ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಂಡಿ ಅಣೆಕಟ್ಟೆ ನಿರ್ಮಾಣಕ್ಕೆ ವಿರೋಧ

Last Updated 25 ಅಕ್ಟೋಬರ್ 2017, 7:08 IST
ಅಕ್ಷರ ಗಾತ್ರ

ಕಾರವಾರ: ಅಂಕೋಲಾ ತಾಲ್ಲೂಕಿನ ಗಂಗಾವಳಿ ನದಿಗೆ ಹೊನ್ನಳ್ಳಿ ಬಳಿ ₹ 158.62 ಕೋಟಿ ವೆಚ್ಚದಲ್ಲಿ ಕಿಂಡಿ ಅಣೆಕಟ್ಟೆ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಉದ್ದೇಶಿಸಿದ್ದು, ಈ ಯೋಜನೆಗೆ ನದಿಯಂಚಿನ ಗ್ರಾಮಗಳ ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಕಾರವಾರ ನಗರ, ಅಂಕೋಲಾ ಪಟ್ಟಣ, ಮಾರ್ಗಮಧ್ಯದ ಹಳ್ಳಿಗಳು, ಸೀಬರ್ಡ್‌ ನೌಕಾನೆಲೆ ಹಾಗೂ ಆದಿತ್ಯ ಬಿರ್ಲಾ ಕೆಮಿಕಲ್‌ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿಗೆ ನೀರನ್ನು ಒದಗಿಸುವ ಸುಧಾರಿತ ನೀರು ಸರಬರಾಜು ಯೋಜನೆ ಇದಾಗಿದ್ದು, ಈ ಯೋಜನೆಗೆ ರಾಜ್ಯ ಸಚಿವ ಸಂಪುಟ ಇತ್ತೀಚೆಗೆ ಅನುಮೋದನೆ ನೀಡಿದೆ.

ಬೆಳೆಗಳಿಗೆ ಹಾನಿ: ‘ಗಂಗಾವಳಿ ನದಿಗೆ 11.50 ಮೀ ಎತ್ತರದ ಅಣೆಕಟ್ಟೆ ನಿರ್ಮಿಸುವುದರಿಂದ ನದಿಯಂಚಿನ ಅಗಸೂರು, ಹಿಲ್ಲೂರು, ಅಚವೆ, ಸುಂಕಸಾಳ ಹಾಗೂ ಡೋಂಗ್ರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೃಷಿ ಹಾಗೂ ತೋಟದ ಪ್ರದೇಶಗಳು ಹಾನಿಗೀಡಾಗುತ್ತವೆ’ ಎನ್ನುತ್ತಾರೆ ಗಂಗಾವಳಿ ನದಿ ಕೊಳ್ಳ ಹಾಗೂ ಕೃಷಿ ಭೂಮಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಶಿವರಾಮ ಗಾಂವಕರ.

‘ಯೋಜನೆಯಿಂದ 47.96 ಎಕರೆ ಕೃಷಿ ಭೂಮಿ ಹಾಗೂ 14.28 ಎಕರೆ ಅರಣ್ಯ ಭೂಮಿ ನಾಶವಾಗುತ್ತದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ತನ್ನ ವರದಿಯಲ್ಲಿ ತಿಳಿಸಿದೆ. ಆದರೆ ಅಣೆಕಟ್ಟೆ ಕಟ್ಟಿದರೆ ಸುಮಾರು 20 ಕಿ.ಮೀ. ಉದ್ದಕ್ಕೆ ನೀರು ನಿಲ್ಲಲಿದ್ದು, 2 ಸಾವಿರ ಎಕರೆ ಕೃಷಿ ಭೂಮಿ ಹಾಗೂ 300 ಎಕರೆಗೂ ಅಧಿಕ ಅರಣ್ಯ ನಾಶವಾಗುತ್ತದೆ’ ಎನ್ನುತ್ತಾರೆ ಗಂಗಾವಳಿ ನದಿ ಕೊಳ್ಳ ಹಾಗೂ ಕೃಷಿ ಭೂಮಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಶಿವರಾಮ ಗಾಂವಕರ.

‘2009ರಲ್ಲಿ ಗಂಗಾವಳಿ ನದಿಯಲ್ಲಿ ಪ್ರವಾಹ ಉಂಟಾದಾಗ ನದಿಯಂಚಿನ ಸಾವಿರಾರು ಎಕರೆ ತೋಟಗಾರಿಕಾ ಹಾಗೂ ಕೃಷಿ ಕ್ಷೇತ್ರ ಮುಳುಗಡೆಯಾಗಿತ್ತು. ಜತೆಗೆ ಅನೇಕ ಮನೆಗಳು ಕುಸಿದುಬಿದ್ದಿದ್ದವು. ಈ ನದಿ ಪಾತ್ರದಲ್ಲಿ ಕೊಡಸಳ್ಳಿ ಸಂತ್ರಸ್ತರ ಪುನರ್ವಸತಿ ಕೇಂದ್ರವಿದ್ದು, ಈ ಪ್ರದೇಶಕ್ಕೂ ಹಾನಿಯಾಗಿತ್ತು’ ಎಂದು ವಿವರಿಸಿದರು.

ಸಂಪರ್ಕ ಕಡಿತ: ‘ನದಿಯನ್ನು ಅಡ್ಡಗಟ್ಟುವುದರಿಂದ ಸುತ್ತಮುತ್ತಲಿನ ಅನೇಕ ಹಳ್ಳಿಗಳ ಸಂಪರ್ಕ ಕಡಿತಗೊಳ್ಳುತ್ತದೆ. ಇದರಿಂದ ಗ್ರಾಮೀಣ ಜನರು ಸಂಕಷ್ಟ ಅನುಭವಿಸಬೇಕಾಗುತ್ತದೆ. ಕುಡಿಯುವ ನೀರು ಪೂರೈಕೆಗೆ ಆಕ್ಷೇಪವಿಲ್ಲ. ಆದರೆ ಈ ಭಾಗದ ಪುನರ್ವಸತಿ ಕೇಂದ್ರದ ಜನರನ್ನು ರಕ್ಷಿಸುವ ಜವಾಬ್ದಾರಿಯೂ ಕೂಡ ಇದೆ’ ಎನ್ನುತ್ತಾರೆ ಡೋಂಗ್ರಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT