ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋಟೊ ಎಡಿಟ್ ಮಾಡಿ ಮಹಿಳೆಗೆ ಬ್ಲ್ಯಾಕ್‍ಮೇಲ್

Last Updated 24 ಅಕ್ಟೋಬರ್ 2017, 20:21 IST
ಅಕ್ಷರ ಗಾತ್ರ

ಬೆಂಗಳೂರು: ಮಹಿಳಾ ಸಹೋದ್ಯೋಗಿಯ ಫೋಟೊವನ್ನು ಅಶ್ಲೀಲ ಚಿತ್ರವನ್ನಾಗಿ ಪರಿವರ್ತಿಸಿದ್ದ ನಾರಾಯಣ ಪ್ರಭು ಎಂಬಾತ, ಹಣ ಕೊಡದಿದ್ದರೆ ಆ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಇದೀಗ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಆತನನ್ನು ಬಂಧಿಸಿ ಸೆರೆಮನೆಗೆ ಕಳುಹಿಸಿದ್ದಾರೆ.

ಎಚ್‌ಎಎಲ್ 2ನೇ ಹಂತದ ನಿವಾಸಿಯಾದ ಸಂತ್ರಸ್ತೆ, ಇನ್ಫೆಂಟ್ರಿ ರಸ್ತೆಯಲ್ಲಿನ ಕಂಪೆನಿಯೊಂದರಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿ ಮೂರು ತಿಂಗಳಿನಿಂದ ಕೆಲಸ ಮಾಡುತ್ತಿದ್ದಾರೆ. ಆರೋಪಿ ಸಹ ಅದೇ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ. ಹೀಗಾಗಿ, ಅವರಿಬ್ಬರ ನಡುವೆ ಸ್ನೇಹ ಬೆಳೆದಿತ್ತು ಎಂದು ಪೊಲೀಸರು ಹೇಳಿದ್ದಾರೆ.

‘ಜಾಹೀರಾತು ಏಜೆನ್ಸಿಯೊಂದರಲ್ಲಿ ನಿನಗೆ ಕೆಲಸ ಕೊಡಿಸುತ್ತೇನೆ. ಅದರಿಂದ ಹೆಚ್ಚಿನ ಆದಾಯ ಸಿಗುತ್ತದೆ’ ಎಂದು ನಂಬಿಸಿದ ಆರೋಪಿ, ಸಂತ್ರಸ್ತೆಯಿಂದ ಅವರ ಫೋಟೊಗಳನ್ನು ತರಿಸಿಕೊಂಡಿದ್ದ. ಬಳಿಕ ಅಂತರ್ಜಾಲದಲ್ಲಿ ನಗ್ನಚಿತ್ರಗಳನ್ನು ಡೌನ್‌ಲೋಡ್ ಮಾಡಿಕೊಂಡ ಆತ, ಆ ಚಿತ್ರದಲ್ಲಿರುವ ದೇಹಕ್ಕೆ ಸಂತ್ರಸ್ತೆಯ ಮುಖವನ್ನು ಹೊಂದಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬ್ಲ್ಯಾಕ್‌ಮೇಲ್: ‘ನನಗೆ ₹ 3 ಲಕ್ಷ ಕೊಡಬೇಕು ಹಾಗೂ ಲೈಂಗಿಕ ಕ್ರಿಯೆಗೆ ಸಹಕರಿಸಬೇಕು. ಇಲ್ಲವಾದರೆ ಈ ಅಶ್ಲೀಲ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಮರ್ಯಾದೆ ತೆಗೆಯುತ್ತೇನೆ. ನಿನ್ನ ಗಂಡನಿಗೂ ಕಳುಹಿಸಿ ಸಂಸಾರ ಹಾಳು ಮಾಡುತ್ತೇನೆ’ ಎಂದು ಹೆದರಿಸಿದ್ದ. ಅಲ್ಲದೆ, ಒಂದು ಸಲ ಸಂತ್ರಸ್ತೆಯ ಪತಿಗೂ ಕರೆ ಮಾಡಿ ವಿಷಯ ತಿಳಿಸಿದ್ದ. ಕಿರುಕುಳ ಹೆಚ್ಚಾಗಿದ್ದರಿಂದ ಸಂತ್ರಸ್ತೆ ಕಮರ್ಷಿಯಲ್ ಸ್ಟ್ರೀಟ್ ಠಾಣೆಯ ಮೆಟ್ಟಿಲೇರಿದ್ದರು.

‘ಹಲಸೂರು ಸಮೀಪದ ಗೌತಮಪುರ ನಿವಾಸಿಯಾದ ನಾರಾಯಣಪ್ರಭು, ತನ್ನ ವಿರುದ್ಧ ದೂರು ದಾಖಲಾದ ಬಳಿಕ ಕಂಪೆನಿ ತೊರೆದಿದ್ದ. ಮೊಬೈಲ್ ಕರೆ ವಿವರ ಆಧರಿಸಿ, ಆತನನ್ನು ನಗರದ ಹೊರವಲಯದಲ್ಲಿ ಪತ್ತೆ ಮಾಡಲಾಯಿತು’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ದುರುದ್ದೇಶದಿಂದ ಮಹಿಳೆಯನ್ನು ಹಿಂಬಾಲಿಸಿದ (ಐಪಿಸಿ 354ಡಿ), ಬೆದರಿಸಿ ಸುಲಿಗೆಗೆ ಯತ್ನಿಸಿದ (385) ಹಾಗೂ ಅಶ್ಲೀಲ ಪದಬಳಕೆ ಮೂಲಕ ಮಹಿಳೆ ಗೌರವಕ್ಕೆ ಧಕ್ಕೆ ತಂದ ಆರೋಪಗಳಡಿ (ಐಪಿಸಿ 509) ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದೇವೆ’ ಎಂದು ಮಾಹಿತಿ ನೀಡಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT