ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ವಿಲೇವಾರಿ ಘಟಕ ಸ್ಥಳಾಂತರಕ್ಕೆ ಆಗ್ರಹ

Last Updated 25 ಅಕ್ಟೋಬರ್ 2017, 6:02 IST
ಅಕ್ಷರ ಗಾತ್ರ

ಕೊಪ್ಪ: ತಾಲ್ಲೂಕಿನ ಜಯಪುರ ಸಮೀಪದ ಗುಬ್ಬಿಬೈಲ್‌ನ ಜನವಸತಿ ಪ್ರದೇಶದಲ್ಲಿರುವ ಪಂಚಾಯಿತಿ ಕಸ ವಿಲೇವಾರಿ ಘಟಕವನ್ನು ಕೂಡಲೇ ತೆರವುಗೊಳಿಸಿಕೊಡುವಂತೆ ಸ್ಥಳೀಯ ನಿವಾಸಿಗಳು ಸೋಮವಾರ ತಹಶೀಲ್ದಾರನ್ನು ಒತ್ತಾಯಿಸಿದ್ದಾರೆ.

ಗುಬ್ಬಿಬೈಲ್ ಗ್ರಾಮಸ್ಥರು ತಹಶೀಲ್ದಾರ್ ತನುಜಾ ಟಿ.ಎಸ್. ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿ ಮಾತನಾಡಿ, ‘700ರಿಂದ 800ರಷ್ಟು ಜನಸಂಖ್ಯೆಯಿರುವ ಗುಬ್ಬಿಬೈಲಿನಲ್ಲಿ ಬಹುತೇಕ ದಲಿತ ಕೂಲಿ ಕಾರ್ಮಿಕರೇ ವಾಸವಾಗಿದ್ದಾರೆ. ಈ ಪ್ರದೇಶದಲ್ಲಿ 5 ವರ್ಷಗಳ ಹಿಂದೆ ಜಯಪುರ ಗ್ರಾಮ ಪಂಚಾಯಿತಿಯವರು ತಾತ್ಕಾಲಿಕವಾಗಿ ಕಸ ವಿಲೇವಾರಿ ಘಟಕ ಆರಂಭಿಸಿದ್ದರು. ಆದರೆ, 6 ತಿಂಗಳಿನಿಂದ ಅದರ ನಿರ್ವಹಣೆ ಸರಿಯಾಗಿ ಮಾಡುತ್ತಿಲ್ಲ’ ಎಂದು ದೂರಿದರು.

‘ಸತ್ತ ಪ್ರಾಣಿಗಳನ್ನು, ಅನಾಥ ಶವಗಳನ್ನು ಸರಿಯಾದ ಕ್ರಮದಲ್ಲಿ ಹೂಳದೆ ಕಸದ ರಾಶಿಯ ಮೇಲೆ ಎಸೆದು ಹೋಗಿರುತ್ತಾರೆ. ಅವುಗಳನ್ನು ನಾಯಿಗಳು ತಿಂದು ಮೂಳೆ, ಮಾಂಸಗಳನ್ನು ಜನವಸತಿ ಪ್ರದೇಶಕ್ಕೆ ಎಳೆದುಕೊಂಡು ಬರುತ್ತಿದ್ದು, ಕೊಳೆತ ಮಾಂಸ, ತ್ಯಾಜ್ಯಗಳ ದುರ್ನಾತದಿಂದ ಸಾಂಕ್ರಾಮಿಕ ರೋಗ ಹರಡುತ್ತಿದೆ. ಚೆಲ್ಲಾಪಿಲ್ಲಿಯಾಗಿ ಹರಡಿರುವ ಪ್ಲಾಸ್ಟಿಕ್ ಕಸವನ್ನು ತಿಂದು ಸುತ್ತಮುತ್ತಲಿನ ಹತ್ತಾರು ದನ ಕರುಗಳು ಮೃತಪಟ್ಟಿವೆ. ಹತ್ತಿರದಲ್ಲೇ ಇರುವ ಅಂಗನವಾಡಿ ಕೇಂದ್ರದ ಮಕ್ಕಳು ವಾಂತಿ ಬೇಧಿ, ಸೊಳ್ಳೆ ಕಡಿತದ ಕಾಯಿಲೆಗೆ ತುತ್ತಾಗಿದ್ದಾರೆ’ ಎಂದು ಅಳಲು ತೋಡಿಕೊಂಡರು.

‘ಈ ಬಗ್ಗೆ 6 ತಿಂಗಳಿನಿಂದಲೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಪಿಡಿಒ ಗಮನಕ್ಕೆ ತರಲಾಗಿದ್ದರೂ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಸರ್ವೇ ನಂ. 115ರಲ್ಲಿರುವ ಈ ಜಾಗ ರುದ್ರಭೂಮಿ ಮೀಸಲಾಗಿರುವ ಬಗ್ಗೆ ಪಹಣಿ ದಾಖಲೆಯಲ್ಲಿ ನಮೂದಾಗಿದ್ದರೂ ಅನಧಿಕೃತವಾಗಿ ಕಸ ವಿಲೇವಾರಿಗೆ ಬಳಸುತ್ತಿರುವುದರಿಂದ ಬಡವರಾದ ನಮಗೆ ಅನ್ಯಾಯವಾಗಿದೆ.

ಇದರ ವಿರುದ್ಧ ಇದೇ 11ರಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ ವೇಳೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ತಹಶೀಲ್ದಾರರೇ ಕಸ ವಿಲೇವಾರಿಗೆ ಬದಲಿ ಜಾಗದ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದರೂ ಪಂಚಾಯಿತಿಯವರು ಸ್ಪಂದಿಸುತ್ತಿಲ್ಲ. ಗ್ರಾಮಸ್ಥರ ಸಮಸ್ಯೆ ಆಲಿಸಲು ಬಂದಿದ್ದ ಸ್ಥಳೀಯ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರನ್ನು ಕಸವಿಲೇವಾರಿ ಘಟಕದ ಬಳಿ ಹೋಗದಂತೆ ತಡೆದು ಅವಮಾನಗೊಳಿಸಿದ್ದಾರೆ’ ಎಂದು ಆರೋಪಿಸಿದರು.

ಪಂಚಾಯಿತಿಯ ಗ್ರಾಮಸಭೆಗಳಲ್ಲಿ ಚರ್ಚೆ ನಡೆಸಿ ಕಸವಿಲೇವಾರಿ ಘಟಕ ತೆರವುಗೊಳಿಸುವಂತೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಬದಲಿಗೆ ಇತ್ತೀಚೆಗೆ ಪಂಚಾಯಿತಿ ಅಧ್ಯಕ್ಷರೇ ತುರ್ತು ಸಾರ್ವಜನಿಕ ಸಭೆ ನಡೆಸಿ ಗುಬ್ಬಿಬೈಲ್‌ನಲ್ಲೇ ಕಸ ವಿಲೇವಾರಿ ಮುಂದುವರೆಸುವುದಾಗಿ ಘೋಷಿಸಿದ್ದಾರೆ. ಇದನ್ನು ತಡೆಯುವುದು ನಮಗೆ ಅನಿವಾರ್ಯವಾಗಿದೆ. ಪೊಲೀಸರಲ್ಲಿ ನ್ಯಾಯ ಕೇಳಲು ಹೋದರೆ ಹೆದರಿಸುತ್ತಾರೆ ಎಂದು ಆಪಾದಿಸಿದರು. ಸ್ಥಳೀಯರಾದ ಶ್ರೀನಿವಾಸ್, ರವಿ, ಕುಮಾರ, ಮಾರಾಯಣ, ಉಮೇಶ್, ಆನಂದ, ಸತೀಶ್, ಕರ್ಪಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT