ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕಕ್ಕೆ ಮಹತ್ವದ ಮುನ್ನುಡಿ

ಶ್ರೇಯಸ್‌ ಗೋಪಾಲ್‌ಗೆ ಐದು ವಿಕೆಟ್‌
Last Updated 25 ಅಕ್ಟೋಬರ್ 2017, 19:59 IST
ಅಕ್ಷರ ಗಾತ್ರ

ಶಿವಮೊಗ್ಗ: ನಿರೀಕ್ಷೆಯಂತೆ ಎರಡನೇ ದಿನ ಎರಡೂ ತಂಡಗಳು ಏಳುಬೀಳುಗಳನ್ನು ಕಂಡವು. ಹೈದರಾಬಾದ್‌ನ ಕೊನೆಯ ಐದು ವಿಕೆಟ್‌ಗಳನ್ನು  ಬೇಗನೇ ಕಬಳಿಸಿದ ಶ್ರೇಯಸ್‌ ಗೋಪಾಲ್‌ (17ಕ್ಕೆ5) ಕರ್ನಾಟಕ 47 ರನ್‌ಗಳ ಅತ್ಯಮೂಲ್ಯ ಮೊದಲ ಇನಿಂಗ್ಸ್‌ ಮುನ್ನಡೆ ಪಡೆಯಲು ನೆರವಾದರು.

ರಣಜಿ ಟ್ರೋಫಿ ‘ಎ’ ಗುಂಪಿನ ಈ ಲೀಗ್‌ ಪಂದ್ಯದಲ್ಲಿ ಕರ್ನಾಟಕ ಎರಡನೇ ಇನಿಂಗ್ಸ್‌ನಲ್ಲಿ ಆರಂಭಿಕ ಕುಸಿತ ಕಂಡರೂ ನಂತರ ಚೇತರಿಕೆಯ ಹಾದಿ ಹಿಡಿಯಿತು.

ನವುಲೆಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಪಂದ್ಯದ ಎರಡನೇ ದಿನವಾದ ಬುಧವಾರ ಕರ್ನಾಟಕ ಎರಡನೇ ಇನಿಂಗ್ಸ್‌ನ ಒಂದು ಹಂತದಲ್ಲಿ 57 ರನ್‌ಗಳಿಗೆ ನಾಲ್ಕು ವಿಕೆಟ್‌ ಕಳೆದುಕೊಂಡು ಮತ್ತೆ ಇಕ್ಕಟ್ಟಿಗೆ ಸಿಲುಕಿತ್ತು. ಆದರೆ ಕರುಣ್‌ ನಾಯರ್ (ಬ್ಯಾಟಿಂಗ್ 37) ಮತ್ತು ಸ್ಟುವರ್ಟ್‌ ಬಿನ್ನಿ (ಬ್ಯಾಟಿಂಗ್ 27) ನೆರವಿಗೆ ಬಂದು ಮುರಿಯದ ಐದನೇ ವಿಕೆಟ್‌ಗೆ 71 ರನ್‌ ಸೇರಿಸಿ ತಂಡದ ರಕ್ಷಣೆಗೆ ನಿಂತರು. ದಿನದ ಕೊನೆಗೆ ಕರ್ನಾಟಕ 4 ವಿಕೆಟ್‌ಗೆ 128 ರನ್‌ ಗಳಿಸಿದ್ದು, ಒಟ್ಟಾರೆ ಮುನ್ನಡೆಯನ್ನು 175 ರನ್‌ಗಳಿಗೆ ಹಿಗ್ಗಿಸಿದೆ.

ಉತ್ತಮ ಬೌಲಿಂಗ್‌ ಮಾಡಿದ ಎಡಗೈ ಸ್ಪಿನ್ನರ್‌ ಮೆಹದಿ ಹಸನ್‌ ಕರ್ನಾಟಕದ ನಾಲ್ಕು ವಿಕೆಟ್‌ಗಳನ್ನೂ ಪಡೆದು ಆತಂಕ ಮೂಡಿಸಿದ್ದರು. ಒಟ್ಟಾರೆ ಮೊದಲ ದಿನ ವೇಗದ ಬೌಲರ್‌ಗಳು ಮಿಂಚಿದರೆ ಎರಡನೇ ದಿನ ಸ್ಪಿನ್ನರ್‌ಗಳು ವಿಜೃಂಭಿಸಿದರು.

ಇದಕ್ಕೆ ಮೊದಲು ಕರ್ನಾಟಕದ 183 ರನ್‌ಗಳಿಗೆ ಉತ್ತರವಾಗಿ ಮಂಗಳ ವಾರ 3 ವಿಕೆಟ್‌ಗೆ 51 ರನ್‌ ಗಳಿಸಿದ್ದ ಹೈದರಾಬಾದ್‌ ಮೊದಲ ಇನಿಂಗ್ಸ್‌ 136 ರನ್‌ಗಳಿಗೆ ಕೊನೆಗೊಂಡಿತ್ತು.

ಆದರೆ ಮೊದಲ ಅವಧಿಯ ಆಟ ದಲ್ಲಿ ಕರ್ನಾಟದ ವೇಗದ ದಾಳಿಯನ್ನು ಎಚ್ಚರಿಕೆಯಿಂದ ನಿಭಾಯಿಸಿದ ಹೈದರಾ ಬಾದ್‌ ವಿಕೆಟ್‌ಗಳನ್ನು ಕಾಪಾಡುವುದಕ್ಕೇ ಆದ್ಯತೆ ನೀಡಿದಂತೆ ಕಂಡಿತು. ಒಂದು ಗಂಟೆಯ ಆಟದಲ್ಲಿ (11  ಓವರ್‌ಗಳಲ್ಲಿ) ಬರೇ 10 ರನ್‌ಗಳು ಬಂದಿದ್ದವು. 16ನೇ ಓವರ್‌ನಲ್ಲಿ ದಿನದ ಮೊದಲ ಬೌಂಡರಿ ಬಿ.ಸಂದೀಪ್‌ ಮೂಲಕ (ಸ್ಟುವರ್ಟ್‌ ಬಿನ್ನಿ ಬೌಲಿಂಗ್‌ನಲ್ಲಿ ನೇರ ಡ್ರೈವ್‌) ಬಂದಿತ್ತು.

ಎಡಗೈ ವೇಗಿ ಶ್ರೀನಾಥ್ ಅರವಿಂದ್‌ ದಿನದ 18ನೇ ಓವರ್‌ನಲ್ಲಿ ಕರ್ನಾಟಕಕ್ಕೆ  ಮೊದಲ ಯಶಸ್ಸು ದೊರಕಿಸಿಕೊಟ್ಟರು. ಬಿ.ಸಂದೀಪ್ (19, 66 ಎಸೆತ)  ಶಾರ್ಟ್‌ಪಿಚ್‌ ಎಸೆತವನ್ನು ಆಡಲು ಹೋದಾಗ ಬ್ಯಾಟ್‌ ಸವರಿಕೊಂಡು ಬಂದ ಚೆಂಡನ್ನು ವಿಕೆಟ್‌ ಕೀಪರ್‌ ಗೌತಮ್‌ ಎಡಕ್ಕೆ ಬಗ್ಗಿ ಅತ್ಯುತ್ತಮವಾಗಿ ಹಿಡಿದರು. ಲಂಚ್‌ ವೇಳೆ ಮೊತ್ತ 5 ವಿಕೆಟ್‌ಗೆ 102.

ಊಟದ ನಂತರ ವಿಕೆಟ್‌ ಕೀಪರ್‌ ಕೊಲ್ಲ ಸುಮಂತ್‌ (68, 130 ಎಸೆತ, 1ಸಿ, 9 ಬೌಂಡರಿ) ಶ್ರೇಯಸ್‌ ಗೋಪಾಲ್ ಬೌಲಿಂಗ್‌ನಲ್ಲಿ ಮೊದಲ  ಸ್ಲಿಪ್‌ನಲ್ಲಿದ್ದ ವಿನಯ್ ಕುಮಾರ್‌ಗೆ ಕ್ಯಾಚಿತ್ತರು. ಉಳಿದವರು ಹೆಚ್ಚು ಪ್ರತಿರೋಧ ತೋರಲಿಲ್ಲ. ಒಟ್ಟಾರೆ ಊಟದ ನಂತರ ಶ್ರೇಯಸ್‌ 5.4 ಓವರುಗಳಲ್ಲಿ ಬರೇ 9 ರನ್ ನೀಡಿ 5 ವಿಕೆಟ್‌ಗಳನ್ನು ಪಡೆದರು.

ಕರ್ನಾಟಕಕ್ಕೆ ಸಮರ್ಥ್‌ ಮತ್ತು ರಾಹುಲ್‌ ಉತ್ತಮ ಆರಂಭ ನೀಡುವಂತೆ ಕಂಡಿತು. 45 ರನ್‌ಗಳ ಜೊತೆಯಾಟದ ನಂತರ ಕುಸಿತ ಶುರುವಾಯಿತು. ಹೊಸ ಚೆಂಡನ್ನು ಹಂಚಿಕೊಂಡಿದ್ದ ಸ್ಪಿನ್ನರ್‌ ಮೆಹದಿ ಹಸನ್‌, ಎರಡನೇ ಸ್ಪೆಲ್‌ನಲ್ಲಿ ಆತಂಕ ಮೂಡಿಸಿದರು. ಕೆ.ಎಲ್‌.ರಾಹುಲ್‌ (23) ಎರಡನೇ ಬಾರಿ ನಿರಾಸೆ ಮೂಡಿಸಿದರು.

ಬದಿಗೆ ಸರಿದು ‘ಕಟ್‌’ ಮಾಡುವ ಯತ್ನದಲ್ಲಿ ವಿಕೆಟ್‌ ತೆತ್ತರು. ಸಮರ್ಥ್ ಉತ್ತಮ ಎಸೆತಕ್ಕೆ ಬಲಿಯಾದರೆ, ಮಯಂಕ್‌ ಅಗರವಾಲ್‌ ಮುಂದೆ ಹೋಗಿ ಬೀಸಲು ಯತ್ನಿಸಿ ಬೌಲ್ಡ್‌ ಆದರು. ಬ್ಯಾಟಿಂಗ್‌ನಲ್ಲಿ ಬಡ್ತಿ ಪಡೆದ ಕೆ.ಗೌತಮ್‌ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. 12 ರನ್‌ ಅಂತರದಲ್ಲಿ ನಾಲ್ಕು ವಿಕೆಟ್‌ಗಳು ಉರುಳಿದವು.

ಈ ಹಂತದಲ್ಲಿ ಕರುಣ್‌ ನಾಯರ್‌ ಜೊತೆಗೂಡಿದ ಸ್ಟುವರ್ಟ್‌ ಬಿನ್ನಿ ಕೆಲವು ಆತಂಕದ ಕ್ಷಣಗಳನ್ನು ಕಂಡರೂ ದಿನದಾಟವನ್ನು ಪೂರೈಸುವಲ್ಲಿ ಯಶಸ್ವಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT