ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಬದಲ್ಲಿ ಮೌನ ಮೆರವಣಿಗೆ, ಪ್ರತಿಭಟನೆ

Last Updated 25 ಅಕ್ಟೋಬರ್ 2017, 8:47 IST
ಅಕ್ಷರ ಗಾತ್ರ

ಉಪ್ಪಿನಂಗಡಿ: ಮೆಕ್ಕಾ ಮಸೀದಿಯ ಕಅಬಾ ಶರೀಫ್ ಚಿತ್ರದ ಮೇಲೆ ಆಂಜನೇಯ ದೇವರ ಚಿತ್ರ ಬಿಂಬಿಸಿ ತನ್ನ ವಾಟ್ಸ್ ಆ್ಯಪ್ ಪ್ರೊಫೈಲ್ ಮಾಡಿಕೊಂಡು ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿರುವ ಆರೋಪಿಯನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಕಡಬದಲ್ಲಿ ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ಮಂಗಳವಾರ ಮೌನ ಮೆರವಣಿಗೆ ಪ್ರತಿಭಟನೆ ನಡೆಯಿತು.

ಕಡಬ ಬಾಜಿನಡಿ ಗೈಬಾನ್ ಷಾ ವಲಿಯುಲ್ಲಾಹಿ ದರ್ಗಾ ಶೆರೀಫ್ ಬಳಿಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಕಡಬ ಪೇಟೆ ತನಕ ಮೆರವಣಿಗೆಯಲ್ಲಿ ತೆರಳಿ ಪ್ರತಿಭಟನಾ ಸಭೆ ನಡೆಸಿದರು. ಅಲ್ಲಿಂದ ತಹಶೀಲ್ದಾರ್ ಕಚೇರಿ ತನಕ ಮೆರವಣಿಗೆಯಲ್ಲಿ ಸಾಗಿ ಅಲ್ಲಿ ತಹಶೀಲ್ದಾರ್ ಮತ್ತು ಪೊಲೀಸ್ ಅಧಿಕಾರಿಗೆ ಮನವಿ ಸಲ್ಲಿಸಿದರು.

ಆತೂರು ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಜುನೈದ್ ಜಿಫ್ರಿ ತಂಙಳ್ ಮಾತನಾಡಿ, ‘ಸಮಾಜದ ಕೆಡುಕನ್ನು ಬಯಸುವುದು ಯಾವುದೇ ಧರ್ಮದ ತಿರುಳಲ್ಲ. ಅಕ್ಷಮ್ಯ ಅಪರಾಧವನ್ನು ಎಲ್ಲ ಧರ್ಮಿಯರು ಖಂಡಿಸುತ್ತಾರೆ. ಇದು ಸಾಂಕೇತಿಕ ಪ್ರತಿಭಟನೆ ಆಗಿದ್ದು, ಪೊಲೀಸರು ಆರೋಪಿಯನ್ನು ಮಂಗಳವಾರ ರಾತ್ರಿ ಒಳಗೆ ಬಂಧಿಸಬೇಕು, ಇಲ್ಲದಿದ್ದಲ್ಲಿ ಮುಂದೆ ಮತ್ತೆ ತೀವೃ ಸ್ವರೂಪದ ಪ್ರತಿಭಟನೆಯನ್ನು ಎದುರಿಸಬೇಕಾದೀತು’ ಎಚ್ಚರಿಸಿದರು.

ಕಡಬ ಸೇಂಟ್‌ ಜೋಕಿಮ್ಸ್ ಚರ್ಚ್ ಧರ್ಮಗುರು ರೋನಾಲ್ಡ್ ಲೋಬೋ ಮಾತನಾಡಿ ‘ಸ್ವಚ್ಛ ಭಾರತದ ಪರಿಕಲ್ಲನೆಯ ರೀತಿಯಲ್ಲಿ ದೇಶದಲ್ಲಿ ಶಾಂತಿ ಸಹಬಾಳ್ವೆಯ ಬಗ್ಗೆಯೂ ನಾವು ಜಾಗೃತರಾಗಬೇಕಾಗಿದೆ, ಯಾರೇ ಕೋಮು ದ್ವೇಷದ ಕೃತ್ಯ ಎಸಗಿದರೆ ಅಂತಹ ವ್ಯಕ್ತಿಯನ್ನು ಧರ್ಮದಿಂದ ಹೊರಗೆ ಇಡುವ ಕೆಲಸ ಆಗಬೇಕು’ ಎಂದರು.

ಕಡಬ ದುರ್ಗಾಂಬಿಕಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜನಾರ್ಧನ ಗೌಡ ಪಣೆಮಜಲು ಮಾತನಾಡಿ, ‘ಸಮಾಜದಲ್ಲಿ ಕೆಲವೊಂದು ವ್ಯಕ್ತಿಗಳಿಂದ ಶಾಂತಿ ಕದಡುವ ಕೃತ್ಯಗಳು ನಡೆಯುತ್ತಿದ್ದು, ಹೀಗಾದಾಗ ಅಂತಹ ವ್ಯಕ್ತಿಯ ತಪ್ಪುಗಳನ್ನು ತಿದ್ದುವ ಕೆಲಸ ಆಗುತ್ತಿಲ್ಲ, ಮುಂದೆ ಅಂತಹವರನ್ನು ತಿದ್ದುವ ಕೆಲಸ ಆಗಬೇಕಾಗಿದ್ದು, ಈ ನಿಟ್ಟಿನಲ್ಲಿ ನಾವುಗಳು ಪ್ರಯತ್ನ ಮಾಡಬೇಕು’ ಎಂದರು.

ಗಂಡಿಬಾಗಿಲು ಜುಮಾ ಮಸೀದಿ ಖತೀಬ್ ದುವಾಃ ನೆರವೇರಿಸಿದರು. ಹಿರಿಯ ಧಾರ್ಮಿಕ ಮುಖಂಡ ಗೋಪಾಲ ರಾವ್, ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಪಿ. ವರ್ಗೀಸ್, ಎಸ್.ಕೆ.ಎಸ್.ಎಸ್.ಎಫ್. ರಾಜ್ಯಾಧ್ಯಕ್ಷ ಅನೀಶ್ ಕೌಶರಿ, ಕಡಬ ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ಸಿ. ಪಿಲಿಪ್, ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಬಾಲಕೃಷ್ಣ ಗೌಡ ಬಳ್ಳೇರಿ, ಧಾರ್ಮಿಕ ಮುಖಂಡ ಮಹಮ್ಮದ್ ಅಹ್ಸನಿ, ರಫೀಕ್ ದಾರಿಮಿ ಮಾತನಾಡಿದರು.

ಮುಸ್ಲಿಂ ಸಂಘಟನೆ ಒಕ್ಕೂಟದ ಪ್ರತಿಭಟನೆಗೆ ಬೆಂಬಲವಾಗಿ ಕಡಬ ಪೇಟೆಯ ಎಲ್ಲಾ ವರ್ತಕರು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆ ತನಕ ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿದ್ದರು. ಪುತ್ತೂರು ಉಪ ವಿಭಾಗದ ಡಿವೈಎಸ್ಪಿ ಶ್ರೀನಿವಾಸ್ ಸ್ಥಳದಲ್ಲಿ ಮೊಕ್ಕಾಂ ಇದ್ದರು. ಕಡಬ, ಸುಬ್ರಹ್ಮಣ್ಯ, ಪುತ್ತೂರು ಗ್ರಾಮಾಂತರ ಸೇರಿದಂತೆ 3 ಬಸ್ ಇನ್ಸ್‍ಪೆಕ್ಟರ್ ಸೇರಿದಂತೆ ಹೆಚ್ಚುವರಿ ಪೊಲೀಸರು ಬಂದೋಬಸ್ತ್‌ನಲ್ಲಿ ನಿರತರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT