ಮಳೆ ಬಿಡುವು; ಹಿಂಗಾರಿನತ್ತ ರೈತರ ಚಿತ್ತ

ಸೋಮವಾರ, ಜೂನ್ 17, 2019
23 °C

ಮಳೆ ಬಿಡುವು; ಹಿಂಗಾರಿನತ್ತ ರೈತರ ಚಿತ್ತ

Published:
Updated:
ಮಳೆ ಬಿಡುವು; ಹಿಂಗಾರಿನತ್ತ ರೈತರ ಚಿತ್ತ

ವಿಜಯಪುರ: ದೀಪಾವಳಿ ಸಂಭ್ರಮ ಆರಂಭದ ಬೆನ್ನಿಗೆ ಮಳೆ ಬಿಡುವು ನೀಡಿದ್ದು, ಹಬ್ಬದ ಆಚರಣೆ ಮುಗಿಸಿಕೊಂಡ ರೈತ ಸಮೂಹ ಮಂದಹಾಸದಿಂದ ಹೊಲದತ್ತ ಹೆಜ್ಜೆ ಹಾಕುತ್ತಿರುವ ಚಿತ್ರಣ ಜಿಲ್ಲೆಯ ವಿವಿಧೆಡೆ ಗೋಚರಿಸುತ್ತಿದೆ. ಅಲ್ಲಲ್ಲೇ ಮಳೆ ಬೀಳುವುದು ಮುಂದುವರಿದಿದ್ದರೂ, ಬಹುತೇಕ ಕಡೆ ವರ್ಷಧಾರೆ ಬಿಡುವು ನೀಡಿದೆ. ಬಾನಂಗಳದಲ್ಲಿ ದಟ್ಟೈಸಿದ ಮೋಡಗಳ ಸಂಖ್ಯೆಯೂ ಕ್ಷೀಣಿಸಿದ್ದು, ಸೂರ್ಯ ರಶ್ಮಿ ಭೂಮಿಗೆ ತಾಕುತ್ತಿದ್ದಂತೆ ಹಸಿರು ನಳನಳಿಸಲಾರಂಭಿಸಿದೆ.

ತೊಗರಿ ಮೈ ತುಂಬಾ ಹಳದಿಯನ್ನೇ ಹೊದ್ದಿದೆ. ಎತ್ತ ನೋಡಿದರೂ ಹಸಿರ ರಾಶಿಯೊಳಗೆ ಹಳದಿ ಕಂಗೊಳಿಸುತ್ತಿದ್ದು, ನಿಧಾನ ಗತಿಯಲ್ಲಿ ಬೀಸುವ ಗಾಳಿಗೆ ತೊಗರಿಯ ಹೂವು ತೊನೆದಾಡುವ ಚಿತ್ರಣ ಕಣ್ತುಂಬುತ್ತಿದೆ.

ಹದಿನೈದು ದಿನಕ್ಕೂ ಹೆಚ್ಚಿನ ಅವಧಿ ಸುರಿದ ವರ್ಷಧಾರೆಗೂ ಪೂರ್ವ ದಲ್ಲಿ ಬಿತ್ತಿದ್ದ ಹಿಂಗಾರಿ ಬಿಳಿಜೋಳ ಚೋಟುದ್ದ ಬೆಳೆದಿದ್ದು, ನೆಲದ ಹಂತ ದಲ್ಲೇ ಹಸಿರು ಆವರಿಸಿದೆ. ಬಿತ್ತನೆ ನಡೆಯದಿದ್ದ ಪ್ರದೇಶದಲ್ಲಿ ಬಿತ್ತನೆ ಶುರುವಾಗಿದೆ.

ಜೋಳ ಬಿತ್ತನೆಗೆ ವಿಳಂಬವಾಗಿದೆ ಎಂಬ ಕಾರಣದಿಂದ ಕಡಲೆ, ಗೋಧಿ ಬಿತ್ತಲು ಅಂತಿಮ ಸಿದ್ಧತೆ ನಡೆಸು ತ್ತಿರುವವರು, ಬಿತ್ತನೆ ನಡೆಸುತ್ತಿರುವ ರೈತರ ಚಿತ್ರಣ ಜಿಲ್ಲೆಯ ವಿವಿಧೆಡೆ ಕಂಡು ಬರುತ್ತಿದೆ.

ಹಿಂಗಾರಿ ಮ್ಯಾಲ ಆಶ ಹುಟ್ಟೈತ್ರೀ: ‘ಹಸ್ತಾ, ಚಿತ್ತಾ ಮಳೆಗಳು ಚಲೋ ನಡೆಸಿದವು. ಜಿಲ್ಲೆಯ ಎಲ್ಲೆಡೆ ಧಾರಾಕಾರವಾಗಿ ಸುರಿದವು. ಭೂಮಿ ಸಹ ಚಲೋ ಹಸಿಯಾಯ್ತು. ಸಾಕಷ್ಟು ನೀರು ಇಂಗಿಸಿಕೊಂಡಿದೆ. ಹಾಲಿ ಇರುವ ಬೆಳೆಗಳು, ಮುಂದೆ ಬಿತ್ತನೆ ನಡೆಸುವ ಹಿಂಗಾರಿ ಬೆಳೆಗಳು ಈ ವರ್ಸ ಚಲೋ ಕೈಗೆ ಸಿಕ್ತಾವೆ ಅನ್ನೋ ಆಶ ನಮ್ಮ ಮನದಲ್ಲಿ ಮೂಡೈತ್ರೀ’ ಎಂದು ವಿಜಯಪುರ ತಾಲ್ಲೂಕು ಭೂತನಾಳ ಗ್ರಾಮದ ವಿಠೋಬಾ ಅಂಬಿಗೇರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೂರ್ ಎಕ್ರೇ ಹೊಲದಲ್ಲಿ ಇಪ್ಪತ್ತ್‌ ದಿನದ ಹಿಂದ ಬಿಳಿ ಜೋಳ ಬಿತ್ತೀವ್ನೀ. ಧಾರಾಕಾರ ಮಳೆಯ ನಡುವೆಯೂ ಜೋಳ ಚೋಟುದ್ದ ಬೆಳೆದಿದೆ. ಹೊಲ ಹಸಿರಾಗಿದೆ. ಮುಂದಿನ ದಿನಗಳಲ್ಲಿ ಮಳೆ ನಡೆಸದಿದ್ದರೂ ಇಬ್ಬನಿಗೆ ಜೋಳ ಬರುತ್ತೆ’ ಎಂಬೋ ಭರವಸೆ ನಮ್ಮದಾಗಿದೆ’ ಎಂದರು.

‘ಮೂರ್ನಾಲ್ಕು ವರ್ಸದಿಂದ ಮಳೆ ಸಕಾಲಕ್ಕ ನಡೆಸದಿದ್ರೀಂದ ಉತ್ಪನ್ನ ಕೈಗೆ ಬಂದಿರಲಿಲ್ಲ. ಭೂಮಿಗೆ ಸುರಿದ ಬಂಡವಾಳ ಮರು ಹುಟ್ಟಲಿಲ್ಲ. ಮುಂಗಾರಿನಲ್ಲೂ ಇದು ತಪ್ಪಲಿಲ್ಲ. ಯಾಡ್‌ ಎಕ್ರೇ ಹೊಲದಲ್ಲಿ ಸಜ್ಜೆ ಬಿತ್ತಿದ್ದಿ. ನಾಲ್ಕ್‌ ಸಾವಿರ ರೂಪಾಯಿ ಖರ್ಚಾಗಿತ್ತು’ ಎಂದೂ ವಿಠೋಬಾ ವಿವರಿಸಿದರು.

‘ಆದ್ರೇ ಸಿಕ್ಕಿದ್ದು ನಾಲ್ಕ್‌ ಚೀಲ ಸಜ್ಜೆ. ಮಾರುಕಟ್ಟೆಯಲ್ಲಿ ಹೆಚ್ಚಿನ ಧಾರಣೆಯಿಲ್ಲ. ಬೆಳೆದ ಉತ್ಪನ್ನಕ್ಕೆ ಸೂಕ್ತ ಧಾರಣೆ ಸಿಗದಿದ್ದರಿಂದ ಲಾಭ ಅಷ್ಟಕ್ಕಷ್ಟೇ ಎನ್ನುವಂತಾಗಿದೆ. ಇದೀಗ ಜೋಳದ ಮ್ಯಾಲ ಭಾರಿ ಆಶ ಇದಾ. ಮೂರು ಎಕ್ರೇಗೂ ಜೋಳಾನೋ ಬಿತ್ತೀವ್ನೀ. ಭಗವಂತ್ನ ಇಚ್ಚೆ ಏನು ಎಂಬುದೇ ಗೊತ್ತಾಗಲ್ಲ’ ಎಂದು ವಿಠೋಬಾ ಹೇಳಿದರು.

‘ಇದುವರೆಗೂ ಕಾಯಿಪಲ್ಲೆ ಬೆಳ್ಕೊಂಡು ಬದುಕು ಸಾಗಿಸ್ತಿದ್ವೀ. ಸತತ ಬರದಿಂದ ಬೋರ್‌ವೆಲ್‌ಗಳು ಬತ್ತಿ ನೀರು ಬರ್ತಿರಲಿಲ್ಲ. ಕಾಯಿಪಲ್ಲೆ ಬೆಳೆಯೋದನ್ನು ಕೈಬಿಟ್ವೀ. ಇದೀಗ ನಮ್ಗ ಹಿಂಗಾರ ಬದುಕು. ಅದೇ ನಮ್ಮ ಜೀವನಾಧಾರ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

‘ಬೆಳೆ ನಿರ್ವಹಣೆಗೆ, ಖರ್ಚಿಗೆ ಕಾಸಿಲ್ಲದ ಸ್ಥಿತಿ ನಮ್ಮದು. ಯಾರೊಬ್ರೂ ರೊಕ್ಕ ಕೊಡಲ್ಲ. ಎಲ್ಲೂ ರೊಕ್ಕ ಹುಟ್ತಿಲ್ಲ. ಒಂದು ದಿನ ಗಳೆ ಹೊಡೆಸ್ಬೇಕು ಅಂದ್ರಾ ಯಾಡ್‌ ಸಾವರ ಬೇಕು. ಕೂಲಿ ದರ ಹೆಚ್ಚಿದೆ. ನಮ್ಮಿಂದ ಕೊಡಕಾಗಲ್ಲ’ ಎಂದು ಅಭಿಪ್ರಾಯಪಟ್ಟ ಅವರು, ಇದುವರ್ಗೂ ಜೋಳಕ್ಕೂ ನಾಕ್‌ ಸಾವ್ರ ಖರ್ಚ್ ಮಾಡೇವ್ನೀ. ಇನ್ಮುಂದ ಮಾಡಕ ಆಗದಿದ್ದಕ್ಕ ಮನೆ ಮಂದಿಯೇ ಒಟ್ಟಾಗಿ ಹೊಲದಲ್ಲಿ ದುಡಿಯೋಕತ್ತೀವಿ. ಇದುವರ್ಗೂ ಕೈಗತ್ತಿದ್ದು ಅಷ್ಟಕ್ಕಷ್ಟ. ಜೋಳಾದ್ರೂ ವರ್ಷ ಉಣ್ಣಾಕಾದ್ರೂ ಸಿಗಲಿ ಎಂಬ ಆಶದಿಂದ ಮನೆಯವರೆಲ್ಲ ದುಡಿತೀವಿ’ ಎಂದು ವಿಠೋಬಾ ತಮ್ಮ ಅಸಹಾಯಕ ಸ್ಥಿತಿ ಬಿಚ್ಚಿಟ್ಟರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry