ಶುಕ್ರವಾರ, ಸೆಪ್ಟೆಂಬರ್ 20, 2019
22 °C

ಮೋದಿ ಸರ್ಕಾರದ ವಿರುದ್ದ ಪ್ರತಿಭಟನೆ, ಪತ್ರ ಚಳವಳಿ

Published:
Updated:

ಗಜೇಂದ್ರಗಡ: ‘ಕೇಂದ್ರದಲ್ಲಿರುವ ನರೇಂದ್ರ ಮೋದಿ ಸರ್ಕಾರವು ಚುನಾವಣೆ ಪೂರ್ವ ನೀಡಿದ ಭರವಸೆಯನ್ನು ಇಂದಿಗೂ ಈಡೇರಿಸಿಲ್ಲ. ಇದು ಜನವಿರೋಧಿ ಸರ್ಕಾರ’ ಎಂದು ರೋಣ ತಾಲ್ಲೂಕು ಕಾಂಗ್ರೆಸ್ ಮುಖಂಡರು ಮಂಗಳವಾರ ಪ್ರತಿಭಟನೆ ನಡೆಸಿದರು.

‘ನರೇಂದ್ರ ಮೋದಿ ಚುನಾವಣೆ ಪೂರ್ವದಲ್ಲಿ ನೀಡಿದ ಆಶ್ವಾಸನೆಯಂತೆ ವಿದ್ಯಾವಂತ ನಿರುದ್ಯೋಗಿಗಳಿಗೆ ವಾರ್ಷಿಕವಾಗಿ ಎರಡು ಕೋಟಿ ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿದೆ. ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ಪ್ರತಿಯೊಬ್ಬರ ಖಾತೆಗೆ ಅದನ್ನು ಜಮೆ ಮಾಡುವುದಾಗಿ ಹೇಳಿದ್ದರು.

ಅದನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ನೋಟು ಬದಲಾವಣೆ, ಜಿಎಸ್‌ಟಿಯಿಂದ ಸಾಮಾನ್ಯರು ಕಂಗಾಲಾಗಿದ್ದಾರೆ’ ಎಂದು ರೋಣ ಮತಕ್ಷೇತ್ರ ವ್ಯಾಪ್ತಿಯ ಯುವ ಕಾಂಗ್ರೆಸ್ ವತಿಯಿಂದ ಹಾವೇರಿ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಉಪಾಧ್ಯಕ್ಷ ಮಿಥುನ್ ಪಾಟೀಲ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಈ ಪ್ರತಿಭಟನಾ ಮೆರವಣಿಗೆಯು ಮೈಸೂರಮಠದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಕಾಲಕಾಲೇಶ್ವರ ವೃತ್ತದಲ್ಲಿ ಸಭೆಯಾಗಿ ಮಾರ್ಪಟ್ಟಿತು.

ಪುರಸಭೆ ಸದಸ್ಯ ಶಿವರಾಜ ಘೋರ್ಪಡೆ, ಸುಬಾನಸಾಬ ಆರಗಿದ್ದಿ, ಉಮೇಶ ರಾಠೋಡ, ಬೆನಕನವಾರಿ, ಪ್ರಶಾಂತ ರಾಠೋಡ, ಮಿಥುನ ಪಾಟೀಲ, ಮಹಿಳಾ ಕಾಂಗ್ರೆಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ವಾತಿ ಮಳಗಿ ಕೇಂದ್ರದ ಜನ ವಿರೋಧಿ ನೀತಿಯನ್ನು ಖಂಡಿಸಿದರು. ‘ಮೋದಿ ಬಣ್ಣದ ಮಾತುಗಾರ. ಅವರನ್ನು ನಂಬಿದ ಜನ ಮೋಸಹೋಗಿದ್ದಾರೆ’ ಎಂದು ಟೀಕಿಸಿದರು.

ಮೆರವಣಿಗೆಯು ಎಪಿಎಂಸಿ ಆವರಣದಲ್ಲಿರುವ ಅಂಚೆ ಕಚೇರಿಗೆ ತೆರಳಿ ಅಂಚೆ ಕಚೇರಿಗೆ ಮುತ್ತಿಗೆ ಹಾಕಿದಾಗ ಕೆಲವು ಮುಂಖಡರು ಇದನ್ನು ಆಕ್ಷೇಪಿಸಿದರು. ನಂತರ ಅಲ್ಲಿಂದ ಹೊರಬಂದು ಅಂಚೆ ಪೆಟ್ಟಿಗೆಯಲ್ಲಿ ಕಾಂಗ್ರೆಸ್ ಮುಖಂಡರು ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಪತ್ರಗಳನ್ನು ಹಾಕಿದರು. ಈ ಮೂಲಕ ಪತ್ರ ಚಳವಳಿ ನಡೆಸಿದರು.

ಗದಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ ಮಂದಾಲಿ, ನಾಶಿರ ಅಲ್ಲಿಖಾನ್, ಶಿದ್ದನಗೌಡ ಪಾಟೀಲ, ಹಾಲೇಶ ಹಳ್ಳಿ, ಎಂ.ಬಿ.ರಾಯನಗೌಡರ, ಪುರಸಭೆ ಅಧ್ಯಕ್ಷೆ ಸುಜಾತಾ ಚುಂಚಾ, ಮಾಜಿ ಅಧ್ಯಕ್ಷೆ ಮಕ್ತುಂಬಿ ಹಣಗಿ, ಶ್ರೀಧರ ಗಂಜಿಗೌಡರ, ಕೊಟ್ರೇಶ ಚಿಲಕಾ, ಮರ್ತುಜಾ ಡಾಲಾಯತ್, ಎಂ.ಎಸ್.ಕೋಲಕಾರ, ವಿ.ಬಿ.ಹಪ್ಪಳದ, ಬಸವರಾಜ ಹೊಸಮನಿ, ರೋಣ ತಾಲ್ಲೂಕಿನ ಕಾಂಗ್ರೆಸ್ ಯುವ ಮುಖಂಡರು ಇದ್ದರು. ಮೆರವಣಿಗೆ ಸಾಗಿ ಬರುವ ಮಾರ್ಗದಲ್ಲಿ ಕಾಂಗ್ರೆಸ್ ಮುಖಂಡರ ನಡುವೆ ಪರಸ್ಪರ ಮುನಿಸು ಕಂಡು ಬಂದಿತು. ನಂತರ ಅದನ್ನು ತಾವೇ ಸರಿಪಡಿಸಿಕೊಂಡರು.

Post Comments (+)