ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರೀಕೃತ ವಿಡಿಯೊ ಕಾನ್ಫರೆನ್ಸ್‌ ವ್ಯವಸ್ಥೆಗೆ ನಿರ್ಧಾರ

ಬಿಬಿಎಂಪಿ ನಿಯಂತ್ರಣ ಕೊಠಡಿಯಲ್ಲಿ ಹಾಜರಿರದ ಅಧಿಕಾರಿಗಳಿಗೆ ಚುರುಕು
Last Updated 25 ಅಕ್ಟೋಬರ್ 2017, 19:56 IST
ಅಕ್ಷರ ಗಾತ್ರ

ಬೆಂಗಳೂರು: ನಿಯಂತ್ರಣ ಕೊಠಡಿಗಳಲ್ಲಿ ಹಿರಿಯ ಅಧಿಕಾರಿಗಳು ಹಾಜರಿದ್ದು ಕೆಲಸ ಮಾಡುತ್ತಿದ್ದಾರೆಯೇ ಅಥವಾ ಇಲ್ಲವೇ ಎನ್ನುವುದರ ಮೇಲೆ ನಿಗಾ ಇಡಲು ಕೇಂದ್ರೀಕೃತ ವಿಡಿಯೊ ಕಾನ್ಫರೆನ್ಸ್‌ ವ್ಯವಸ್ಥೆಯನ್ನು ಜಾರಿಗೊಳಿಸಲು ಬಿಬಿಎಂಪಿ ನಿರ್ಧರಿಸಿದೆ.

ಬಿಬಿಎಂಪಿ ಎಂಟು ವಲಯಗಳ ನಿಯಂತ್ರಣ ಕೊಠಡಿಗಳ ಜತೆಗೆ ಕೇಂದ್ರ ಕಚೇರಿಯ ನಿಯಂತ್ರಣ ಕೊಠಡಿಯಿಂದಲೇ ಸಿ.ಸಿ.ಟಿ.ವಿ ಕ್ಯಾಮೆರಾಗಳ ಮೂಲಕ ಸಂಪರ್ಕ ಸಾಧಿಸಿ, ಕೇಂದ್ರೀಕೃತ ವಿಡಿಯೊ ಕಾನ್ಫರೆನ್ಸ್‌ ವ್ಯವಸ್ಥೆ ನಿಯಂತ್ರಿಸಲಾಗುತ್ತದೆ. ಅತಿ ಶೀಘ್ರದಲ್ಲಿ ಟೆಂಡರ್‌ ಕರೆದು ಈ ವ್ಯವಸ್ಥೆ ಜಾರಿಗೊಳಿಸುತ್ತೇವೆ ಎಂದು‌ ಮೇಯರ್‌ ಆರ್.ಸಂಪತ್‌ ರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೊಮ್ಮನಹಳ್ಳಿ ವಲಯ ನಿಯಂತ್ರಣ ಕೊಠಡಿಗೆ ಮಂಗಳವಾರ ಮಧ್ಯರಾತ್ರಿ ದಿಢೀರ್‌ ಭೇಟಿ ನೀಡಿದಾಗ ಒಬ್ಬ ಹಿರಿಯ ಅಧಿಕಾರಿಯೂ ಇರಲಿಲ್ಲ. ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ರಾಮಪ್ರಸಾದ್‌, ಸಹಾಯಕ ಎಂಜಿನಿಯರ್‌ ಕುಮಾರ್‌, ಆರೋಗ್ಯಾಧಿಕಾರಿ ಮಹೇಶ್‌ ಗೈರಾಗಿದ್ದರು. ಒಂದು ತಾಸು ಕಾದರೂ ಪತ್ತೆ ಇಲ್ಲ. ಆದರೆ, ಹಾಜರಾತಿ ಪುಸ್ತಕದಲ್ಲಿ ರಾಮಪ್ರಸಾದ್‌ ಅವರ ಸಹಿ ಇತ್ತು. ಮೂವರಿಗೂ ಷೋಕಾಸ್‌ ನೋಟಿಸ್‌ ಜಾರಿಗೊಳಿಸಲು ವಲಯ ಜಂಟಿ ಆಯುಕ್ತರಿಗೆ ಸೂಚಿಸಿದ್ದೇನೆ’ ಎಂದರು.

‘ನಿಯಂತ್ರಣ ಕೊಠಡಿಗಳ ಕಾರ್ಯವೈಖರಿ ಪರಿಶೀಲಿಸಲು ರಾತ್ರಿ ವೇಳೆ ದಿಢೀರ್‌ ಭೇಟಿ ನೀಡಿದ್ದಾಗ ಅಧಿಕಾರಿಗಳು ಕೆಲಸಕ್ಕೆ ಚಕ್ಕರ್‌ ಹೊಡೆಯುತ್ತಿರುವುದು ಕಂಡುಬಂದಿದೆ. ಹೀಗಾಗಿ ವಿಡಿಯೊ ಕಾನ್ಫರೆನ್ಸ್‌ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ವಲಯ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಲು ಮತ್ತು ನಾಗರಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಕೇಂದ್ರೀಕೃತ ವಿಡಿಯೊ ಕಾನ್ಫರೆನ್ಸ್‌ ವ್ಯವಸ್ಥೆ ಪೂರಕವಾಗಲಿದೆ’ ಎನ್ನುತ್ತಾರೆ ಅವರು.

‘ಎರಡು ದಿನಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಹವಾಮಾನ ಇಲಾಖೆಯಿಂದ ಬಂದಿದೆ. ನಿಯಂತ್ರಣ ಕೊಠಡಿಗಳಲ್ಲಿದ್ದು ನಾಗರಿಕ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಅಧಿಕಾರಿಗಳು ಈ ರೀತಿ ಬೇಜವಾಬ್ದಾರಿಯಿಂದ ನಾಪತ್ತೆಯಾದರೆ, ಅನಾಹುತಗಳು ಸಂಭವಿಸಿದಾಗ ಜನರ ನೆರವಿಗೆ ಮುಂದಾಗುವುದು ಹೇಗೆ’ ಎಂದು ಪ್ರಶ್ನಿಸುವ ಸಂಪತ್‌ರಾಜ್‌, ‘ನಾಗರಿಕರು ಕರೆ ಮಾಡಿ ಸಹಾಯ ಯಾಚಿಸಿದ ಕಡೆಗಳಿಗೆ ತಕ್ಷಣದಲ್ಲಿ ತಲು‍ಪುವಂತೆ ಎಲ್ಲ ನಿಯಂತ್ರಣ ಕೊಠಡಿಗಳ ಬಳಿ ಪಹರಿ ಗಸ್ತುವಾಹನ ಸಜ್ಜಾಗಿಟ್ಟುಕೊಳ್ಳುವಂತೆ ಸೂಚನೆ ಕೊಡಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT