ಭಾನುವಾರ, ಸೆಪ್ಟೆಂಬರ್ 15, 2019
23 °C

ಕೆರೆಗೆ ಮರಳಿದ ನೀರು ಹಕ್ಕಿ

Published:
Updated:

ಶ್ರೀನಿವಾಸಪುರ: ತಾಲ್ಲೂಕಿನ ಕೆರೆಗಳಲ್ಲಿ ನೀರು ಹಕ್ಕಿಗಳ ಕಲರವ ಕೇಳಿಬರುತ್ತಿದೆ. ಮಳೆ ಅಭಾವದಿಂದ ಕೆರೆಯಿಂದ ದೂರವಾಗಿದ್ದ ನೀರು ಹಕ್ಕಿಗಳು ಕೆರೆಗಳಿಗೆ ಮಳೆ ನೀರು ಹರಿದು ಬರುವುದರೊಂದಿಗೆ ಹಿಂದಿರುಗಿವೆ.

ನೀರು ತುಂಬಿದ ಕೆರೆಗಳಲ್ಲಿ ಕೊಕ್ಕರೆ, ನೀರು ಕೋಳಿ, ಮುಳುಗು ಹಕ್ಕಿಗಳು ಕಾಣಿಸಿಕೊಂಡಿವೆ. ನೀರಿನಲ್ಲಿ ದೊರೆಯಬಹುದಾದ ಆಹಾರವನ್ನು ಹಿಡಿಯುವ ಕಾಯಕದಲ್ಲಿ ತೊಡಗಿವೆ. ಕೆರೆಗಳಲ್ಲಿ ನೀರಿಲ್ಲದ ಕಾಲದಲ್ಲಿ ಕೊಕ್ಕರೆಗಳು ಬಯಲಿನ ಮೇಲೆ ದನಗಳು ಮೇಯುವಾಗ ಹುಲ್ಲಿನಿಂದ ಜಿಗಿಯುವ ಕೀಟಗಳನ್ನು ಹಿಡಿದು ನುಂಗುವಲ್ಲಿ ನಿರತವಾಗಿದ್ದವು. ಎಮ್ಮೆಗಳಲ್ಲಿ ಹೇನು ಹೆಕ್ಕುವ ಹಕ್ಕಿಗಳಿಗೂ ಕೊರತೆ ಇರಲಿಲ್ಲ.

ಜಮೀನು ಉಳುಮೆ ಮಾಡುವಾಗ ಮಣ್ಣಿನಿಂದ ಹೊರಬೀಳುವ ಗೊಣ್ಣೆ ಹುಳುಗಳನ್ನು ಹೆಕ್ಕಿ ತಿನ್ನುತ್ತಿದ್ದವು. ಗುಂಪು ಗುಂಪಾಗಿ ನೇಗಿಲಿನ ಹಿಂದೆ ಹಾರುತ್ತಿದ್ದ ಕೊಕ್ಕರೆಗಳ ಮೇಲೆ ಕೋಲು ಬೀಸಿ ಕೊಂದು ಸುಟ್ಟು ತಿನ್ನುತ್ತಿದ್ದವರಿಗೂ ಕೊರತೆ ಇರಲಿಲ್ಲ. ಆದರೆ ಈಗ ಕೊಕ್ಕರೆ ಬಯಲಿನ ಮೇಲೆ ಕಾಣಿಸುತ್ತಿಲ್ಲ. ಕೊಕ್ಕರೆ ಮತ್ತಿತರ ನೀರು ಹಕ್ಕಿಗಳು ಹಿಂಡು ಹಿಂಡಾಗಿ ಕೆರೆ ನೀರಿಗಿಳಿದಿವೆ.

ನೀರಿನಲ್ಲಿ ಮುಳುಗಿ ಏಳುವ ಮುಳುಗು ಹಕ್ಕಿಗಳ ಕೌಶಲ, ದೋಣಿಯಂತೆ ಈಜುತ್ತಾ ಸಾಗುವ ನೀರು ಕೋಳಿಗಳು, ಕೆರೆಯಂಚಿನ ಗಿಡಗಳಿಂದ ನೀರಿನತ್ತ ಧಾವಿಸುವ ಪುಟ್ಟ ಕೋಳಿಗಳು ನೋಡುಗರಿಗೆ ಸಂತೋಷ ಉಂಟುಮಾಡುತ್ತವೆ.

ಈ ಹಿಂದೆ ಅಲ್ಪ ಪ್ರಮಾಣದ ನೀರಿದ್ದ ಕೆರೆಗಳಲ್ಲಿ ಕೆಲವರು ಗಾಳ ಹಾಕಿ ಅಥವಾ ಬಲೆ ಬೀಸಿ ಮೀನು ಹಿಡಿಯುವಲ್ಲಿ ನಿರತರಾಗಿದ್ದಾರೆ. ಒಟ್ಟಾರೆ ಈ ಬಾರಿ ಸುರಿದ ಮಳೆ ಕೆರೆಗಳಿಗೆ ಜೀವಕಳೆ ತಂದಿದೆ ಎಂದು ಗ್ರಾಮೀಣರು ಅಭಿಪ್ರಾಯಪಡುತ್ತಾರೆ.

Post Comments (+)