ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಸಂಸ್ಥೆ ವರದಿ ಸತ್ಯಕ್ಕೆ ದೂರ

Last Updated 25 ಅಕ್ಟೋಬರ್ 2017, 6:49 IST
ಅಕ್ಷರ ಗಾತ್ರ

ಹಾವೇರಿ: ‘ಕರ್ನಾಟಕದ ಶಿಕ್ಷಣ ವ್ಯವಸ್ಥೆ ಅತ್ಯಂತ ಕಳಪೆಯಾಗಿದೆ ಎಂದು ವಿಶ್ವಸಂಸ್ಥೆ ನೀಡಿದ ವರದಿ ಸತ್ಯಕ್ಕೆ ದೂರವಾದದ್ದು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ನಿರ್ಮಿತಿ ಕೇಂದ್ರದ ಸಹಯೋಗ ದಲ್ಲಿ ತಾಲ್ಲೂಕಿನ ದೇವಿಹೊಸೂರು ಗ್ರಾಮದಲ್ಲಿ ಮಂಗಳವಾರ ನಡೆದ ‘ಸರ್ಕಾರಿ ಉರ್ದು ಪ್ರೌಢ ಶಾಲೆಯ ಕಟ್ಟಡ ಉದ್ಘಾಟನೆ’ಯನ್ನು ನೆರವೇರಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನ ವರು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದು, ಅನೇಕ ಯೋಜನೆಗಳ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.

ರಾಜ್ಯದ ಅಲ್ಪಸಂಖ್ಯಾತ ಸಮು ದಾಯದ ಶಾಲೆಯಗಳ ಅಭಿವೃದ್ಧಿಗೆ ‘ಸಾಚಾರ್‌ ಸಮಿತಿ’ ರಚಿಸಿ 2006 ರಲ್ಲಿಯೇ ಸರ್ಕಾರಕ್ಕೆ ವರದಿ ಸಲ್ಲಿಸಲಾ ಗಿದೆ. ರಾಷ್ಟ್ರದ ಮೊದಲ ಶಿಕ್ಷಣ ಸಚಿವರಾಗಿದ್ದ ಡಾ.ಎ.ಪಿ.ಜೆ.ಅಬ್ದುಲ್‌ ಕಲಾಂ ಅವರ ಹೆಸರಿನಲ್ಲಿ ಒಟ್ಟು 100 ಶಾಲೆಗಳನ್ನು ಈಗಾಗಲೇ ಪ್ರಾರಂಭಿಸಲಾಗಿದೆ ಎಂದರು.

‘ಸರ್ವ ರೋಗಗಳಿಗೂ ಶಿಕ್ಷಣವೇ ಮದ್ದು. ಆದ್ದರಿಂದ, ಅಲ್ಪಸಂಖ್ಯಾತ ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಅವಕಾಶಗಳನ್ನು ನೀಡಬೇಕು. ಈ ಶಾಲೆಗೆ ಹೆಚ್ಚುವರಿಯಾಗಿ ಮೂರು ಕೊಠಡಿಗಳಿಗೆ ಶೀಘ್ರವೇ ಅನುದಾನ ನೀಡಲಾಗುವುದು’ ಎಂದರು.

ಇಂದು ಸಣ್ಣ ಸಣ್ಣ ವಿಚಾರಗಳಿಗೆ ಜಾತಿ, ಭಾಷೆ, ಪ್ರಾಂತ್ಯಗಳನ್ನು ಮುಂದಿಡುತ್ತಿರುವುದು ಆರೋಗ್ಯಕರ ವಿಚಾರವಲ್ಲ. ಇಂದಿನ ಯುವಕರಲ್ಲಿ ಅಪಾರ ಶಕ್ತಿ ಅಡಗಿದೆ. ಆದರೆ, ಉತ್ತಮ ಮಾರ್ಗದರ್ಶನ ಇಲ್ಲದೇ ಇರುವ ಕಾರಣಕ್ಕೆ ಅನೇಕ ತಪ್ಪುಗಳು ನಡೆಯುತ್ತಿವೆ’ ಎಂದರು. ಮುಸ್ಲಿಂ ಸಮುದಾಯಕ್ಕೆ ಯಾವುದೇ ವೃತ್ತಿ ಇಲ್ಲ. ಅವರು ಮಾಡಿದ್ದೇ ವೃತ್ತಿಯಾಗಿದೆ. ಆದ್ದರಿಂದ, ಅವರ ಅಭಿವೃದ್ಧಿಗೆ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿ ಮಾಡಿದೆ.

ಯಾವುದೇ ಆರೋಪ ಹಾಗೂ ಕಳಂಕ ಹೊಂದಿರದ 184 ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಮಕ್ಕಳಿಗೆ ಸ್ಪಷ್ಟ ಓದು, ಶೃದ್ಧ ಬರಹ, ಗಣಿತ ಹಾಗೂ ವಿಜ್ಞಾನಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ರಾಜ್ಯದಲ್ಲಿ ಈಗಾಗಲೇ ಸುಮಾರು 60 ಸಾವಿರ ಶಾಲೆಗಳಿದ್ದು ಅವುಗಳ ಉನ್ನತೀಕರಣಕ್ಕೆ ನಾನು ಮುಂದಾಗಿದ್ದೇನೆ. ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರತಿ ಹೋಬಳಿಗೆ ಒಂದರಂತೆ ‘ಕರ್ನಾಟಕ ಪಬ್ಲಿಕ್‌ ಶಾಲೆ’ನ್ನು ಪ್ರಾರಂಭಿಸಲಾಗುವುದು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಸಮುದಾಯದ ಓಣಿಗಳಿಗೆ ಕಾಂಕ್ರೀಟ್‌ ರಸ್ತೆ ಹಾಗೂ ಒಳಚರಂಡಿಗಳನ್ನು ಮಂಜೂರು ಮಾಡಲಾಗಿದೆ’ ಎಂದರು.

ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ‘ಈ ಸರ್ಕಾರಿ ಉರ್ದು ಪ್ರೌಢ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಜಾಗದ ಸಮಸ್ಯೆ ಹೆಚ್ಚಾಗಿತ್ತು. ಆಗ ಗ್ರಾಮಕ್ಕೆ ಶಿರಸಂಗಿ ಲಿಂಗರಾಜರು ದಾನವಾಗಿ ನೀಡದ ಜಾಗವನ್ನು ಗ್ರಾಮಸ್ಥರು ಶಾಲೆಗೆ ದಾನವಾಗಿ ನೀಡಿದ್ದು ಶ್ಲಾಘನೀಯ’ ಎಂದರು.

ಬಾಗಿನ ಅರ್ಪಣೆ: ಪ್ರೌಢಶಾಲೆಯ ಉದ್ಘಾಟನೆಯ ಮುನ್ನ ಬಹುಗ್ರಾಮ ಯೋಜನೆ ಅಡಿಯಲ್ಲಿ ನೀರು ತುಂಬಿಸಿದ ಗ್ರಾಮದ ಕೆರೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್‌, ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹಾಗೂ ಶಾಸಕ ಬಸವರಾಜ ಶಿವಣ್ಣನವರ ಬಾಗಿನ ಅರ್ಪಿಸಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ಉಪಾಧ್ಯಕ್ಷೆ ಮಮ್ತಾಜ್‌ಬಿ ತಡಸ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಯಲ್ಲಪ್ಪ ಮಣ್ಣೂರು, ಉಪಾಧ್ಯಕ್ಷೆ ನಾಗಮ್ಮ ಬಂಕಾಪುರ, ಜಿಲ್ಲಾ ಪಂಚಾಯ್ತಿ ಶಿಕ್ಷಣ–ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್‌ ಮುನಾಫ್‌ ಯಲಿಗಾರ, ಜಿಲ್ಲಾ ಪಂಚಾಯ್ತಿ ಸದಸ್ಯ ವಿರುಪಾಕ್ಷಪ್ಪ ಕಡ್ಲಿ, ತಾಲ್ಲೂಕು ಪಂಚಾಯ್ತಿ ಸದಸ್ಯೆ ಕಮಕವ್ವ ಪಾಟೀಲ್‌, ನಗರಸಭೆ ಅಧ್ಯಕ್ಷೆ ಪಾರ್ವತೆಮ್ಮ ಹಲಗಣ್ಣನವರ, ಪಿ.ಎಲ್‌.ಡಿ. ಬ್ಯಾಂಕ್‌ ಸದಸ್ಯ ರುದ್ರಗೌಡ ಹರ್ತಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಶಫಿಸಾಬ್‌ ಎರಿಮನಿ, ಉಪಾಧ್ಯಕ್ಷೆ ಶಾಂತವ್ವ ವಾಳದ ಹಾಗೂ ಸದಸ್ಯರು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಮಮತಾ ನಾಯಕ್‌ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಣ್ಣ ಕೆ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT