ಸೋಮವಾರ, ಸೆಪ್ಟೆಂಬರ್ 16, 2019
22 °C

ತ್ಯಾಜ್ಯ ವಿಲೇವಾರಿ ತಾಣವಾದ ಪಟ್ಟಂದೂರು ಅಗ್ರಹಾರ ಕೆರೆ

Published:
Updated:
ತ್ಯಾಜ್ಯ ವಿಲೇವಾರಿ ತಾಣವಾದ ಪಟ್ಟಂದೂರು ಅಗ್ರಹಾರ ಕೆರೆ

ಬೆಂಗಳೂರು: ಪಟ್ಟಂದೂರು ಅಗ್ರಹಾರ ಕೆರೆಗೆ ರಾತ್ರೋರಾತ್ರಿ ಕಟ್ಟಡ ತ್ಯಾಜ್ಯ ತಂದು ಸುರಿಯಲಾಗುತ್ತಿದ್ದು, ಈ ಬಗ್ಗೆ ವೈಟ್‌ಫೀಲ್ಡ್‌ ನಿವಾಸಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

‘ಮಂಗಳವಾರ ರಾತ್ರಿ ಜೆಸಿಬಿ ಸದ್ದು ಕೇಳಿ ಜಲಮೂಲದ ಬಳಿ ಹೋಗಿ ನೋಡಿದಾಗ ತ್ಯಾಜ್ಯ ಸುರಿಯುವುದು ಕಂಡುಬಂದಿತು. ರಾತ್ರಿ 11ರಿಂದ ಬೆಳಗ್ಗಿನ ಜಾವ 4ರವರೆಗೆ ಸುಮಾರು 50 ಟ್ರಕ್‌ನಷ್ಟು ಕಟ್ಟಡ ತ್ಯಾಜ್ಯವನ್ನು ಸುರಿದಿದ್ದಾರೆ’ ಎಂದು ಸ್ಥಳೀಯ ನಿವಾಸಿ ಕುಮಾರ್‌ ವಿವರಿಸಿದರು.‌

‘ಇದೆಲ್ಲವೂ ಯೋಜಿತ ಮತ್ತು ವ್ಯವಸ್ಥಿತವಾಗಿ ಮಾಡುತ್ತಿರುವ ಕೆಲಸ. ಇಲ್ಲವಾದರೆ ರಾತ್ರಿಯ ಹೊತ್ತಿನಲ್ಲೇ ಏಕೆ ಬಂದು ತ್ಯಾಜ್ಯ ಸುರಿಯುತ್ತಾರೆ. ಈ ಕೆಲಸದ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ತಿಳಿದಿಲ್ಲ. ಪಾಲಿಕೆ ಅಧಿಕಾರಿಗಳು ಶಾಮೀಲಾಗಿದ್ದರೂ ಯಾವುದೇ ಆಶ್ಚರ್ಯವಿಲ್ಲ’ ಎಂದರು.

‘ಹೀಗೆ ತ್ಯಾಜ್ಯ ತಂದು ಸುರಿದು, ಕೆರೆ ಒತ್ತುವರಿ ಮಾಡುವುದು ಹೊಸ ವಿಷಯವಲ್ಲ. ಈ ಬಗ್ಗೆ ಸಾಕಷ್ಟು ಬಾರಿ ದೂರು ನೀಡಿದ್ದೇವೆ. ಆದರೂ ರಾತ್ರಿ ತ್ಯಾಜ್ಯ ಸುರಿಯುವುದು ನಿಂತಿಲ್ಲ’ ಎಂದು ನಿವಾಸಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

2010ರಿಂದ ಕೆರೆಯ ಸರ್ವೇಯೇ ನಡೆದಿಲ್ಲ. ಈ ಬಗ್ಗೆ ಪಾಲಿಕೆ ಸದಸ್ಯ ಎಸ್‌. ಮುನಿಸ್ವಾಮಿ ಅವರನ್ನು ಕೇಳಿದಾಗ, ‘ಹೌದು, ಬಹಳ ವರ್ಷಗಳಿಂದ ಕೆರೆಯ ಸಮೀಕ್ಷೆ ನಡೆದಿಲ್ಲ. ಜಲಮೂಲದ ಸುತ್ತಲೂ ಬೇಲಿ ಹಾಕಿಸಿ, ಸಾರ್ವಜನಿಕರ ಉಪಯೋಗಕ್ಕೆ ಅವಕಾಶ ಕಲ್ಪಿಸಿಕೊಡಲು ಯೋಜಿಸಲಾಗಿತ್ತು. ಆದರೆ, ಕೆರೆಯ ಪಕ್ಕದಲ್ಲಿಯೇ ಸಚಿವರೊಬ್ಬರ ಜಾಗವಿದೆ. ಹಾಗಾಗಿ ಕೆರೆಗೆ ಏನೇ ಮಾಡಿದರೂ ತಡೆಯಿಲ್ಲದಂತಾಗಿದೆ’ ಎಂದು ಹೇಳಿದರು.

‘ಕೆರೆಗೆ ತ್ಯಾಜ್ಯ ತಂದು ಸುರಿಯುತ್ತಿರುವುದು ನನ್ನ ಗಮನಕ್ಕೂ ಬಂದಿದೆ. ಮುಂದೆ ಈ ರೀತಿ ಆಗದಂತೆ ಕಾವಲುಗಾರರನ್ನು ನೇಮಿಸುತ್ತೇನೆ’ ಎಂದು ಭರವಸೆ ನೀಡಿದರು.

Post Comments (+)