ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

20 ರಸ್ತೆಗಳಿಗೆ ಅಭಿವೃದ್ಧಿ ಯೋಗ

Last Updated 25 ಅಕ್ಟೋಬರ್ 2017, 6:40 IST
ಅಕ್ಷರ ಗಾತ್ರ

ಹಾಸನ: ಬಾಹುಬಲಿ ಮಹಾ ಮಸ್ತಕಾಭಿಷೇಕದ ಅಂಗವಾಗಿ ಹಾಸನ ನಗರದಲ್ಲಿ ಹಾದು ಹೋಗಿರುವ ಬಿ.ಎಂ.ರಸ್ತೆ ಸೇರಿದಂತೆ ಜಿಲ್ಲೆಯ 20 ರಸ್ತೆಗಳಿಗೆ ಅಭಿವೃದ್ಧಿಯ ಯೋಗ ಲಭಿಸಿದೆ. ಒಟ್ಟು ₹ 149.7 ಕೋಟಿ ವೆಚ್ಚವಾಗುತ್ತಿದ್ದು, ಲೋಕೋಪಯೋಗಿ ಇಲಾಖೆ ₹ 87.70 ಕೋಟಿ ಹಾಗೂ ಕೇಂದ್ರ ರಸ್ತೆ ಅಭಿವೃದ್ಧಿ ನಿಧಿ (ಸಿ.ಆರ್.ಎಫ್) ₹ 60 ಕೋಟಿ ವೆಚ್ಚ ಮಾಡಲಾಗುತ್ತಿದೆ. ಕೆಲ ರಸ್ತೆಗಳ ಕಾಮಗಾರಿಗಳು ಆರಂಭವಾಗಿವೆ.

ಸಂಸದ ಎಚ್.ಡಿ.ದೇವೇಗೌಡ ಪ್ರಯತ್ನದಿಂದ ಬಿಡುಗಡೆಯಾಗಿರುವ ಹಿರೀಸಾವೆ - ಶ್ರವಣಬೆಳಗೊಳ - ಚನ್ನರಾಯಪಟ್ಟಣ ನಡುವಿನ ರಸ್ತೆ ವಿಸ್ತರಣೆ ಹಾಗೂ ಡಾಂಬರೀಕರಣಕ್ಕೆ ₹ 25 ಕೋಟಿ, ರಾಷ್ಟ್ರೀಯ ಹೆದ್ದಾರಿ 75ರ ಶೆಟ್ಟಿಹಳ್ಳಿ ವೃತ್ತದಿಂದ ಚನ್ನರಾಯಪಟ್ಟಣ ಮೂಲಕ ಬರಗೂರು ಹ್ಯಾಂಡ್ ಪೋಸ್ಟ್‌ವರೆಗೆ ಚತುಷ್ಪಥ ರಸ್ತೆ ಅಭಿವೃದ್ಧಿ ಕಾಮಗಾರಿಗೆ ₹ 35 ಕೋಟಿ ವೆಚ್ಚ ಮಾಡಲಾಗುತ್ತಿದೆ.

ಮಹೋತ್ಸವದ ಸಿದ್ಧತೆಗೆ ರಾಜ್ಯ ಸರ್ಕಾರ ಮಂಜೂರು ಮಾಡಿರುವ ₹ 175 ಕೋಟಿ ಪೈಕಿ ಶ್ರವಣಬೆಳಗೊಳ ಸಂಪರ್ಕಿಸುವ 5 ರಸ್ತೆಗಳೂ ಸೇರಿ ರಾಜ್ಯ ಹೆದ್ದಾರಿ ವ್ಯಾಪ್ತಿಗೊಳಪಡುವ 18 ರಸ್ತೆಗಳ ಅಭಿವೃದ್ಧಿಗೆ ₹ 89.70 ಕೋಟಿ ಅನ್ನು ಲೋಕೋಪಯೋಗಿ ಇಲಾಖೆ ಖರ್ಚು ಮಾಡುತ್ತಿದೆ.

ಅರಸೀಕೆರೆ - ಚನ್ನರಾಯಪಟ್ಟಣ ನಡುವಿನ ರಾಜ್ಯ ಹೆದ್ದಾರಿ- 7 ರ 50.7 ಕಿ.ಮೀ. ರಸ್ತೆ ಮರು ಡಾಂಬರೀಕರಣಕ್ಕೆ ₹ 24.20 ಕೋಟಿ, ಚನ್ನರಾಯಪಟ್ಟಣ - ಹೊಳೆನರಸೀಪುರ ನಡುವಿನ ರಾಜ್ಯ ಹೆದ್ದಾರಿ ಸಂಖ್ಯೆ - 8 ರಲ್ಲಿನ 13.15 ಕಿ.ಮೀ. ರಸ್ತೆಯ ಅಭಿವೃದ್ಧಿಗೆ 11 ಕೋಟಿ, ಹಾಸನ - ಬೇಲೂರು ನಡುವಿನ ರಾಜ್ಯ ಹೆದ್ದಾರಿ ಸಂಖ್ಯೆ - 57 ರಲ್ಲಿ 43. 6 ಕಿ.ಮೀ. ರಸ್ತೆ ಅಭಿವೃದ್ಧಿಗೆ ₹ 13.5 ಕೋಟಿ ಹಾಗೂ ಚನ್ನರಾಯಪಟ್ಟಣ - ಮಂಡ್ಯ ರಸ್ತೆಯ ( ರಾಜ್ಯ ಹೆದ್ದಾರಿ -47) 15 ಕಿ.ಮೀ. ರಸ್ತೆ ಅಭಿವೃದ್ಧಿಗೆ ₹ 4.95 ಕೋಟಿ ನಿಗದಿಯಾಗಿದೆ.

ಹಾಸನ ನಗರ ರಸ್ತೆ: ಹಾಸನ ನಗರದ ಡೇರಿ ವೃತ್ತದಿಂದ ದೇವರಾಯಪಟ್ಟಣದ ವರೆಗಿನ ಬಿ.ಎಂ.ರಸ್ತೆ ಡಾಂಬರೀಕರಣಕ್ಕೆ ₹ 4.90 ಕೋಟಿ, ಹಾಸನ ಸಾಲಗಾಮೆ ರಸ್ತೆ ಸರಸ್ವತಿ ಪುರಂನಿಂದ ಎಂ.ಸಿ.ಎಫ್ ವರೆಗೆ 1.40 ಕಿ.ಮೀ. ಚತುಷ್ಪಥ ರಸ್ತೆ ನಿರ್ಮಾಣ ಸೇರಿದಂತೆ 6 ಕಿ.ಮೀ. ರಸ್ತೆ ಅಭಿವೃದ್ಧಿಗೆ ₹ 4.90 ಕೋಟಿ ನಿಗದಿಯಾಗಿದೆ. ಈಗಾಗಲೇ ಕಾಮಗಾರಿಗಳು ಶುರುವಾಗಿವೆ.

‘ಮಹೋತ್ಸವದ ಅಂಗವಾಗಿ ಶ್ರವಣಬೆಳಗೊಳಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಮಳೆಗಾಲ ಇದ್ದರಿಂದ ಸ್ವಲ್ಪ ವಿಳಂಬವಾಗಿತ್ತು. ರಸ್ತೆ ವಿಸ್ತರಣೆ, ಡಾಂಬರೀಕರಣ ಕೆಲಸಗಳು ಜನವರಿಯೊಳಗೆ ಪೂರ್ಣಗೊಳ್ಳಲಿದೆ’ ಎಂದು ಲೋಕೋಪಯೋಗಿ ಇಲಾಖೆ ಇಇ ಎನ್.ನಾಗರಾಜ್ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT