ಮಂಗಳವಾರ, ಸೆಪ್ಟೆಂಬರ್ 17, 2019
24 °C

ರೈತರಿಂದ ರಾಜ್ಯ ಹೆದ್ದಾರಿ ತಡೆ

Published:
Updated:

ಹರಪನಹಳ್ಳಿ: ಸೈನಿಕ ಹುಳುಬಾಧೆಯಿಂದ ಹಾನಿಯಾದ ಮೆಕ್ಕೆಜೋಳ ಬೆಳೆಗೆ ಪರಿಹಾರ ನೀಡಬೇಕು ಎಂದು ರೈತರು ತೆಲಿಗಿ ಗ್ರಾಮದಲ್ಲಿ ಮಂಗಳವಾರ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಧರಣಿ ನಡೆಸಿದರು.

ಯುವ ಮುಖಂಡ ಎ.ಎಂ.ವಿಶ್ವನಾಥ್‌ ಮಾತನಾಡಿ, ‘ತಾಲ್ಲೂಕಿನ ರೈತರು ಮೂರು ವರ್ಷಗಳಿಂದ ಬರಗಾಲ ಎದುರಿಸಿದ್ದರು. ಈ ಬಾರಿ ಉತ್ತಮ ಮಳೆ ಸುರಿದಿದ್ದರಿಂದ ಉತ್ತಮವಾಗಿ ಬೆಳೆದ ಮೆಕ್ಕೆಜೋಳ ಬೆಳೆ ಸೈನಿಕ ಹುಳುಬಾಧೆಯಿಂದ ಸಂಪೂರ್ಣ ನಾಶವಾಗಿದೆ. ದನಕರುಗಳಿಗೆ ಮೇವು ಸಹ ಸಿಗದಂತಾಗಿದೆ’ ಎಂದು ಹೇಳಿದರು.

‘ಹೀಗಿದ್ದರೂ ಸರ್ಕಾರ ರೈತರ ನೆರವಿಗೆ ಧಾವಿಸಿಲ್ಲ. ಕಳೆದ ತಿಂಗಳು ಧರಣಿ ನಡೆಸಿ ಪರಿಹಾರ ನೀಡುವಂತೆ ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನೀಲಗುಂದದ ಗುಡ್ಡದ ವಿರಕ್ತಮಠದ ನೀಲಗುಂದ ಶಿವಯೋಗಿ ಸ್ವಾಮೀಜಿ ಹಾಗೂ ವಾಲ್ಮೀಕಿ ಪೀಠದ ನಿರಂಜಾನಂದಪುರಿ ಸ್ವಾಮೀಜಿ ಮಾತನಾಡಿ, ‘ಸರ್ಕಾರ ರೈತರ ತಾಳ್ಮೆಯನ್ನು ಪರೀಕ್ಷಿಸುವುದು ಸರಿಯಲ್ಲ. ಕೂಡಲೇ ಪರಿಹಾರ ಘೋಷಿಸಬೇಕು’ ಎಂದು ಒತ್ತಾಯಿಸಿದರು.

ರೈತರಿಂದ ಮನವಿ ಸ್ವೀಕರಿಸಿದ ಉಪ ವಿಭಾಗಾಧಿಕಾರಿ ಟಿ.ಭೂ ಬಾಲನ್‌, ಸರ್ಕಾರ ಗಮನಕ್ಕೆ ತಂದು 15 ದಿನಗಳ ಒಳಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ದುಗ್ಗಾವತಿ ಹಿರೇಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿದರು. ಮುಖಂಡರಾದ ಪೂಜಾರ್‌ ಬಸವರಾಜಪ್ಪ, ಶೇಖರಪ್ಪ, ಸಿದ್ದಲಿಂಗಪ್ಪ, ಶಾಂತಕುಮಾರ್‌ ಉಪಸ್ಥಿತರಿದ್ದರು. ಅಧಿಕಾರಿಗಳಾದ ತಹಶೀಲ್ದಾರ್‌ ಕೆ.ಗುರುಬಸವರಾಜ್‌, ಕೃಷಿ ಉಪ ನಿರ್ದೇಶಕ ಸದಾಶಿವಪ್ಪ, ಆರ್‌.ತಿಪ್ಪೆಸ್ವಾಮಿ ಸ್ಥಳಕ್ಕೆ ಬಂದಿದ್ದರು.

ರೈತರ ಪ್ರತಿಭಟನೆಯಿಂದಾಗಿ ಸುಮಾರು ಮೂರು ಗಂಟೆಗಳ ಕಾಲ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಅಧಿಕಾರಿಗಳು ವಾಹನಗಳಿಗೆ ಪರ್ಯಾಯ ಮಾರ್ಗ ಕಲ್ಪಿಸಿದಾಗ ಆಕ್ರೋಶಗೊಂಡ ರೈತರು ಟ್ರ್ಯಾಕ್ಟರ್‌ಗಳನ್ನು ಅಡ್ಡ ನಿಲ್ಲಿಸಿ ಪುನಃ ವಾಹನ ಸಂಚಾರ ತಡೆದರು. ವಾಹನ ಸವಾರರು ಪರದಾಡುವಂತಾಯಿತು.

Post Comments (+)