ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಮೀಜಿಗಳು ಸ್ವಂತ ಆಸ್ತಿಯಲ್ಲ; ಸಮಾಜದ ಆಸ್ತಿ

Last Updated 25 ಅಕ್ಟೋಬರ್ 2017, 6:57 IST
ಅಕ್ಷರ ಗಾತ್ರ

ಕಾಳಗಿ: ‘ನಾಡಿನಲ್ಲಿ ಮಠಗಳು ತ್ರಿವಿಧ ದಾಸೋಹದ ಮೂಲಕ ಸಮಾಜದಲ್ಲಿ ಶಾಂತಿ ಹಾಗೂ ಮಾನವೀಯ ಮೌಲ್ಯಗಳ ಬೆಳವಣಿಗೆಗೆ ಸೇವೆ ಸಲ್ಲಿಸುತ್ತಿದ್ದು, ಸ್ವಾಮೀಜಿಗಳು ಸಮಾಜದ ಆಸ್ತಿಯೇ ವಿನಃ, ಯಾವತ್ತು ಸ್ವಂತ ಆಸ್ತಿ ಆಗಲಾರರು’ ಎಂದು ಹುಕ್ಕೇರಿಯ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಅಭಿಪ್ರಾಯಪಟ್ಟಿದ್ದಾರ.

ಭಾನುವಾರ ಸಮೀಪದ ಸುಗೂರ ಸಂಸ್ಥಾನ ಹಿರೇಮಠದ ನೂತನ ಪಟ್ಟಾಧಿಕಾರಿಗಳಾದ ಚನ್ನರುದ್ರಮುನಿ ಶಿವಾಚಾರ್ಯರ 11ದಿನಗಳ ಮೌನ ಉಪವಾಸ ಅನುಷ್ಠಾನ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕಾಯಕ ಪ್ರಜ್ಞೆ ಅರಿತು, ದೇಶಾಭಿಮಾನ ಬಿತ್ತುವ, ಭಾಷಾಭಿಮಾನ ಬೆಳೆಸುವ ಜನರ ಚಿಂತೆ ಕಳೆದು ನಿಶ್ಚಿಂತರಾಗಿರುವಂತೆ ಮಾಡುವವರೇ ನಿಜವಾದ ಸ್ವಾಮೀಜಿ’ ಎಂದು ಬಣ್ಣಿಸಿದರು.

‘ಮಠ ಕಟ್ಟಿದರೆ ಸಾಲದು. ಜನರ ಮಟ್ಟವನ್ನು ಕಟ್ಟುವವರಾಗಬೇಕೆಂದು ತಿಳಿಸಿದ ಶ್ರೀಗಳು, ಸ್ವಾಮೀಜಿಗೆ ಯಾರಾದರೂ ಬೈಯ್ದರೆ ಕೋಪಗೊಳ್ಳದೇ ಅವರು ನನಗೆ ಭರವಸೆ ತುಂಬಿದವರು ಎಂದು ಭಾವಿಸಬೇಕು, ಹೊಡೆಯಲು ಬಂದವರು ನನ್ನಲ್ಲಿನ ಅಜ್ಞಾನ ಹೊಡೆದೋಡಿಸಿದರೆಂದು ತಿಳಿಯಬೇಕು, ಕೊಲ್ಲಲು ಬಂದವರು ಎನ್ನ ದುರ್ಗುಣ ಕೊಂದರೆಂದರು ಭಾವಿಸಿದಾಗ ಮಾತ್ರ ಸ್ವಾಮೀಜಿ ಭಕ್ತರ ಹೃದಯ ಗೆಲ್ಲಲು ಸಾಧ್ಯ’ ಎಂದರು.

‘ರಾಜ್ಯದ ಯಾವುದೇ ಮಠದಲ್ಲಿ ಕಾಣದಂತಹ ಶ್ರೀಮಠದ ದ್ವಾರ ಬಾಗಿಲಲ್ಲಿ ಹಾನಗಲ್‌ ಗುರು ಕುಮಾರೇಶ್ವರ ಮೂರ್ತಿ ಕೆತ್ತಿಸಿದ್ದು ಇತರ ಮಠಗಳಿಗೆ ಮಾದರಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಬ್ಬೂರಿನ ಹಿರೇಮಠದ ಗೌರಿಶಂಕರ ಶಿವಾಚಾರ್ಯ ಮಾತನಾಡಿ ‘ಸ್ವಾಮೀಜಿಗಳಿಗೆ ಭಕ್ತರೇ ಆಸ್ತಿ. ಭಕ್ತರಿಲ್ಲದ ಮಠ ಎಲ್ಲಿಯೂ ದೊರೆಯುವುದಿಲ್ಲ. ಚನ್ನರುದ್ರಮುನಿ ಶಿವಾಚಾರ್ಯ ಸಾಧಕರಾಗಿದ್ದು, ಪ್ರತಿತಿಂಗಳ ಧಾರ್ಮಿಕ ಕಾರ್ಯಕ್ರಮ ನಡೆಸುವುದರ ಜತೆಗೆ ಶ್ರೀಮಠವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿದ್ದಾರೆ. ಹಾಗಾಗಿ, ಭಕ್ತರು ಶ್ರೀಮಠ ಎಲ್ಲಾ ಚಟುವಟಿಕೆಗಳಲ್ಲಿ ಶ್ರದ್ಧೆಯಿಂದ ಪಾಲ್ಗೊಳ್ಳಬೇಕು’ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರವಚನಕಾರರಾದ ಚಂದ್ರಶೇಖರ ಶಾಸ್ತ್ರಿ, ಪತ್ರಕರ್ತ ಜಗನ್ನಾಥ ಶೇರಿಕಾರ ಮಾತನಾಡಿದರು. ಶ್ರೀಗಳ ತಂದೆಯವರಾದ ವಿನೋದಯ್ಯ ಸ್ವಾಮೀಜಿ, ಗ್ರಾಮದ ಮುಖಂಡರಾದ ಪರಮೇಶ್ವರ ಪಾಟೀಲ, ಸಿದ್ರಾಮಪ್ಪ ಪೊಲೀಸ್‌ ಪಾಟೀಲ, ಚಂದ್ರಕಾಂತ ವೇದಿಕೆಯಲ್ಲಿದ್ದರು. ಶರಣಯ್ಯ ಮಠಪತಿ ಸ್ವಾಗತಿಸಿದರು. ರೇವಣಸಿದ್ದಯ್ಯ ನರನಾಳ್‌ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT