ಸಾಹಿತ್ಯ ಸಮ್ಮೇಳನದಲ್ಲಿ ‘ಲೇಖಕರ ಗ್ಯಾಲರಿ’

ಸೋಮವಾರ, ಜೂನ್ 17, 2019
22 °C

ಸಾಹಿತ್ಯ ಸಮ್ಮೇಳನದಲ್ಲಿ ‘ಲೇಖಕರ ಗ್ಯಾಲರಿ’

Published:
Updated:

ಮೈಸೂರು: ನಗರದಲ್ಲಿ ನವೆಂಬರ್‌ 24ರಿಂದ 26ರ ವರೆಗೆ ನಡೆಯಲಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯು ‘ಲೇಖಕರ ಗ್ಯಾಲರಿ’ಯೊಂದನ್ನು ಪ್ರದರ್ಶಿಸಲಿದೆ.

ಮಾನಸಗಂಗೋತ್ರಿ ಜಾನಪದ ವಸ್ತುಸಂಗ್ರಹಾಲಯದೊಳಗಿನ ‘ಲೇಖಕರ ಗ್ಯಾಲರಿ’ಯು ಸಾಹಿತ್ಯ ಸಮ್ಮೇಳನ ನಡೆಯುವ ಮಹಾರಾಜ ಕಾಲೇಜು ಮೈದಾನದೊಳಗೆ ಪ್ರದರ್ಶನಗೊಳ್ಳಲಿದೆ. ಇದರಲ್ಲಿ ಲೇಖಕರ ಭಾವಚಿತ್ರ, ಅವರು ಬಳಸಿದ ವಸ್ತುಗಳು, ಹಸ್ತಪ್ರತಿ, ಸಂದ ಪ್ರಶಸ್ತಿ, ಫಲಕ, ಪ್ರಶಸ್ತಿಪತ್ರ ಮೊದಲಾದವು ಇರುತ್ತವೆ.

ಗೋವಿಂದ ಪೈ ಅವರು ಬಳಸುತ್ತಿದ್ದ ಸ್ಟಾಪ್‌ ಕ್ಲಾಕ್, ಡೈರಿ, ಎ.ಆರ್‌.ಕೃಷ್ಣಶಾಸ್ತ್ರಿ ಅವರಿಗೆ ನೀಡಿದ ಭಿನ್ನವತ್ತಳೆ, ಕುವೆಂಪು ಅವರ ‘ನೆನಪಿನ ದೋಣಿ’ ಕೃತಿಯ ಹಸ್ತಪ್ರತಿ, 1924ರಲ್ಲಿ ಮೊದಲು ಮುದ್ರಣಗೊಂಡ ಅವರ ‘ಅಮಲನ ಕಥೆ’ ಕೃತಿ, ಕೊಡಗಿನ ಗೌರಮ್ಮ ಅವರು ಉಪವಾಸ ಸತ್ಯಾಗ್ರಹ ಮಾಡಿ ಮಹಾತ್ಮ ಗಾಂಧಿ ಅವರನ್ನು ಆಹ್ವಾನಿಸಿದಾಗ, ಗಾಂಧೀಜಿ ಬಳಸಿದ ಮೈಸೂರು ಸ್ಯಾಂಡಲ್ ಸಾಬೂನು, ಗೌರಮ್ಮ ಹೆಣೆದ ಟೇಬಲ್ ಕ್ಲಾತ್, ಅವರ ಪರ್ಸ್, ವಚನ ಪಿತಾಮಹ ಫ.ಗು.ಹಳಕಟ್ಟಿಯವರು ಬಳಸಿದ್ದ ಊಟದ ಪರಿಕರ, ಅ.ನ.ಕೃಷ್ಣರಾಯರ ಮನೆಯಲ್ಲಿದ್ದ ಮಕ್ಕಳ ಆಟಿಕೆಯ ಹಿತ್ತಾಳೆ ಈಳಿಗೆಮಣೆ, ತುಳಸಿಕಟ್ಟೆ, ಬೀಸುಕಲ್ಲು, ಶ್ರೀರಂಗರ ನಾಟಕಗಳ ಹಸ್ತಪ್ರತಿ ಪ್ರದರ್ಶನ ಮಾಡಲಾಗುತ್ತದೆ.

ಎಚ್.ಎಲ್‌.ನಾಗೇಗೌಡ, ದೇಜಗೌ, ಡಿ.ಎಸ್‌.ಕರ್ಕಿ, ಪುತಿನ, ಜಚನಿ, ಬಿ.ಶಿವಮೂರ್ತಿಶಾಸ್ತ್ರಿ, ಮಿರ್ಜಿ ಅಣ್ಣಾರಾಯರು, ಪ್ರಾಚ್ಯ ಸಂಶೋಧಕ ಎ.ಎನ್‌.ಉಪಾಧ್ಯ, ಬಿ.ಎಲ್‌.ರೈಸ್, ದೇವುಡು, ವಾಣಿ, ಶಾಂತಾದೇವಿ ಮಾಳವಾಡ, ಎಸ್‌.ಎಲ್.ಭೈರಪ್ಪ ಮೊದಲಾದ 30ಕ್ಕೂ ಅಧಿಕ ಲೇಖಕರನ್ನು ಒಳಗೊಂಡ ಗ್ಯಾಲರಿಯಿದು.

ಇವೆಲ್ಲವೂ ಗಾಜಿನ ಪೆಟ್ಟಿಗೆಯೊಳಗಿದ್ದು, ವಿದ್ಯುತ್‌ ಬೆಳಕಲ್ಲೂ ನೋಡಬಹುದು. ‘ಇದು ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಸಾಹಿತಿಗಳ ಮಾಹಿತಿಯನ್ನು ಒಳಗಂಡ ಲೇಖಕರ ಗ್ಯಾಲರಿಯ ಪ್ರದರ್ಶನ ಮಹತ್ವಪೂರ್ಣವಾದುದು. ಇದರಿಂದ ನಾಡಿನ, ಹೊರನಾಡಿನ ಸಾಹಿತ್ಯಾಸಕ್ತರು ಕಣ್ತುಂಬಿಕೊಳ್ಳಲು ಸಾಧ್ಯವಾಗುತ್ತದೆ.

ಇದಕ್ಕೆ ಸಂಬಂಧಿಸಿ ಕುಲಪತಿ, ಕುಲಸಚಿವರು ಹಾಗೂ ವಸ್ತುಸಂಗ್ರಾಹಲಯದ ನಿರ್ದೇಶಕರನ್ನು ಕೋರುತ್ತೇವೆ’ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸುವರ್ಣ ಮಹೋತ್ಸವ ವರ್ಷಾಚರಣೆ ಸಂದರ್ಭದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಅಪೂರ್ವ ಯೋಗ. ನಾಡಿನ ಶ್ರೇಷ್ಠ ಲೇಖಕರಿಗೆ ಸಂಬಂಧಿಸಿದ ಗ್ಯಾಲರಿಯನ್ನು ಸಾಹಿತ್ಯ ಸಮ್ಮೇಳನದಲ್ಲಿ ಪ್ರದರ್ಶಿಸುವುದು ಹೆಮ್ಮೆಯ ಸಂಗತಿ’ ಎಂದು ವಸ್ತುಸಂಗ್ರಹಾಲಯದ ಪ್ರಭಾರಿ ನಿರ್ದೇಶಕಿ ಪ್ರೀತಿ ಶ್ರೀಮಂಧರ ಕುಮಾರ್‌ ಹೇಳಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry