ಕೂಲಿ ಹಣಕ್ಕೆ ಕಾದು ಸುಸ್ತಾದ ಕಾರ್ಮಿಕರು!

ಶನಿವಾರ, ಮೇ 25, 2019
22 °C

ಕೂಲಿ ಹಣಕ್ಕೆ ಕಾದು ಸುಸ್ತಾದ ಕಾರ್ಮಿಕರು!

Published:
Updated:
ಕೂಲಿ ಹಣಕ್ಕೆ ಕಾದು ಸುಸ್ತಾದ ಕಾರ್ಮಿಕರು!

ಶಿವಮೊಗ್ಗ: ಒಂದೂವರೆ ತಿಂಗಳಾದರೂ ಕೂಲಿ ಹಣ ನೀಡದ ಕಾರಣ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಕಾರ್ಮಿಕರು ಉದ್ಯೋಗ ಖಾತ್ರಿ ಯೋಜನೆ ಕೈಬಿಟ್ಟು ಖಾಸಗಿ ಕೆಲಸ ಹುಡುಕಿ ಹೋಗುತ್ತಿದ್ದಾರೆ. ಕೇಂದ್ರ ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಕೆಲಸಕ್ಕೆ ಹಾಜರಾಗುವ ಕೂಲಿ ಕಾರ್ಮಿಕರಿಗೆ ನಿಯಮದ ಪ್ರಕಾರ ಪ್ರತಿ 15 ದಿನದ ಒಳಗೆ ಕೂಲಿ ಹಣ ಪಾವತಿಸಬೇಕು.

ಈ ಯೋಜನೆಗೂ ವಿದ್ಯುನ್ಮಾನ ನಿಧಿ ನಿರ್ವಹಣಾ ವ್ಯವಸ್ಥೆ (ಇಎಫ್ಎಂಎಸ್) ಅಳವಡಿಸಿದ ನಂತರ ಕೆಲಸಕ್ಕೆ ಹಾಜರಾದ ಪ್ರತಿ ಕಾರ್ಮಿಕರ ಖಾತೆಗೆ ನೇರವಾಗಿ ನಿಗದಿತ ಅವಧಿಯ ಒಳಗೆ ಹಣ ಜಮೆಯಾಗುತ್ತಿತ್ತು. ಆದರೆ, ಸೆಪ್ಟೆಂಬರ್ 5ರ ನಂತರ ಯಾರ ಖಾತೆಗೂ ಹಣ ಜಮೆ ಆಗಿಲ್ಲ. ಆಗಸ್ಟ್ ಕೊನೆಯ ವಾರದಿಂದ ಇಲ್ಲಿಯವರೆಗೆ ಕೆಲಸ ನಿರ್ವಹಿಸಿದ ಜಿಲ್ಲೆಯ ಖಾತ್ರಿ ಕಾರ್ಮಿಕರಿಗೆ ನೀಡಬೇಕಾದ ಬಾಕಿ ಮೊತ್ತ ₹ 4.5 ಕೋಟಿ.

‘ಉದ್ಯೋಗ ಖಾತ್ರಿ ಕೆಲಸಕ್ಕೆ ಬರುವ ಶೇ 99ರಷ್ಟು ಕೂಲಿ ಕಾರ್ಮಿಕರು ಅಂದು ದುಡಿದು ಅಂದೇ ಜೀವನ ಸಾಗಿಸುತ್ತಾರೆ. ಕೃಷಿ ಕಾರ್ಮಿಕರು ನಿತ್ಯವೂ ಕೂಲಿ ಪಡೆಯುತ್ತಾರೆ. ಕಟ್ಟಡ ಕೆಲಸಗಳಿಗೆ ತೆರಳುವವರಿಗೆ ವಾರಕ್ಕೆ ಒಮ್ಮೆ ಹಣ ದೊರೆಯುತ್ತದೆ. ಉದ್ಯೋಗ ಖಾತ್ರಿ ಕೆಲಸಕ್ಕೆ ಬಂದವರಿಗೆ 15 ದಿನಗಳ ಒಳಗೆ ಹಣ ನೀಡಬೇಕು ಎಂದು ನಿಯಮ ರೂಪಿಸಲಾಗಿದೆ. ಎಲ್ಲ ಖಾಸಗಿ ಕೆಲಸ ಬಿಟ್ಟು ಉದ್ಯೋಗ ಖಾತ್ರಿ ಕೆಲಸಕ್ಕೆ ಬಂದ ಜಿಲ್ಲೆಯ ಕಾರ್ಮಿಕರಿಗೆ ಕಳೆದ 50 ದಿನಗಳಿಂದ ಕೂಲಿ ಹಣವನ್ನೇ ನೀಡಿಲ್ಲ. ಹಾಗಾಗಿ, ಖಾತ್ರಿ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು ಶಿಕಾರಿಪುರದ ಬಸವರಾಜಪ್ಪ.

ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ಕೋರಿ 2017–18ನೇ ಸಾಲಿನಲ್ಲಿ 1,98,578 ಕುಟುಂಬಗಳು ನೋಂದಣಿ ಮಾಡಿಕೊಂಡಿವೆ. ಅವುಗಳಲ್ಲಿ 69,608 ಕುಟುಂಬಗಳು ಇದುವರೆಗೆ ಕೆಲಸ ಪಡೆದುಕೊಂಡಿವೆ. 181 ಕುಟುಂಬಗಳು ಮಾತ್ರ 100 ದಿನಗಳ ಕೆಲಸ ಪೂರೈಸಿವೆ. ಕೆರೆ ಹೂಳೆತ್ತುವುದು, ರಸ್ತೆ ನಿರ್ಮಾಣ, ಕೃಷಿ ಹೊಂಡ ಸೇರಿದಂತೆ 3,419 ಕಾಮಗಾರಿಗಳು ಪೂರ್ಣಗೊಂಡಿವೆ. 22,956 ವಿವಿಧ ಕಾಮಗಾರಿಗಳು ಪ್ರಗತಿಯ ಹಂತದಲ್ಲಿವೆ.

ಖಾತ್ರಿ ಯೋಜನೆ ಅಡಿ ವಿವಿಧ ಕಾಮಗಾರಿ ಕೈಗೆತ್ತಿಕೊಳ್ಳಲು ಪ್ರಸಕ್ತ ವರ್ಷ ₹ 131.06 ಕೋಟಿ ನಿಗದಿ ಮಾಡಲಾಗಿತ್ತು. ಅದರಲ್ಲಿ ಸೆಪ್ಟೆಂಬರ್ ಅಂತ್ಯದವರೆಗೆ

₹ 55.42 ಖರ್ಚು ಮಾಡಲಾಗಿದೆ. ಮಾರ್ಚ್ ಅಂತ್ಯದವರೆಗೆ ಒಟ್ಟು 31.43 ಲಕ್ಷ ಮಾನವ ದಿನಗಳನ್ನು ಸೃಜಿಸುವ ಗುರಿ ಹೊಂದಲಾಗಿತ್ತು. ಇದುವರೆಗೆ 18.27 ಲಕ್ಷ ಮಾನವ ದಿನಗಳ ಕೆಲಸ ಪೂರೈಸಲಾಗಿದೆ. ಪರಿಶಿಷ್ಟ ಜಾತಿಯವರಿಗೆ 3,81,285, ಪರಿಶಿಷ್ಟ ಪಂಗಡದವರಿಗೆ 88,843 ಹಾಗೂ ಮಹಿಳೆಯರಿಗೆ 9,40, 924 ಮಾನವ ದಿನಗಳನ್ನು ಮೀಸಲಿಡಲಾಗಿದೆ.

‘ಜಿಲ್ಲೆಯಲ್ಲಿ ಖಾತ್ರಿ ಕೆಲಸಕ್ಕೆ ಹಾಜರಾದ ಶೇ 93ರಷ್ಟು ಕಾರ್ಮಿಕರಿಗೆ 15 ದಿನಗಳ ಒಳಗೆ ಹಣ ಪಾವತಿಗೆ ಜಿಲ್ಲಾ ಪಂಚಾಯ್ತಿ ಕ್ರಮ ಕೈಗೊಂಡಿದೆ. ಪ್ರತಿ ಬಾರಿಯೂ ನಿಗದಿತ ಸಮಯದ ಒಳಗೆ ಕಾರ್ಮಿಕರ ಖಾತೆಗಳಿಗೆ ಇಎಫ್ಎಂಎಸ್ ಮೂಲಕ ನೇರವಾಗಿ ಕೂಲಿ ಹಣ ಜಮೆಯಾಗುತ್ತದೆ. ಇದೇ ಮೊದಲ ಬಾರಿ ಇಷ್ಟು ವಿಳಂಬವಾಗಿದೆ. ಮುಖ್ಯ ಖಾತೆಯಲ್ಲಿ ಸಮರ್ಪಕ ಹಣ ಜಮೆಯಾಗದ ಕಾರಣ ಇಂತಹ ಸಮಸ್ಯೆಯಾಗಿರಬಹುದು. ಸಮಸ್ಯೆ ಕುರಿತು ಸರ್ಕಾರದ ಗಮನಕ್ಕೆ ತರಲಾಗಿದೆ’ ಎಂದು ವಿವರ ನೀಡಿದರು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry