ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಚೆಚೀಟಿಯಲ್ಲಿ ವಿಧಾನಸೌಧದ ನೆನಪು

Last Updated 25 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಸ್ವಾತಂತ್ರ್ಯಾ ನಂತರ ನಿರ್ಮಾಣಗೊಂಡ ಭಾರತೀಯ ವಿಧಾನಮಂಡಲಗಳ ಕಟ್ಟಡಗಳಲ್ಲಿಯೇ ಆಕರ್ಷಕವಾದ ಭವನ ವಿಧಾನಸೌಧ. ಕರ್ನಾಟಕ ಆಡಳಿತದ ಕೇಂದ್ರಸ್ಥಾನವಾಗಿ ಆರು ದಶಕಗಳಿಂದ ಕಾರ್ಯ ನಿರ್ವಹಿಸುತ್ತಿರುವ ವಿಧಾನಸೌಧಕ್ಕೆ ಈಗ 60ರ ಸಂಭ್ರಮ.

ಶಿಲಾಕಾವ್ಯವೆಂದು ಖ್ಯಾತಿ ಗಳಿಸಿರುವ ವಿಧಾನಸೌಧ ಸ್ಮರಣಿಕೆಯು ಜಗತ್ತಿನ ಸಂಪರ್ಕ ಸಾಧನಗಳಲ್ಲಿ ಮಹತ್ವದ ಸ್ಥಾನಪಡೆದಿರುವ ‘ಅಂಚೆ’ ಸೇವೆಗಳಲ್ಲಿ ಅಂಚೆ ವಿಶೇಷ ಲಕೋಟೆಗಳ ರೂಪದಲ್ಲಿ ಕಾಣಿಸಿಕೊಂಡು ಈಗ ನಾಲ್ಕು ದಶಕ ಸಂದಿದೆ.

40 ವರ್ಷಗಳ ಹಿಂದೆ (1977) ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಏಷ್ಯಾ–ಆಸ್ಟ್ರೇಲಿಯನ್‌ ರಾಷ್ಟ್ರಗಳ ಅಂಚೆಚೀಟಿ ಪ್ರದರ್ಶನ ನಡೆದಿತ್ತು. ಇಂಥ ಪ್ರದರ್ಶನವೊಂದು ದೇಶದಲ್ಲಿ ನಡೆದದ್ದು ಅದೇ ಮೊದಲು.

ಭಾರತ ಸರ್ಕಾರದ ಅಂಚೆ ಇಲಾಖೆ ಹಾಗೂ ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ 1977ರ ಅಕ್ಟೋಬರ್‌ 19ರಿಂದ 23ರವರೆಗೆ ಭಾರತೀಯ ಫಿಲಾಟಲಿ ಕಾಂಗ್ರೆಸ್‌ ಸಂಘಟಿಸಿದ್ದ ‘ಏಷಿಯಾನ–77’ ಪ್ರದರ್ಶನ ನಮ್ಮ ದೇಶದ ಅಂಚೆಚೀಟಿ ಸಂಗ್ರಹ ಇತಿಹಾಸದಲ್ಲೊಂದು ಪ್ರಮುಖ ಮೈಲುಗಲ್ಲು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಫಿಲಾಟಲಿ ಫೆಡರೇಷನ್‌ 1926ರಲ್ಲಿ ಅಸ್ತಿತ್ವಕ್ಕೆ ಬಂದಿದ್ದರೂ ಏಷ್ಯಾ ಹಾಗೂ ಆಸ್ಟ್ರೇಲಿಯಾ ದೇಶಗಳಲ್ಲಿ ಅದು ಹೆಚ್ಚಿನ ಚಟುವಟಿಕೆ ನಡೆಸಿರಲಿಲ್ಲ.

ನಮ್ಮ ದೇಶದ ವಿವಿಧ ಅಂಚೆಚೀಟಿ ಸಂಘಗಳ ಒಕ್ಕೂಟವಾಗಿದ್ದ ಭಾರತೀಯ ಫಿಲಾಟಲಿ ಕಾಂಗ್ರೆಸ್‌ ಅಸ್ತಿತ್ವಕ್ಕೆ ಬಂದುದು 1975ರಲ್ಲಿ. ಆರಂಭವಾದ ಎರಡೇ ವರ್ಷಗಳಲ್ಲಿ ‘ಏಷಿಯಾನ’ ಪ್ರದರ್ಶನ ಸಂಘಟಿಸುವ ಸವಾಲು ಎದುರಾಯಿತು. ಭಾರತ ಅಂಚೆ ಇಲಾಖೆ ಇದರ ಬೆನ್ನಿಗಿದ್ದರೂ ಆತಿಥ್ಯದ ಹೊಣೆ ಹೊತ್ತಿದ್ದು ಕರ್ನಾಟಕ ಸರ್ಕಾರ. ಆಗ ಮುಖ್ಯಮಂತ್ರಿಗಳಾಗಿದ್ದ ಡಿ.ದೇವರಾಜ ಅರಸು. ಇಡೀ ಪ್ರದರ್ಶನದ ಹೊಣೆಯನ್ನು ಸರ್ಕಾರದ ಮೂಲಕ ನಿರ್ವಹಿಸಿದ್ದು ಮಾತ್ರವಲ್ಲ ಭವ್ಯ ಸೌಧ ವಿಧಾನಸೌಧದಲ್ಲಿಯೇ ಐದು ದಿನಗಳ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟರು.

ಕರ್ನಾಟಕದ ಅನೇಕ ಕಡೆಗಳಲ್ಲಿ ಅಂಚೆಚೀಟಿ ಸಂಗ್ರಹಕರಿದ್ದರೂ ರಾಜ್ಯಮಟ್ಟದ ಸಂಸ್ಥೆಯೊಂದು ಕರ್ನಲ್‌ ಎಲ್‌.ಜಿ.ಶೆಣೈ ಅವರ ನೇತೃತ್ವದಲ್ಲಿ ಆಗಷ್ಟೇ ಸ್ಥಾಪನೆಗೊಂಡಿತ್ತು. ಖ್ಯಾತ ಅಂಚೆಚೀಟಿ ಸಂಗ್ರಾಹಕರಾದ ವೈ.ಆರ್‌.ಷಾ, ಡಿ.ಎನ್‌.ಜಾತಿಯಾ, ಮೈಸೂರಿನ ಲಕ್ಷ್ಮೀನಾರಾಯಣ, ರವಿ ಮುಂತಾದ ಉತ್ಸಾಹಿಗಳು ಅವರೊಂದಿಗಿದ್ದರು.

’ಏಷಿಯಾನದಲ್ಲಿ ದೇಶದ ವಿವಿಧ ಭಾಗಗಳ ಅಂಚೆಚೀಟಿ ಸಂಗ್ರಾಹಕರು ಪಾಲ್ಗೊಂಡಿದ್ದರು. ಅಂಚೆಚೀಟಿ ಸಂಗ್ರಹ ಮತ್ತು ಪ‍್ರದರ್ಶನ ಕುರಿತು ಪರಿಣಿತರಿಂದ ಉಪನ್ಯಾಸ, ಸಾಕ್ಷ್ಯಚಿತ್ರ ಪ್ರದರ್ಶನಗಳು ನಡೆದವು. ಅದೊಂದು ಅವಿಸ್ಮರಣೀಯ ಕಾರ್ಯಕ್ರಮವಾಗಿತ್ತು’ ಎಂದು ಆಗ ಈ ಶಿಬಿರಕ್ಕೆ ಕರ್ನಾಟಕದಿಂದ ಆಯ್ಕೆಯಾಗಿದ್ದ ಏಕೈಕ ವಿದ್ಯಾರ್ಥಿ ನಿಖಿಲೇಶ್‌ ಮೇಲುಕೋಟೆ.

ಆಗ ಮೈಸೂರಿನಲ್ಲಿ ವಿದ್ಯಾರ್ಥಿಯಾಗಿದ್ದ ನಿಖಿಲೇಶ್‌ ಪ್ರಸ್ತುತ ಕರ್ನಾಟಕ ಫಿಲಾಟಲಿ ಸೊಸೈಟಿಯ ಉಪಾಧ್ಯಕ್ಷರು.

‘ಏಷಿಯಾನ‌’ಗೆ ಮೊದಲು ಇಲ್ಲಿ ನಡೆದಿದ್ದು ಭಾರತದ ಇನ್‌ಫೆಕ್ಸ್‌ ಪ್ರದರ್ಶನ; ಅದು ನಡೆದದ್ದೂ ವಿಧಾನಸೌಧದಲ್ಲೇ. ಎರಡೂ ಪ್ರದರ್ಶನಗಳಲ್ಲೂ ಭಾಗವಹಿಸಿದ್ದ ನಿಖಿಲೇಶ್‌ ಅವರ ನೆನಪಿನಲ್ಲಿರುವುದು ಅಮೇರಿಕಾದ ಖ್ಯಾತ ಅಂಚೆಚೀಟಿ ಸಂಗ್ರಾಹಕಿ ಮೇರಿಯಾನ. ಅವರು ತಮ್ಮ ವಿಷಯ ‘ಆನೆ’ಗಳಿಗೆ ಸಂಬಂಧಿಸಿದ ಹತ್ತು ಅಪರೂಪದ ಅಂಚೆಚೀಟಿಗಳನ್ನು ಪ್ರದರ್ಶಿಸಿದ್ದರು. ಮೇರಿಯಾನ ಅವರು ‘ಥಿಮೇಟಿಕ್‌’ ಅಂಚೆ ಸಂಗ್ರಹದ ಬಗ್ಗೆ ನೀಡಿದ ಉಪನ್ಯಾಸವೂ ಸೊಗಸಾಗಿತ್ತು.

ಆಗಿನ ರಾಜ್ಯಪಾಲ ಗೋವಿಂದ ನಾರಾಯಣ ಹಾಗೂ ಮುಖ್ಯಮಂತ್ರಿ ದೇವರಾಜ ಅರಸು ಅವರು ವಿವಿಧ ಸಮಾರಂಭಗಳಲ್ಲಿ ಪಾಲ್ಗೊಂಡಿದ್ದರು. ಹಲವಾರು ಪ್ರಸಿದ್ಧ ಅಂಚೆಚೀಟಿ ಸಂಗ್ರಾಹಕರು ತಮ್ಮ ಪ್ರದರ್ಶಿಕೆಗಳೊಂದಿಗೆ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಅವರಲ್ಲಿ ’ಇಂಡಿಯನ್‌ ಫಿಲಾಟಲಿ ಹಿಸ್ಟ್ರಿ’ ಕೃತಿಯ ಲೇಖಕ ವಿಸ್ವಿ ದಸ್ತಾರ್‌ ಪ್ರಮುಖರು.

83ರ ಹರೆಯದಲ್ಲಿಯೂ ಅಂಚೆಚೀಟಿ ಸಂಗ್ರಹ ಹಾಗೂ ಫಿಲಾಟಲಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿರುವ ಬೆಂಗಳೂರಿನ ವೈದ್ಯೆ ಡಾ.ಸೀತಾ ಬತೀಜಾ ಅವರು ತಮ್ಮ ‘ಇಂಡಿಯಾ’ ಥೀಮ್‌ ಅಂಚೆಚೀಟಿಗಳೊಂದಿಗೆ ಪ್ರದರ್ಶನದಲ್ಲಿದ್ದರು.

‘ಪ್ರದರ್ಶನದ್ದುದ್ದಕ್ಕೂ ದೇಶ ವಿದೇಶಗಳ ಅಂಚೆಚೀಟಿ ಸಂಗ್ರಾಹಕರು ಹಾಗೂ ಅಸಕ್ತರನ್ನು ಆಕರ್ಷಿಸಿದ್ದ ವಿಧಾನಸೌಧ ಹೊರಭಾಗ ಏಷ್ಯಾ–ಆಸ್ಟ್ರೇಲಿಯಾ ದೇಶಗಳ ರಾಷ್ಟ್ರಧ್ವಜಗಳೊಂದಿಗೆ ಕಂಗೊಳಿಸುತ್ತಿತ್ತು’ ಎಂದು ನೆನಪಿಸಿಕೊಳ್ಳುವ ನಿಖಿಲೇಶ್‌ ಅವರಿಗೆ ವಿವಿಧ ದೇಶಗಳ ಧ್ವಜ ಅಂಚೆಚೀಟಿಗಳ ಸಂಗ್ರಹದ ಉಮೇದು ಆರಂಭವಾಗಿದ್ದು ಆಗಲೇ. ಅವರು ಇಂದಿಗೂ ಈ ಹವ್ಯಾಸ ಮುಂದುವರಿಸಿದ್ದಾರೆ.

ಅಪರೂಪದ ಅಂಚೆಚೀಟಿಗಳು ಅನಾವರಣಗೊಂಡಿದ್ದ ‘ಏಷಿಯಾನ’ ಪ್ರದರ್ಶನದ ನೆನಪಿಗೆ ಎರಡು ’ಸ್ಮರಣಾರ್ಥ ಅಂಚೆಚೀಟಿ’ಗಳು ಬಿಡುಗಡೆಯಾಗಿದ್ದವು.  ಏಷ್ಯಾದ ಮೊದಲ ಅಂಚೆಚೀಟಿ ರೆಡ್‌ ಸಿಂಧ್‌ ಡಾಕ್ಸ್‌ ಅದರಲ್ಲೊಂದು (1852). ಭಾರತಕ್ಕೆ ಮೊದಲ ಅಂಚೆ ವಿದೇಶದಿಂದ ಬಂದಿದ್ದು 1927ರಲ್ಲಿ ಮುಂಬೈ ಬಂದರಿಗೆ. ಈ ಎರಡೂ ಸಂಗತಿಗಳು ಅಂದು ಬಿಡುಗಡೆಯಾದ ಅಂಚೆಚೀಟಿಗಳಲ್ಲಿದ್ದವು.

‘ಏಷಿಯಾನ’ ಪ್ರದರ್ಶನದಲ್ಲಿ ಎರಡು ವಿಶೇಷ ಅಂಚೆ ಲಕೋಟೆಗಳು ಬಿಡುಗಡೆಯಾದವು. ಅವರೆಡೂ ಕರ್ನಾಟಕಕ್ಕೆ ಸಂಬಂಧಿಸಿದ್ದೇ ಆಗಿರುವುದು ಗಮನಾರ್ಹ ಸಂಗತಿ. ಒಂದು ಲಕೋಟೆಯಲ್ಲಿ ವಿಧಾನಸೌಧದ ಚಿತ್ರವಿತ್ತು,  ಮತ್ತೊಂದರಲ್ಲಿ ಆನೆ ಹಿಡಿಯುವ ಪ್ರಕ್ರಿಯೆ ಖೆಡ್ಡಾದ ಚಿತ್ರಿಕೆ ಇತ್ತು.ಭಾರತೀಯ ಅಂಚೆಚೀಟಿ ಚರಿತ್ರೆಯಲ್ಲಿ ‘ಏಷಿಯಾನ’ದಂಥ ಮಹತ್ವದ ಅಂತರರಾಷ್ಟ್ರೀಯ ಪ್ರದರ್ಶನಕ್ಕೆ ಕಾರಣವಾದ ವಿಧಾನಸೌಧಕ್ಕೆ ಭಾರತೀಯ ಸ್ಮರಣಾರ್ಥ ಅಂಚೆಚೀಟಿಗಳಲ್ಲಿ ಇನ್ನೂ ಜಾಗ ಸಿಕ್ಕಿಲ್ಲ ಎಂಬುದು ನೋವಿನ ವಿಷಯ.

ಭಾರತೀಯ ವಾಸ್ತುಶೈಲಿಯಲ್ಲಿ ಕಟ್ಟಲಾದ ಭವ್ಯಕಟ್ಟಡ ವಿಧಾನಸೌಧ ಈಗ ವಜ್ರಮಹೋತ್ಸವ ಆಚರಿಸುತ್ತಿದೆ. ಈ ಸಂದರ್ಭದಲ್ಲಿ ವಿಧಾನಸೌಧದ ಅಂಚೆಚೀಟಿ ಪ್ರಕಟಿಸಲು ಕೇಂದ್ರ ಸರ್ಕಾರದ ಮೇಲೆ ಸಂಸದರು, ಕೇಂದ್ರ ಸಚಿವರು ಒತ್ತಡ ತರಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT