ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ. 9, 14ಕ್ಕೆ ಗುಜರಾತ್‌ ಚುನಾವಣೆ

Last Updated 25 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಡಿಸೆಂಬರ್‌ 9 ಮತ್ತು 14ರಂದು ಗುಜರಾತ್‌ ವಿಧಾನಸಭೆಗೆ ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ. ಹೀಗಾಗಿ, ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್‌ ನಡುವೆ ಜಿದ್ದಾಜಿದ್ದಿನ ಹಣಾಹಣಿಗೆ ವೇದಿಕೆ ಸಜ್ಜಾಗಿದೆ.

ಡಿ. 18ರಂದು ಮತ ಎಣಿಕೆ ನಡೆಯಲಿದೆ. ಹಿಮಾಚಲ ಪ್ರದೇಶದ ಮತ ಎಣಿಕೆಯೂ ಅಂದೇ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಎ.ಕೆ. ಜೋತಿ ಹೇಳಿದ್ದಾರೆ.

ಮಾದರಿ ನೀತಿ ಸಂಹಿತೆ ತಕ್ಷಣದಿಂದಲೇ ಜಾರಿಗೆ ಬಂದಿದೆ. ಗುಜರಾತ್‌ ಸರ್ಕಾರ, ಕೇಂದ್ರ ಸರ್ಕಾರ, ಎಲ್ಲ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ಇದು ಅನ್ವಯವಾಗಲಿದೆ.

ಗುಜರಾತ್‌ನ ಎಲ್ಲ 50,128 ಮತಗಟ್ಟೆಗಳಲ್ಲಿಯೂ ಮತದಾರರ ಮತ ದೃಢೀಕರಣ ಯಂತ್ರ (ವಿವಿಪಿಎಟಿ) ಬಳಸಲಾಗುವುದು. ಇದು ಮತಯಂತ್ರದ ಜತೆಗೇ ಇರುತ್ತದೆ. ಪ್ರತಿ ಕ್ಷೇತ್ರದಲ್ಲಿ ಒಂದು ಸಂಪೂರ್ಣ ಮಹಿಳಾ ಮತಗಟ್ಟೆ ಸ್ಥಾಪಿಸಲಾಗುವುದು. ಪ್ರತಿ ಮತಗಟ್ಟೆಯಲ್ಲಿಯೂ ಮತದಾರರಿಗೆ ನೆರವಾಗುವುದಕ್ಕಾಗಿ ಸಿಬ್ಬಂದಿ ಇರುತ್ತಾರೆ. ರಾಜ್ಯದ ಹೊರಗಿನಿಂದ ಮದ್ಯ ಮತ್ತು ಹಣದ ಅಕ್ರಮ ಸಾಗಾಟವನ್ನು ತಪ್ಪಿಸುವುದಕ್ಕಾಗಿ ಗಡಿ ಪ್ರದೇಶಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ.

ಚುನಾವಣೆಯು ಸುಗಮವಾಗಿ ಮತ್ತು ಶಾಂತಿಯುತವಾಗಿ ನಡೆಯಲು ರಾಜ್ಯ ಪೊಲೀಸ್‌ ಪಡೆಯ ಜತೆಗೆ ಕೇಂದ್ರ ಸಶಸ್ತ್ರ ಪಡೆಗಳ ನಡೆವನ್ನೂ ಪಡೆಯಲಾಗುವುದು ಎಂದು ಜೋತಿ ತಿಳಿಸಿದ್ದಾರೆ.

ಹಿಮಾಚಲ ಪ್ರದೇಶದ ಚುನಾವಣಾ ದಿನಾಂಕವನ್ನು ಇದೇ 12ರಂದು ಘೋಷಿಸಲಾಗಿತ್ತು. ಅದಾಗಿ ಸುಮಾರು ಎರಡು ವಾರಗಳ ಬಳಿಕ ಗುಜರಾತ್‌ ಚುನಾವಣಾ ದಿನಾಂಕಗಳು ಪ್ರಕಟವಾಗಿವೆ. ಗುಜರಾತ್‌ಗೆ ವಿವಿಧ ಯೋಜನೆಗಳನ್ನು ಘೋಷಿಸಲು ಅನುಕೂಲ ಕಲ್ಪಿಸುವುದಕ್ಕಾಗಿ ದಿನಾಂಕ ಪ್ರಕಟಿಸುವುದನ್ನು ವಿಳಂಬ ಮಾಡಲಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು. ಆದರೆ ಇದನ್ನು ಆಯೋಗ ತಳ್ಳಿ ಹಾಕಿತ್ತು.

ವೇಳಾಪಟ್ಟಿ: 

ಮೊದಲ ಹಂತದ ಚುನಾವಣೆಗೆ ಅಧಿಸೂಚನೆ: ನವೆಂಬರ್‌ 14

ಮತದಾನ: ಡಿಸೆಂಬರ್‌ 9

ಎರಡನೇ ಹಂತದ ಚುನಾವಣೆಗೆ ಅಧಿಸೂಚನೆ: ನವೆಂಬರ್‌ 20

ಮತದಾನ: ಡಿಸೆಂಬರ್‌ 14

ಮತ ಎಣಿಕೆ: ಡಿಸೆಂಬರ್‌ 18

ಅಧಿಸೂಚನೆ ದಿನದಿಂದಲೇ ನಾಮಪತ್ರ ಸಲ್ಲಿಕೆ ಆರಂಭ

ಮೊದಲ ಹಂತದಲ್ಲಿ 19 ಜಿಲ್ಲೆಗಳ 89 ಕ್ಷೇತ್ರಗಳಲ್ಲಿ ಮತದಾನ

ಎರಡನೇ ಹಂತದಲ್ಲಿ 14 ಜಿಲ್ಲೆಗಳ 93 ಕ್ಷೇತ್ರಗಲ್ಲಿ ಮತದಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT