ಬಿಜೆಪಿ ರೈತ ಮೋರ್ಚಾ ಸಮಾವೇಶ ನಾಳೆ

ಮಂಗಳವಾರ, ಜೂನ್ 18, 2019
23 °C

ಬಿಜೆಪಿ ರೈತ ಮೋರ್ಚಾ ಸಮಾವೇಶ ನಾಳೆ

Published:
Updated:

ಮೈಸೂರು: ಬಿಜೆಪಿ ಜಿಲ್ಲಾ ರೈತ ಮೋರ್ಚಾ ವತಿಯಿಂದ ಅ.26ರಂದು ಬೆಳಿಗ್ಗೆ 11 ಕ್ಕೆ ಮಹಾರಾಜ ಕಾಲೇಜು ಮೈದಾನದಲ್ಲಿ ರೈತರ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಶಿವಣ್ಣ ತಿಳಿಸಿದರು.

ಸಮಾವೇಶದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸುವರು. ರಾಜ್ಯ ಉಪಾಧ್ಯಕ್ಷ ವಿ.ಶ್ರೀನಿವಾಸಪ್ರಸಾದ್, ಸಂಸದರಾದ ಬಿ.ಶ್ರೀರಾಮುಲು, ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ, ರೈತ ಮೋರ್ಚಾ ಅಧ್ಯಕ್ಷ ಸಿ.ಎಚ್.ವಿಜಯಶಂಕರ್, ಮುಖಂಡರಾದ ಆರ್.ಅಶೋಕ್, ವಿ.ಸೋಮಣ್ಣ, ಅರವಿಂದ ಲಿಂಬಾವಳಿ ಹಾಗೂ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ರವಿಕುಮಾರ್ ಭಾಗವಹಿಸುವರು. ಜಿಲ್ಲೆಯ ವಿವಿಧ ಭಾಗಗಳಿಂದ 20 ಸಾವಿರ ರೈತರು ಪಾಲ್ಗೊಳ್ಳುವರು ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜಿಲ್ಲೆಯ ಕೃಷಿಯನ್ನು ರಾಸಾಯನಿಕ ಮುಕ್ತಗೊಳಿಸುವುದು ಉದ್ದೇಶ. ಈ ನಿಟ್ಟಿನಲ್ಲಿ ಸಾವಯವ ಕೃಷಿಗೆ ಉತ್ತೇಜನ ಹಾಗೂ ಸಾವಯವ ಪದಾರ್ಥಗಳ ಖರೀದಿ ಅಭಿಯಾನಕ್ಕೆ ಇಲ್ಲಿ ಚಾಲನೆ ಸಿಗಲಿದೆ ಎಂದರು.

‘ಬಿಜೆಪಿ ರೈತ ಮೋರ್ಚಾ ವತಿಯಿಂದ 7 ದಿನಗಳ ಪಾದಯಾತ್ರೆ ಮುಗಿದಿದೆ. ಹಲವು ಗ್ರಾಮಗಳಲ್ಲಿ 150ಕ್ಕೂ ಹೆಚ್ಚು ಕಿಲೋಮೀಟರ್‌ ಸಂಚರಿಸಿ ಸಿದ್ದರಾಮಯ್ಯ ಸರ್ಕಾರದ ವೈಫಲ್ಯ ಹಾಗೂ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನತೆಗೆ ಮನವರಿಕೆ ಮಾಡಿಕೊಡಲಾಗಿದೆ. ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಂಡು ಕಾಂಗ್ರೆಸ್‌ ಪ್ರಚಾರ ಕಾರ್ಯ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಜನರ ಆಶಯದಂತೆ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ’ ಎಂದು ವಿವರಿಸಿದರು.

ಜಿಲ್ಲೆಯಲ್ಲಿ ಒಟ್ಟು 2021 ಬೂತ್‌ಗಳಿವೆ. ಪಕ್ಷವನ್ನು ಬೂತ್‌ ಮಟ್ಟದಲ್ಲಿ ಸಂಘಟಿಸಲಾಗುವುದು. ಇದರ ಉಸ್ತುವಾರಿಗೆ 35 ಸದಸ್ಯರ ಉಸ್ತುವಾರಿ ಸಮಿತಿಯನ್ನು ರಚಿಸಲಾಗಿದೆ. ಅಲ್ಲದೇ, ಬಿಜೆಪಿ ರಾಜ್ಯ ಘಟಕದಿಂದ ನಡೆಯುತ್ತಿರುವ ಪರಿವರ್ತನಾ ರ‍್ಯಾಲಿಗೆ ಪ್ರತಿ ಬೂತ್‌ನಿಂದ 3 ಬೈಕ್‌ನಂತೆ 6 ಸಾವಿರಕ್ಕೂ ಹೆಚ್ಚು ಬೈಕ್‌ಗಳನ್ನು ಕಳುಹಿಸಲಾಗುವುದು ಎಂದು ಮಾಹಿತಿ ನೀಡಿದರು.

ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಪ್ರಸನ್ನ ಎನ್.ಗೌಡ, ಉಪಾಧ್ಯಕ್ಷ ಅಶೋಕ ಆಲನಹಳ್ಳಿ, ಮುಖಂಡರಾದ ಮಾರ್ಬಳ್ಳಿ ಮೂರ್ತಿ, ಬಿ.ಪಿ.ಬೋರೇಗೌಡ, ಲಕ್ಷ್ಮಿ, ಮಹದೇವಸ್ವಾಮಿ, ಜಗದೀಶ್ ಗೌಡ ಹಾಜರಿದ್ದರು.

ವಿಜಯಶಂಕರ್ ಬಿಜೆಪಿ ಬಿಡುವುದಿಲ್ಲ

ಮೈಸೂರು: ಬಿಜೆಪಿ ಮುಖಂಡ ಸಿ.ಎಚ್‌.ವಿಜಯಶಂಕರ್‌ ಅವರು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ. ಪಿರಿಯಾಪಟ್ಟಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅವರೇ ಆಗಿರುತ್ತಾರೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಶಿವಣ್ಣ ಇಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

‘ವಿಜಯಶಂಕರ್‌ ಅವರಿಗೆ ಕೆಲವು ಗೊಂದಲಗಳಿದ್ದುದು ನಿಜ. ಈ ಕುರಿತು ಅವರು ನಮ್ಮೊಂದಿಗೆ ವಿಚಾರ ಹಂಚಿಕೊಂಡಿದ್ದಾರೆ. ಪಿರಿಯಾಪಟ್ಟಣದಲ್ಲಿ ಟಿಕೆಟ್‌ ನೀಡಬೇಕು ಎಂಬುದು ಅವರ ಬೇಡಿಕೆ. ಇದನ್ನು ಹೈಕಮಾಂಡ್‌ ನೀಡುತ್ತದೆ ಎಂಬ ಭರವಸೆ ನನಗಿದೆ’ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೈಸೂರು ಭಾಗದಲ್ಲಿನ ಬಿಜೆಪಿಯ ಹಿರಿಯ ನಾಯಕರ ಹಿತ ಕಾಯುವಂತೆ ಈಗಾಗಲೇ ವರಿಷ್ಠರಿಗೆ ವರದಿ ನೀಡಲಾಗಿದೆ. ವಿಜಯಶಂಕರ್‌ ಅವರು ಪಕ್ಷಕ್ಕೆ ದುಡಿದಿದ್ದಾರೆ. ಅವರನ್ನು ಗೌರವದಿಂದ ಕಾಣಲಾಗುವುದು ಎಂದು ಅವರು ತಿಳಿಸಿದರು.

ಹೊರಗಿನಿಂದ ಬಂದವರಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ವಿಜಯಶಂಕರ್ ಬೇಸರಗೊಂಡಿದ್ದಾರೆ. ಪಕ್ಷವು ಅವರಿಗೆ ಎಲ್ಲವನ್ನೂ ನೀಡಿದೆ. ಅವರು ಅದನ್ನು ಸ್ಮರಿಸುತ್ತಾರೆ ಎಂಬ ನಂಬಿಕೆಯೂ ಇದೆ ಎಂದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry