ಶನಿವಾರ, ಸೆಪ್ಟೆಂಬರ್ 21, 2019
24 °C

ಸಜ್ಜನಕೆರೆಯ ಮನೆ ಮನೆಯಲ್ಲೂ ‘ಚಿಕುನ್‌ ಗುನ್ಯಾ’!

Published:
Updated:
ಸಜ್ಜನಕೆರೆಯ ಮನೆ ಮನೆಯಲ್ಲೂ ‘ಚಿಕುನ್‌ ಗುನ್ಯಾ’!

ಚಿತ್ರದುರ್ಗ: ಹಾಸಿಗೆ ಹಿಡಿದು ನಾಲ್ಕು ದಿವ್ಸ ಆಯ್ತು. ಏದ್ದೇಳಕ್ಕಾಗಲ್ಲ, ಓಡಾಡಕ್ಕಾಗಲ್ಲಾ.. ಯಾರದ್ದಾದರೂ ಕೈ ಹಿಡ್ಕಂಡು ಏಳಬೇಕು, ಕುಂಟುತ್ತಾ ನಡೆಯಬೇಕು, ಕೈಕಾಲು, ಮಂಡಿ ನೋವು. ಸಿಕ್ಕಾಪಟ್ಟೆ ಸುಸ್ತೋ ಸುಸ್ತು! ಸಜ್ಜನಕೆರೆ ಗ್ರಾಮದ ದೇವಸ್ಥಾನದಲ್ಲಿ ಮಲಗಿದ್ದ 70 ವರ್ಷದ ಪೂಜಾರಪ್ಪ ಈರಯ್ಯ ನಡುಗುತ್ತ ಮಾತನಾಡಿದರು.

ಪಕ್ಕದಲ್ಲಿದ್ದ ಪತ್ನಿ ಹನುಮಕ್ಕ ಅವರ ಕೈ ಹಿಡಿದು ಎಬ್ಬಿಸುತ್ತಾ, ‘ಇವರಿಗೆ ನಾಲ್ಕು ದಿನಗಳಿಂದ ಚಿಕುನ್ ಗುನ್ಯಾ’ ಎಂದರು. ಪಕ್ಕದಲ್ಲಿದ್ದ ರಾಜಪ್ಪ, ‘ಸರ್. ಊರಿನಲ್ಲಿ ಎಲ್ಲರ ಮನೆಯಲ್ಲೂ ಒಬ್ಬರು, ಇಬ್ಬರಿಗೆ ಈ ರೋಗ ಬಂದಿದೆ’ ಎಂದರು.

ತಾಲ್ಲೂಕಿನ ಡಿ.ಎಸ್‌.ಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಜ್ಜನಕೆರೆ ಗ್ರಾಮದಲ್ಲಿ ಒಂದೊಂದು ಮನೆಯಲ್ಲಿ ಒಬ್ಬರು ಇಬ್ಬರು, ನಾಲ್ಕು ಮಂದಿವರೆಗೂ ಚಿಕುನ್ ಗುನ್ಯಾ ಬಾಧಿಸಿದೆ. ಅಂದಾಜು 300 ಮನೆಗಳಿರುವ ಗ್ರಾಮದಲ್ಲಿ ಒಂದೂವರೆ ತಿಂಗಳಿನಿಂದ ಈ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ.

ಒಂದೊಂದು ಸಮಸ್ಯೆ: ‘ನಮ್ಮನೆಯಲ್ಲಿ ನಾಲ್ಕು ಜನಕ್ಕೆ ಚಿಕುನ್ ಗುನ್ಯಾ ಆಗಿತ್ತು. ಡಿಎಸ್‌ ಹಳ್ಳಿಯಲ್ಲಿ ಚಿಕಿತ್ಸೆ ಕೊಡಿಸಿದೆವು’ ಎಂದು ಕೆಂಚಮ್ಮ ಹೇಳಿದಾಗ, ‘ನಾಲ್ಕು ದಿನಗಳಿಂದ ಕಾಲು ನೋವು ಬಾಧಿಸುತ್ತಿದೆ’ ಎಂದು ಈರಮ್ಮ ಮಾತು ಸೇರಿಸಿದರು. ಈಗಲೂ ಗ್ರಾಮದಲ್ಲಿ ಸಮಸ್ಯೆ ಇದೆಯಾ ಎಂದು ಪ್ರಶ್ನಿಸಿದರೆ, ‘ಯಾಕಿಲ್ಲ, ಅಲ್ನೋಡಿ, ಇಲ್ಲಿ ಕುಳಿತಿರುವವರು ಚಿಕುನ್ ಗುನ್ಯ ಬಾಧಿತರು. ಅವರೀಗ ಆಸ್ಪತ್ರೆಗೆ ಹೊರಟಿದ್ದಾರೆ’ ಎಂದರು ಹನುಮಂತಪ್ಪ.

‘ಮೊದಲು ನನಗೆ ಬಂತು. ಪಕ್ಕದ ಮನೆ ಗೌರಮ್ಮ, ಭಾಗ್ಯಮ್ಮ, ಕರಿಬಸಪ್ಪ.. ಹೀಗೆ ಸರಣಿಯಾಗಿ ಎಲ್ಲ ಮನೆಗಳವರಿಗೂ ಬಂತು’ ಎಂದು ದಾಕ್ಷಾಯಿಣಿ ಪಟ್ಟಿ ಮಾಡಿದರು. ರೋಗಬಂದ ಕೆಲವರು ಜೆಎನ್‌ಕೋಟೆ, ಡಿಎಸ್‌ ಹಳ್ಳಿಯಲ್ಲಿ ಕಾಂಪೌಂಡರಿಂದ ಚಿಕಿತ್ಸೆ ಪಡೆದಿದ್ದಾರೆ. ಇನ್ನು ಕೆಲವರು ಚಿತ್ರದುರ್ಗದ ಸರ್ಕಾರಿ ಆಸ್ಪತ್ರೆ, ಖಾಸಗಿ ನರ್ಸಿಂಗ್ ಹೋಂಗೆ ಹೋಗಿದ್ದಾರೆ. ಈ ಗ್ರಾಮದಲ್ಲಿ ಚಿಕಿತ್ಸೆಗಾಗಿ ಒಂದೊಂದು ಮನೆಯಿಂದ ₹8 ಸಾವಿರ, ₹10 ಸಾವಿರ ಖರ್ಚಾಗಿದೆಯಂತೆ!

ಅಶುಚಿತ್ವವೇ ಕಾರಣ: ‘ಇದು ಕುಡಿಯುವ ನೀರು ಪೂರೈಸುವ ಟ್ಯಾಂಕ್ ಮತ್ತು ವಾಲ್ವ್‌ಗಳು. ಇಲ್ಲಿ ನೋಡಿ, ಇಷ್ಟು ಕೊಳಕಿದೆ. ಇಂಥ ನೀರು ಕುಡಿದರೆ, ರೋಗ ಬರದಿರುತ್ತದಾ’ ಎಂದು ಗ್ರಾಮಸ್ಥರಾದ ಸತೀಶ್, ರಮೇಶ್, ಸಿದ್ದೇಶ್, ಹನುಮಂತಪ್ಪ ಅವರು ಟ್ಯಾಂಕ್‌ ಕೆಳಗಿನ ಕೊಳಕನ್ನು ತೋರಿಸುತ್ತಾ ಪ್ರಶ್ನಿಸಿದರು.

‘ಈ ವಾಲ್ವ್‌ಗಳಿಗೆ ಪ್ರತ್ಯೇಕ ಚೇಂಬರ್ ಮಾಡಿಸಿ ಎಂದು ಒತ್ತಾಯಿಸಿದ್ದರೂ ಯಾರೂ ಕಿವಿಗೊಡುತ್ತಿಲ್ಲ’ ಎಂದು ಆಕ್ಷೇಪಿಸಿದರು. ಒಂದು ಕಾಲದಲ್ಲಿ ಗ್ರಾಮದಲ್ಲಿ ಸುರಿದ ಮಳೆ ನೀರು, ಊರಿನ ತುದಿಯಲ್ಲಿರುವ ತೆರೆದ ಬಾವಿಗೆ ಸೇರುತ್ತಿತ್ತು. ಈಗ ಆ ಬಾವಿಗೆ ಕೊಳಚೆ ನೀರು ಸೇರುತ್ತಿದೆ. ಇತ್ತೀಚೆಗೆ ಸುರಿದ ಮಳೆಯಿಂದ ಅದು ಭರ್ತಿಯಾಗಿ, ಸೊಳ್ಳೆ ಉತ್ಪಾದಕ ತಾಣವಾಗಿದೆ ಎಂದು ರಾಜಪ್ಪ ಬಾವಿ ತೋರಿಸಿದರು. ಒಟ್ಟಾರೆ ಗ್ರಾಮದಲ್ಲಿನ ಅಶುಚಿತ್ವವೇ ಈ ರೋಗ ಹರಡಲು ಕಾರಣ ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.

   

Post Comments (+)