ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲೆಯನೇ ನಂಬಿ ಬದುಕು, ಅದರಲೇ ದೇವರ ಹುಡುಕು

ದೇಸಿ ಸಾಧಕರು
Last Updated 25 ಅಕ್ಟೋಬರ್ 2017, 8:34 IST
ಅಕ್ಷರ ಗಾತ್ರ

ಭಾರತೀನಗರ: ‘ಪೂಜಾ ಕುಣಿತ’ ಎಂದರೆ ಚಿಕ್ಕರಸಿನಕೆರೆ ಚಿಕ್ಕಬೋರಯ್ಯ ಎನ್ನುವ ಮಾತು ಈ ಭಾಗದಲ್ಲಿ ಸಾಮಾನ್ಯ. ತಮಟೆ, ನಗಾರಿಗಳ ಮೇಳದ ಜೊತೆ ಭಾರದ ಪೂಜೆ ಹೊತ್ತು ಮೈ ಮರೆತು ಕುಣಿಯುವ ಅವರ ಹಾವಭಾವ ಹಲವು ವರ್ಷಗಳಿಂದ ನೋಡುಗರನ್ನು ರಂಜಿಸಿದೆ.

ಚಿಕ್ಕರಸಿನಕೆರೆ ಗ್ರಾಮದ ಬೋರಯ್ಯ ಹಾಗೂ ಚನ್ನಮ್ಮ ದಂಪತಿ ಪುತ್ರ ಇವರು. ಆರ್ಥಿಕವಾಗಿ ಬಡವರಾದರೂ ಕಲೆಯಲ್ಲಿ ಇವರು ಆಗರ್ಭ ಶ್ರೀಮಂತ. ದೇಶದ ಯಾವ ಮೂಲೆಯಲ್ಲಿ ಕಾರ್ಯಕ್ರಮ ನಡೆದರೂ ತಂಡದೊಂದಿಗೆ ಚಿಕ್ಕಬೋರಯ್ಯ ಅಲ್ಲಿ ಹಾಜರಾಗುತ್ತಾರೆ.

ಪೂಜಾ ಕುಣಿತವೇ ಅನ್ನ ಕೊಡುವ ದೇವರು ಎಂದು ನಂಬಿರುವ ಅವರು ಈ ಕಲೆಯನ್ನೇ ಪ್ರೀತಿಸಿದ್ದಾರೆ, ಪೋಷಿಸಿದ್ದಾರೆ, ನಂಬಿದ್ದಾರೆ. ಈ ಕಲೆ ಬಿಟ್ಟರೆ ಬೇರೊಂದು ವೃತ್ತಿ ಗೊತ್ತಿಲ್ಲ ಎಂದು ಮುಗ್ದವಾಗಿ ಉತ್ತರಿಸುತ್ತಾರೆ ಅವರು.

ಸುಮಾರು 20 ವರ್ಷಗಳಿಂದ ಪೂಜಾ ಕುಣಿತ ಮಾಡುತ್ತಿರುವ ಚಿಕ್ಕಬೋರಯ್ಯ, ತಮ್ಮ ಗರಡಿಯಲ್ಲಿ 10ಕ್ಕೂ ಹೆಚ್ಚು ಗ್ರಾಮೀಣ ಯುವಕರಿಗೆ ಪೂಜಾ ಕುಣಿತ ಕಲಿಸಿಕೊಟ್ಟು, ಬದುಕು ರೂಪಿಸಿಕೊಟ್ಟಿದ್ದಾರೆ. 15ನೇ ವಯಸ್ಸಿನ ತಮ್ಮ ಪುತ್ರಿ ಪ್ರಮೋದಿನಿಗೂ ಪಟ್ಟುಗಳನ್ನು ಕಲಿಸಿ ಕಾರ್ಯಕ್ರಮಕ್ಕೆ ಜೊತೆಯಲ್ಲೇ ಕರೆದುಕೊಂಡು ಹೋಗುತ್ತಾರೆ.

ಕಣ್ಣಲ್ಲೇ ಸೂಜಿ ಎತ್ತುವ ಸಾಹಸಿ: ಪೂಜೆಯನ್ನು ತಲೆಯ ಮೇಲೆ ಹೊತ್ತುಕೊಂಡೇ ಹಲವು ಸಾಹಸಗಳನ್ನು ಮಾಡುತ್ತಾರೆ ಈ ಕಲಾವಿದ. ತಲೆಯ ಮೇಲೆ ಪೂಜೆ ಹೊತ್ತು ಕಣ್ಣಿನಿಂದ ಸೂಜಿ ಎತ್ತುವ ಅವರ ನೈಪುಣ್ಯತೆ ನೋಡಿದರೆ ಯಾರಿಗಾದರೂ ಎದೆ ಢವಗುಟ್ಟುತ್ತದೆ, ಮೈ ಮನ ರೋಮಾಂಚನಗೊಳ್ಳುತ್ತದೆ. ಬಾಯಿಯಿಂದ ದುಡ್ಡು ತೆಗೆಯುವುದು, ಗಾಜಿನ ಲೋಟದ ಮೇಲೆ ನಡೆಯುವುದು, ಮಣ್ಣಿನ ಮಡಿಕೆಯ ಮೇಲೆ ನಡೆಯುವುದು, ಏಣಿಯ ಮೇಲೇರಿ ನಗಾರಿ ಬಾರಿಸುವುದು, ಕಂಕುಳಲ್ಲಿ ಮಕ್ಕಳನ್ನೆತ್ತಿ ಕೊಳ್ಳುವುದು... ಹೀಗೆ ವಿವಿಧ ಬಗೆಯ ಸಾಹಸಗಳು ನಿಜಕ್ಕೂ ರೋಮಾಂಚನ.

ತಾಲ್ಲೂಕುಮಟ್ಟದಿಂದ ರಾಷ್ಟ್ರಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಬಹುಮಾನ ಗಳಿಸಿದ್ದಾರೆ. ಯುವಜನ ಮೇಳ, ಯುವಜನೋತ್ಸವ, ಮೈಸೂರು ದಸರಾ ಮಹೋತ್ಸವ, ಗಡಿನಾಡು ಉತ್ಸವ, ಜಾನಪದ ಜಾತ್ರೆ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ವಿಶ್ವ ಕನ್ನಡ ಸಮ್ಮೇಳನ, ಆಕಾಶ ವಾಣಿ ಕಾರ್ಯಕ್ರಮ, ದೂರದರ್ಶನ ಹೀಗೆ ವಿವಿಧ ಬಗೆಯ ಸಾಂಸ್ಕೃತಿಕ ಉತ್ಸವಗಳಲ್ಲಿ ಭಾಗವಹಿಸಿ ಕೀರ್ತಿ ಸಂಪಾದಿಸಿದ್ದಾರೆ.

ಸಿಂಗಪುರದಲ್ಲೂ ಪ್ರದರ್ಶನ: ದೇಶದ ಎಲ್ಲ ರಾಜ್ಯಗಳಲ್ಲೂ ಪೂಜಾ ಕುಣಿತ ನೀಡಿರುವ ಕೀರ್ತಿ ಇವರದು. ಇಷ್ಟುಮಾತ್ರವ; ಗಡಿಯಾಚೆ ಸಿಂಗಪುರದಲ್ಲೂ ಗ್ರಾಮೀಣ ಕಲೆ ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ. ಅವರನ್ನು ಅರಸಿಬಂದ ಬಹುಮಾನ, ಸ್ಮರಣಿಕೆ, ಅಭಿನಂದನಾ ಪತ್ರಗಳನ್ನು ಇಟ್ಟುಕೊಳ್ಳಲೂ ಮನೆಯಲ್ಲಿ ಜಾಗವಿಲ್ಲದಾಗಿದೆ.

ಜಿಲ್ಲಾ ಯುವ ಪ್ರಶಸ್ತಿ, ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಲೋಕ ಪ್ರಶಸ್ತಿ ಸೇರಿದಂತೆ ರಾಜ್ಯ ಸರ್ಕಾರದಿಂದ ಕೂಡ ಹಲವು ಪುರಸ್ಕಾರಗಳು ಸಂದಿವೆ. ಪತ್ನಿ ಸವಿತಾ ಅವರ ಪ್ರೋತ್ಸಾಹವನ್ನು ನೆನೆಯುವ ಈ ಕಲಾವಿದನಿಗೆ ಇಬ್ಬರು ಪುತ್ರರು, ಪುತ್ರಿ ಇದ್ದು, ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
(ಅವರ ಸಂಪರ್ಕಕ್ಕೆ ಮೊ. 9449700629).
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT