ಅಕ್ಕಡಿ ಬಿತ್ತನೆಗೆ ಪ್ರೋತ್ಸಾಹಧನ!

ಸೋಮವಾರ, ಮೇ 27, 2019
34 °C

ಅಕ್ಕಡಿ ಬಿತ್ತನೆಗೆ ಪ್ರೋತ್ಸಾಹಧನ!

Published:
Updated:

ಬಾಗಲಕೋಟೆ: ಹಿಂಗಾರು ಹಂಗಾಮಿನಲ್ಲಿ ಬಿತ್ತನೆಗೆ ಸಜ್ಜಾಗಿದ್ದೀರಾ.. ಹಾಗಾದರೆ ಜೋಳ ಹಾಗೂ ಕಡಲೆ ನಡುವೆ ಅಂತರ ಬೆಳೆ ಪದ್ಧತಿ ಅಳವಡಿಸಿಕೊಂಡಲ್ಲಿ ನಿಮಗೆ ಕೃಷಿ ಇಲಾಖೆಯಿಂದ ಪ್ರತಿ ಹೆಕ್ಟೇರ್‌ ಲೆಕ್ಕದಲ್ಲಿ ಪ್ರೋತ್ಸಾಹಧನ ಸಿಗಲಿದೆ.

ಮಣ್ಣಿನ ಫಲವತ್ತತೆ ಹೆಚ್ಚಿಸಲು ಏಕದಳ ಧಾನ್ಯದ ಜೊತೆ ದ್ವಿದಳ ಇಲ್ಲವೇ ಎಣ್ಣೆಕಾಳು ಬೆಳೆಯುವಂತೆ ರೈತರನ್ನು ಪ್ರೋತ್ಸಾಹಿಸಲು ಕೃಷಿ ಇಲಾಖೆ ಈ ಉತ್ತೇಜನಕಾರಿ ಕ್ರಮಕ್ಕೆ ಮುಂದಾಗಿದೆ. ಪ್ರತಿ ಹೆಕ್ಟೇರ್ ಅಂತರ ಬೆಳೆಗೆ ರೈತರಿಗೆ ₨1500 ಪ್ರೋತ್ಸಾಹಧನ ನೀಡಲಾಗುತ್ತಿದೆ. ಅದನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

‘ಬಿಳಿ ಜೋಳದ ನಡುವೆ ಅಂತರ ಬೆಳೆಯಾಗಿ ಕಡಲೆ, ಜೋಳ, ಕುಸುಬೆ, ಸೂರ್ಯಕಾಂತಿ, ನವಣೆ ಬಿತ್ತನೆ ಮಾಡಬಹುದಾಗಿದೆ. ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚುವ ಜೊತೆಗೆ ಹೆಚ್ಚು ಇಳುವರಿ ಪಡೆಯಲು ನೆರವಾಗುತ್ತದೆ. ಜೊತೆಗೆ ಬೆಳೆ ವೈವಿಧ್ಯತೆ ಮಾರುಕಟ್ಟೆಯಲ್ಲಿ ಧಾನ್ಯಗಳ ಬೆಲೆ ಸ್ಥಿರವಾಗಿರುವಂತೆ ಕಾಯ್ದುಕೊಳ್ಳಲು ನೆರವಾಗುತ್ತದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ರಮೇಶ್‌ಕುಮಾರ ಹೇಳುತ್ತಾರೆ.

ಬಿತ್ತನೆ ಮಾಡುವಾಗ ಪ್ರತಿ ಆರು ಸಾಲಿಗೆ ಒಂದು ಸಾಲು ಅಂತರ ಬೆಳೆಗೆ ಅವಕಾಶ ನೀಡಬಹುದಾಗಿದೆ. ಇದರಿಂದ ಬೆಳೆ ಸಾಂದ್ರತೆಯೂ ಹೆಚ್ಚಳಗೊಳ್ಳಲಿದೆ.

ಕಳೆದ ಮುಂಗಾರು ಹಂಗಾಮಿನಿಂದ ಅಂತರ ಬೆಳೆಗೆ ಪ್ರೋತ್ಸಾಹಧನ ವಿತರಣೆ ಯೋಜನೆ ಆರಂಭಿಸಲಾಗಿದೆ.

ಆಗ ಸಜ್ಜೆಯಲ್ಲಿ ಅಂತರ ಬೆಳೆ ಅಳವಡಿಸಿಕೊಂಡ ರೈತರಿಗೆ ಹೆಕ್ಟೇರ್‌ಗೆ ₨2500 ಕೊಟ್ಟಿದ್ದೇವೆ. ಜಿಲ್ಲೆಯಲ್ಲಿ ಮೂರು ಸಾವಿರ ಮಂದಿ ಈ ಉತ್ತೇಜನ ಕ್ರಮದ ನೆರವು ಪಡೆದುಕೊಂಡಿದ್ದಾರೆ. ಜೊತೆಗೆ ಮುಂಗಾರಿನಲ್ಲಿ ತೊಗರಿಯನ್ನು ಬಿತ್ತನೆ ಬದಲಿಗೆ ನಾಟಿ ಮಾಡಿದವರಿಗೆ ಹೆಕ್ಟೇರ್‌ಗೆ ₨4 ಸಾವಿರ ಹಾಗೂ ಸಿರಿಧಾನ್ಯ ಬೆಳೆದವರಿಗೆ ಪ್ರೋತ್ಸಾಹಧನದ ರೂಪದಲ್ಲಿ ಹೆಕ್ಟೇರ್‌ಗೆ ₨2500 ನೀಡಿದ್ದೇವೆ ಎಂದು ರಮೇಶ್‌ಕುಮಾರ ತಿಳಿಸಿದರು.

ಜಿಲ್ಲೆಯಲ್ಲಿ ಈ ಬಾರಿಯ ಹಿಂಗಾರು ಹಂಗಾಮಿನಲ್ಲಿ 1.10 ಲಕ್ಷ ಹೆಕ್ಟೇರ್ ಕಡಲೆ ಹಾಗೂ 1.20 ಲಕ್ಷ ಹೆಕ್ಟೇರ್‌ನಷ್ಟು ಜೋಳ ಬಿತ್ತನೆಯಾಗುವ ನಿರೀಕ್ಷೆ ಇದೆ. ಕನಿಷ್ಠ 10 ಸಾವಿರ ಹೆಕ್ಟೇರ್‌ನಲ್ಲಿ ಅಂತರ ಬೆಳೆ ಉತ್ತೇಜಿಸುವ ಯೋಜನೆ ಹೊಂದಿದ್ದೇವೆ. 20 ಸಾವಿರ ರೈತರಿಗೆ ಪ್ರೋತ್ಸಾಹಧನ ನೀಡಲು ಅವಕಾಶವಿದೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry