ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಸಲಹೆ ತಿರಸ್ಕರಿಸಿದ ಭಾರತ

ಉತ್ತರ ಕೊರಿಯಾ ಜತೆ ಸಂಬಂಧ ಕಡಿದುಕೊಳ್ಳಿ: ಟಿಲ್ಲರ್‌ಸನ್‌
Last Updated 25 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಉತ್ತರ ಕೊರಿಯಾ ಜತೆಗಿನ ಎಲ್ಲ ವ್ಯಾಪಾರ ಮತ್ತು ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಳ್ಳುವಂತೆ ಅಮೆರಿಕ ನೀಡಿದ ಕರೆಯನ್ನು ಭಾರತ ತಿರಸ್ಕರಿಸಿದೆ. ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್ ಉನ್‌ ಅವರು ಈ ವರ್ಷ ಕ್ಷಿಪಣಿ ಮತ್ತು ಅಣ್ವಸ್ತ್ರಗಳ ಸರಣಿ ಪರೀಕ್ಷೆ ನಡೆಸುವುದರೊಂದಿಗೆ ಅಮೆರಿಕ ಜತೆ ಸಂಘರ್ಷ ಆರಂಭವಾಗಿತ್ತು. ಉತ್ತರ ಕೊರಿಯಾದ ಕ್ಷಿಪಣಿಗಳು ಅದರ ನೆರೆಯನ್ನು ದಾಟಿ ಬಹುದೂರ ಸಾಗುವ ಸಾಮರ್ಥ್ಯ ಹೊಂದಿರುವುದು ಜಗತ್ತಿನಾದ್ಯಂತ ಕಳವಳ ಸೃಷ್ಟಿಸಿದೆ.

ರಾಯಭಾರ ಕಚೇರಿಯನ್ನು ಮುಚ್ಚುವಂತೆ ಅಮೆರಿಕ ನೀಡಿರುವ ಸಲಹೆಯನ್ನು ನಿರಾಕರಿಸಿರುವ ಭಾರತ, ಈ ಕಚೇರಿ ಮೂಲಕ ಅಗತ್ಯವಿದ್ದರೆ, ಅಮೆರಿಕ ಮತ್ತು ಉತ್ತರ ಕೊರಿಯಾ ನಡುವೆ ಮಾತುಕತೆಗೆ ಯತ್ನಿಸುವುದಾಗಿ ಹೇಳಿದೆ.

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಮತ್ತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರೆಕ್ಸ್‌ ಟಿಲ್ಲರ್‌ಸನ್‌ ಅವರ ನಡುವಣ ಮಾತುಕತೆ ವೇಳೆ ಈ ವಿಚಾರ ಪ್ರಸ್ತಾಪವಾಗಿದೆ. ಉತ್ತರ ಕೊರಿಯಾ ಜತೆಗೆ ಭಾರತ ನಾಮಕಾವಸ್ತೆ ವ್ಯಾಪಾರ ಸಂಬಂಧವನ್ನಷ್ಟೇ ಹೊಂದಿದೆ. ಅಲ್ಲದೆ, ಅಲ್ಲಿ ಭಾರತದ ರಾಯಭಾರ ಕಚೇರಿ ಸಣ್ಣದಾಗಿದ್ದು ಕೆಲವೇ ಸಿಬ್ಬಂದಿ ಮಾತ್ರ ಇದ್ದಾರೆ. ಇದನ್ನು ಅಮೆರಿಕ ಮತ್ತು ಉತ್ತರ ಕೊರಿಯಾ ನಡುವಣ ಸಂವಹನಕ್ಕೆ ಬಳಸಿಕೊಳ್ಳಬಹುದು ಎಂದು ಮಾತುಕತೆ ವೇಳೆ ಸುಷ್ಮಾ ಹೇಳಿದ್ದಾರೆ.

ಸೀಮಿತ ಸಂಬಂಧ

ಉತ್ತರ ಕೊರಿಯಾದಲ್ಲಿರುವ ಭಾರತದ ರಾಯಭಾರ ಕಚೇರಿಯಲ್ಲಿ ರಾಯಭಾರಿ ಜಸ್ಮೀಂದರ್‌ ಕಸ್ತೂರಿಯಾ ನೇತೃತ್ವದಲ್ಲಿ ಐವರು ಸಿಬ್ಬಂದಿಯ ನಿಯೋಗ ಮಾತ್ರ ಇದೆ. ಆ ದೇಶಕ್ಕೆ ಭಾರತದ ರಫ್ತು 11 ಕೋಟಿ ಡಾಲರ್‌ (ಸುಮಾರು ₹730 ಕೋಟಿ) ಇದ್ದರೆ, ಅಲ್ಲಿಂದ ಆಮದು 9 ಕೋಟಿ ಡಾಲರ್‌ನಷ್ಟು (₹585 ಕೋಟಿ) ಮಾತ್ರ ಇದೆ.

‘ಉಗ್ರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ’

ಉಗ್ರರ ಸಂಘಟನೆಗಳನ್ನು ಬುಡ ಸಮೇತ ಕಿತ್ತೆಸೆಯಲು ತಕ್ಷಣ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಭಾರತ ಮತ್ತು ಅಮೆರಿಕ ಬುಧವಾರ ಪಾಕಿಸ್ತಾನಕ್ಕೆ ನೇರ ಎಚ್ಚರಿಕೆ ನೀಡಿವೆ.

ಉಗ್ರ ಸಂಘಟನೆಗಳ ವಿರುದ್ಧ ಪಾಕಿಸ್ತಾನ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳದ ಹೊರತು ಪ್ರಾದೇಶಿಕ ಭದ್ರತೆ ಮತ್ತು ಶಾಂತಿ ಸ್ಥಾಪನೆ ಕನಸಿನ ಮಾತು. ಅಷ್ಟೇ ಅಲ್ಲ, ಅಫ್ಗಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆ ಮರು ಸ್ಥಾಪಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಹೊಸ ರಾಜತಾಂತ್ರಿಕ ನೀತಿ ಕೂಡ ಯಶಸ್ವಿಯಾಗದು ಎಂಬುದನ್ನು ಅಮೆರಿಕಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಭಾರತ ಯಶಸ್ವಿಯಾಗಿದೆ.

ನೆರೆಯ ಪಾಕಿಸ್ತಾನದ ನೆಲದಿಂದ ನಡೆಯುತ್ತಿರುವ ಉಗ್ರರ ಚಟುವಟಿಕೆಗಳನ್ನು ಟಿಲ್ಲರ್‌ಸನ್‌ ಅವರ ಗಮನಕ್ಕೆ ತರಲಾಯಿತು. ಪಾಕಿಸ್ತಾನದದಲ್ಲಿ ಉಗ್ರ ಸಂಘಟನೆಗಳು ನಾಯಿಕೊಡಗಳಂತೆ ಹಬ್ಬಿದ್ದು, ಉಗ್ರರಿಗೆ ಆ ರಾಷ್ಟ್ರ ಸುರಕ್ಷಿತ ತಾಣವಾಗಿದೆ ಎಂಬುವುದನ್ನು ಟಿಲ್ಲರ್‌ಸನ್‌ ಒಪ್ಪಿಕೊಂಡರು.

‘ನಿಮ್ಮ ನೆಲದಿಂದ ಕಾರ್ಯಾಚರಣೆ ನಡೆಸುತ್ತಿರುವ ಉಗ್ರ ಸಂಘಟನೆಗಳನ್ನು ಹೊಸಕಿ ಹಾಕಲು ದೃಢ ನಿರ್ಧಾರ ಕೈಗೊಳ್ಳಿ. ಉಗ್ರ ಸಂಘಟನೆಗಳಿಗೆ ಆಶ್ರಯ ನೀಡುವುದನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು’ ಎಂದು ಟಿಲ್ಲರ್‌ಸನ್‌ ಮತ್ತು ಸುಷ್ಮಾ ಸ್ವರಾಜ್‌ ಅವರು ಮಾತುಕತೆಯ ನಂತರ ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT