7
ಬುಕ್ಕಿಗೆ ಅನುವಾಗುವಂತೆ ಪಿಚ್‌ ಸಿದ್ಧಗೊಳಿಸಿದ್ದಾಗಿ ಹೇಳಿಕೆ

ಐಸಿಸಿ ಭ್ರಷ್ಟಾಚಾರ ತಡೆ ಘಟಕದಿಂದ ತನಿಖೆ

Published:
Updated:
ಐಸಿಸಿ ಭ್ರಷ್ಟಾಚಾರ ತಡೆ ಘಟಕದಿಂದ ತನಿಖೆ

ಪುಣೆ : ಬುಕ್ಕಿಗೆ ಅನುಕೂಲವಾಗು ವಂತೆ ಪಿಚ್‌ ಸಿದ್ಧಪಡಿಸಿದ್ದಾಗಿ ಹೇಳಿ ಕೊಂಡಿರುವ ‍ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದ ಮುಖ್ಯ ಕ್ಯುರೇಟರ್‌ ‍ಪಾಂಡುರಂಗ ಸಲಗಾಂವ್ಕರ್‌ ಅವರನ್ನು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಬುಧವಾರ ಅಮಾನತು ಮಾಡಿದೆ.

ಪ್ರಕರಣದ ಸಮಗ್ರ ತನಿಖೆ ನಡೆಸಲು ಸಮಿತಿ ನೇಮಿಸಲು ನಿರ್ಧರಿಸಿರುವ ಬಿಸಿಸಿಐ ಇದರ ಅಂತಿಮ ವರದಿ ಬರುವವರೆಗೂ ಕ್ರೀಡಾಂಗಣ ಪ್ರವೇಶಿಸದಂತೆ ನಿಷೇಧವನ್ನೂ ಹೇರಿದೆ.

ಇಂಡಿಯಾ ಟುಡೆ ವಾಹಿನಿಯ ವರದಿಗಾರ ಮಂಗಳವಾರ ಸಂಜೆ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಪಾಂಡುರಂಗ, ಇಬ್ಬರು ಬೌಲರ್‌ಗಳಿಗೆ  ಅನುಕೂಲವಾಗುವ ರೀತಿಯಲ್ಲಿ ಪಿಚ್‌ ಸಿದ್ಧಪಡಿಸಿರುವುದಾಗಿ ಹೇಳಿದ್ದರು. ಆದರೆ ಬೌಲರ್‌ಗಳ ಹೆಸರುಗಳನ್ನು ಬಹಿರಂಗಪಡಿಸಿರಲಿಲ್ಲ. ಬುಕ್ಕಿ ಎಂದು ಹೇಳಿಕೊಂಡು ಬಂದಿದ್ದ ವರದಿಗಾರನನ್ನು ಅವರು ಪಂದ್ಯ ನಡೆಯುವ ಮುಖ್ಯ ಪಿಚ್‌ನ ಬಳಿ ಕರೆದುಕೊಂಡು ಹೋಗಿದ್ದು ಕೂಡ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ನ (ಐಸಿಸಿ) ನಿಯಮದ ಅನು ಸಾರ ಪಂದ್ಯ ನಡೆಯುವ ಪಿಚ್‌ನ ಕುರಿತ ಮಾಹಿತಿಗಳನ್ನು ಬಹಿರಂಗ ಮಾಡುವುದು ಅಪರಾಧ.

‘ಬುಕ್ಕಿಗೆ ಅನುಕೂಲವಾಗುವಂತೆ ಪಿಚ್‌ ಸಜ್ಜುಗೊಳಿಸಿದ್ದಾಗಿ ಸಲಗಾಂವ್ಕರ್‌ ಹೇಳಿರುವುದು ಟಿ.ವಿ. ದೃಶ್ಯಾವಳಿಯಲ್ಲಿ ಸ್ಪಷ್ಟವಾಗಿದೆ. ಹೀಗಾಗಿ ಅವರನ್ನು ಅಮಾನತು ಮಾಡಲಾಗಿದೆ. ಈ ಪ್ರಕರಣದ ತನಿಖೆ ನಡೆಸಲು ಸಮಿತಿ ನೇಮಿಸಲಿದ್ದು ಅದರ ವರದಿ ಕೈಸೇರುವವರೆಗೂ ಅವರು ಕ್ರೀಡಾಂಗಣ ಪ್ರವೇಶಿಸುವಂತಿಲ್ಲ’ ಎಂದು ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ.ಖನ್ನಾ ತಿಳಿಸಿದ್ದಾರೆ.

‘‍ಪ್ರಕರಣದ ಸಂಬಂಧ ಮಹಾ ರಾಷ್ಟ್ರ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ ಅಭಯ್‌ ಆಪ್ಟೆ ಅವರೊಂದಿಗೆ ಮಾತುಕತೆ ನಡೆಸಿದ್ದು ಸಮಗ್ರ ವರದಿ ನೀಡುವಂತೆ ಸೂಚಿಸಿದ್ದೇನೆ. ಜೊತೆಗೆ ಬಿಸಿಸಿಐನ ಭ್ರಷ್ಟಾಚಾರ ತಡೆ ಘಟಕದ (ಎಸಿಎಸ್‌ಯು) ಮುಖ್ಯಸ್ಥ ನೀರಜ್‌ ಕುಮಾರ್‌ ಅವರಿಂದಲೂ ವರದಿ ಪಡೆ ಯುತ್ತೇವೆ’ ಎಂದು ಅವರು ಹೇಳಿದ್ದಾರೆ.

‘‍ಐಸಿಸಿ ಭ್ರಷ್ಟಾಚಾರ ನಿಗ್ರಹ ದಳದ ಮ್ಯಾನೇಜರ್‌ ಭಾರತದಲ್ಲಿದ್ದಾರೆ. ಅವರು ಘಟನೆಯ ಸಂಬಂಧ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಿ ವರದಿ ನೀಡಲಿದ್ದಾರೆ. ಅವರ ಜೊತೆ ನಾವು ನಿರಂತರ ಸಂಪರ್ಕದಲ್ಲಿದ್ದು ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿದ್ದೇವೆ. ಪ್ರಕರಣದ ಸಂಪೂರ್ಣ ವರದಿ ಕೈ ಸೇರುವವರೆಗೂ ಯಾವ ಪ್ರತಿಕ್ರಿಯೆಯನ್ನೂ ನೀಡುವುದಿಲ್ಲ’ ಎಂದು ಐಸಿಸಿಯ ಅಧಿಕಾರಿಯೊಬ್ಬರು ನುಡಿದಿದ್ದಾರೆ.

‘ಎಂಸಿಎಯ ಹಿಂದಿನ ಅಧ್ಯಕ್ಷ ಅಜಯ್‌ ಶಿರ್ಕೆ ಮತ್ತು ಹಾಲಿ ಅಧ್ಯಕ್ಷ ಅಭಯ್‌ ಆಪ್ಟೆ, ಸಲಗಾಂವ್ಕರ್‌ ಅವರನ್ನು ನಿವೃತ್ತಿಯ ನಂತರವೂ ಕ್ಯುರೇಟರ್‌ ಹುದ್ದೆಯಲ್ಲಿ ಮುಂದುವರಿಸಿದ್ದರು. ಮಾಸಿಕ ₹65 ಸಾವಿರ ವೇತನ ಪಡೆಯುವ ಅವರಿಗೆ ಬಿಸಿಸಿಐನಿಂದ ಪಿಂಚಣಿಯೂ ಸಿಗುತ್ತಿದೆ. 68 ವರ್ಷದ ಸಲಗಾಂವ್ಕರ್‌ ಹಣದ ಆಸೆಗೆ ಅಡ್ಡದಾರಿ ಹಿಡಿಯಬಾರದಿತ್ತು’ ಎಂದು ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

ಸಮಗ್ರ ತನಿಖೆಗೆ ಆದೇಶ: ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಲು ತೀರ್ಮಾ ನಿಸಿರುವ ಮಹಾ ರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಇದಕ್ಕಾಗಿ ವಿಶೇಷ ಸಮಿತಿ ರಚಿಸಲಿದೆ.

‘ಸಲಗಾಂವ್ಕರ್‌, ಐಸಿಸಿ ಮತ್ತು ಬಿಸಿಸಿಐನ ನಿಯಮಾವಳಿಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಇದು ಅಕ್ಷಮ್ಯ ಅಪರಾಧ. ಈ ಸಂಬಂಧ ಚರ್ಚಿಸಲು ತುರ್ತು ಸಭೆ ಕರೆದಿದ್ದೇವೆ. ಸಭೆಯಲ್ಲಿ ತನಿಖಾ ಸಮಿತಿ ನೇಮಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಿದ್ದೇವೆ. ಜೊತೆಗೆ ಸಲಗಾಂವ್ಕರ್‌ ಅವರ ಪ್ರಾಥಮಿಕ ಸದಸ್ಯತ್ವವನ್ನು ರದ್ದು ಮಾಡಿದ್ದೇವೆ’ ಎಂದು ಎಂಸಿಎ ಅಧ್ಯಕ್ಷ ಆಪ್ಟೆ ಹೇಳಿದ್ದಾರೆ.

ವಿವಾದ ಮೊದಲೇನಲ್ಲ

ಸಲಗಾಂವ್ಕರ್‌, ಪಿಚ್‌ ವಿವಾದಕ್ಕೆ ಸಿಲುಕಿದ್ದು ಇದು ಮೊದಲಲ್ಲ. ಈ ವರ್ಷದ ಆರಂಭದಲ್ಲಿ ನಡೆದಿದ್ದ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೊದಲ ಟೆಸ್ಟ್‌ ಪಂದ್ಯಕ್ಕೆ ಅವರು ಸಿದ್ಧಪಡಿಸಿದ್ದ ಪಿಚ್‌ನ ಗುಣಮಟ್ಟ ಕಳಪೆಯಾಗಿತ್ತು ಎಂದು  ಐಸಿಸಿನ ಪಂದ್ಯದ ರೆಫರಿ ವರದಿ ನೀಡಿದ್ದರು.

ಮೂರೇ ದಿನದಲ್ಲಿ ಮುಗಿದಿದ್ದ ಆ ಪಂದ್ಯದಲ್ಲಿ ಆಸ್ಟ್ರೇಲಿಯಾ 333ರನ್‌ ಗಳಿಂದ ಗೆದ್ದಿತ್ತು.

ಸುಸೂತ್ರವಾಗಿ ನಡೆದ ಪಂದ್ಯ

ಪಾಂಡುರಂಗ, ಬುಕ್ಕಿಗೆ ಅನುಕೂಲ ವಾಗುವ ಹಾಗೆ ಪಿಚ್‌ ಸಿದ್ಧಪಡಿಸಿದ್ದಾಗಿ ಒಪ್ಪಿಕೊಂಡ ಸುದ್ದಿ ವಾಹಿನಿಗಳಲ್ಲಿ ಬಿತ್ತರವಾದ ಬೆನ್ನಲ್ಲೇ ಈ ಕ್ರೀಡಾಂಗಣದಲ್ಲಿ ನಿಗದಿಯಾಗಿದ್ದ ಭಾರತ ಮತ್ತು ನ್ಯೂಜಿಲೆಂಡ್‌ ನಡುವಣ ಎರಡನೇ ಏಕದಿನ ಪಂದ್ಯ ನಡೆಯುವುದು ಅನುಮಾನ ಎಂಬ ಮಾತುಗಳು ಕೇಳಿಬಂದಿದ್ದವು.

ಬುಧವಾರ ಬೆಳಿಗ್ಗೆ ಪಿಚ್‌ ಪರಿಶೀಲಿಸಿದ್ದ ಐಸಿಸಿ ವೀಕ್ಷಕರೊ ಬ್ಬರು  ಪಂದ್ಯ ನಡೆಸಲು ಯಾವುದೇ ಅಡ್ಡಿ ಇಲ್ಲ ಎಂದು ವರದಿ ನೀಡಿದ್ದರು. ಜೊತೆಗೆ ಪಂದ್ಯದ ರೆಫರಿ ಕ್ರಿಸ್‌ ಬ್ರಾಡ್‌ ಅವರಿಂದಲೂ ಹಸಿರು ನಿಶಾನೆ ಸಿಕ್ಕಿದ್ದರಿಂದ ನಿಗದಿಯಂತೆ ಆಟ ನಡೆಯಿತು.

ಮಧ್ಯಮವೇಗಿ ಬೌಲರ್

ಪಾಂಡುರಂಗ ಅವರು ಮಹಾರಾಷ್ಟ್ರ ತಂಡದಲ್ಲಿ ಮಧ್ಯಮವೇಗಿಯಾಗಿದ್ದರು. 63 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು 26.70ರ ಸರಾಸರಿಯಲ್ಲಿ 214 ವಿಕೆಟ್‌ ಉರುಳಿಸಿದ್ದಾರೆ.

1971–72ರಲ್ಲಿ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ್ದ ಅವರು ನಾಲ್ಕು ಪಂದ್ಯಗಳಿಂದ 15 ವಿಕೆಟ್‌ ಕೆಡವಿದ್ದರು.

1974ರಲ್ಲಿ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಭಾರತ ತಂಡದಲ್ಲಿ ಆಡಿದ್ದ ಸಲಗಾಂವ್ಕರ್‌, ಕೊಲಂಬೊದಲ್ಲಿ ನಡೆದಿದ್ದ ಎರಡನೇ ‘ಟೆಸ್ಟ್‌’ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 42ಕ್ಕೆ5 ಮತ್ತು 79ಕ್ಕೆ2 ವಿಕೆಟ್‌ ಪಡೆದ ಸಾಧನೆ ಮಾಡಿದ್ದರು.

ಕ್ರಿಕೆಟ್‌ ಬದುಕಿಗೆ ನಿವೃತ್ತಿ ಹೇಳಿದ ನಂತರ ಪುಣೆಯಲ್ಲಿ ಕ್ರಿಕೆಟ್‌ ತರಬೇತಿ ಅಕಾಡೆಮಿ ಆರಂಭಿಸಿದ್ದರು. ಮಹಾರಾಷ್ಟ್ರ ರಣಜಿ ತಂಡದ ಆಯ್ಕೆ ಸಮಿತಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು.

ಮೂರು ಮಂದಿಯೇ ಎಲ್ಲವನ್ನೂ ನೋಡಿಕೊಳ್ಳುವುದು ಅಸಾಧ್ಯ

‘ಬಿಸಿಸಿಐ ಭ್ರಷ್ಟಾಚಾರ ತಡೆ ಘಟಕದಲ್ಲಿ ಮೂರು ಮಂದಿ ಅಧಿಕಾರಿಗಳಿದ್ದಾರೆ. ಇವರು ಪಂದ್ಯ ನಡೆಯುವ ಎಲ್ಲಾ ಸ್ಥಳಗಳಿಗೂ ಹೋಗಲು ಆಗುವುದಿಲ್ಲ’ ಎಂದು ಬಿಸಿಸಿಐ ಆಡಳಿತಾಧಿಕಾರಿ ಸಮಿತಿಯ (ಸಿಒಎ) ಮುಖ್ಯಸ್ಥ ವಿನೋದ್‌ ರಾಯ್‌ ಹೇಳಿದ್ದಾರೆ.

ಸಲಗಾಂವ್ಕರ್‌ ಅವರು ಬುಕ್ಕಿ ಎಂದು ಹೇಳಿಕೊಂಡು ಬಂದಿದ್ದ ವರದಿಗಾರನ ಜೊತೆ ಪಂದ್ಯ ನಡೆಯುವ ಮುಖ್ಯ ಪಿಚ್‌ ಮೇಲೆ ನಿಂತು ಸಂಭಾಷಣೆ ನಡೆಸುತ್ತಿದ್ದ ದೃಶ್ಯ ಇಂಡಿಯಾ ಟುಡೆ ವಾಹಿನಿಯಲ್ಲಿ ಬಿತ್ತರವಾಗಿತ್ತು.

ಬಿಸಿಸಿಐ ನಿಯಮದ ಪ್ರಕಾರ ಕೆಲ ಪ್ರಮುಖ ವ್ಯಕ್ತಿಗಳನ್ನು ಹೊರತುಪಡಿಸಿ ಬೇರೆ ಯಾರೂ ಪಿಚ್‌ನ ಹತ್ತಿರ ಸುಳಿಯುವಂತಿಲ್ಲ. ಹೀಗಿದ್ದರೂ ವರದಿಗಾರ ಅನುಮತಿ ಇಲ್ಲದೆ ಪಿಚ್‌ ಬಳಿ ಹೋಗಿದ್ದಾನೆ. ಈ ಸಂಬಂಧ ಭ್ರಷ್ಟಾಚಾರ ತಡೆ ಘಟಕದ ಮುಖ್ಯಸ್ಥ ನೀರಜ್‌ ಅವರಿಂದ ವಿವರಣೆ ಕೇಳುವುದಾಗಿ ಹಂಗಾಮಿ ಕಾರ್ಯದರ್ಶಿ ಅಮಿತಾಭ್‌ ಚೌಧರಿ ಹೇಳಿದ್ದರು.

* ಬಿಸಿಸಿಐ ಭ್ರಷ್ಟಾಚಾರ ತಡೆ ಘಟಕದಲ್ಲಿ ಮೂರು ಮಂದಿ ಅಧಿಕಾರಿಗಳಿದ್ದಾರೆ. ಅವರು ಎಲ್ಲಾ ಭಾಗಗಳಲ್ಲೂ ಇರಲು ಆಗುವುದಿಲ್ಲ

–ವಿನೋದ್‌ ರಾಯ್‌, ಸಿಒಎ ಮುಖ್ಯಸ್ಥ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry