗಿದೆಯಾದರೂ ಸತ್ತಿಲ್ಲ’ ಎಂಬ ಷೇಕ್ಸ್‌ಪಿಯರ್‌ನ ನುಡಿ ಮಾರ್ಗವಿಲ್ಲಿದೆ. ‘ಮನುಷ್ಯ ಸೃಷ್ಟಿಯಾಗಿರುವುದು ಸಂತೋಷವಾಗಿರಲೆಂದು. ಅಸಂತೋಷ ಅವನೊಳಗೇ ಇರುತ್ತದೆ’ ಎಂಬ ಟಾಲ್ಸ್‌ಟಾಯ್ ಮಾತೇ ಇಂಥಾದಕ್ಕೆ ಪೂರಕ. ಈ ನಡೆಗಳು ಬೇಕಾಗಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry