ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5,598 ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬೆಳೆ

Last Updated 25 ಅಕ್ಟೋಬರ್ 2017, 5:20 IST
ಅಕ್ಷರ ಗಾತ್ರ

ಆನೇಕಲ್‌: ತಾಲ್ಲೂಕಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದು ಕೆರೆ ಕುಂಟೆಗಳು ಭರ್ತಿಯಾಗಿದ್ದು ರಾಗಿ ಕಣಜವೆಂದೇ ಖ್ಯಾತಿ ಪಡೆದಿರುವ ಆನೇಕಲ್ ತಾಲ್ಲೂಕಿನಲ್ಲಿ 5,598 ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬೆಳೆಯಿದ್ದು ರೈತರು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ.

ತಾಲ್ಲೂಕಿನಲ್ಲಿ ಅಕ್ಟೋಬರ್‌ವರೆಗೆ ವಾಡಿಕೆ ಮಳೆ 736 ಮಿ.ಮೀ. ಆದರೆ ವಾಡಿಕೆ ಮಳೆಗಿಂತ ವಾಸ್ತವಿಕವಾಗಿ 1,073 ಮಿ.ಮೀ. ಮಳೆಯಾಗಿದೆಎಂದು ಕೃಷಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

ಖುಷ್ಕಿ ಆಶ್ರಯಿತ ಪ್ರದೇಶವಾಗಿರುವ ಆನೇಕಲ್ ತಾಲ್ಲೂಕಿನಲ್ಲಿ ಯಾವುದೇ ನೀರಾವರಿ ಮೂಲಗಳಿಲ್ಲ. ಮಳೆಯನ್ನೇ ನಂಬಿ ಕೃಷಿಯಲ್ಲಿ ತೊಡಗಿರುವ ಪ್ರದೇಶ ಇದಾಗಿದೆ. ಕೊಳವೆ ಬಾವಿಗಳಲ್ಲಿ ಅಂತರ್ಜಲ ಅತ್ಯಂತ ಕೆಳಮಟ್ಟಕ್ಕೆ ಇಳಿದಿತ್ತು. ಆದರೆ ಈ ವರ್ಷ ತಾಲ್ಲೂಕಿನಲ್ಲಿ ಇದುವರೆಗೆ ಉತ್ತಮ ಮಳೆಯಾಗಿದ್ದು ಬಹುತೇಕ ಕೆರೆಗಳು ಭರ್ತಿಯಾಗಿ ಕೋಡಿ ಹರಿದಿವೆ. ಇದರಿಂದಾಗಿ ರೈತರಲ್ಲಿ ಸಂತಸ ಮೂಡಿದೆ.

ಕೊಳವೆ ಬಾವಿಗಳ ನೀರಿನ ಮರುಪೂರಣ ನಡೆದಿದೆ. ವರ್ಷವಿಡೀ ಕೃಷಿ ಚಟುವಟಿಕೆಗಳು ಸುಗಮವಾಗಿ ನಡೆಯಲಿದೆ ಎಂದು ಹಾಲ್ದೇನಹಳ್ಳಿಯ ರೈತ ವೆಂಕಟೇಶಪ್ಪ ತಿಳಿಸಿದರು. ತಾಲ್ಲೂಕಿನಲ್ಲಿ ರಾಗಿ, ಭತ್ತ, ಮುಸುಕಿನ ಜೋಳ, ತೊಗರಿ, ಹುರುಳಿ, ಉದ್ದು, ಹೆಸರು, ಅಲಸಂದೆ, ಅವರೆ, ನೆಲಗಡಲೆ, ಹುಚ್ಚೆಳ್ಳು, ಸಾಸಿವೆ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯುತ್ತಿದ್ದು ಹೆಚ್ಚನ ಪ್ರದೇಶದಲ್ಲಿ ರಾಗಿ ಬೆಳೆ ಬೆಳೆಯಲಾಗಿದೆ.

ಭತ್ತ 200ಹೆಕ್ಟೇರ್‌ನಲ್ಲಿ ಭತ್ತದ ಬೆಳೆಯಿದೆ. ತೊಗರಿ 167ಹೆಕ್ಟೇರ್‌ ಪ್ರದೇಶದಲ್ಲಿದೆ, ಅಲಸಂದೆ, ತೊಗರಿ ಸೇರಿದಂತೆ ವಿವಿಧ ದ್ವಿದಳ ಧಾನ್ಯಗಳು 566ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ನೆಲಗಡಲೆ, ಎಳ್ಳು, ಸಾಸಿವೆ ಸೇರಿದಂತೆ ಎಣ್ಣೆ ಕಾಳುಗಳು 141 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗಿದೆ.

ಕೃಷಿ ಇಲಾಖೆಯ ಮೂಲಕ ಹಲವಾರು ಪ್ರಗತಿಪರ ರೈತರು ಬಹುಮಾನಗಳಿಗಾಗಿ ಅರ್ಜಿ ಸಲ್ಲಿಸಿದ್ದು ಪ್ರಾತ್ಯಕ್ಷಿಕೆಯಾಗಿ ಗುರುತಿಸಲಾಗಿದೆ. ರೈತರು ಬೆಳೆಯ ಸಾಧನೆಯನ್ನು ಪರಿಶೀಲಿಸಿ ಬಹುಮಾನಗಳನ್ನು ಕೊಯ್ಲಿನ ನಂತರ ಪ್ರಕಟಿಸಲಾಗುವುದು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಬಸಪ್ಪ ತಿಳಿಸಿದರು.

ಈ ತಾಲ್ಲೂಕಿನ ಜಿಗಣಿ ಹೋಬಳಿಯಲ್ಲಿ 1,249 ಮಿ.ಮೀ ಮಳೆಯಾಗಿದ್ದು ತಾಲ್ಲೂಕಿನಲ್ಲಿಯೇ ಅತ್ಯಂತ ಹೆಚ್ಚಿನ ಮಳೆ ಬಿದ್ದಿರುವ ಹೋಬಳಿಯಾಗಿದೆ. ರೈತರು ಮಳೆಗಾಲದಲ್ಲಿ ಮಳೆಯ ನೀರನ್ನು ಸಂಗ್ರಹಿಸಲು ಪ್ರೋತ್ಸಾಹಿಸುವ ಸಲುವಾಗಿ ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡಗಳನ್ನು ನಿರ್ಮಿಸಲು ಸರ್ಕಾರ ನೆರವು ನೀಡುತ್ತಿದೆ.

ಕೃಷಿ ಹೊಂಡ ನಿರ್ಮಾಣ ಹಾಗೂ ಟಾರ್ಪಲ್‌ ಹೊದಿಕೆಗೆ ಸಾಮಾನ್ಯ ವರ್ಗದವರಿಗೆ ಶೇ 80, ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇ 90ರಷ್ಟು ವೆಚ್ಚದ ಸಹಾಯ ಧನ ನೀಡಲಾಗುತ್ತಿದೆ. ಡೀಸೆಲ್‌ ಪಂಪ್‌ಸೆಟ್ ಅಳವಡಿಕೆಗೆ ಸಾಮಾನ್ಯ ವರ್ಗದವರಿಗೆ ಶೇ 50ರಷ್ಟು, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇ 90ರಷ್ಟು ಸಹಾಯ ಧನ ನೀಡಲಾಗುತ್ತಿದೆ. ತಾಲ್ಲೂಕಿನಲ್ಲಿ ಒಟ್ಟು 677 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ.

ತುಂತುರು ಅಥವಾ ಹನಿ ನೀರಾವರಿ ಘಟಕ ಸ್ಥಾಪಿಸಲು ಶೇ 90ರಷ್ಟು ನೆರವು, ಕೃಷಿ ಹೊಂಡಗಳಿಗೆ ನೆರವು ಪರದೆ ಅಳವಡಿಸಲು ಶೇ 50ರಷ್ಟು ಸಹಾಯಧನ ನೀಡಲಾಗುತ್ತಿದೆ. ಕೃಷಿ ಯಾಂತ್ರೀಕರಣ ಯೋಜನೆಯಡಿ ಪವರ್ ಟಿಲ್ಲರ್‌, ರೋಟೊವೇಟರ್‌, ಕಲ್ಟಿವೇಟರ್, ಸಸ್ಯ ಸಂರಕ್ಷಣ ಉಪಕರಣಗಳನ್ನು ಕೊಳ್ಳಲು ಸಾಮಾನ್ಯ ವರ್ಗದ ರೈತರಿಗೆ ಶೇ 50ರಷ್ಟು ರಿಯಾಯಿತಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇ 90ರಷ್ಟು ರಿಯಾಯಿತಿ ನೀಡಲಾಗುವುದು.

ಮಿನಿ ಟ್ರ್ಯಾಕ್ಟರ್‌ಗಳನ್ನು ಕೊಳ್ಳುವ ರೈತರಿಗೆ ಸಾಮಾನ್ಯ ವರ್ಗದವರಿಗೆ 75 ಸಾವಿರ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 2 ಲಕ್ಷ ಸಹಾಯಧನ ನೀಡಲಾಗುವುದು. ಕೃಷಿ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಇಲಾಖೆಯು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ. ರಾಗಿ ಉತ್ಪಾದನೆ ಹೆಚ್ಚಿಸಲು ತಾಲ್ಲೂಕಿನಲ್ಲಿ ಆಯ್ದ ರೈತರಿಗೆ ಹೊಸ ತಾಂತ್ರಿಕತೆಯನ್ನು ಅಳವಡಿಸಿ ಸಹಾಯಧನ ನೀಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT