ಸೋಮವಾರ, ಸೆಪ್ಟೆಂಬರ್ 16, 2019
29 °C

ನಗರದಲ್ಲಿ ಅಂಟಿಗೆ–ಪಂಟಿಗೆ

Published:
Updated:
ನಗರದಲ್ಲಿ ಅಂಟಿಗೆ–ಪಂಟಿಗೆ

ಮಲೆನಾಡಿನ ಭಾಗಗಳಲ್ಲಿ ವಿಶೇಷವಾಗಿ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಕಡೆಗಳಲ್ಲಿ ದೀಪಾವಳಿ ಸಂದರ್ಭಗಳಲ್ಲಿ ನಡೆಯುವ ಸಾಂಪ್ರದಾಯಿಕ ಆಚರಣೆ ಅಂಟಿಗೆ– ಪಂಟಿಗೆ. ಈಗ ಈ ಪದ್ಧತಿಯನ್ನೂ ನಗರದಲ್ಲೂ ಮುಂದುವರಿಸುವ ಪ್ರಯತ್ನವನ್ನು ಮಲೆನಾಡು ಮಿತ್ರ ವೃಂದ ಮಾಡುತ್ತಿದೆ.

‘ಮಲೆನಾಡಿನಿಂದ ಇಲ್ಲಿಗೆ ಬಂದು ನೆಲೆಸಿದವರಿದ್ದಾರೆ. ಅವರಿಗೆ ಹಬ್ಬದ ಸಂದರ್ಭದಲ್ಲಿ ಊರಿಗೆ ಹೋಗಕ್ಕಾಗುವುದಿಲ್ಲ. ಅವರ ಮಕ್ಕಳಿಗೆ ಅಂಟಿಗೆ– ಪಿಂಟಿಗೆಯಂತಹ ಸಂಪ್ರದಾಯದ ಬಗ್ಗೆ ಅರಿವು ಇರುವುದಿಲ್ಲ. ಹೀಗಾಗಿ ನಗರದಲ್ಲಿರುವ ಮಲೆನಾಡಿಗರಿಗೆ ಊರಿನ ಹಬ್ಬದ ಖುಷಿಯನ್ನು ನೀಡಲು ಇಲ್ಲಿಯೂ ಅಂಟಿಗೆ– ಪಂಟಿಗೆಯನ್ನು ಆಚರಿಸುತ್ತಿದ್ದೇವೆ’ ಎಂದು ಮಲೆನಾಡು ಮಿತ್ರ ವೃಂದದ ಸಂಘಟಕ ಸುಬ್ಬಯ್ಯ ನಂಟೂರ್‌ ವಿವರಣೆ ನೀಡುತ್ತಾರೆ.

ಕಳೆದ ಮೂರು ವರ್ಷಗಳಿಂದ ಮಲೆನಾಡು ಮಿತ್ರ ವೃಂದ ಇದನ್ನು ನಡೆಸಿಕೊಂಡು ಬರುತ್ತಿದೆ. ಕಳೆದ ವರ್ಷ ನಗರದ 13 ಮನೆಗಳಲ್ಲಿ 10 ಜನ ಕಲಾವಿದರು ಅಂಟಿಗೆ ಪಂಟಿಗೆ ಪ್ರದರ್ಶನ ಮಾಡಿದ್ದರು. ಈ ಬಾರಿ ಅಕ್ಟೋಬರ್‌ 26ರಿಂದ 28ರವರೆಗೆ ಸುಮಾರು 20 ಜನ ಕಲಾವಿದರು 20 ಮನೆಗಳಲ್ಲಿ ಪ್ರದರ್ಶನ ನೀಡಲಿದ್ದಾರೆ. ಚಿಕ್ಕಮಗಳೂರಿನ ವೆಂಕಟೇಶ್‌ ಹಾಗೂ ಅವರ ಬಳಗ ಜನಪದ ಹಾಡುಗಳನ್ನು ಹಾಡಲಿದ್ದಾರೆ.

‘ಮಲೆನಾಡು ಭಾಗದಲ್ಲಿ ಸಂಜೆ ಆರು ಗಂಟೆಯಿಂದ ಬೆಳಿಗ್ಗೆ 6 ಗಂಟೆ ತನಕ ಈ ಕಾರ್ಯಕ್ರಮ ನಡೆಯುತ್ತಿದೆ. ಬೆಂಗಳೂರಿನಲ್ಲಿ ರಾತ್ರಿಯಿಡೀ ನಡೆಸುವುದು ಕಷ್ಟ. ಹಾಗಾಗಿ ಸಂಜೆ ಆರರಿಂದ ರಾತ್ರಿ 10ರವರೆಗೆ ಮಾಡುತ್ತೇವೆ.

ಮಲೆನಾಡು ಭಾಗದವರು ಯಾರೇ ‘ನಮ್ಮ ಮನೆಗೆ ಬನ್ನಿ’ ಎಂದು ಕರೆದರೂ ನಾವು ಅವರ ಮನೆಗೆ ಹೋಗುತ್ತೇವೆ. ಹೊರ ರಾಜ್ಯ ಅಥವಾ ಬೇರೆ ಕಡೆಗಳಿಂದ ಬಂದವರಿಗೆ ಈ ಸಂಪ್ರದಾಯದ ಬಗ್ಗೆ ಅರಿವಿರುವುದಿಲ್ಲ. ಮಲೆನಾಡು ಭಾಗದವರಲ್ಲದೇ ಬೇರೆಯವರಿಗೂ ಈ ಪದ್ಧತಿ ಇಷ್ಟ ಆಗಿ ತಮ್ಮ ಮನೆಗೆ ಕರೆದಲ್ಲಿ ಅವರ ಮನೆಗೂ ಹೋಗಿ ದೀಪ ನೀಡಿ, ಹಾಡು ಹಾಡುತ್ತೇವೆ’ ಎನ್ನುತ್ತಾರೆ ಸುಬ್ಬಯ್ಯ.

ಈ ತಂಡದೊಂದಿಗೆ ಕರಡಿ ಕುಣಿತ, ಕಿಂದರಿ ಜೋಗಿ ಕೂಡ ಇರುತ್ತಾರೆ. ಅದು ಮತ್ತೊಂದು ಆಕರ್ಷಣೆ.

‘ನಗರದಲ್ಲಿ ಮಲೆನಾಡು ಕ್ರಮದಂತೆ ಪೂರ್ಣವಾಗಿ ಸಂಪ್ರದಾಯವನ್ನು ಆಚರಣೆ ಮಾಡಲಿಕ್ಕಾಗದು. ದಿನದಲ್ಲಿ 7–8 ಮನೆಗಳನ್ನು ಆಯ್ಕೆ ಮಾಡಿಕೊಂಡು, ಒಂದು ಮನೆಯಲ್ಲಿ ಅರ್ಧ ಗಂಟೆ ಪ್ರದರ್ಶನ ನೀಡುತ್ತೇವೆ’ ಎಂದು ಕಾರ್ಯಕ್ರಮದ ಮಾಹಿತಿ ನೀಡುತ್ತಾರೆ ಅವರು.

ಮಲೆನಾಡಿನಲ್ಲಿ ಅಂಟಿಗೆ– ಪಂಟಿಗೆ ದೀಪಾವಳಿ ಹಬ್ಬದ ಹಿಂದಿನ ಮೂರು ದಿನ ಹಾಗೂ ಹಬ್ಬದ ಬಳಿಕ ಎರಡು ದಿನ ಒಟ್ಟು ಎಂಟು ದಿನ  ನಡೆಯುತ್ತದೆ. ಮಲೆನಾಡು ಮಿತ್ರ ವೃಂದ ನಗರದಲ್ಲಿ ಮೂರು ದಿನ ಆಚರಿಸಲಿದ್ದಾರೆ. ಅಕ್ಟೋಬರ್‌ 25ರಂದು ಜಯನಗರ, ಜೆ.ಪಿ. ನಗರ, ಬನಶಂಕರಿ ಭಾಗದಲ್ಲಿ, 26ರಂದು ರಾಜಾಜಿನಗರ, ಮಹಾಲಕ್ಷ್ಮೀ ಬಡಾವಣೆ ಹಾಗೂ 27ರಂದು ಆರ್‌ಆರ್‌ ನಗರ ಹಾಗೂ ದಾಸರಹಳ್ಳಿ ಭಾಗದಲ್ಲಿ ಅಂಟಿಕೆ ಪಂಟಿಗೆ ತಂಡ

ಪ್ರದರ್ಶನ ನೀಡುತ್ತಾರೆ.

ಅಂಟಿಗೆ ಪಂಟಿಕೆ ಕಲಾವಿದರು ಅವರವರ ಗ್ರಾಮದಲ್ಲಿ, ಊರಿನಲ್ಲಷ್ಟೇ ಮನೆಮನೆಗೆ ಹೋಗಬೇಕು. ಪಕ್ಕದ ಊರು ಅಥವಾ ಪಕ್ಕದ ಗ್ರಾಮಕ್ಕೆ ಹೋಗುವಂತಿಲ್ಲ. ಕಲಾವಿದರು ಜೋರಾಗಿ ಹಾಡು ಹಾಡುತ್ತಾ ಹೋಗಬೇಕು. ಇದರ ಹಿಂದೆ ಶಾಸ್ತ್ರವೂ ಇದೆ. ಒಂದು ತಂಡ ಹೋಗುತ್ತಿರುವಾಗ ಮತ್ತೊಂದು

ತಂಡ ಎದುರುಬದುರಾಗಬಾರದು. ಒಂದು ವೇಳೆ ಬಂದಿದ್ದೇ ಆದಲ್ಲಿ ಹಾಡಿನ ಮೂಲಕ ಗೆಲ್ಲಬೇಕು.

ಆಗ ಸೋತ ತಂಡ ಗೆದ್ದ ತಂಡಕ್ಕೆ ತಮ್ಮ ಜ್ಯೋತಿಯನ್ನು ನೀಡಬೇಕು. ಇದು ಅಶುಭ. ಹೀಗಾಗಿ ತಂಡಗಳು ಎದುರು ಬದುರಾಗದಂತೆ  ಜೋರಾಗಿ ಹಾಡು ಹೇಳಿಕೊಂಡು ಹೋಗುತ್ತಾರೆ. ಆದರೆ ನಗರದಲ್ಲಿ ಆ ಸಮಸ್ಯೆ ಇಲ್ಲ. ಇಲ್ಲಿ ಸಂಪ್ರದಾಯ ಪರಿಚಯ ಹಾಗೂ ಉಳಿಸಲು ಈ ಪ್ರಯತ್ನ ಎಂಬುದು ಸುಬ್ಬಯ್ಯ ಅವರ ಮಾತು.

Post Comments (+)