ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸ್ನೇಹಿಯಾಗಿರಿ, ತಾಳ್ಮೆ ಕಳೆದುಕೊಳ್ಳಬೇಡಿ

Last Updated 25 ಅಕ್ಟೋಬರ್ 2017, 9:23 IST
ಅಕ್ಷರ ಗಾತ್ರ

ಉಡುಪಿ: ‘ಪೊಲೀಸ್ ಸಿಬ್ಬಂದಿ ಯಾವಾ ಗಲೂ ಜನ ಸ್ನೇಹಿಯಾಗಿ ವರ್ತಿಸಬೇಕು, ಎಂತಹ ಸಂದರ್ಭದಲ್ಲಿಯೂ ತಾಳ್ಮೆ ಕಳೆದುಕೊಳ್ಳಬಾರದು’ ಎಂದು ಪಶ್ಚಿಮ ವಲಯ ಐಜಿಪಿ ಹೇಮಂತ್ ನಿಂಬಾಳ್ಕರ್ ಹೇಳಿದರು.

ಜಿಲ್ಲಾ ಪೊಲೀಸ್ ನಗರದ ಚಂದು ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ 11ನೇ ಸಶಸ್ತ್ರ ಮೀಸಲು ಪಡೆ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಠಾಣೆಗೆ ಬರುವ ಜನರೊಂದಿಗೆ ಸೌಜನ್ಯದಿಂದ ವರ್ತಿಸಿ, ಒಳ್ಳೆಯ ಭಾಷೆಯನ್ನು ಬಳಸಿ. ಇಂದು ಸ್ವೀಕರಿಸುವ ಪ್ರತಿಜ್ಞಾ ವಿಧಿಯನ್ನು ಮರೆಯದೆ ಅದರಂತೆ ನಡೆದುಕೊಳ್ಳಿ. ಜನರ ಎಲ್ಲ ಸಮಸ್ಯೆಗಳನ್ನು ಪರಿಹರಿಸುವ ಶಕ್ತಿ ಇಲ್ಲದಿರಬಹುದು. ಆದರೆ, ಅವರ ಮಾತುಗಳನ್ನು ಶಾಂತಚಿತ್ತರಾಗಿ ಕೇಳಿಸಿಕೊಂಡು ಸಮಾಧಾನ ಮೂಡಿಸ ಬೇಕು’ ಎಂದರು.

‘ಸಮಾಜದಲ್ಲಿ ಶಾಂತಿ ಇರುವಂತೆ ನೋಡಿಕೊಳ್ಳುವುದು ಪೊಲೀಸರ ಕರ್ತವ್ಯ. ನೀಡಿರುವ ಲಾಠಿ ಮತ್ತು ಬಂದೂಕನ್ನು ಸಮಾಜ ಘಾತುಕ ಶಕ್ತಿಗಳ ವಿರುದ್ಧ ಬಳಸಿ. ಸಮಸ್ಯೆಗಳು ಸಮಯ ನೋಡಿಕೊಂಡು ಬರುವುದಿಲ್ಲ, ಆದ್ದರಿಂದ ಕೆಲಸದ ಸಮಯದಲ್ಲಿ ಕೈಗಡಿಯಾರ ನೋಡದೆ ಕೆಲಸ ಮಾಡಿ. ಜನರಿಗೆ ನೀಡಿದ ವಚನವನ್ನು ಉಳಿಸಿಕೊಳ್ಳಿ’ ಎಂದರು.

‘ಮನುಷ್ಯ ವರ್ತನೆಯ ಬಗ್ಗೆ ತರಬೇತಿಯಲ್ಲಿ ಮಾಹಿತಿ ನೀಡಲಾಗಿದೆ. ಆದರೆ ನಿಜವಾಗಿಯೂ ಪೊಲೀಸ್ ವರ್ತನೆಯ ಬಗ್ಗೆ ಪಾಠ ಮಾಡುವ ಅಗತ್ಯವಿದೆ. ಜನ ಸಾಮಾನ್ಯರೊಂದಿಗೆ ಹೇಗೆ ಗುರುತಿಸಿಕೊಳ್ಳಬೇಕು ಎಂಬು ದನ್ನು ಕಲಿತುಕೊಳ್ಳಬೇಕು’ ಎಂದು ಅವರು ಹೇಳಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಮಾರಚಂದ್ರ ಪ್ರಶಿಕ್ಷಣಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಒಳಾಂಗಣ ಹಾಗೂ ಹೊರಾಂಗಣ ತರಬೇತಿಯಲ್ಲಿ ಉತ್ತಮ ಸಾಧನೆ ತೋರಿದವರಿಗೆ ಬಹುಮಾನ ನೀಡಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಡಾ. ಸಂಜೀವ್ ಎಂ. ಪಾಟೀಲ್ ಉಪಸ್ಥಿತರಿದ್ದರು.

ಕಾರ್ಕಳ ವಿಭಾಗದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನವಾನೆ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಪೊಲೀಸ್ ನಿಯಂತ್ರಣ ಕೊಠಡಿಯ ಪ್ರಭಾರ ಪಿಎಸ್ಐ ಬಿ. ಮನಮೋಹನ ರಾವ್ ಅವರು ಕಾರ್ಯಕ್ರಮ ನಿರೂಪಿಸಿದರು.

ಕುಂದಾಪುರ ಉಪ ವಿಭಾಗದ ಡಿವೈಎಸ್ಪಿ ಪ್ರವೀಣ್ ನಾಯಕ್ ವಂದಿಸಿದರು. ಪಥ ಸಂಚಲನ ಕಮಾಂಡರ್ ಆರ್. ರಾಘವೇಂದ್ರ ಅವರ ನೇತೃತ್ವದಲ್ಲಿ ನಡೆದ ಪ್ರಶಿಕ್ಷಣಾರ್ಥಿಗಳು ನಡೆಸಿದ ಪಥ ಸಂಚಲನ ಎಲ್ಲರ ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT