ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಸಿ. ಟಿ.ವಿ ಕುರುಡಾಗಿ 16 ತಿಂಗಳು

Last Updated 25 ಅಕ್ಟೋಬರ್ 2017, 6:46 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲಾ ಕೇಂದ್ರವಾದ ನಗರದ ಸಿ.ಸಿ.ಟಿ.ವಿ ವ್ಯವಸ್ಥೆಯು ಕೆಟ್ಟು 16 ತಿಂಗಳು ಕಳೆದಿದ್ದು, ಪೊಲೀಸರು ಅಪರಾಧ ಪತ್ತೆ ಕಾರ್ಯದಲ್ಲಿ ಹಿನ್ನಡೆ ಅನುಭವಿಸುವಂತಾಗಿದೆ. ನಗರಗಳು ಹಾಗೂ ಜನಸಂದಣಿ ಪ್ರದೇಶಗಳಲ್ಲಿ ಅಪರಾಧ, ಸಂಚಾರ ನಿಯಮ ಮತ್ತಿತರ ಕಾನೂನುಗಳ ಉಲ್ಲಂಘನೆ ಪ್ರಕರಣಗಳ ಪತ್ತೆಗೆ ಪೊಲೀಸರು ‘ಸಿ.ಸಿ. ಟಿ.ವಿ’ಗೆ ಮೊರೆ ಹೋಗುತ್ತಾರೆ. ಅದರಲ್ಲಿ ದಾಖಲಾದ ಫೂಟೇಜ್‌ಗಳನ್ನು ಜಾಲಾಡುತ್ತಾರೆ. ಆ ಮೂಲಕ ತಪ್ಪಿತಸ್ಥರ ಪತ್ತೆ ಮಾಡುತ್ತಾರೆ. ಆದರೆ, ಹಾವೇರಿ ಪೊಲೀಸರಿಗೆ ಮಾತ್ರ ಈ ಸೌಭಾಗ್ಯವಿಲ್ಲ. 16 ತಿಂಗಳಿಂದ ಸಿ.ಸಿ. ಟಿವಿ ನಿಷ್ಟ್ರಯೋಜಕವಾಗಿದೆ.

‘ನಗರಸಭೆ ಅನುದಾನದ ನೆರವಿನಲ್ಲಿ ಪೊಲೀಸ್ ಇಲಾಖೆಯು ಸಿ.ಸಿ. ಟಿ.ವಿ ಅಳವಡಿಸಿತ್ತು. ಆದರೆ, 2016ರ ಮೇ ತಿಂಗಳಲ್ಲಿ ಬಿದ್ದ ಸಿಡಿಲಿಗೆ ಸಿ.ಸಿ.ಟಿ.ವಿ ವ್ಯವಸ್ಥೆಯೇ ಕೆಟ್ಟು ಹೋಗಿತ್ತು. ದುರಸ್ತಿಗಾಗಿ ಜಿಲ್ಲೆಯ ಪೊಲೀಸರು ಸತತವಾಗಿ ಮೇಲಧಿಕಾರಿಗಳಿಗೆ ಮನವಿ ಮಾಡಿದ್ದರೂ, ನಿರ್ವಹಣಾ ಸಂಸ್ಥೆ ಸ್ಪಂದಿಸುತ್ತಿಲ್ಲ ಎಂದು ತಿಳಿದು ಬಂದಿದೆ. ಸಿ.ಸಿ. ಟಿವಿ  ಸ್ಥಗಿತಗೊಂಡು ಒಂದು ಕಾಲು ವರ್ಷ ಕಳೆದರೂ, ರಾಜ್ಯಮಟ್ಟದ ಅಧಿಕಾರಿಗಳು ಹಾಗೂ ಸರ್ಕಾರ ಮೌನಕ್ಕೆ ಶರಣಾಗಿರುವುದು ಸಂಶಯಕ್ಕೆ ಎಡೆ ಮಾಡಿದೆ’ ಎನ್ನುತ್ತಾರೆ ನಗರಸಭೆ ಸದಸ್ಯ ಗುಡ್ಡನಗೌಡ ಅಂದಾನಿಗೌಡ್ರ.

‘ದೊಡ್ಡ ದೊಡ್ಡ ನಗರಗಳಲ್ಲಿ ಸುಧಾರಿತ ಕ್ಯಾಮೆರಾ ತಂತ್ರಜ್ಞಾನ ‌ಬಳ ಸುತ್ತಿದ್ದಾರೆ. ಆದರೆ, ಇಲ್ಲಿ ದುರಸ್ತಿಯನ್ನೇ ಮಾಡಿಲ್ಲ. ಈ ಅವಧಿಯಲ್ಲಿ ನಾಲ್ಕು ಎಸ್ಪಿಗಳನ್ನು (ಎನ್‌. ಶಶಿಕುಮಾರ್, ಬಿ. ರಮೇಶ್, ವಂಶಿಕೃಷ್ಣ, ಕೆ. ಪರಶು ರಾಂ) ಜಿಲ್ಲೆ ಕಂಡಿದೆ. ಎಸ್ಪಿಗಳು ಹಾಗೂ ಪೊಲೀಸರ ವರ್ಗಾವಣೆಯಲ್ಲಿ  ತೋರುವ ಆಸಕ್ತಿಯನ್ನು ಸರ್ಕಾರವು ಅಭಿವೃದ್ಧಿ, ಕ್ರೈಂ ಪತ್ತೆ, ಕಾನೂನು ಸುವ್ಯವಸ್ಥೆಯಲ್ಲಿ ತೋರಿಸುತ್ತಿಲ್ಲ’ ಎಂದು ವಕೀಲ ಶಿವಬಸವ ವನ್ನಳ್ಳಿ ಆರೋಪಿಸಿದರು.

‘ಕ್ರೈಂ ತನಿಖೆಯಲ್ಲಿ ಪೊಲೀಸರಿಗೆ ‘ಸಿ.ಸಿ. ಟಿ.ವಿ ಕ್ಯಾಮೆರಾ’ದಲ್ಲಿನ ದಾಖಲೆಗಳು ಪ್ರಮುಖ ಆಧಾರ. ಅಪರಾಧ ನಡೆದ ಸ್ಥಳದ ಕ್ಯಾಮೆರಾ ಫೂಟೇಜ್‌ಗಳೇ ಹಲವು ಬಾರಿ ಪ್ರಮುಖ ಸಾಕ್ಷ್ಯಗಳಾಗಿರುತ್ತವೆ’ ಎಂದು ವಿವರಿಸಿದರು.

ಸಿ.ಸಿ.ಟಿ.ವಿ: ನಗರದ ಹೊಸ್ಮನಿ ಸಿದ್ದಪ್ಪ ವೃತ್ತ, ಹಾನಗಲ್ ಬೈಪಾಸ್, ಜೆ.ಪಿ. ವೃತ್ತ, ಎಂ.ಜಿ ರಸ್ತೆ, ರೈಲು ನಿಲ್ದಾಣ, ಜಿ.ಎಚ್‌. ಕಾಲೇಜು, ಮೆಹಬೂಬಸಾನಿ ದರ್ಗಾ, ಆರ್‌ಟಿಒ, ಕಾಗಿನೆಲೆ ಕ್ರಾಸ್, ಲಕ್ಮಾಪುರ ಕ್ರಾಸ್, ಬಸ್ ನಿಲ್ದಾಣ, ಬಸೇಗಣ್ಣಿ ಪೆಟ್ರೋಲ್‌ ಪಂಪ್ ಮುಂಭಾಗ, ಲಯನ್ಸ್ ಶಾಲೆ ಮುಂದೆ, ನೌಕರರ ಭವನದ ಮುಂದೆ, ಸುಭಾಸ್ ವೃತ್ತ, ಅಕ್ಕಮಹಾದೇವಿ ವೃತ್ತ, ಎ.ಪಿ.ಎಂ.ಸಿ, ತೋಟದಯಲ್ಲಾಪುರ ಸೇರಿದಂತೆ 19 ಸ್ಥಳಗಳಲ್ಲಿ 38 ಕ್ಯಾಮೆರಾಗಳಿವೆ. ಇವುಗಳು ದಾಖಲಿಸಿದ ದೃಶ್ಯಗಳ ವೀಕ್ಷಣೆ ಹಾಗೂ ದಾಖಲೀಕರಣವು ನಗರಸಭೆ ಬಳಿಯ ಪೊಲೀಸ್ ನಿಯಂತ್ರಣ ಕೊಠಡಿಯಲ್ಲಿ ನಡೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT