ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಅಂಶ ಕನ್ನಡಕ್ಕೆ ಕಸಿ ಮಾಡಿ

Last Updated 25 ಅಕ್ಟೋಬರ್ 2017, 5:57 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಕನ್ನಡಿಗರು ಕನ್ನಡ ಭಾಷೆಯನ್ನು ಕಲಿಯುವುದು ಮಾತ್ರವಲ್ಲದೆ, ಇತರ ಭಾಷೆಗಳಲ್ಲಿರುವ ಉತ್ತಮವಾದ ಸಾಹಿತ್ಯದ ಅಂಶಗಳನ್ನು ಕನ್ನಡಕ್ಕೆ ಕಸಿ ಮಾಡುವ ಕೆಲಸ ಮಾಡಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಮಾಜಿ ಕಾರ್ಯದರ್ಶಿ ಅಮೃತ್‌ ಕುಮಾರ್ ಹೇಳಿದರು.

ನಗರದ ಎಚ್‌.ಎಸ್‌.ಗಾರ್ಡನ್‌ನ ನಿವಾಸಿ ಎನ್‌.ವಿ.ಗೋವಿಂದಪ್ಪ ಅವರ ಮನೆಯಲ್ಲಿ ಮಂಗಳವಾರ ಕಸಾಪ ತಾಲ್ಲೂಕು ಘಟಕದ ವತಿಯಿಂದ ಆಯೋಜಿಸಿದ್ದ ‘ಮನೆಯಂಗಳದಲ್ಲಿ ನುಡಿಸಿರಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕನ್ನಡ ಭಾಷೆಯನ್ನು ಇಂತಹ ಗಡಿಭಾಗದಲ್ಲಿ ಅನ್ಯ ರಾಜ್ಯಗಳಿಗೆ ಮುಟ್ಟಿಸುವಂತಹ ಕೆಲಸಗಳು ಆಗಬೇಕು. ಕನ್ನಡ ಬಳಸುವುದರ ಜತೆಗೆ ಇತರ ಭಾಷೆಗಳನ್ನು ಕಲಿಯಬೇಕು. ಆದರೆ ನಮ್ಮ ಜೀವನಕ್ಕೆ ಕನ್ನಡವೇ ಮುಖ್ಯವಾಗಿರಬೇಕು. ನಮ್ಮ ಸಾಹಿತ್ಯದ ಜತೆಗೆ ಅನ್ಯ ಭಾಷೆಯ ಸಾಹಿತ್ಯವನ್ನು ಅರಿತುಕೊಳ್ಳುವ ಪ್ರಯತ್ನ ಮಾಡಬೇಕು’ ಎಂದು ತಿಳಿಸಿದರು.

‘ಗಡಿಭಾಗದಲ್ಲಿರುವ ಜನರು ಹೆಚ್ಚು ಕನ್ನಡ ಭಾಷೆಯನ್ನು ಬೆಳೆಸುವ ಕೆಲಸ ಮಾಡಬೇಕು. ಮಕ್ಕಳಿಗೆ ಮನೆಯಿಂದಲೇ ಕನ್ನಡ ಕಲಿಸುವ ಪ್ರಕ್ರಿಯೆ ಆರಂಭಗೊಳ್ಳಬೇಕು. ನಿತ್ಯ ವ್ಯವಹಾರದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಕೆ ಮಾಡಬೇಕು. ಮಕ್ಕಳಿಗೆ ಕನ್ನಡದ ಸಾಹಿತ್ಯದ ಬಗ್ಗೆ ಒಲುವು ಬೆಳೆಸಬೇಕು. ಅಂದಾಗ ಮಾತ್ರ ನಾವು ಕನ್ನಡವನ್ನು ಕಾಪಾಡಿಕೊಂಡು ಬೆಳೆಸಲು ಸಾಧ್ಯವಾಗುತ್ತದೆ’ ಎಂದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಮಂಚನಬಲೆ ಶ್ರೀನಿವಾಸ್ ಮಾತನಾಡಿ, ‘ಕನ್ನಡ ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿದ ಶ್ರೀಮಂತ ಭಾಷೆಯಾಗಿದೆ. ಕನ್ನಡ ಸಾಹಿತ್ಯವನ್ನು ಎಲ್ಲೆಡೆ ಪಸರಿಸುವ ಮೂಲಕ ಉಳಿಸಿ, ಬೆಳೆಸುವ ಕೆಲಸವನ್ನು ಕನ್ನಡಿಗರು ಮಾಡಬೇಕು. ಕನ್ನಡ ಕಟ್ಟುವ ಕೈಂಕರ್ಯಕ್ಕೆ ಬದ್ಧರಾಗಬೇಕು. ಪರಿಷತ್ತು ಸದಾ ಕನ್ನಡಿಗರೊಂದಿಗೆ ಕೈಜೋಡಿಸಿ ಕೆಲಸ ಮಾಡಲು ಸಿದ್ಧವಿರುತ್ತದೆ’ ಎಂದು ಹೇಳಿದರು.

‘ಇತರ ರಾಜ್ಯದವರು ತಮ್ಮ ಭಾಷೆ, ನೆಲ, ಜಲ ಕಾಪಾಡಿಕೊಳ್ಳುವಲ್ಲಿ ತೋರುವ ಆಸಕ್ತಿ ನಮ್ಮವರಲ್ಲಿ ಕಡಿಮೆ ಇದೆ. ಕನ್ನಡಿಗರ ಈ ಅವಗಣನೆಯ ಗುಣದಿಂದಾಗಿಯೇ ನಾವು ಇವತ್ತು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಕನ್ನಡ ಬಿಟ್ಟು ಬೇರೆ ಭಾಷೆಗಳನ್ನು ಮಾತನಾಡುವುದನ್ನು ಇಷ್ಟ ಪಡುವ ಪ್ರವೃತ್ತಿ ಹೆಚ್ಚುತ್ತಿದೆ. ನಮ್ಮ ತಾಯಿ ನುಡಿಯ ಬಗ್ಗೆಯೇ ನಮಗೆ ಗೌರವವಿಲ್ಲದಿದ್ದರೆ ಹೇಗೆ? ಇನ್ನಾದರೂ ನಾವು ಕನ್ನಡವನ್ನು ಗೌರವಿಸುವ ಕೆಲಸ ಮಾಡಬೇಕಿದೆ’ ಎಂದು ತಿಳಿಸಿದರು.

ಕಸಾಪ ಪದಾಧಿಕಾರಿಗಳಾದ ಉಷಾ ಶ್ರೀನಿವಾಸ್‌, ಪ್ರಭಾ ಹರಿನಾಥ್‌ ಕುಮಾರ್‌, ಟಿ.ಆರ್‌ ಕೃಷ್ಣಪ್ಪ, ರವಿಕುಮಾರ್‌, ನಾಗಭೂಷಣರೆಡ್ಡಿ, ಅಶ್ವಥ್‌ , ಆನಂದ್‌, ಮಂಜುನಾಥ್‌, ವೆಂಕಟರಮಣಪ್ಪ, ನರಸಿಂಹಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT