ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟ ಕೈಬಿಡದ ಮೂರ್ತಿ?

ಕಾರ್ಪೊರೇಟ್‌ ಆಡಳಿತ ನಿಯಮ ಅಸಮರ್ಪಕ ಪಾಲನೆ
Last Updated 25 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಹೈದರಾಬಾದ್‌: ಇನ್ಫೊಸಿಸ್‌ ನಿರ್ದೇಶಕ ಮಂಡಳಿಯು ಕಾರ್ಪೊರೇಟ್‌ ಆಡಳಿತ ನಿಯಮಗಳನ್ನು ಸಮರ್ಪಕವಾಗಿ ಪಾಲಿಸದಿರುವುದನ್ನು ಪ್ರಶ್ನಿಸುವುದನ್ನು ಸಂಸ್ಥೆಯ ಸಹ ಸ್ಥಾಪಕ ಎನ್‌. ಆರ್‌. ನಾರಾಯಣಮೂರ್ತಿ ಅವರು ಮುಂದುವರೆಸಲಿದ್ದಾರೆ.

ಮೂರ್ತಿ ಅವರ ಆಪ್ತ ಮೂಲಗಳು ಇದನ್ನು ಖಚಿತಪಡಿಸಿವೆ. ‘ನಾನು ಮೂರ್ತಿ ಅವರ ಜತೆ ಮಾತನಾಡಿರುವೆ. ವಿದೇಶದಿಂದ ಮರಳಿದ ನಂತರ ನಂದನ್‌ ನಿಲೇಕಣಿ ಜತೆ ಈ ಬಗ್ಗೆ ನಾನು ಮಾತನಾಡುವೆ. ನಾನು ಸುಮ್ಮನಿರಲಾರೆಯೆಂದು ಮೂರ್ತಿ ನನಗೆ ತಿಳಿಸಿದ್ದಾರೆ’ ಎಂದು ಇನ್ಫೊಸಿಸ್‌ನ ಮಾಜಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪನಯಾ ಸ್ವಾಧೀನದಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ. ಮಾಜಿ ಸಿಎಫ್‌ಒ ರಾಜೀವ್‌ ಬನ್ಸಲ್‌ ಅವರಿಗೆ ಸೇವಾ ಒಪ್ಪಂದ ರದ್ದತಿ ಅನ್ವಯ ಹೆಚ್ಚುವರಿ ಹಣ ಪಾವತಿಸಿಲ್ಲ ಎಂದು ನಂದನ್‌ ನಿಲೇಕಣಿ ನೇತೃತ್ವದಲ್ಲಿನ ಹೊಸ ನಿರ್ದೇಶಕ ಮಂಡಳಿಯು ಹೇಳಿಕೊಂಡಿದೆ.

‘ತಪ್ಪು ಎಸಗಿರುವುದನ್ನು ಬಹಿರಂಗವಾಗಿ ಒಪ್ಪಿಕೊಳ್ಳುವುದನ್ನು ನಿರ್ದೇಶಕ ಮಂಡಳಿಯಿಂದ ನಿರೀಕ್ಷಿಸುವಂತಿಲ್ಲ’ ಎಂದು ಹೆಸರು ಬಹಿರಂಗಪಡಿಸದ ಸಂಸ್ಥೆಯ ಇನ್ನೊಬ್ಬ ಮಾಜಿ ಅಧಿಕಾರಿಯು ಹೇಳಿದ್ದಾರೆ.

‘ಒಂದು ವೇಳೆ ತನ್ನಿಂದ ತಪ್ಪಾಗಿದೆ ಎಂದು ಮಂಡಳಿಯು ಒಪ್ಪಿಕೊಂಡರೆ ಸಂಸ್ಥೆಯು ಮೊಕದ್ದಮೆ ಎದುರಿಸಬೇಕಾಗುತ್ತದೆ. ಹೀಗಾಗಿ ಸಂಸ್ಥೆಯ ಹಿತಾಸಕ್ತಿ ರಕ್ಷಿಸಲು ಯಾವುದೇ ತಪ್ಪು ಎಸಗಿಲ್ಲ ಎಂದು ಸಮರ್ಥಿಸಿಕೊಳ್ಳಲಾಗುತ್ತಿದೆ. ‘ಹಿಂದಿನ ನಿರ್ದೇಶಕ ಮಂಡಳಿಯು ಯಾವುದೇ ತಪ್ಪು ಎಸಗಿಲ್ಲ ಎಂದು ಪ್ರಮಾಣಪತ್ರ ನೀಡುವ ಮೂಲಕ ನಂದನ್ ನಿಲೇಕಣಿ ಅವರು ಸಂಸ್ಥೆಯನ್ನು ರಕ್ಷಿಸುವ ಸಮತೋಲನದ ಕಸರತ್ತು ನಡೆಸಿದ್ದಾರೆ’ ಎಂದು ಅವರು ಹೇಳಿದ್ದಾರೆ.

‘ರಾಜೀವ್‌ ಬನ್ಸಲ್ ಅವರಿಗೆ ಹೆಚ್ಚುವರಿ ವೇತನ ನೀಡಿದ್ದನ್ನು ಪ್ರಶ್ನಿಸಿದಾಗ, ಹಣ ಪಾವತಿ ಸ್ಥಗಿತಗೊಳಿಸಲಾಗಿದೆ ಎಂದು ಸಂಸ್ಥೆಯು ತಿಳಿಸಿತ್ತು. ಪನಯಾ ಒಪ್ಪಂದ ಕುರಿತು ಪ್ರಸ್ತಾಪಿಸಿದಾಗ, ಸಂಸ್ಥೆಯಲ್ಲಿನ ವಿಲೀನ ಮತ್ತು ಸ್ವಾಧೀನ ತಂಡದ ಸದಸ್ಯರಿಗೆ ರಾಜೀನಾಮೆ ಸಲ್ಲಿಸಲು ಸೂಚಿಸಲಾಗಿದೆ ಎಂದೂ ಹೇಳಿತ್ತು. ಲೆಕ್ಕಪತ್ರ ಸಮಿತಿಯ ಅಧ್ಯಕ್ಷೆ ರೂಪಾ ಕುಡ್ವ ಅವರನ್ನು ಬದಲಿಸಿ ಸ್ವತಂತ್ರ ನಿರ್ದೇಶಕ ಡಿ. ಸುಂದರಂ ಅವರನ್ನು ನೇಮಿಸಲಾಗಿತ್ತು.

‘ತಪ್ಪನ್ನು ಸರಿಪಡಿಸಲು ಸಂಸ್ಥೆಯ ನಿರ್ದೇಶಕ ಮಂಡಳಿಯು ಆಂತರಿಕವಾಗಿ ಕೆಲ ಕ್ರಮಗಳನ್ನು ಕೈಗೊಂಡಿತ್ತು ಎನ್ನುವುದಕ್ಕೆ ಇವೆಲ್ಲವೂ ನಿದರ್ಶನಗಳಾಗಿವೆ. ಆದರೆ, ತಾವು ತಪ್ಪು ಎಸಗಿರುವುದನ್ನು ಮಂಡಳಿ ಸದಸ್ಯರು ಬಹಿರಂಗವಾಗಿ ಒಪ್ಪಿಕೊಳ್ಳಲು ಮುಂದಾಗಿಲ್ಲ’ ಎಂದು ಅವರು ವಿಶ್ಲೇಷಿಸಿದ್ದಾರೆ.

‘ಆಗಸ್ಟ್‌ 29ರಂದು ಸಂಸ್ಥೆಯ ಹೂಡಿಕೆದಾರರನ್ನು ಉದ್ದೇಶಿಸಿ ಮಾತನಾಡುವಾಗ ಎತ್ತಿದ್ದ ಪ್ರಶ್ನೆಗಳಿಗೆ ನಾನು ಈಗಲೂ ಬದ್ಧನಾಗಿರುವೆ. ಸತ್ಯ ಯಾವತ್ತೂ ನಮ್ಮ ಕಣ್ಣಿಗೆ ಬೀಳದಿರುವುದು ವಿಷಾದಕರ’ ಎಂದೂ ನಾರಾಯಣ ಮೂರ್ತಿ ಅವರು ಅಭಿಪ್ರಾಯಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT