8 ಉಪನಗರಗಳಿಗೆ ಸಿಗಲಿದೆ ನವ ಸ್ಪರ್ಶ

ಶುಕ್ರವಾರ, ಮೇ 24, 2019
33 °C

8 ಉಪನಗರಗಳಿಗೆ ಸಿಗಲಿದೆ ನವ ಸ್ಪರ್ಶ

Published:
Updated:
8 ಉಪನಗರಗಳಿಗೆ ಸಿಗಲಿದೆ ನವ ಸ್ಪರ್ಶ

ಬೆಂಗಳೂರು: ಉಪನಗರ ವರ್ತುಲ ರಸ್ತೆ (ಎಸ್‌ಟಿಆರ್‌ಆರ್‌) ನಿರ್ಮಿಸುವ ದಶಕದ ಹಿಂದಿನ ಯೋಜನೆ ಮತ್ತೆ ಮುನ್ನೆಲೆಗೆ ಬಂದಿದೆ. ಇದರ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲು ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಬಿಎಂಆರ್‌ಡಿಎ) ಟೆಂಡರ್‌ ಆಹ್ವಾನಿಸಿದೆ.

ಉಪನಗರ ವರ್ತುಲ ರಸ್ತೆ ಯೋಜನೆ ಬಗ್ಗೆ ಬಿಎಂಆರ್‌ಡಿಎ 2006ರ ಅಕ್ಟೋಬರ್‌ನಲ್ಲೇ ರೂಪರೇಷೆ ತಯಾರಿಸಿತ್ತು. ಈಗಿರುವ ರಿಂಗ್‌ ರಸ್ತೆ, ನೈಸ್‌ ರಸ್ತೆ ಮತ್ತು ಪ್ರಸ್ತಾವಿತ ಪೆರಿಫೆರಲ್‌ ವರ್ತುಲ ರಸ್ತೆಗಳಾಚೆಗೆ ಇನ್ನೊಂದು ಸುತ್ತಿನ ಹೆದ್ದಾರಿಯನ್ನು ನಿರ್ಮಿಸುವ ಪ್ರಸ್ತಾವವನ್ನು ಪ್ರಾಧಿಕಾರ ಹೊಂದಿತ್ತು. ಎಸ್‌ಟಿಆರ್‌ಆರ್‌ಗಾಗಿ ಭೂಗಡಿ ನಿಗದಿಪಡಿಸಿ ಭೂಸ್ವಾಧೀನ ನಡೆಸುವ ಬಗ್ಗೆ 2007ರ ಸೆಪ್ಟೆಂಬರ್‌ 13ರಂದು ರಾಜ್ಯಪತ್ರದಲ್ಲಿ ಅಧಿಸೂಚನೆ ಪ್ರಕಟಿಸಲಾಗಿತ್ತು.

ಬೆಂಗಳೂರಿನ ಸಂಚಾರ ದಟ್ಟಣೆಗೆ ಪರಿಹಾರ ಒದಗಿಸಬಲ್ಲ ಹಾಗೂ ಜನವಸತಿ ಹೆಚ್ಚಳದಿಂದ ಉಂಟಾಗುವ ಸಮಸ್ಯೆಗಳನ್ನು ಕಡಿಮೆಗೊಳಿಸ

ಬಲ್ಲ ಈ ಯೋಜನೆ ಕಾರ್ಯಗತಗೊಳಿಸಲು ನಂತರದ ಸರ್ಕಾರಗಳು ಮಹತ್ವ ನೀಡಿರಲಿಲ್ಲ. ನನೆಗುದಿಗೆ ಬಿದ್ದ ಈ ಯೋಜನೆಗೆ ಮತ್ತೆ ಪುನರುಜ್ಜೀವನ ನೀಡುವ ಬಗ್ಗೆ ಬಿಎಂಆರ್‌ಡಿಎ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇತ್ತೀಚೆಗೆ ಚರ್ಚೆ ನಡೆದಿತ್ತು. ಈ ಬಗ್ಗೆ ಡಿಪಿಆರ್‌ ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದರು.

ಪ್ರಸ್ತಾವದಲ್ಲೇನಿತ್ತು: ಎಂಟು ಪಥಗಳ ಮುಖ್ಯ ರಸ್ತೆ ಹಾಗೂ ದ್ವಿಪಥದ ಸರ್ವಿಸ್‌ ರಸ್ತೆಗಳನ್ನೊಳಗೊಂಡ ಒಟ್ಟು 90 ಮೀಟರ್‌ ಅಗಲದ ಹೆದ್ದಾರಿ ಈ ಯೋಜನೆಯಡಿ ನಿರ್ಮಾಣವಾಗಲಿದೆ. 10ರಿಂದ 15 ಮೀಟರ್‌ ಅಗಲದ ವಿಭಜಕವನ್ನೂ ಇದು ಒಳಗೊಂಡಿದೆ.

ಈ ರಸ್ತೆಯು ನಗರದ ಹೊರವಲಯದ ಪ್ರಮುಖ ಉಪನಗರಗಳಾದ ದಾಬಸ್‌ಪೇಟೆ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ಆನೇಕಲ್‌, ಕನಕಪುರ, ರಾಮನಗರ, ಮಾಗಡಿ ಮೂಲಕ ಹಾದು ಹೋಗಲಿದೆ. ಈ ಏಳು ಉಪನಗರಗಳಲ್ಲಿ ಹಾಗೂ ನೆಲಮಂಗಲದಲ್ಲಿ ಹೊರವಲಯ ವರ್ತುಲ ರಸ್ತೆಯನ್ನು ಅಭಿವೃದ್ಧಿ ಪಡಿಸಿ ಉತ್ತಮ ರಸ್ತೆ ಜಾಲವನ್ನು ಒದಗಿಸಲಿದೆ. ಈ ರಸ್ತೆಗಳಲ್ಲಿ ಗಂಟೆಗೆ 180 ಕಿ.ಮೀ. ವೇಗದಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶ ಪ್ರಾಧಿಕಾರದ್ದು.

ಈ ಯೋಜನೆಗೆ ₹ 1,150 ಕೋಟಿ ವೆಚ್ಚ ಆಗಲಿದೆ ಹಾಗೂ ಭೂಸ್ವಾಧೀನಕ್ಕಾಗಿ 160 ಎಕರೆ ಬೇಕಾಗುತ್ತದೆ ಎಂದು 10 ವರ್ಷಗಳ ಹಿಂದೆ ಅಂದಾಜಿಸಲಾಗಿತ್ತು. ಆದರೆ, ಈಗ ಭೂಸ್ವಾಧೀನ ಮಾಡುವಾಗ ಮಾರುಕಟ್ಟೆ ಮೌಲ್ಯಕ್ಕಿಂತ ನಾಲ್ಕು ಪಟ್ಟು ಹೆಚ್ಚು ಪರಿಹಾರವನ್ನು ನೀಡಬೇಕಾಗುತ್ತದೆ. ಅದರ ಬದಲು ಸ್ವಾಧೀನಪಡಿಸಿಕೊಳ್ಳುವ ಖಾಸಗಿ ಜಮೀನಿಗೆ ಪ್ರತಿಯಾಗಿ ಶೇ 40ರಷ್ಟು ಅಭಿವೃದ್ಧಿಪಡಿಸಿದ ಜಮೀನು ನೀಡುವ ಪ್ರಸ್ತಾವವನ್ನೂ ಪ್ರಾಧಿಕಾರ ಹೊಂದಿದೆ.

‘ಎಸ್‌ಟಿಆರ್‌ಆರ್‌ಗೆ ಬಗ್ಗೆ ಇದೇ 12ರಂದು ಟೆಂಡರ್‌ ಆಹ್ವಾನಿಸಿದ್ದೇವೆ. ಡಿಪಿಆರ್‌ ಸಿದ್ಧವಾದ ಬಳಿಕವಷ್ಟೇ ಈ ಯೋಜನೆ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ’ ಎಂದು ಪ್ರಾಧಿಕಾರದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾವು ಈ ಯೋಜನೆಗೆ ಹೂಡಿಕೆ ಮಾಡುತ್ತಿಲ್ಲ. ಅದಲು ಅಭಿವೃದ್ಧಿ ಚಟುವಟಿಕೆಗೆ ಪೂರಕ ವಾತಾವರಣ ನಿರ್ಮಿಸಲಿದ್ದೇವೆ. ನಗರ ಯೋಜನೆಗಳಲ್ಲಿ ಇದಕ್ಕೆ ಪೂರಕ ಮಾರ್ಪಾಡುಗಳನ್ನು ಮಾಡಲಿದ್ದೇವೆ. ಎಸ್‌ಟಿಆರ್‌ಆರ್‌ ಹಾದುಹೋಗುವ ಅನೇಕ ಕಡೆ ಈಗಾಗಲೇ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳಿವೆ. ಈ ರಸ್ತೆ ಜಾಲವನ್ನು ಇನ್ನಷ್ಟು ಅಭಿವೃದ್ಧಿಪಡಿಸುವುದು ನಮ್ಮ ಉದ್ದೇಶ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಅಂಕಿ–ಅಂಶ

364 ಕಿ.ಮೀ -ಉಪನಗರ ವರ್ತುಲ ರಸ್ತೆ

8-ಉಪನಗರಗಳು ಅಭಿವೃದ್ಧಿ ಹೊಂದಲಿವೆ

6,303 ಎಕರೆ -ಯೋಜನೆ ಅಗತ್ಯವಿರುವ ಒಟ್ಟು ಜಮೀನು

4,153 ಎಕರೆ -ಈ ಯೋಜನೆಗೆ ಅಗತ್ಯವಿರುವ ಖಾಸಗಿ ಜಮೀನು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry