ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾಗತೀಕರಣದ ಸವಾಲಿಗೆ ಚನ್ನಮ್ಮನ ಸಂದೇಶ ಸಹಕಾರಿ’

Last Updated 25 ಅಕ್ಟೋಬರ್ 2017, 5:27 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ‘ಜಾಗತೀಕರಣ ಸಂದರ್ಭದಲ್ಲಿನ ವಸಾಹತುಶಾಹಿ ಮತ್ತು ಸಾಮ್ರಾಜ್ಯಶಾಹಿ ಒಡ್ಡುವ ಸವಾಲುಗಳನ್ನು ಎದುರಿಸಲು ರಾಣಿ ಚನ್ನಮ್ಮನ ಹೋರಾಟ ಹಾಗೂ ಸಂದೇಶ ಸಹಕಾರಿಯಾಗಿವೆ’ ಎಂದು ಪತ್ರಕರ್ತೆ ಆರ್‌. ಪೂರ್ಣಿಮಾ ಅಭಿಪ್ರಾಯಪಟ್ಟರು. ಕಿತ್ತೂರು ಉತ್ಸವದಲ್ಲಿ ಮಂಗಳವಾರ ನಡೆದ ವಿಚಾರಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಮಾರ್ಗಗಳು, ಮಜಲು ಮತ್ತು ಆಯಾಮಗಳಿದ್ದವು. ಇಂತಹ ಸಾವಿರಾರು ಹೋರಾಟದ ತೊರೆಗಳ ಮಧ್ಯೆ ಕಿತ್ತೂರಿನ ರಾಣಿ ಚನ್ನಮ್ಮನ ಹೋರಾಟಕ್ಕೆ ವಿಶೇಷ ಸ್ಥಾನವಿದೆ’ ಎಂದು ಬಣ್ಣಿಸಿದರು.

‘ಯಾವುದೇ ದೇಶದ ಇತಿಹಾಸ ತೆಗೆದುಕೊಂಡರೂ ಅಲ್ಲಿ ಪುರುಷ (ಹಿಸ್‌) ಕತೆಯಿದೆ, ಮಹಿಳೆ (ಹರ್) ಕತೆ ಇಲ್ಲವೇ? ನಾಗರಿಕತೆ ಮತ್ತು ಸಂಸ್ಕೃತಿ ರೂಪಿಸಲು ಹೆಣ್ಣು ಏನೂ ಕಾಣಿಕೆ ನೀಡಲಿಲ್ಲವೆ ಎನ್ನುವುದನ್ನು ತೋರಿಸಿದ್ದು ರಾಣಿ ಚನ್ನಮ್ಮನ ಕಿತ್ತೂರು’ ಎಂದರು.

‘ಹಿಂದಿನ ಹೆಜ್ಜೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಿದ್ದರೆ ಸಮಕಾಲೀನ ಸಂದರ್ಭಕ್ಕೆ ಹೇಗೆ ಪ್ರತಿಕ್ರಿಯೆ ಕೊಡಬೇಕು, ಹೇಗೆ ಸವಾಲುಗಳನ್ನು ಎದುರಿಸಬಹುದು ಎಂದು ಊಹಿಸುವುದಕ್ಕೆ ಆಗುವುದಿಲ್ಲ’ ಎಂದು ವಿಶ್ಲೇಷಿಸಿದರು.

ಆಶಯ ಭಾಷಣ ಮಾಡಿದ ಸಾಹಿತಿ ಯ.ರು. ಪಾಟೀಲ, ‘ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ರಾಣಿ ಚನ್ನಮ್ಮ ಅಧ್ಯಯನ ಪೀಠ ತೆರೆಯಲು ಸರ್ಕಾರ ಆದೇಶ ಹೊರಡಿಸಿದೆ. ಕಿತ್ತೂರಿನ ಬಗ್ಗೆ ಸಮರ್ಪಕ ಸಾಹಿತ್ಯ ಬಂದಿಲ್ಲ, ಸಂಶೋಧನೆ ನಡೆದಿಲ್ಲ ಎನ್ನುವ ಕೊರತೆ ಈ ಪೀಠದಿಂದ ನೀಗಲಿದೆ’ ಎಂದು ಆಶಿಸಿದರು.

‘1824ರ ಸಂಗ್ರಾಮ ಮತ್ತು ಪ್ರೇರಣೆ’ ಕುರಿತು ಅಥಣಿಯ ಪ್ರಾಧ್ಯಾಪಕಿ ಪ್ರೊ. ಮಂಜುಷಾ ನಾಯಕ, ‘ವರ್ತಮಾನದ ಮಹಿಳೆಯರಿಗೆ ರಾಣಿ ಚನ್ನಮ್ಮ ಸ್ಫೂರ್ತಿ’ ವಿಷಯ ಕುರಿತು ಬೆಂಗಳೂರಿನ ಡಾ.ಕವಿತಾ ಕುಸುಗಲ್, ‘ಕಿತ್ತೂರಿನ ಸ್ಮಾರಕಗಳು ಮತ್ತು ಇತಿಹಾಸ ಉಳಿವು’ ಬಗ್ಗೆ ಪ್ರೊ.ಗುಂಡಣ್ಣ ಕಲಬುರ್ಗಿ, ‘ಉತ್ಖನನ ಭಾಗವಾಗಿ ಕಿತ್ತೂರು’ ವಿಷಯದ ಕುರಿತು ಬಾಗಲಕೋಟೆಯ ಡಾ.ಸಣ್ಣವೀರಣ್ಣ ದೊಡ್ಡಮನಿ, ‘ಮಹಿಳೆ ಮತ್ತು ಸಂವಿಧಾನ’ ವಿಷಯದ ಮೇಲೆ ಸಿ.ಎಸ್. ಚಿಕ್ಕನಗೌಡರ ಉಪನ್ಯಾಸ ನೀಡಿದರು.

ಡಾ.ನಾಗಾಬಾಯಿ ಬುಳ್ಳಾ ಅವರು ಅಧ್ಯಕ್ಷತೆ ವಹಿಸಿದ್ದರು. ಜಗದೀಶ ಹಾರುಗೊಪ್ಪ ಸ್ವಾಗತಿಸಿದರು. ಬಸವರಾಜ ಕುಪ್ಪಸಗೌಡರ ನಿರೂಪಿಸಿದರು. ಮಹೇಶ ಚನ್ನಂಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT