ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭುವನೇಶ್ವರ್ ಆಟಕ್ಕೆ ಒಲಿದ ಜಯ

ಸರಣಿಯಲ್ಲಿ 1–1 ರ ಸಮಬಲ ಸಾಧಿಸಿದ ವಿರಾಟ್ ಕೊಹ್ಲಿ ಬಳಗ
Last Updated 25 ಅಕ್ಟೋಬರ್ 2017, 19:39 IST
ಅಕ್ಷರ ಗಾತ್ರ

ಪುಣೆ: ಭುವನೇಶ್ವರ್‌ ಕುಮಾರ್ (45ಕ್ಕೆ3) ವೇಗದ ಅಸ್ತ್ರಕ್ಕೆ ಬುಧವಾರ ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್‌ ಬ್ಯಾಟ್ಸ್‌ಮನ್‌ಗಳು ಬೆಚ್ಚಿದರು.

ಭುವನೇಶ್ವರ್‌, ಅಮೋಘ ಬೌಲಿಂಗ್‌ ಮತ್ತು ಶಿಖರ್‌ ಧವನ್‌ (68; 84ಎ, 5ಬೌಂ, 2ಸಿ) ಅವರ ಆಕರ್ಷಕ ಬ್ಯಾಟಿಂಗ್‌ ಬಲದಿಂದ ಭಾರತ ತಂಡ ಎರಡನೇ ಏಕದಿನ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಪ್ರವಾಸಿ ಬಳಗದ ಸವಾಲು ಮೀರಿ ನಿಂತಿತು.  ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1–1ರ ಸಮಬಲ ಸಾಧಿಸಿತು.

ಪ್ರಥಮ ಪಂದ್ಯದಲ್ಲಿ ಗೆದ್ದು ಬೀಗಿದ್ದ ಕೇನ್‌ ವಿಲಿಯಮ್ಸನ್‌ ಪಡೆ ಮೊದಲು ಬ್ಯಾಟ್‌ ಮಾಡಿ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 230ರನ್‌ ಪೇರಿಸಿತು. ಸವಾಲಿನ ಗುರಿಯನ್ನು ಆತಿಥೇಯ ತಂಡ 46 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ಭಾರತ ತಂಡ ನ್ಯೂಜಿಲೆಂಢ್‌ ವಿರುದ್ಧ ಆಡಿದ ನೂರನೇ ಪಂದ್ಯವಾಗಿತ್ತು ಇದು.

ಆರಂಭಿಕ ಸಂಕಷ್ಟ: ಗುರಿ ಬೆನ್ನಟ್ಟಿದ ವಿರಾಟ್‌ ಕೊಹ್ಲಿ ಬಳಗಕ್ಕೆ ಆರಂಭಿಕ ಸಂಕಷ್ಟ ಎದುರಾಯಿತು. ರೋಹಿತ್‌ ಶರ್ಮಾ 7ರನ್‌ ಗಳಿಸಿ ಪೆವಿಲಿಯನ್‌ ಸೇರಿಕೊಂಡರು. ಮೊದಲ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದ ಕೊಹ್ಲಿಗೆ (29; 29ಎ, 3ಬೌಂ, 1ಸಿ) ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ ರಟ್ಟೆ ಅರಳಿಸಲು ಅವಕಾಶ ನೀಡಲಿಲ್ಲ.

ಆದರೆ ಧವನ್‌ ಮತ್ತು ದಿನೇಶ್‌ ಕಾರ್ತಿಕ್‌ (ಔಟಾಗದೆ 64; 92ಎ, 4ಬೌಂ) ಸುಂದರ ಇನಿಂಗ್ಸ್‌ ಕಟ್ಟಿದರು. ಇವರು ಮೂರನೇ ವಿಕೆಟ್‌ ಪಾಲುದಾರಿಕೆಯಲ್ಲಿ 66ರನ್‌ ಸೇರಿಸಿ ಆತಿಥೇಯರ ಗೆಲುವಿಗೆ ರಹದಾರಿ ಮಾಡಿದರು.

ಧವನ್‌ ಔಟಾದ ಬಳಿಕ ಕಾರ್ತಿಕ್‌ ಮತ್ತು ಹಾರ್ದಿಕ್‌ ಪಾಂಡ್ಯ (30; 31ಎ, 2ಬೌಂ, 1ಸಿ) ಆಟ ರಂಗೇರಿತು. ಈ ಜೋಡಿ ನಾಲ್ಕನೇ ವಿಕೆಟ್‌ಗೆ 59 ರನ್‌ ಕಲೆಹಾಕಿ ಪ್ರವಾಸಿ ಪಡೆಯ ಜಯದ ಆಸೆಗೆ ತಣ್ಣೀರು ಸುರಿಯಿತು. 41ನೇ ಓವರ್‌ನಲ್ಲಿ ಪಾಂಡ್ಯ, ಮಿಷೆಲ್‌ ಸ್ಯಾಂಟನರ್‌ಗೆ ವಿಕೆಟ್‌ ನೀಡಿದರು.

ನಂತರ ಮಹೇಂದ್ರ ಸಿಂಗ್‌ ದೋನಿ (ಔಟಾಗದೆ 18; 21ಎ, 3ಬೌಂ) ಮತ್ತು ಕಾರ್ತಿಕ್ ಜಯದ ದಡ ಮುಟ್ಟಿಸಿದರು.

ಭುವಿ ಮಿಂಚು: ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಕಿವೀಸ್‌ ನಾಡಿನ ತಂಡಕ್ಕೆ ಭುವನೇಶ್ವರ್‌ ಕುಮಾರ್‌ ಸಿಂಹ ಸ್ಪಪ್ನವಾದರು. ಇನ್‌ಸ್ವಿಂಗ್‌ ಮತ್ತು ಯಾರ್ಕರ್‌ ಎಸೆತಗಳ ಮೂಲಕ ಎದುರಾಳಿಗಳ ಬ್ಯಾಟಿಂಗ್‌ ಶಕ್ತಿಗೆ ಪೆಟ್ಟು ನೀಡಿದ ಅವರು ಕೊಹ್ಲಿ ಪಡೆಗೆ ಮೇಲುಗೈ ತಂದುಕೊಟ್ಟರು. ಅವರಿಗೆ ಜಸ್‌ಪ್ರೀತ್ ಬೂಮ್ರಾ ಮತ್ತು ಸ್ಪಿನ್ನರ್ ಯಜುವೇಂದ್ರ ಚಾಹಲ್ ಉತ್ತಮ ಬೆಂಬಲ ನೀಡಿದರು. ಇವರು ತಲಾ ಎರಡು ವಿಕೆಟ್‌ ಗಳಿಸಿದರು. ಹಾರ್ದಿಕ್ ಪಾಂಡ್ಯ ಒಂದು ವಿಕೆಟ್ ಉರುಳಿಸಿದರು.

ಹೆನ್ರಿ ನಿಕೊಲ್ಸ್‌  (42; 62ಎ, 3ಬೌಂ) ಮತ್ತು ಕಾಲಿನ್‌ ಡಿ ಗ್ರ್ಯಾಂಡ್‌ ಹೋಮ್‌ (41; 40ಎ, 5ಬೌಂ, 1ಸಿ) ಆತಿಥೇಯರ ದಾಳಿಯನ್ನು ದಿಟ್ಟತನದಿಂದ ಎದುರಿಸಿದರು. ಹೀಗಾಗಿ ಪ್ರವಾಸಿ ಬಳಗ ಆರಂಭಿಕ ಆಘಾತದಿಂದ ಚೇತರಿಸಿಕೊಂಡು ಉತ್ತಮ ಮೊತ್ತ ದಾಖಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT