ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂದಿಗೂ ಖಾದಿ ಬಿಡದಾದೆ

Last Updated 25 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನನ್ನ ತಂದೆಯವರು ಗಾಂಧಿವಾದಿಗಳಾಗಿದ್ದರು. ಕೊನೆಯ ತನಕ ಖಾದಿ ಬಟ್ಟೆಯನ್ನೇ ಹಾಕುತ್ತಿದ್ದರು. ನಮ್ಮ ಮನೆಯಲ್ಲಿ ಎರಡು ಚರಕಗಳಿದ್ದವು. ಆ ಚರಕಗಳಿಂದ ನನ್ನ ತಾಯಿ ಮತ್ತು ಅಕ್ಕ ಕೂಡ ನೂಲುತ್ತಿದ್ದರು. ನನ್ನ ತಂದೆಯವರೂ ತಾವೇ ಹತ್ತಿಯಿಂದ ನೂಲು ತೆಗೆದು ನಮ್ಮ ಊರಿನ ದೇವಾಂಗದವರ ಕೈಮಗ್ಗದಿಂದ ಬಟ್ಟೆಯನ್ನು ನೇಯಿಸಿ ತಯಾರು ಮಾಡಿಸಿಕೊಂಡು ದರ್ಜಿ ಕೈಯಲ್ಲಿ ಬಟ್ಟೆ ಹೊಲಿಸಿ ಹಾಕಿಕೊಳ್ಳುತ್ತಿದ್ದರು.

ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ನನ್ನನ್ನು ಭಾರತ ಸೇವಾದಳಕ್ಕೆ ಸೇರಿಸಿದ್ದರು. ನನಗೆ ಕಪ್ಪು ನಿಕ್ಕರ್‌, ಬಿಳಿ ಶರ್ಟ್‌, ಗಾಂಧಿ ಟೋಪಿಯನ್ನು ಹೊಲಿಸಿಕೊಡುತ್ತಿದ್ದರು. ನಮ್ಮ ಊರಿನಲ್ಲಿ ನಾನೊಬ್ಬನೇ ಖಾದಿ ಧರಿಸುತ್ತಿದ್ದ ಹುಡುಗ. ನಮ್ಮ ಮನೆಯಲ್ಲಿ ನಾವು ಆರು ಜನ ಮಕ್ಕಳು. ನನ್ನ ತಂದೆಯವರು ಎಲ್ಲಾ ಮಕ್ಕಳಿಗೂ ಖಾದಿಬಟ್ಟೆಯನ್ನು ತಂದು ಹೊಲಿಸಿಕೊಡುತ್ತಿದ್ದರು. ಎಲ್ಲರೂ ಮರುಮಾತನಾಡದೆ ಹಾಕಿಕೊಳ್ಳುತ್ತಿದ್ದೆವು.

ಒಂದು ದಿನ ನಾನು ನನ್ನ ತಂದೆಗೆ ಗೊತ್ತಾಗದಂತೆ ಮನೆಯಲ್ಲಿದ್ದ ಧಾನ್ಯ ಮಾರಿ ಒಂದು ಟರ್ಲಿನ್‌ ಬಟ್ಟೆಯನ್ನು ಹೊಲಿಸಿ ಹಾಕಿಕೊಂಡಿದ್ದೆ. ಹಬ್ಬದ ದಿನ ಹಾಕಿಕೊಂಡರೆ ಅವರು ಬೈಯುವುದಿಲ್ಲವೆಂದು ತಿಳಿದು ಹಾಕಿದ್ದೆ. ಅದನ್ನು ನೋಡಿದ ನನ್ನ ತಂದೆಯವರಿಗೆ ಎಲ್ಲಿಲ್ಲದ ಕೋಪ ಬಂದು ನನ್ನನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು, ಗುಡುಗಿದರು ಮತ್ತು ಊಟ ಮಾಡದೆ ಮಲಗಿಬಿಟ್ಟರು. ನನ್ನ ಜತೆ ಮಾತನಾಡುವುದನ್ನು ಬಿಟ್ಟರು.

ತಂದೆಯವರ ಮನಸ್ಸಿಗೆ ನೋವು ಕೊಟ್ಟಿರುವುದು ಮನವರಿಕೆ ಆಗಿ ನಾನು ಅವರಲ್ಲಿ, ಇನ್ನು ಮುಂದೆ ಖಾದಿ ಅಲ್ಲದೆ ಬೇರೆ ಬಟ್ಟೆಯನ್ನು ತೊಡುವುದಿಲ್ಲವೆಂದು ಹೇಳಿ, ಹೊಲಿಸಿದ್ದ ಹೊಸ ಬಟ್ಟೆಯನ್ನು ನಮ್ಮ ತಂದೆ ಎದುರಿಗೆ ಬೇರೆಯವರಿಗೆ ಕೊಟ್ಟುಬಿಟ್ಟೆ. ಅಂದಿನಿಂದ ಈವತ್ತಿನವರೆಗೂ ನಾನು ಖಾದಿ ಬಟ್ಟೆಯನ್ನೇ ಧರಿಸುತ್ತೇನೆ. ರಿಯಾಯಿತಿ ದರದಲ್ಲಿ ವರ್ಷಕ್ಕೊಮ್ಮೆ ಆಗುವಷ್ಟು ಬಟ್ಟೆಯನ್ನು ತೆಗೆದುಕೊಳ್ಳುತ್ತೇನೆ.

ಸರ್ಕಾರಿ ನೌಕರರು, ಶಾಲಾ ಮಕ್ಕಳು, ಶಾಸಕರು, ಸಚಿವರು ಗ್ರಾಮ ಪಂಚಾಯ್ತಿಯಿಂದ ಪಾರ್ಲಿಮೆಂಟಿ ನವರೆಗೂ ಮತ ಪಡೆದ ಚುನಾಯಿತ ಜನಪ್ರತಿನಿಧಿಗಳು, ಅವರ ಮಕ್ಕಳು, ಸರ್ಕಾರದಿಂದ ಸಂಬಳ ತೆಗೆಯುವವರೆಲ್ಲರೂ ಖಾದಿಯನ್ನೇ ತೊಡಲು ಸರ್ಕಾರಿ ಆದೇಶ ಮಾಡಬೇಕೆಂದು ಗಾಂಧೀಜಿಯವರು ಹಿಂದೆಯೇ ಹೇಳಿದ್ದರು. ಆದರೆ ಅದನ್ನು ಪಾಲಿಸಲು ಸರ್ಕಾರದಿಂದ ಗಟ್ಟಿ ಆದೇಶಗಳು ಬೇಕಿವೆಯಷ್ಟೆ.
–ಡಿ.ಎಸ್‌. ದೊರೆಸ್ವಾಮಿ ಚಾಮರಾಜನಗರ

*
ಎಲ್ಲಾ ಕಾಲಕ್ಕೂ ಖಾದಿ
ಹತ್ತಿ ಬಟ್ಟೆಗಳು ಬೇಸಿಗೆಗೆ ತಂಪಾಗಿ ಚಳಿಗೆ ಬೆಚ್ಚಗಾಗಿ ಮೈಗೆ ಮುದ ನೀಡುವ ಹಿತಕರವಾದ ಬಟ್ಟೆಗಳು. ನಾವು ಹುಡುಗರಿದ್ದಾಗ ತೊಟ್ಟ ದಡಿಲಂಗ ಕವಿಕೆಯ ಸೊಗಸು ಈಗಿನ ಯಾವ ವಿನ್ಯಾಸದ ಉಡುಗೆಗೂ ಸರಿಸಾಟಿ ಇಲ್ಲ. ಹೆಣ್ಣು ಮಕ್ಕಳುಡುವ ಕಾಟನ್ ಸೀರೆಗಳು, ಅಜ್ಜಿಯರುಡುವ ಹದಿನಾರು ಮೊಳದ ದಡಿ ಮುಸಿಗಿನ ಸೀರೆಗಳು, ಗೌರವ ಭಾವವನ್ನೇ ತೋರುತ್ತಿದ್ದವು. ಇನ್ನು ಇವು ಹಳತಾದರೆ ಬಹುರೂಪಿ.

ಮೆತ್ತನೆಯ ಕೌದಿಯಾಗಿ, ಬೆಚ್ಚನೆಯ ಹೊದಿಕೆಯಾಗಿ. ಮಕ್ಕಳಿಗೆ ತೊಟ್ಟಿಲಾಗಿ, ಕುಂಚಿಗೆ, ಕುಲಾಯಿಗಳಿಗೆ, ರೊಟ್ಟಿಗೆ ನೀರಚ್ಚುವ ಬಟ್ಟೆಯಾಗಿ, ಜ್ವರದ ತಾಪಕ್ಕೆ ಒದ್ದೆ ಬಟ್ಟೆಯಾಗಿ, ಬಿಸಿ ಪಾತ್ರೆಗೆ ಮಸಿ ಬಟ್ಟೆಯಾಗಿ, ಮನೆ ಸ್ವಚ್ಛಗೊಳಿಸುವ ಹಸಿ ಬಟ್ಟೆಯಾಗಿ, ಹೊರುವ ಕುಂಬಕ್ಕೆ ಸಿಂಬೆಯಾಗಿ, ಹೊಲದ ಕೆಲಸಕ್ಕೆ ಉಡಿಬಟ್ಟೆಯಾಗಿ, ಕೊನೆಗೆ ನಮ್ಮ ಮಕ್ಕಳಿಗೆ ಈಗಿನ ಡೈಪರ್ ಆಗಿ ಕೂಡ ಮರು ರೂಪ ಪಡೆಯುತ್ತಿದ್ದವು. ‘ಆನೆ ಇದ್ದರೂ ಸಾವಿರ ಸತ್ತರೂ ಸಾವಿರ’ ಎನ್ನುವಂತೆ ನಮ್ಮ ಹತ್ತಿ ಬಟ್ಟೆಗಳೂ ಅಷ್ಟೇ ಉಪಯೋಗವಾಗುವಂತಹವು. ಇಂತಹ ಬಟ್ಟೆಗಳು ಈಗ ಕಣ್ಮರೆಯಾಗುತ್ತಿವೆ.

ನಮ್ಮ ನಾಡಿನಲ್ಲೆ ಬೆಳೆದ ಹತ್ತಿ ನಮ್ಮನಾಡಿನಲ್ಲೇ ಉತ್ಪನ್ನಗೊಂಡ ಬಟ್ಟೆಗಳನ್ನು ಕಾನೂನಾತ್ಮಕವಾಗಿ ಕಡ್ಡಾಯಗೊಳಿಸಿ ಧರಿಸುವ ದುಸ್ಥಿತಿ ಬಂದಿದೆ.

ಮತ್ತೆ ಇವು ಉತ್ತರೋತ್ತರವಾಗಿ ಉತ್ಪನ್ನವಾದರೆ ಹೆಚ್ಚಾಗಿ ನೇಯ್ಕಾರರೇ ಇರುವ ನಮ್ಮ ಹಳ್ಳಿ ಸಮೃದ್ಧಿಗೊಂಡು ಸಂಪನ್ನವಾದೀತು. ಹೊಟ್ಟೆ ಪಾಡಿಗಾಗಿ ಗೂಡು ಬಿಟ್ಟಿರುವ ಹಕ್ಕಿಗಳು ಮರಳಿ ಗೂಡ ಸೇರ್‍ಯಾವು, ಹಾರಿ ಹೋದ ಹಕ್ಕಿಗಳನ್ನು ಎದುರು ನೋಡುತ್ತಾ ಕಟಂಜನದಲ್ಲಿ ಕುದ್ದು ಕುದ್ದು, ಬಿದ್ದ ಮುದಿ ಹಕ್ಕಿಗಳು ಎದ್ದು ಕುಂತಾವು, ಗೆದ್ದಲಿಡಿಯುತ್ತಿರುವ ನೇಯ್ಗೆ ಸಾಮಗ್ರಿಗಳು ಸದ್ದು ಮಾಡ್ಯಾವು.

ಮಳೆ ಬೆಳೆಯಿಲ್ಲದೆ, ಕೂಲಿ ಕೈಗೆ ಕೆಲಸವಿಲ್ಲದೆ, ಕೈಕಟ್ಟಿ ಕುಳಿತಿರುವ ನಮಗೆ ಬದುಕು ಸಿಕ್ಕಾವು. ಬಿಕೋ ಎನ್ನುತ್ತಿರುವ ನಮ್ಮ ಹಳ್ಳಿ ಎಕೋ ಆದೀತು.
– ನೇತ್ರಾವತಿ ಮಂಜುನಾಥ್ ಇಟಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT