ಸೋಮವಾರ, ಸೆಪ್ಟೆಂಬರ್ 16, 2019
21 °C

ಆಧಾರ್‌ ಜೋಡಣೆ: ಗಡುವು ವಿಸ್ತರಣೆ

Published:
Updated:
ಆಧಾರ್‌ ಜೋಡಣೆ: ಗಡುವು ವಿಸ್ತರಣೆ

ನವದೆಹಲಿ: ಸರ್ಕಾರದ ವಿವಿಧ ಯೋಜನೆಗಳ ಲಾಭವನ್ನು ಪಡೆಯುವುದಕ್ಕಾಗಿ ಬ್ಯಾಂಕ್‌ ಖಾತೆ, ಮೊಬೈಲ್‌ ಸಂಖ್ಯೆ, ಪ್ಯಾನ್‌ ಕಾರ್ಡ್‌ಗೆ ಆಧಾರ್‌ ಸಂಖ್ಯೆಯನ್ನು ಜೋಡಣೆ ಮಾಡಲು ನಿಗದಿಪಡಿಸಿರುವ ಗಡುವನ್ನು 2018ರ ಮಾರ್ಚ್‌ 31ರವರೆಗೆ ವಿಸ್ತರಿಸಲಾಗುವುದು ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ.

ಆಧಾರ್‌ ಸಂಖ್ಯೆ ಹೊಂದಿಲ್ಲದವರು ಮತ್ತು ಆಧಾರ್‌ಗಾಗಿ ಇನ್ನೂ ನೋಂದಣಿ ಮಾಡದವರಿಗೆ ಇದು ಅನ್ವಯವಾಗಲಿದೆ.

‘ಈಗ ವಿಧಿಸಲಾಗಿರುವ ಗಡುವು ಈ ವರ್ಷದ ಡಿಸೆಂಬರ್‌ಗೆ ಮುಗಿಯುತ್ತದೆ. ಅದನ್ನು ಮಾರ್ಚ್‌ 31ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ’ ಎಂದು ಮುಖ್ಯನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ನ್ಯಾಯಪೀಠಕ್ಕೆ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ತಿಳಿಸಿದ್ದಾರೆ.

ಆಧಾರ್‌ ಹೊಂದಿಲ್ಲದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಮಾರ್ಚ್‌ 31ರವರೆಗೂ ಅವರಿಗೆ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ನಿರಾಕರಿಸುವುದಿಲ್ಲ ಎಂದು ವೇಣುಗೋಪಾಲ್‌ ನ್ಯಾಯಪೀಠಕ್ಕೆ ತಿಳಿಸಿದ್ದಾರೆ.

‘ಆಧಾರ್‌ ಸಂಖ್ಯೆ ಹೊಂದಿರುವವರು ಅದನ್ನು ತಮ್ಮ ಮೊಬೈಲ್‌ ಸಂಖ್ಯೆ, ಬ್ಯಾಂಕ್‌ ಖಾತೆ, ಪ್ಯಾನ್‌ ಕಾರ್ಡ್‌ ಮತ್ತು ಇತರ ಕೆಲವು ಯೋಜನೆಗಳೊಂದಿಗೆ ಜೋಡಣೆ ಮಾಡುವುದು ಅನಿವಾರ್ಯ’ ಎಂದು ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಟಿಪ್ಪಣಿಯಲ್ಲಿ ಸರ್ಕಾರ ಹೇಳಿದೆ.

ಆಧಾರ್‌ ಸಂಖ್ಯೆಯನ್ನು ಹೊಂದಿದ್ದರೂ ಅದನ್ನು ಜೋಡಣೆ ಮಾಡದೇ ಇರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆಯೇ ಎಂಬ ಬಗ್ಗೆ ಪ್ರತಿಕ್ರಿಯಿಸಲು ಅಕ್ಟೋಬರ್‌ 30ರವರೆಗೆ ಸಮಯ ನೀಡಬೇಕು ಎಂದು ವೇಣುಗೋಪಾಲ್‌ ನ್ಯಾಯಪೀಠಕ್ಕೆ ಮನವಿ ಮಾಡಿದ್ದಾರೆ.

ಆಧಾರ್‌ ಸಂಖ್ಯೆ–ಮೊಬೈಲ್‌ ಸಂಖ್ಯೆ ಜೋಡಣೆ ಇನ್ನಷ್ಟು ಸರಳ

ನವದೆಹಲಿ: ಮೊಬೈಲ್‌ ಬಳಕೆದಾರರು ಆನ್‌ಲೈನ್‌ ಮೂಲಕ ತಮ್ಮ ಮೊಬೈಲ್‌ಗೆ ಆಧಾರ್‌ ಸಂಖ್ಯೆಯನ್ನು ಜೋಡಣೆ ಮಾಡಬಹುದು.

ಇದಕ್ಕಾಗಿ, ಅವರು ಒಂದು ಬಾರಿಯ ಪಾಸ್‌ವರ್ಡ್‌ (ಒಟಿಪಿ) ಆಧರಿತ ಆಯ್ಕೆಯನ್ನು ಬಳಸಿಕೊಂಡು ಆಧಾರ್‌ ಸಂಖ್ಯೆಯನ್ನು ನೀಡಬಹುದು ಅಥವಾ ಮೊಬೈಲ್‌ ಸೇವೆ ಒದಗಿಸುವ ಕಂಪೆನಿಗಳ ಆ್ಯಪ್‌ ಮೂಲಕ ಲಾಗ್‌ ಇನ್‌ ಆಗಿ ಮೊಬೈಲ್‌ ಸಂಖ್ಯೆಗೆ ಆಧಾರ್‌ ಜೋಡಣೆ ಮಾಡಬಹುದು. ದೂರ ಸಂಪರ್ಕ ಕಂಪೆನಿಗಳು ಶೀಘ್ರದಲ್ಲಿ ಈ ಸೇವೆಗಳನ್ನು ಒದಗಿಸಲಿವೆ.

ಇದಲ್ಲದೇ, ಐವಿಆರ್‌ಎಸ್‌ (ಇಂಟರಾಕ್ಟಿವ್‌ ವಾಯ್ಸ್‌ ರೆಸ್ಪಾನ್ಸ್‌ ಸಿಸ್ಟಮ್‌) ಮೂಲಕವೂ ಮೊಬೈಲ್‌ ಸಂಖ್ಯೆಗೆ ಆಧಾರ್‌ ಸಂಖ್ಯೆ ಜೋಡಣೆ ಮಾಡಬಹುದು.

ಸುಪ್ರೀಂ ಕೋರ್ಟ್‌ ಆದೇಶದ ಅನುಸಾರ ಜೋಡಣೆ ಪ್ರಕ್ರಿಯೆಯನ್ನು ಸರಳಗೊಳಿಸುವುದಕ್ಕಾಗಿ ದೂರ ಸಂಪರ್ಕ ಸಚಿವಾಲಯವು ಬುಧವಾರ ದೂರ ಸಂಪರ್ಕ ಕಂಪೆನಿಗಳಿಗೆ ವಿಸ್ತೃತ ಸೂಚನೆಗಳನ್ನು ಹೊರಡಿಸಿದೆ.

‘ಹೊಸ ನಿಯಮಗಳ ಪ್ರಕಾರ, ಮೊಬೈಲ್‌ ಸಂಖ್ಯೆಗೆ ಆಧಾರ್ ಸಂಖ್ಯೆಯನ್ನು ಜೋಡಿಸಲು ಮೂರು ಹೊಸ ವಿಧಾನಗಳನ್ನು ಸಚಿವಾಲಯ ಪರಿಚಯಿಸಿದೆ. ಒಟಿಪಿ ಆಧರಿತ, ಆ್ಯಪ್ ಆಧರಿತ ಮತ್ತು ಐವಿಆರ್‌ಎಸ್‌ ಸೌಲಭ್ಯದ ಮೂಲಕ ಜೋಡಣೆ ಮಾಡಬಹುದು. ಇದರಿಂದಾಗಿ ಮೊಬೈಲ್‌ ಬಳಕೆದಾರರು ಆಧಾರ್‌ ಸಂಖ್ಯೆಯನ್ನು ತಮ್ಮ ಮೊಬೈಲ್‌ ಸಂಖ್ಯೆಗೆ ಜೋಡಣೆ ಮಾಡುವುದಕ್ಕೆ ದೂರ ಸಂಪರ್ಕ ಕಂಪೆನಿಗಳ ಮಳಿಗೆಗಳಿಗೆ ಭೇಟಿ ನೀಡಬೇಕಾಗಿಲ್ಲ’ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

‘ಒಂದು ವೇಳೆ ಗ್ರಾಹಕರ ಒಂದು ಮೊಬೈಲ್‌ ಸಂಖ್ಯೆ ಆಧಾರ್‌ ದಾಖಲೆಗಳಲ್ಲಿ ನೋಂದಣಿಯಾಗಿದ್ದರೆ, ಆ ಸಂಖ್ಯೆಯನ್ನು ಹಾಗೂ ಆ ಗ್ರಾಹಕರ ಬಳಿ ಇರುವ ಇತರ ಮೊಬೈಲ್‌ ಸಂಖ್ಯೆಗಳನ್ನು ಒಟಿಪಿ ಮೂಲಕ ಜೋಡಿಸಬಹುದು’ ಎಂದು ಮೂಲಗಳು ಹೇಳಿವೆ.

ಸದ್ಯ 50 ಕೋಟಿಗಳಷ್ಟು ಮೊಬೈಲ್‌ ಸಂಖ್ಯೆಗಳನ್ನು ಆಧಾರ್‌ನೊಂದಿಗೆ ಜೋಡಣೆ ಮಾಡಲಾಗಿದ್ದು, ಇವುಗಳನ್ನೆಲ್ಲ ಒಟಿಪಿ ಮೂಲಕ ದೃಢೀಕರಿಸಬಹುದು ಎಂದು ಮೂಲಗಳು ವಿವರಿಸಿವೆ.

ಮನೆಬಾಗಿಲಿಗೆ ಸೇವೆ: ಅಂಗವಿಕಲರು, ಕಾಯಿಲೆಯಿಂದ ಬಳಲುತ್ತಿರುವವರು ಅಥವಾ ವೃದ್ಧ ಗ್ರಾಹಕರಿಗೆ ನೆರವಾಗುವುದಕ್ಕಾಗಿ ಮನೆಬಾಗಿಲಿಗೆ ತೆರಳಿ ಆಧಾರ್‌ ಸಂಖ್ಯೆ ಮತ್ತು ಮೊಬೈಲ್‌ ಸಂಖ್ಯೆ ಜೋಡಿಸುವಂತೆ ಸಚಿವಾಲಯ ದೂರಸಂಪರ್ಕ ಕಂಪೆನಿಗಳಿಗೆ ಸಲಹೆ ನೀಡಿದೆ.

ಈ ಸೇವೆಗಾಗಿ ಗ್ರಾಹಕರು ಆನ್‌ಲೈನ್‌ ಮೂಲಕ ಮನವಿ (ವೆಬ್‌ಸೈಟ್‌, ಆ್ಯಪ್‌ ಇತ್ಯಾದಿ) ಸಲ್ಲಿಸುವ ವ್ಯವಸ್ಥೆಯನ್ನು ರೂಪಿಸುವಂತೆಯೂ ಸಚಿವಾಲಯ ಸೂಚಿಸಿದೆ.

ಗೋಪ್ಯವಾಗಿಡಿ: ಒಂದು ವೇಳೆ, ಗ್ರಾಹಕರು ಏಜೆಂಟ್‌ ನೆರವಿನಿಂದ ಬಯೊಮೆಟ್ರಿಕ್‌ (ಕಣ್ಣಿನ ಪಾಪೆ ಮತ್ತು ಬೆರಳಚ್ಚು) ಮೂಲಕ ಜೋಡಣೆ ಮಾಡಲು ಹೊರಟರೆ ಏಜೆಂಟರಿಗೆ ಗ್ರಾಹಕರ ಇ–ವೈಯಕ್ತಿಕ ವಿವರಗಳು (ಕೆವೈಸಿ) ಕಾಣದಂತೆ ಮತ್ತು ಈ ವಿವರಗಳು ಅವರ ಬಳಿ ಇರುವ ಸಾಧನದಲ್ಲಿ ಸಂಗ್ರಹವಾಗದಂತೆ ನೋಡಿಕೊಳ್ಳಬೇಕು ಎಂದೂ ದೂರಸಂಪರ್ಕ ಕಂಪೆನಿಗಳಿಗೆ ತಿಳಿಸಲಾಗಿದೆ. 

ಸ್ವಾಗತ: ಸಚಿವಾಲಯದ ಈ ನಿರ್ಧಾರವನ್ನು ದೂರಸಂಪರ್ಕ ಉದ್ಯಮ ಸ್ವಾಗತಿಸಿದೆ.

‘ಪ್ರಸ್ತುತ ಸನ್ನಿವೇಶದಲ್ಲಿ ಉದ್ಯಮ ಹಾಗೂ ಗ್ರಾಹಕರಿಗೆ ಏನು ಅಗತ್ಯವಿತ್ತೋ ಅದನ್ನು ಸಚಿವಾಲಯ ಮಾಡಿದೆ. ಅದರ ನಿರ್ದೇಶನಗಳನ್ನು ಜಾರಿ ಮಾಡಲು ಸ್ವಲ್ಪ ಸಮಯ ಹಿಡಿಯಬಹುದು. ತಮ್ಮ ಮೊಬೈಲ್‌ ಸಂಖ್ಯೆಗೆ ಆಧಾರ್‌ ಸಂಖ್ಯೆಯನ್ನು ಜೋಡಣೆ ಮಾಡಲು ಬಳಕೆದಾರರಿಗೆ ಹೆಚ್ಚು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಾವು ಸರ್ಕಾರದೊಂದಿಗೆ ಕೆಲಸ ಮಾಡುತ್ತಿದ್ದೇವೆ’ ಎಂದು ಭಾರತೀಯ ಮೊಬೈಲ್‌ ಸೇವಾ ಸಂಸ್ಥೆಗಳ ಒಕ್ಕೂಟ (ಸಿಒಐಎ) ಹೇಳಿದೆ.

ಮೊಬೈಲ್‌ ಸಂಖ್ಯೆಗೆ ಆಧಾರ್‌ ಜೋಡಣೆ ಮಾಡಲ್ಲ: ಮಮತಾ

ಕೋಲ್ಕತ್ತ (ಪಿಟಿಐ): ಮೊಬೈಲ್‌ ಸಂಖ್ಯೆಗೆ ಆಧಾರ್‌ ಜೋಡಣೆ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮ್ಮ ಮೊಬೈಲ್‌ ಸಂಖ್ಯೆಯನ್ನು ಸ್ಥಗಿತಗೊಳಿಸಿದರೂ ಪರವಾಗಿಲ್ಲ, ಕೇಂದ್ರದ ಆದೇಶವನ್ನು ಪಾಲಿಸುವುದಿಲ್ಲ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ನಿರಂಕುಶವಾಗಿ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿರುವ ತೃಣಮೂಲ ಕಾಂಗ್ರೆಸ್‌ (ಟಿಎಂಸಿ), ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು ಪಕ್ಷ ಮಹತ್ವದ ಪಾತ್ರ ನಿರ್ವಹಿಸಬೇಕಿದೆ ಎಂದು ಹೇಳಿದೆ.

‘ಜನರ ಖಾಸಗಿತನ ಮತ್ತು ಹಕ್ಕಿನಲ್ಲಿ ಕೇಂದ್ರ ಮಧ್ಯಪ್ರವೇಶಿಸುತ್ತಿದೆ. ಯಾವುದೇ ವ್ಯಕ್ತಿಯ ಮೊಬೈಲ್‌ ಸಂಖ್ಯೆಗೆ ಆಧಾರ್‌ ಜೋಡಣೆ ಮಾಡಬಾರದು. ನಾನು ನನ್ನ ಮೊಬೈಲ್‌ ಸಂಖ್ಯೆಗೆ ಆಧಾರ್‌ ಜೋಡಿಸುವುದಿಲ್ಲ’ ಎಂದು ಟಿಎಂಸಿಯ ಪ್ರಮುಖರ ಸಮಿತಿಯ ಸಭೆಯ ನಂತರ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

100 ರೈತರಿಗೆ ಒಂದೇ ಆಧಾರ್‌ ಸಂಖ್ಯೆ!

ಮುಂಬೈ (ಪಿಟಿಐ): ಒಂದು ಆಧಾರ್‌ ಸಂಖ್ಯೆಯನ್ನು 100 ರೈತರು ಹೊಂದಿರುವುದು ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿದೆ.

ರಾಜ್ಯ ಸರ್ಕಾರ ಘೋಷಿಸಿದ್ದ ಸಾಲಮನ್ನಾ ಯೋಜನೆಯ ಲಾಭ ಪಡೆಯಲು ರೈತರು ಆಧಾರ್‌ ಸಂಖ್ಯೆ ಬಳಸಿಕೊಂಡು ಆನ್‌ಲೈನ್‌ ಮೂಲಕ ನೋಂದಣಿ ಮಾಡಬೇಕು ಎಂದು ಸರ್ಕಾರ ಹೇಳಿತ್ತು.

ರೈತರು ಆನ್‌ಲೈನ್‌ ಮೂಲಕ ನೋಂದಣಿ ಮಾಡಿದಾಗ ಒಂದೇ ಆಧಾರ್‌ ಸಂಖ್ಯೆಯನ್ನು 100 ರೈತರು ಹೊಂದಿರುವುದು ಗೊತ್ತಾಗಿದೆ. ಇದು ಈಗ ಸರ್ಕಾರಕ್ಕೆ ತಲೆ ನೋವಾಗಿ ಪರಿಣಮಿಸಿದೆ.

Post Comments (+)