ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ಸೂರಿನಡಿ ಮಹಾತ್ಮರ ಬದುಕಿನ ಚಿತ್ರಣ

Last Updated 25 ಅಕ್ಟೋಬರ್ 2017, 9:03 IST
ಅಕ್ಷರ ಗಾತ್ರ

ರಾಮನಗರ: ಬಾಲಕ ಗಾಂಧಿ, ಶಾಲೆಯ ತುಂಟ ಗಾಂಧಿ, ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ, ಸ್ನೇಹಿತರೊಂದಿಗಿರುವ ಗಾಂಧಿ, ಮದುವೆ ಫೋಟೊಗಳು, ಪತ್ನಿ ಮತ್ತು ಮಕ್ಕಳ ಛಾಯಾಚಿತ್ರಗಳು, ಸೂಟುಧಾರಿ ಗಾಂಧಿ, ನೆಹರೂ ಜತೆ ಗಾಂಧಿ, ಮಕ್ಕಳೊಂದಿಗೆ ಬೊಚ್ಚುಬಾಯಿಯಲ್ಲಿ ನಗುತ್ತಿರುವ ಗಾಂಧಿ...

ಹೀಗೆ ವೈವಿಧ್ಯಮಯ ಛಾಯಾಚಿತ್ರಗಳನ್ನು ನೋಡಬೇಕಿದ್ದರೆ ನೀವೀಗ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ಭೇಟಿ ನೀಡಬೇಕು. ಇಲ್ಲಿ ಆಯೋಜಿಸಿರುವ ‘ಗಾಂಧಿಯೆಡೆಗೆ ಒಂದು ಹೆಜ್ಜೆ’ ಅಪರೂಪದ ಛಾಯಾಚಿತ್ರ ಪ್ರದರ್ಶನವು ಮಹಾತ್ಮನ ಬದುಕಿನ ಚಿತ್ರಣವನ್ನು ಕಟ್ಟಿಕೊಡುವಂತಿದೆ.

ಗಾಂಧೀಜಿ ಬಾಲ್ಯ, ಯೌವ್ವನ, ವ್ಯಾಸಂಗ, ದಕ್ಷಿಣ ಆಫ್ರಿಕಾದಲ್ಲಿ ವಕೀಲ ವೃತ್ತಿ ಕೈಗೊಂಡಿದ್ದು, ಆಫ್ರಿಕಾದಿಂದ ಹಿಂದಿರುಗಿದ್ದು, ಚಳವಳಿಗೆ ಪಾದಾರ್ಪಣೆ, ಕರಾಚಿ ಕಾಂಗ್ರೆಸ್‌ ಅಧಿವೇಶನದಲ್ಲಿ ಭಾಗವಹಿಸಿದ್ದು, ದುಂಡು ಮೇಜಿನ ಸಭೆಗೆ ತೆರಳಿದ್ದು, ಗಡಿನಾಡಿನಲ್ಲಿ ಸಂಚರಿಸಿದ್ದು, ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದು ಸೇರಿದಂತೆ ಸ್ವಾತಂತ್ರ್ಯ ಚಳವಳಿಯ ಹಲವು ಮಜಲುಗಳ 1600ಕ್ಕೂ ಹೆಚ್ಚು ಚಿತ್ರಗಳನ್ನು ಈ ಪ್ರದರ್ಶನಲ್ಲಿ ನೋಡಬಹುದಾಗಿದೆ.

ಸ್ವಾತಂತ್ರ್ಯಾ ನಂತರದ ದಿನಗಳು, ಭಾರತ ಪಾಕಿಸ್ತಾನ ವಿಭಜನೆಯ ಚಿತ್ರಗಳು ಬೆರಗು ಹುಟ್ಟಿಸುವಂತಿವೆ. ಆದರೆ ಚಿತ್ರ ಪ್ರದರ್ಶನದ ಕೊನೆಗೆ ‘ಗಾಂಧೀಜಿಯವರ ಅಂತಿಮ ಯಾತ್ರೆ’ ಎಂತವರ ಕಣ್ಣುಗಳನ್ನು ತೇವಗೊಳಿಸುವಂತಿವೆ.

‘18 ವರ್ಷಗಳಿಂದ ದೆಹಲಿ ಸೇರಿದಂತೆ ಹಲವೆಡೆ ಭೇಟಿ ನೀಡಿ ಗಾಂಧೀಜಿಯವರ ಬದುಕಿನ ಸಮಗ್ರ ಚಿತ್ರಗಳನ್ನು ಸಂಗ್ರಹಿಸಿ ‘ಗಾಂಧಿಯೆಡೆಗೆ ಒಂದು ಹೆಜ್ಜೆ’ ಎಂಬ ಶೀರ್ಷಿಕೆ ಕೊಟ್ಟು ಶಾಲಾ ಕಾಲೇಜುಗಳಲ್ಲಿ ಗಾಂಧೀಜಿ ಅವರ ಅಪರೂಪದ ಛಾಯಾಚಿತ್ರ ಪ್ರದರ್ಶನವನ್ನು ಮಾಡುತ್ತಿದ್ದೇನೆ’ ಎನ್ನುತ್ತಾರೆ ಸಂಗ್ರಹಕಿ ಲೀಲಾ ಅಪ್ಪಾಜಿ.

‘35 ವರ್ಷಗಳಿಂದ ಕನ್ನಡ ಅಧ್ಯಾಪಕಿಯಾಗಿ, ಪ್ರಾಚಾರ್ಯೆಯಾಗಿಯೂ ಕೆಲಸ ಮಾಡಿದ್ದೇನೆ. ಹವ್ಯಾಸಿ ಛಾಯಾಚಿತ್ರಗ್ರಾಹಕಿಯಾಗಿಯೂ ಅಪರೂಪದ ಚಿತ್ರಗಳನ್ನು ತೆಗೆಯುತ್ತಿದ್ದೇನೆ. ಗಾಂಧಿ ಛಾಯಾಚಿತ್ರ ಪ್ರದರ್ಶನವನ್ನು 2004ರಿಂದೀಚೆಗೆ 60ಕ್ಕೂ ಹೆಚ್ಚು ಕಡೆ ಪ್ರದರ್ಶನ ನೀಡಿದ್ದೇನೆ. ಹೊರರಾಜ್ಯಗಳಲ್ಲೂ ಪ್ರದರ್ಶನಕ್ಕೆ ಆಹ್ವಾನಿಸುತ್ತಾರೆ, ಮುಂದಿನ ದಿನಗಳಲ್ಲಿ ಅಲ್ಲಿಯೂ ಪ್ರದರ್ಶನವನ್ನು ಹಮ್ಮಿಕೊಳ್ಳಲಿದ್ದೇನೆ’ ಎಂದರು.

‘ಗಾಂಧೀಜಿಯವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಅಪರೂಪದ ಛಾಯಾಚಿತ್ರಗಳು ಇಲ್ಲಿವೆ. ಅವರ ಜೀವನ ಮೌಲ್ಯಗಳು ಹಾಗೂ ಹೋರಾಟ ಗಳ ಅಪರೂಪದ ಛಾಯಾಚಿತ್ರ ವೀಕ್ಷಿಸುವ ಮೂಲಕ ಅವರ ಸ್ಮರಣೆ ಮಾಡಿಕೊಳ್ಳಬಹುದು’ ಎಂದು ಅವರು ಹೇಳಿದರು.

‘ಗಾಂಧೀಜಿ ಬಗ್ಗೆ ನಾವು ಪುಸ್ತಕಗಳಲ್ಲಿ ಓದಿದ್ದೆವು. ಆದರೆ ಈ ಛಾಯಾಚಿತ್ರ ಪ್ರದರ್ಶನವನ್ನು ನೋಡಿದ ಮೇಲೆ, ಅವರ ಜೀವನ ನಮ್ಮ ಮೇಲೆ ಪರಿಣಾಮ ಬೀರಿದೆ. ನಮಗೆ ಹೊಸ ಸ್ಪೂರ್ತಿಯನ್ನು ನೀಡಿತು’ ಎಂದು ವಿದ್ಯಾರ್ಥಿನಿ ಮೇಘಶ್ರೀ ತಿಳಿಸಿದರು.

‘ಈ ಛಾಯಾಚಿತ್ರ ಪ್ರದರ್ಶನದ ಮೂಲಕ ಗಾಂಧೀಜಿ ಅವರ ಆತ್ಮಕತೆಯನ್ನು ಓದಿದಂತೆ ಆಯಿತು. ಗಾಂಧಿ ಕೈಬರಹ, ಅವರ ಸರಳ ಜೀವನವನ್ನು ನೋಡಿ ಆಶ್ಚರ್ಯವಾಯಿತು’ ಎಂದು ಬಿ.ಕಾಂ. ವಿದ್ಯಾರ್ಥಿನಿ ಎಚ್.ಜೆ. ಯಮುನಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT