ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗೌರಿ’ ಸಿನಿಮೋತ್ಸವ

Last Updated 25 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್‌ ಅವರ ಹತ್ಯೆಯನ್ನು ಖಂಡಿಸಿ ನಗರದದಲ್ಲಿ ‘ಸೋಶಿಯಲ್ ಜಸ್ಟೀಸ್ ಫಿಲ್ಂ ಫೆಸ್ಟಿವಲ್’ ಆಯೋಜನೆಗೊಂಡಿದೆ. ಅ. 26ರಿಂದ 28ರವರೆಗೆ ಈ ಸಿನಿಮೋತ್ಸವ ಎಸ್‌ಐಇಡಿಎಸ್‌ (SIEDS) ಗ್ರಂಥಾಲಯ ಸಭಾಂಗಣ, ತ್ಯಾಗರಾಜ ಬಡಾವಣೆ, ಜೈಭಾರತ್ ನಗರ, ಮಾರುತಿ ಸೇವಾ ನಗರದಲ್ಲಿ ನಡೆಯಲಿದೆ. ಮರುಪಕ್ಕಂ ಮತ್ತು ಎಸ್‌ಐಇಡಿಎಸ್‌ (SIEDS) ಸಹಯೋಗದೊಂದಿಗೆ ಈ ಸಿನಿಮೋತ್ಸವವನ್ನು ಬೆಂಗಳೂರು ಫಿಲಂ ಸೊಸೈಟಿ ಆಯೋಜಿಸಿದೆ.

‘ಅಭಿವ್ಯಕ್ತಿ ಸ್ವಾತಂತ್ರ್ಯ, ಸಾಮಾಜಿಕ ಸಮಾನತೆಯ ಬಗ್ಗೆ ಮಾತನಾಡುವ ವ್ಯಕ್ತಿಗಳ ಹತ್ಯೆಯಾಗುತ್ತಿದೆ. ಈ ಬಗ್ಗೆ ಸರ್ಕಾರ ಶೀಘ್ರ ಕ್ರಮ ತೆಗೆದುಕೊಳ್ಳಬೇಕು. ಜನರಿಗೂ ಸಹಿಷ್ಣುತೆ ಬಗ್ಗೆ ಅರಿವು ಮೂಡಿಸಬೇಕು ಎಂಬ ಉದ್ದೇಶ ಈ ಸಿನಿಮೋತ್ಸವದ್ದು.  ‘ಈ ಸಿನಿಮೋತ್ಸವದ ತುರ್ತು ಇಂದಿಗೆ ಇದೆ. ಸಾಮಾಜಿಕ ಸಮಸ್ಯೆಗಳ ಬಗ್ಗೆ, ದೌರ್ಜನ್ಯಗಳ ಬಗ್ಗೆ ಮಾತನಾಡುವ ಹೋರಾಟಗಾರರ ಹತ್ಯೆಯಾಗುತ್ತಿದೆ.

ಇದನ್ನು ತಡೆಯುವುದಕ್ಕೆ ಸಾಧ್ಯವಿಲ್ಲವೇ? ಸೈದ್ಧಾಂತಿಕ ಭಿನ್ನಾಭಿಪ್ರಾಯ ಇದ್ದ ಮಾತ್ರಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡುವುದು ಅಮಾನುಷ ಕೃತ್ಯ. ಹಾಗೇ ಗೌರಿಯವರನ್ನು ಹತ್ಯೆ ಮಾಡಿದವರಾರು ಎಂದು ಇಂದಿಗೂ ಗೊತ್ತಾಗಿಲ್ಲ. ಈ ಬಗ್ಗೆ ತುರ್ತು ಕ್ರಮಕೈಗೊಳ್ಳಬೇಕು. ಈ ಎಲ್ಲಾ ಆಲೋಚನೆ ಇಟ್ಟುಕೊಂಡು ಈ ಸಿನಿಮೋತ್ಸವ ಆಯೋಜಿಸುತ್ತಿದ್ದೇವೆ’ ಎನ್ನುತ್ತಾರೆ ಸಿನಿಮೋತ್ಸವದ ಆಯೋಜಕ ಜಾರ್ಜ್ ಕುಟ್ಟಿ.

ಸಿನಿಮೋತ್ಸವದಲ್ಲಿ ಪ್ರದರ್ಶನವಾಗುತ್ತಿರುವ ಸಿನಿಮಾಗಳನ್ನು ಆಯ್ಕೆ ಮಾಡಿದವರು ಚೆನ್ನೈನ ಪ್ರಸಿದ್ಧ ಸಾಕ್ಷ್ಯಚಿತ್ರ ನಿರ್ದೇಶಕ ಹಾಗೂ ಹೋರಾಟಗಾರ ಅಮುದನ್ ಆರ್.ಪಿ.

ದಲಿತ ದಮನಿತರ ಬದುಕು ಬಿಂಬಿಸುವ, ಹಾಗೇ ಇನ್ನೂ ಜೀವಂತವಾಗಿರುವ ಮಲಹೊರುವ ಪದ್ಧತಿ ಬಗ್ಗೆ  ದಿವ್ಯಾ ಭಾರತಿ ನಿರ್ದೇಶಿಸಿದ ‘ಕಕ್ಕೂಸ್’ ನಂಥ ವಿವಾದಿತ ಸಿನಿಮಾ, ಸಂಗೀತ ಆಧಾರಿತ ‘ಫೀಟ್‌’ ಸಿನಿಮಾ, ದೀಪಾ ಧನರಾಜ್ ನಿರ್ದೇಶನದ ಇಸ್ಲಾಂ ಮಹಿಳಾ ಆಸ್ಮಿತೆ ಬಗ್ಗೆ ಮಾತನಾಡುವ ‘ಇನ್‌ವೊಕಿಂಗ್ ಜಸ್ಟೀಸ್‌’, ಗೌತಮ್ ಸೊನ್ಟಿ ಹಾಗೂ ಉಷಾ ರಾವ್ ನಿರ್ದೇಶನದ ‘ನಮ್ಮ ಮಹಾನಗರ’, ಮಹೀನ್ ಮಿರ್ಜಾ ನಿರ್ದೇಶನದ ‘ಫ್ರೇಮಿಂಗ್ ಡೆಮಾಕ್ರಸಿ 32’, ರೀಚಾ ಹಸಿಂಗ್‌ ನಿರ್ದೇಶನದ ‘ನಿಕೋಬಾರ್ ಲಾಂಗ್‌ ವೇ’, ಪುಷ್ಪಾ ರಾವತ್ ನಿರ್ದೇಶನದ ‘ಮಾಡ್’, ಶ್ವೇತಾ ಘೋಷ್‌ ನಿರ್ದೇಶನದ ‘ಆಕ್‌ಸೆಕ್ಸ್’, ಅಂಜಲಿ ನಿರ್ದೇಶನದ ‘ಅವರ್ ಫ್ಯಾಮಿಲಿ’ ಹೀಗೆ ಒಟ್ಟಾರೆ 14 ಸಿನಿಮಾಗಳು ಪ್ರದರ್ಶನವಾಗಲಿದೆ. ಸಿನಿಮೋತ್ಸವದ ಉದ್ಘಾಟನೆಗೆ ದೀಪು ನಿರ್ದೇಶನದ ‘ಅವರ್ ಗೌರಿ’ ಸಿನಿಮಾ ಪ್ರದರ್ಶನಗೊಳ್ಳಲಿದೆ.

‘ನಿರ್ದಿಷ್ಟ ಕಾರಣಕ್ಕಾಗಿ ಸಿನಿಮೋತ್ಸವ ಮಾಡುತ್ತಿರುವುದರಿಂದ ಸಾಮಾಜಿಕ ಅನ್ಯಾಯದ ಬಗ್ಗೆ ಮಾತನಾಡುವ ಸಿನಿಮಾಗಳನ್ನೇ ಆಯ್ಕೆ ಮಾಡಿಕೊಂಡಿದ್ದೇವೆ. ಏನು ತಿನ್ನಬೇಕು, ಯಾರನ್ನು ಮದುವೆಯಾಗಬೇಕು, ಯಾವ ಸಿದ್ಧಾಂತವನ್ನು ಅಭಿವ್ಯಕ್ತಿಸಬೇಕು, ಹೀಗೆ ಎಲ್ಲದರ ಮೇಲೆ ಇರುವ ಹಿಡಿತವನ್ನು ಈ ಸಿನಿಮೋತ್ಸವದ ಮೂಲಕ ಪ್ರಶ್ನಿಸುತ್ತಿದ್ದೇವೆ’ ಎನ್ನುತ್ತಾರೆ ಅಮುದನ್ ಆರ್.ಪಿ.

ಸಿನಿಮೋತ್ಸವದಲ್ಲಿ ಸಿನಿಮಾ ಪ್ರದರ್ಶನವಷ್ಟೆ ಅಲ್ಲದೆ ಚಿಂತಕರು, ಹಿರಿಯ ಸಾಹಿತಿಗಳಿಂದ ಸಂವಾದ ಕಾರ್ಯಕ್ರಮವಿದೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಕವಿತಾ ವಾಚನವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT