ಪುಣ್ಯಕ್ಷೇತ್ರ ತಲಕಾವೇರಿಯಲ್ಲಿ ದೋಷ: ಪರಿಹಾರ ಕಾರ್ಯಕ್ಕೆ ಪೂರ್ವಭಾವಿ ಸಭೆ

ಸೋಮವಾರ, ಮೇ 27, 2019
28 °C

ಪುಣ್ಯಕ್ಷೇತ್ರ ತಲಕಾವೇರಿಯಲ್ಲಿ ದೋಷ: ಪರಿಹಾರ ಕಾರ್ಯಕ್ಕೆ ಪೂರ್ವಭಾವಿ ಸಭೆ

Published:
Updated:
ಪುಣ್ಯಕ್ಷೇತ್ರ ತಲಕಾವೇರಿಯಲ್ಲಿ ದೋಷ: ಪರಿಹಾರ ಕಾರ್ಯಕ್ಕೆ ಪೂರ್ವಭಾವಿ ಸಭೆ

ನಾಪೋಕ್ಲು: ಜಿಲ್ಲೆಯ ಪವಿತ್ರ ಧಾರ್ಮಿಕ ಕ್ಷೇತ್ರ ತಲಕಾವೇರಿಯನ್ನು ಪ್ರವಾಸೋದ್ಯಮ ಪಟ್ಟಿಯಿಂದ ಪ್ರತ್ಯೇಕಿಸಿ ಧಾರ್ಮಿಕ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸುವುದಕ್ಕಾಗಿ ತಲಕಾವೇರಿ ಕ್ಷೇತ್ರದಲ್ಲಿ ಈಚೆಗೆ ಮಹತ್ವದ ಸಭೆ ನಡೆಯಿತು.

ತಲಕಾವೇರಿ ಕ್ಷೇತ್ರದ ಅಗಸ್ತ್ಯೇಶ್ವರ ಗುಡಿಯ ಬಳಿಯ ಮಂಟಪದಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಬಂದಿದ್ದ ಪ್ರಮುಖರು ಹಾಗೂ ಕ್ಷೇತ್ರದ ಅರ್ಚಕರು ಸಭೆ ನಡೆಸಿದರು. ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣಾಚಾರ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕ್ಷೇತ್ರದ ತಕ್ಕ ಮುಖ್ಯಸ್ಥ ಕೋಡಿ ಪೊನ್ನಪ್ಪ, ಪ್ರಮುಖರಾದ ಮುದ್ದಂಡ ದೇವಯ್ಯ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕ್ಷೇತ್ರೀಯ ಕಾರ್ಯದರ್ಶಿ ನ.ಸೀತಾರಾಂ, ಜಿಲ್ಲಾ ಸಂಘ ಚಾಲಕ ಚಕ್ಕೇರ ಮನು, ಭಾಗಮಂಡಲದ ಭಗಂಡೇಶ್ವರ ದೇವಾಲಯದ ತಕ್ಕ ಮುಖ್ಯಸ್ಥ ಬಲ್ಲಡ್ಕ ಅಪ್ಪಾಜಿ, ತೊಡಿಕಾನದ ವಸಂತ ಭಟ್‌ ಇದ್ದರು.

ಎಂ.ಬಿ. ದೇವಯ್ಯ ಮಾತನಾಡಿ. ‘ದೇವಾಲಯ ವ್ಯವಸ್ಥಾಪನಾ ಸಮಿತಿ ವಿಸರ್ಜನೆಯಾದ ಬಳಿಕ ಕ್ಷೇತ್ರದಲ್ಲಿನ ಸಮಸ್ಯೆಗಳ ಪರಿಹಾರ ಕಾರ್ಯ ಸಾಧ್ಯವಾಗಿಲ್ಲ. ಪರಿಹಾರ ಕೈಗೊಳ್ಳದಿದ್ದರೆ ಕಾವೇರಿ ನದಿ ಬತ್ತಿ ಹೋಗುವ ಸಾಧ್ಯತೆ ಇದೆ. ತುರ್ತು ಪರಿಹಾರ ಕಾರ್ಯ ಅಗತ್ಯವಿದೆ ಎಂದರು.

ತೊಡಿಕಾನದ ವಸಂತ ಭಟ್‌ ಮಾತನಾಡಿ ‘ಪರಿಹಾರ ಕಾರ್ಯದಲ್ಲಿ ಕಾವೇರಿ ನದಿ ಹರಿಯುವ ಪ್ರದೇಶದ ಎಲ್ಲ ಜನರು ಕೈಜೋಡಿಸಬೇಕು, ಮುಜರಾಯಿ ಇಲಾಖೆಗೆ ಒಳಪಟ್ಟ ಬಳಿಕ ಕ್ಷೇತ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಅಗಸ್ತ್ಯೇಶ್ವರನಿಗೆ ಸಮರ್ಪಕವಾಗಿ ಪೂಜೆ ಪುನಸ್ಕಾರವಾಗದೇ ಮುನಿಸಿಕೊಂಡಿದ್ದು ಕಾವೇರಿ ದುಃಖಿತಳಾಗಿದ್ದಾಳೆ. ಪರಿಹಾರವಾಗಬೇಕು’ ಎಂದರು.

ಸಂಘ ಪರಿವಾರದ ಮಂಗಳೂರು ವಿಭಾಗದ ಕಾರ್ಯದರ್ಶಿ ಸೀತಾರಾಂ ತಲಕಾವೇರಿ ಕ್ಷೇತ್ರದ ದೋಷ ಸಮಸ್ಯೆಗಳ ಬಗ್ಗೆ ಚರ್ಚೆ ಆಗಬೇಕು ಎಂದರು. ತುಲಾ ಸಂಕ್ರಮಣದ ಜಾತ್ರೆ ಸಂದರ್ಭ ಭಾಗಮಂಡಲದಿಂದ ತಲಕಾವೇರಿಗೆ ಭಂಡಾರ ಕೊಂಡೊಯ್ಯುವ ಪದ್ಧತಿಯಲ್ಲಿ ಎಲ್ಲರೂ ಸಾಮರಸ್ಯದಿಂದ ಪಾಲ್ಗೊಳ್ಳುವಂತಾಗಬೇಕು ಎಂದು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜ್ಜೀರ ಅಯ್ಯಪ್ಪ ಸಲಹೆ ನೀಡಿದರು. ಧಾರ್ಮಿಕ ಕ್ಷೇತ್ರದ ಹೆಸರಿನಲ್ಲಿ ತಲಕಾವೇರಿಗೆ ಬರುವ ಭಕ್ತರು ಶ್ರದ್ಧೆಯಿಂದ ಕಾವೇರಿ ಮಾತೆಯ ದರ್ಶನಕ್ಕೆ ಬರುವಂತಾಗಬೇಕು.

ಪ್ರವಾಸೋದ್ಯಮದ ಹೆಸರಿನಲ್ಲಿ ಕ್ಷೇತ್ರದ ಪಾವಿತ್ರ್ಯಕ್ಕೆ ಕಳಂಕ ತರುವ ಪ್ರವಾಸಿಗರು ಬರುವುದನ್ನು ತಕ್ಷಣದಿಂದ ನಿರ್ಬಂಧಿಸಬೇಕು’ ಎಂದರು. ಪ್ರಮುಖರಾದ ಕೆ.ಎಸ್‌.ದೇವಯ್ಯ, ಸುಜಕುಶಾಲಪ್ಪ, ಸೂದನ ಈರಪ್ಪ, ಕೊಡಪಾಲ ಗಣಪತಿ, ಎಸ್‌.ಜಿ. ಮೇದಪ್ಪ, ಮಾಜಿಮಾಡ ರವೀಂದ್ರ, ರಾಬಿನ್ ದೇವಯ್ಯ, ಕಲಿಯಂಡ ವಿಠಲ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry