ಎ.ಡಿ.ಕಾಲೊನಿಯಲ್ಲಿ ಮೂಲಸೌಕರ್ಯ ಮರೀಚಿಕೆ

ಸೋಮವಾರ, ಮೇ 27, 2019
23 °C

ಎ.ಡಿ.ಕಾಲೊನಿಯಲ್ಲಿ ಮೂಲಸೌಕರ್ಯ ಮರೀಚಿಕೆ

Published:
Updated:
ಎ.ಡಿ.ಕಾಲೊನಿಯಲ್ಲಿ ಮೂಲಸೌಕರ್ಯ ಮರೀಚಿಕೆ

ಮಾಲೂರು: ತಾಲ್ಲೂಕಿನ ಮಾಸ್ತಿ ಗ್ರಾಮದ ಎ.ಡಿ.ಕಾಲೊನಿಯಲ್ಲಿ ಸಮಸ್ಯೆಗಳು ಒಂದೆರಡಲ್ಲ. ಚರಂಡಿ, ಕುಡಿಯುವ ನೀರು, ಬೀದಿ ದೀಪ ಹೀಗೆ ಪಟ್ಟಿ ಮಾಡಿದರೆ ಸಮಸ್ಯೆಗಳ ಸರಮಾಲೆಯೇ ಇಲ್ಲಿದೆ. ಬಡಾವಣೆಯಲ್ಲಿ 90 ಮನೆಗಳಿದ್ದು, ಸುಮಾರು 290 ಮತದಾರರಿದ್ದಾರೆ. ದಲಿತರು ಹಾಗೂ ಹಿಂದುಳಿದ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ. ಮೂಲಸೌಕರ್ಯ ಸಮಸ್ಯೆಯಿಂದ ಸ್ಥಳೀಯರು ಪ್ರತಿನಿತ್ಯ ಬವಣೆ ಪಡುವಂತಾಗಿದೆ.

ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿರುವುದರಿಂದ ಬಡಾವಣೆ ನಿವಾಸಿಗಳು ದೂರದ ಕೃಷಿ ಜಮೀನುಗಳಲ್ಲಿನ ಕೊಳವೆ ಬಾವಿಗಳಿಂದ ನೀರು ತರುವಂತಾಗಿದೆ. ಬಡಾವಣೆಯ ರಸ್ತೆಗಳು ಹಾಳಾಗಿ ವರ್ಷವೇ ಕಳೆದಿದ್ದರೂ ಅವುಗಳನ್ನು ದುರಸ್ತಿ ಮಾಡಿಲ್ಲ.

ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಕೊಳಚೆ ನೀರು ರಸ್ತೆಗಳಲ್ಲಿ ಹಾಗೂ ಮನೆಗಳ ಮುಂದೆ ಹರಿಯುತ್ತಿದೆ. ಇದರಿಂದ ನೈರ್ಮಲ್ಯ ಸಮಸ್ಯೆ ಎದುರಾಗಿದ್ದು, ಬಡಾವಣೆ ಕೊಳೆಗೇರಿಯಂತಾಗಿದೆ. ರಸ್ತೆಗಳ ಬದಿಯಲ್ಲಿ ಕಸ ರಾಶಿಯಾಗಿ ಬಿದ್ದಿದ್ದು, ಸೊಳ್ಳೆ, ನೊಣ, ಹಂದಿ ಹಾಗೂ ಬೀದಿ ನಾಯಿ ಕಾಟ ಹೆಚ್ಚಿದೆ. ಇದರಿಂದ ಸ್ಥಳೀಯರಲ್ಲಿ ಸಾಂಕ್ರಾಮಿಕ ರೋಗ ಭೀತಿ ಮನೆ ಮಾಡಿದ್ದು, ಈಗಾಗಲೇ ಹಲವರು ಕಾಯಿಲೆಗೆ ತುತ್ತಾಗಿ ಆಸ್ಪತ್ರೆ ಸೇರಿದ್ದಾರೆ.

ತ್ಯಾಜ್ಯದ ರಾಶಿ ಜತೆ ಕೊಳಚೆ ನೀರು ಸೇರಿ ಕಸ ಸ್ಥಳದಲ್ಲೇ ಕೊಳೆತು ದುರ್ನಾತ ಬೀರುತ್ತಿದ್ದು, ಜನ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೀದಿ ನಾಯಿ ಕಾಟದಿಂದಾಗಿ ಪೋಷಕರು ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಲು ಭಯ ಪಡುವಂತಾಗಿದೆ.

ಮದ್ಯವ್ಯಸನಿಗಳ ಚೀರಾಟ: ಬಡಾವಣೆ ಬಳಿ ತಲೆ ಎತ್ತಿರುವ ಮದ್ಯದಂಗಡಿಗಳು ಮಹಿಳೆಯರು ನಿದ್ದೆಗೆಡಿಸಿವೆ. ಮದ್ಯದಂಗಡಿಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ವಹಿವಾಟು ನಡೆಯುತ್ತಿದ್ದು, ಮದ್ಯವ್ಯಸನಿಗಳ ಚೀರಾಟ ಮೇರೆ ಮೀರಿದೆ. ಮದ್ಯವ್ಯಸನಿಗಳು ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುವ ಪ್ರಕರಣಗಳು ನಡೆಯುತ್ತಿದ್ದು, ಮಕ್ಕಳು ಹಾಗೂ ಮಹಿಳೆಯರಿಗೆ ಸುರಕ್ಷತೆ ಇಲ್ಲವಾಗಿದೆ.

‘ಮದ್ಯದಂಗಡಿಗಳು ಆರಂಭವಾದ ನಂತರ ಗ್ರಾಮದ ಬಹುಪಾಲು ಪುರುಷರು ಮದ್ಯವ್ಯಸನಿಗಳಾಗಿದ್ದಾರೆ. ದುಡಿಮೆಯ ಹಣವನ್ನೆಲ್ಲಾ ಮದ್ಯಕ್ಕೆ ಖರ್ಚು ಮಾಡುತ್ತಿದ್ದಾರೆ. ಇದರಿಂದ ಜೀವನ ನಿರ್ವಹಣೆಗೆ ಕಷ್ಟವಾಗಿದೆ’ ಎಂದು ಕಾಲೊನಿ ನಿವಾಸಿ ಲಕ್ಷ್ಮಮ್ಮ ಅಳಲು ತೋಡಿಕೊಂಡರು.

ಅಧಿಕಾರಿಗಳ ಕುಮ್ಮಕ್ಕು: ಮಹಿಳೆಯರು ಮದ್ಯದಂಗಡಿಗಳನ್ನು ತೆರವುಗೊಳಿಸುವಂತೆ ಮಾಸ್ತಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಅಂಗಡಿಗಳ ಮಾಲೀಕರೊಂದಿಗೆ ಶಾಮೀಲಾಗಿರುವ ಗ್ರಾ.ಪಂ ಅಧಿಕಾರಿಗಳು ಮದ್ಯದ ವಹಿವಾಟಿಗೆ ಕುಮ್ಮಕ್ಕು ನೀಡುತ್ತಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry