ಅಸಹಕಾರ ಚಳವಳಿ ಪ್ರಾರಂಭಿಸಲು ಮನವಿ

ಭಾನುವಾರ, ಜೂನ್ 16, 2019
22 °C

ಅಸಹಕಾರ ಚಳವಳಿ ಪ್ರಾರಂಭಿಸಲು ಮನವಿ

Published:
Updated:
ಅಸಹಕಾರ ಚಳವಳಿ ಪ್ರಾರಂಭಿಸಲು ಮನವಿ

ಶಿರಸಿ: ದೇವಾಲಯಗಳಿಗೆ ವ್ಯವಸ್ಥಾಪನಾ ಸಮಿತಿ ರಚಿಸುವ ಸಂಬಂಧ ಹೊರಡಿಸಿರುವ ಆದೇಶ ವಿರೋಧಿಸಿ, ಉತ್ತರ ಕನ್ನಡ ಜಿಲ್ಲಾ ಹಿಂದೂ ಧಾರ್ಮಿಕ ದೇವಾಲಯಗಳ ಮಹಾಮಂಡಳದ ನೇತೃತ್ವದಲ್ಲಿ ಬುಧವಾರ ಇಲ್ಲಿ ಪ್ರತಿಭಟನಾ ಮಹಾಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ‘ಮುಸ್ಲಿಂ ವಕ್ಫ್ ಮಂಡಳಿ ಮಾದರಿಯಲ್ಲಿ ರಾಜ್ಯದಲ್ಲಿ ದೇವಾಲಯಗಳ ಮಹಾಮಂಡಳ ರಚನೆ ಮಾಡಿ, ಅದಕ್ಕೆ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು. ಈ ಮೂಲಕ ದೇವಾಲಯಗಳು ಸ್ವಾಯತ್ತ ವ್ಯವಸ್ಥೆಯಲ್ಲಿ ರಾಜಕೀಯೇತರವಾಗಿ ಮುಂದುವರಿಯಬೇಕು’ ಎಂದು ಆಗ್ರಹಿಸಿದರು.

‘ಅನೇಕ ವರ್ಷಗಳ ಹಿಂದೆಯೇ ರಾಜ್ಯ ಸರ್ಕಾರಕ್ಕೆ ಈ ಸಲಹೆ ನೀಡಲಾಗಿತ್ತು. ನಂತರದ ವರ್ಷಗಳಲ್ಲಿ, ದೇವಾಲಯಗಳ ಆಡಳಿತ ವ್ಯವಸ್ಥೆ ಅಧ್ಯಯನಕ್ಕೆ ಸಂಬಂಧಿಸಿ ನೇಮಕಗೊಂಡಿದ್ದ ನಿವೃತ್ತ ನ್ಯಾಯಮೂರ್ತಿ ರಾಮಾ ಜೋಯಿಸ್ ನೇತೃತ್ವದ ಸಮಿತಿ ಸಹ ಈ ಸಲಹೆಯನ್ನು ಪುರಸ್ಕರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಆದರೆ ರಾಜ್ಯ ಸರ್ಕಾರ ಈ ವರದಿಯನ್ನು ತಿರುಚಿ ಧಾರ್ಮಿಕ ಪರಿಷತ್ ಅಧ್ಯಕ್ಷ ಸ್ಥಾನವನ್ನು ಮುಜರಾಯಿ ಸಚಿವರು ಹಾಗೂ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಬಳಿ ಉಳಿಸಿಕೊಂಡಿದೆ’ ಎಂದು ದೂರಿದರು. ‘ವ್ಯವಸ್ಥಾಪನಾ ಸಮಿತಿ ರಚನೆ ಸಂಬಂಧ ಜಿಲ್ಲಾಡಳಿತ ಅರ್ಜಿ ಆಹ್ವಾನಿಸಿದರೆ ಅದಕ್ಕೆ ಯಾರೂ ಅರ್ಜಿ ಸಲ್ಲಿಸದೇ ಅಸಹಕಾರ ಚಳವಳಿ ಪ್ರಾರಂಭಿಸಬೇಕು’ ಎಂದು ಸ್ವಾಮೀಜಿಗಳು, ಧರ್ಮದರ್ಶಿಗಳಲ್ಲಿ ಅವರು ಮನವಿ ಮಾಡಿದರು.

ಮಹಾಸಭೆಯ ನಿರ್ಣಯಗಳು

* ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿ ಅಧಿನಿಯಮ 2001 ಹಾಗೂ 2011ರ ಕಾನೂನುಗಳ ಕುರಿತು ಸುಪ್ರೀಂ ಕೋರ್ಟ್‌ನ ಅಂತಿಮ ಆದೇಶ ಬರುವವರೆಗೆ ದೇವಸ್ಥಾನಗಳಿಗೆ ವ್ಯವಸ್ಥಾಪನಾ ಸಮಿತಿ ರಚನೆ ಮಾಡುವುದನ್ನು ಕೈಬಿಡಬೇಕು.

* ಹಿಂದೂ ಧಾರ್ಮಿಕ ಸಂಸ್ಥೆ ಹಾಗೂ ಧರ್ಮಾದಾಯ ದತ್ತಿಗಳ ನಿರ್ವಹಣೆಗೆ ಹೈಕೋರ್ಟ್ ಆದೇಶದನ್ವಯ ಹಿಂದೂ ಧಾರ್ಮಿಕ ಸಂಘಟನೆಗಳ ಅಭಿಪ್ರಾಯ ಕ್ರೋಡೀಕರಿಸಿ ಸಮರ್ಪಕವಾದ ಹೊಸ ಕಾನೂನನ್ನು ಅನುಷ್ಠಾನಕ್ಕೆ ತರಬೇಕು.

* ಹಿಂದೂ ದೇವಾಲಯ ಮತ್ತು ಧರ್ಮಾದಾಯಗಳ ವಾರ್ಷಿಕ ಲೆಕ್ಕಪತ್ರಗಳನ್ನು ಪರಿಶೋಧಿಸಲು ಮತ್ತು ಅವ್ಯವಹಾರಗಳ ಸಂದರ್ಭದಲ್ಲಿ ಸೂಕ್ತ ಪರ್ಯಾಯ ವ್ಯವಸ್ಥೆಯನ್ನು ಜಾರಿಗೆ ತರಲು ಸರಿಯಾದ ನಿಯಮಾವಳಿ ರೂಪಿಸಿಕೊಂಡು ರಾಜಕೀಯ ಹಸ್ತಕ್ಷೇಪವಿಲ್ಲದೇ ಮುಂದುವರಿಯಲು ಆಕ್ಷೇಪವಿಲ್ಲ.

* ಸೂಕ್ತ ನಿಯಮಗಳ ಅಡಿಯಲ್ಲಿ ಹಿಂದೂ ದೇವಾಲಯಗಳಿಂದ ಸಾಮೂಹಿಕ ಸಾಮಾನ್ಯ ನಿಧಿ(common pool fund)ಯನ್ನು ಸಂಗ್ರಹಿಸಿ, ಅದನ್ನು ಪ್ರತ್ಯೇಕ ಲೆಕ್ಕ ಶೀರ್ಷಿಕೆಯಡಿ ಸರ್ಕಾರಕ್ಕೆ ಜಮಾ ಮಾಡಬಹುದು. ಈ ನಿಧಿಯನ್ನು ಹಿಂದೂ ಧಾರ್ಮಿಕ, ದೇವಾಲಯಗಳ ಚಟುವಟಿಕೆಗಳಿಗೆ ವಿನಿಯೋಗಿಸಬೇಕು.

ದೇವಾಲಯಗಳ ವ್ಯವಸ್ಥಾಪನಾ ಸಮಿತಿ ರಚನೆ ಸಂಬಂಧ ಜಿಲ್ಲಾಡಳಿತ ಅರ್ಜಿ ಅಹ್ವಾನಿಸಿದರೆ ಅದಕ್ಕೆ ಯಾರೂ ಅರ್ಜಿ ಸಲ್ಲಿಸದೇ ಅಸಹಕಾರ ಚಳವಳಿ ಪ್ರಾರಂಭಿಸಬೇಕು

-ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ

ಸ್ವರ್ಣವಲ್ಲಿ ಮಠಾಧೀಶ 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry