ಬುಧವಾರ, ಸೆಪ್ಟೆಂಬರ್ 18, 2019
21 °C

ಅಮಿತಾಗೆ ತುಳು ಚಿತ್ರ ಬೇಕಂತೆ

Published:
Updated:
ಅಮಿತಾಗೆ ತುಳು ಚಿತ್ರ ಬೇಕಂತೆ

–ಅನಿತಾ ಬನಾರಿ

ಚಂದನವನದಲ್ಲಿ ಸದ್ದು ಮಾಡುತ್ತಿರುವ ಮುದ್ದು ಮುಖದ ಚೆಲುವೆ ಅಮಿತಾ ಕುಲಾಲ್ ಕಡಲನಗರಿ ಮಂಗಳೂರಿನವರು. ಸದ್ಯ ಬಿಡುಗಡೆಯಾಗಿರುವ ‘ಹ್ಯಾಪಿ ಜರ್ನಿ’ ಚಿತ್ರದಲ್ಲಿ ನಾಯಕಿಯಾಗಿದ್ದಾರೆ.

ಬಾಲ್ಯದಿಂದಲೂ ಮಾಡೆಲಿಂಗ್‌ನತ್ತ ವಿಶೇಷ ಆಸಕ್ತಿ ಹೊಂದಿದ್ದ ಅಮಿತಾ, ಫ್ಯಾಷನ್‌ಗೆ ಸಂಬಂಧಿಸಿದ ಟಿವಿ ಷೋಗಳಿಂದ ಪ್ರೇರಣೆಗೊಂಡವರು. ಅದನ್ನೆಲ್ಲಾ ನೋಡುತ್ತಿರುವಾಗ ತಾನು ಕೂಡಾ ರೂಪದರ್ಶಿಯಾಗಿ ಮಿಂಚಬೇಕು ಎಂದು ಅಂದುಕೊಂಡಿದ್ದ ಇವರು ನಾನಾ ನಮೂನೆಯ ಡ್ರೆಸ್ ಹಾಕಿ ಮನೆಯಲ್ಲಿಯೇ ರ‍್ಯಾಂಪ್ ವಾಕ್ ಮಾಡುತ್ತಿದ್ದರು. ಅಷ್ಟರ ಮಟ್ಟಿಗೆ ಅವರನ್ನು ಸೆಳೆದಿತ್ತು ಮಾಡೆಲಿಂಗ್ ಮೋಹ.

ಮಾಡೆಲಿಂಗ್ ಎಂದರೇನು ಎಂದು ಅರಿಯದ ಅಮಿತಾ ಮುಂದೆ ಅದರ ಬಗ್ಗೆ ಹಲವು ವಿಚಾರಗಳನ್ನು ತಿಳಿದುಕೊಂಡರು. ತಾನು ಕೂಡಾ ಮಾಡೆಲಿಂಗ್ ಕ್ಷೇತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂಬ ಹಂಬಲವಿದ್ದ ಕಾರಣ ಕಂಪೆನಿಯೊಂದಕ್ಕೆ ಫೋಟೋವನ್ನು ಕಳಿಸಿಕೊಟ್ಟದ್ದೂ ಆಯಿತು. ಆದರೆ ಅದು ಸಾಧಾರಣವಾದ ಫೋಟೋ ಆದ ಕಾರಣ ರಿಜೆಕ್ಟ್ ಆಯಿತು. ಮಾತ್ರವಲ್ಲ ಪೋರ್ಟ್ ಫೋಲಿಯೋ ಫೋಟೋ ಕೊಡುವಂತೆ ಕೇಳಿದರು.

ಪೋರ್ಟ್‌ಪೋಲಿಯೋ ಎಂದರೆ ಏನೆಂದೇ ತಿಳಿಯದ ಅಮಿತಾ ಅದರ ಬಗ್ಗೆ ತಿಳಿದು ಅದಕ್ಕೆ ತಕ್ಕುದಾದ ಫೋಟೋ ಶೂಟ್ ಮಾಡಿಸಿ ಕಳುಹಿಸಿಬಿಟ್ಟರು. ಅದೃಷ್ಟ ಅವರ ಕೈ ಹಿಡಿದಿತ್ತು. ಆಡಿಷನ್ ರೌಂಡ್‌ಗೆ ಆಯ್ಕೆಯೂ ಆದರು. ಮುಂದೆ ಮನೆಯವರನ್ನು ಒಪ್ಪಿಸಿ ತಂದೆಯೊಂದಿಗೆ ದೂರದ ಮುಂಬೈಗೆ ತೆರಳಿದ ಅವರು, ಮೊದಲ ಬಾರಿ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿ ಆಯ್ಕೆಯಾದಾಗ ಬರೀ ಹದಿನಾರು ವರುಷ!

ಮಂಗಳೂರಿನಲ್ಲಿ ಪದವಿ ಶಿಕ್ಷಣ ಮುಗಿಸಿ, ಸಂಪೂರ್ಣ ಮಾಡೆಲಿಂಗ್‌ನಲ್ಲಿ ಮುಂದುವರಿಯುವ ನಿರ್ಧಾರ ಮಾಡಿದರು. ಮನಸಿನ ಆಳದಲ್ಲಿ ಅಡಗಿದ್ದ ಬಣ್ಣದ ಬದುಕಿನ ಆಸಕ್ತಿ ಅವರನ್ನು ಮಗದೊಮ್ಮೆ ಮುಂಬೈಗೆ ತೆರಳುವಂತೆ ಮಾಡಿತು. ಮುಂದೆ ರ‍್ಯಾಂಪ್ ವಾಕ್, ಮಾಡೆಲಿಂಗ್ ಮೂಲಕ ಫ್ಯಾಷನ್ ಲೋಕದಲ್ಲಿ ತಮ್ಮದೇ ಆದ ಹವಾ ಸೃಷ್ಟಿಸಿರುವ ಅಮಿತಾ ಬಾಲಿವುಡ್ ಅಂಗಳದಲ್ಲೂ ಮಿಂಚಿದ ಪ್ರತಿಭೆ.

ಹಿಂದಿ ವಿಡಿಯೊ ಆಲ್ಬಂಗಳಲ್ಲಿ ಅಭಿನಯಿಸುವ ಮೂಲಕ ಬಣ್ಣದ ಕ್ಷೇತ್ರಕ್ಕೆ ಕಾಲಿಟ್ಟರು. ಕೊರಿಯೋಗ್ರಾಫರ್ ಗಣೇಶ್‌ ಆಚಾರ್ಯ ಮತ್ತು ತಂಡದ ಝಂಕಾರ್ ವಿಡಿಯೊ ಆಲ್ಬಂ ಅಮಿತಾಗೆ ಸಾಕಷ್ಟು ಖ್ಯಾತಿ ತಂದುಕೊಟ್ಟಿತು. ಮುಂದೆ ರಾಕೇಶ್ ಕಪೂರ್ ಅವರ  ಆಲ್ಬಂಗಳಲ್ಲಿ ಅಭಿನಯಿಸಿರುವ ಅಮಿತಾ ಮಾಡೆಲಿಂಗ್‌ಗೂ ಸೈ. ಆನ್‌ಲೈನ್ ಶಾಪಿಂಗ್ ವೆಬ್ ಸೈಟ್ ಅಮೆಜಾನ್, ಫ್ಲಿಪ್ ಕಾರ್ಟ್ ಸೇರಿದಂತೆ ಮಧುರೈ ಸಿಲ್ಕ್ಸ್, ಸೂರತ್ ಬ್ರಾಂಡ್, ಹೈದರಾಬಾದ್ ಸೀರೆಗಳಿಗೆ ರೂಪದರ್ಶಿಯಾಗಿ ಮಿಂಚಿದ್ದಾರೆ.

ಅವಕಾಶ ಸಿಕ್ಕರೆ ತುಳು ಚಿತ್ರದಲ್ಲೂ ನಟಿಸಲೂ ತಯಾರಿದ್ದೇನೆ ಎನ್ನುವ ಅಮಿತಾ ಕುಲಾಲ್ ಸದ್ಯ ‘ಜಗತ್ ಕಿಲಾಡಿ’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

Post Comments (+)