ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರಂಕಿಯಲ್ಲೇ ಮುಂದುವರಿದ ಸೊಪ್ಪಿನ ದರ

Last Updated 25 ಅಕ್ಟೋಬರ್ 2017, 19:59 IST
ಅಕ್ಷರ ಗಾತ್ರ

ಬೆಂಗಳೂರು: ಹಬ್ಬಗಳು ಬಂದಾಗ ತರಕಾರಿ ಮತ್ತು ಹೂಗಳ ಬೆಲೆ ಏರಿಕೆಯಾಗುವುದು, ಹಬ್ಬದ ಸಡಗರ ಮುಗಿದ ನಂತರ ಕಡಿಮೆಯಾಗುವುದು ವಾಡಿಕೆ. ಆದರೆ, ಈ ಬಾರಿ ಮಾರುಕಟ್ಟೆ ಪರಿಸ್ಥಿತಿ ಇದಕ್ಕೆ ವ್ಯತಿರಿಕ್ತವಾಗಿದೆ. ದೀಪಾವಳಿ ಸಂದರ್ಭದಲ್ಲಿ ಏರಿಕೆಯಾಗಿದ್ದ ಸೊಪ್ಪು–ತರಕಾರಿ ದರಗಳು ಕಡಿಮೆಯಾಗುವ ಬದಲು ಮತ್ತಷ್ಟು ಹೆಚ್ಚಾಗಿವೆ.

ಸದ್ಯಕ್ಕೆ ಮಾರುಕಟ್ಟೆಯಲ್ಲಿ ಯಾವುದೇ ತರಕಾರಿ ಮತ್ತು ಸೊಪ್ಪು ಒಂದಂಕಿ ದರದಲ್ಲಿ ಲಭ್ಯವಿಲ್ಲ. ಕೊತ್ತಂಬರಿ ಸೊಪ್ಪು ಕೆ.ಜಿ.ಗೆ ₹ 200ಕ್ಕೆ ಮಾರಾಟವಾಗುತ್ತಿದೆ. ಒಂದು ತಿಂಗಳ ಹಿಂದೆ ಪ್ರತಿ ಕಟ್ಟಿಗೆ ₹ 4 ರಿಂದ ₹ 5 ಇದ್ದ ಇದರ ಧಾರಣೆ ಈಗ ₹ 30ರಿಂದ ₹ 50ಕ್ಕೆ ತಲುಪಿದೆ. ಮೆಂತ್ಯೆ ಸೊಪ್ಪು ಕಟ್ಟಿಗೆ ₹ 20 ರಿಂದ ₹ 30ಕ್ಕೆ ಮಾರಾಟವಾಗುತ್ತಿದೆ.

ಮೂಲಂಗಿ ಪ್ರತಿ ಕೆ.ಜಿ.ಗೆ ಹಬ್ಬದ ಸಂದರ್ಭದಲ್ಲಿ ₹ 40 ಇದ್ದುದು ಈಗ ₹ 60ಕ್ಕೆ, ಪ್ರತಿ ಕೆ.ಜಿ. ಟೊಮೆಟೊ ದರ ₹ 20– ₹ 25 ಇದ್ದುದು ಈಗ  ₹40ರಿಂದ ₹ 60 ಹೆಚ್ಚಳವಾಗಿದೆ.  ಸದ್ಯ ನಗರದ ಕೆ.ಆರ್. ಮಾರುಕಟ್ಟೆಯಲ್ಲಿ ಬೀನ್ಸ್‌ ಕೆ.ಜಿ.ಗೆ ₹ 60–₹ 80, ಕ್ಯಾರೆಟ್ ₹ 50– ₹40, ಕ್ಯಾಪ್ಸಿಕಂ ₹ 75,  ಬೀಟ್‌ರೂಟ್ ₹ 60, ಹಸಿರು ಮೆಣಸು ₹ 80, ಬೆಂಡೆ ₹ 40– ₹50 ದರ ಇದೆ.

ಹಬ್ಬದ ಬೆನ್ನಲ್ಲೇ ಮದುವೆ ಸಮಾರಂಭಗಳು ಶುರುವಾಗಿವೆ. ಹಾಗಾಗಿ ತರಕಾರಿ ಬೆಲೆಗಳು ಇನ್ನೂ ಕೆಲವು ತಿಂಗಳು ಇಳಿಕೆಯಾಗುವ ಸಾಧ್ಯತೆಯೂ ಕಡಿಮೆ ಎನ್ನುತ್ತಾರೆ ವ್ಯಾಪಾರಿಗಳು.

ಮಳೆಯಿಂದ ಬೆಳೆ ಹಾನಿ: ನಗರಕ್ಕೆ ಹೆಚ್ಚು ತರಕಾರಿ ಪೂರೈಕೆ ಮಾಡುವ ಕೋಲಾರ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ನೆಲಮಂಗಲ ಭಾಗದಲ್ಲಿ ಅಕ್ಟೋಬರ್ 15ರವರೆಗೂ ಹೆಚ್ಚು ಮಳೆ ಬಿದ್ದ ಕಾರಣ ಸಾಕಷ್ಟು ಪ್ರಮಾಣದ ಬೆಳೆ ಹಾನಿಯಾಗಿದೆ. ಮಾರುಕಟ್ಟೆಗೆ ತರಕಾರಿ ಪೂರೈಕೆಯಲ್ಲೂ ವ್ಯತ್ಯಯವಾಗಿದೆ. ಹಾಗಾಗಿ ಬೆಲೆಗಳು ಗಗನಮುಖಿಯಾಗಿವೆ.

‘ಕಳೆದ ತಿಂಗಳಿಗೆ ಹೋಲಿಸಿದರೆ ತರಕಾರಿ ಧಾರಣೆಯಲ್ಲಿ ಶೇ 20ರಿಂದ ಶೇ 40 ರಷ್ಟು ಏರಿಕೆಯಾಗಿದೆ. ಟೊಮೆಟೊ ಮತ್ತು ಕೊತ್ತಂಬರಿ ಸೊಪ್ಪು ಬೆಳೆಗಳು ಮಳೆಯಿಂದಾಗಿ ಹೆಚ್ಚು ಹಾನಿಗೊಳಗಾಗಿವೆ. ಹೊಸ ಬೆಳೆ ಮಾರುಕಟ್ಟೆಗೆ ಬರಲು ಇನ್ನೂ 1ರಿಂದ 2 ತಿಂಗಳು ಬೇಕು. ಅಲ್ಲಿಯವರೆಗೆ ಬೆಲೆ ಹೀಗೆಯೇ ಮುಂದುವರೆಯಲಿದೆ’ ಎನ್ನುತ್ತಾರೆ ಹಾಪ್‌ಕಾಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಎಂ.ವಿಶ್ವನಾಥ್

ಕಾರ್ತಿಕ ಮಾಸದಲ್ಲಿ  ನಡೆಯುವ ಸಮಾರಂಭಗಳ ಅಡುಗೆಗೆ ಟೊಮೆಟೊ ಬಳಕೆ ಸರ್ವೇ ಸಾಮಾನ್ಯ. ಹೀಗಾಗಿ ಬೇಡಿಕೆ ಹೆಚ್ಚಿದೆ. ಇದೂ ಕೂಡ ಬೆಲೆ ಏರಿಕೆಗೆ ಕಾರಣವಾಗಿದೆ ಎನ್ನುವುದು ತರಕಾರಿ ವ್ಯಾಪಾರಿಗಳ ಅನಿಸಿಕೆ.

‘ಈಗ ಪ್ರತಿ ಕೆ.ಜಿ. ಈರುಳ್ಳಿ ಬೆಲೆ ₹ 40 ರಿಂದ 60 ಇದೆ. ಇನ್ನೂ ಮೂರು ತಿಂಗಳು ಬೆಲೆ ಇಳಿಕೆಯಾಗುವ ಸಾಧ್ಯತೆ ಕಡಿಮೆ. ಜನವರಿ ನಂತರ ತಮಿಳುನಾಡಿನ ಕೃಷ್ಣಗಿರಿ, ಧರ್ಮಪುರಿ, ಕೊಯಮತ್ತೂರು ಮತ್ತು ಮಹಾರಾಷ್ಟ್ರದಿಂದ ಈರುಳ್ಳಿ ಪೂರೈಕೆಯಾಗುತ್ತದೆ. ಆಗ ಬೆಲೆಯೂ ಕಡಿಮೆಯಾಗುತ್ತದೆ’ ಎನ್ನುತ್ತಾರೆ ಕೆ.ಆರ್. ಮಾರುಕಟ್ಟೆಯ ವ್ಯಾಪಾರಿ ಝಾಕಿರ್ ಹುಸೇನ್.

‘ಬೆಳೆಗಳಿಗೆ ಮಳೆಯಿಂದಾಗಿ ಹಾನಿಯಾಗಿದೆ. ಚಳಿಗಾಲದಲ್ಲಿ ತರಕಾರಿಗಳಿಗೆ ಕಂಬಳಿ ಹುಳು ಸೇರಿದಂತೆ ವಿವಿಧ ರೋಗಗಳ ಕಾಟ ಹೆಚ್ಚು. ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿಯೂ ಬರುವುದಿಲ್ಲ. ಹಾಗಾಗಿ ಚಳಿಗಾಲ ಮುಗಿಯುವವರೆಗೆ ತರಕಾರಿ ಮತ್ತು ಸೊಪ್ಪುಗಳ ಬೆಲೆ ಇಳಿಯದು’ ಎನ್ನುತ್ತಾರೆ ನೆಲಮಂಗಲದ ರೈತ ಪ್ರಸಾದ್‌.

ತರಕಾರಿ (ಕೆ.ಜಿ.ಗಳಲ್ಲಿ) –ಬೆಲೆ (ರೂಗಳಲ್ಲಿ)

ಕೊತ್ತಂಬರಿ ಸೊಪ್ಪು–200

ಮೆಂತ್ಯೆ ಸೊಪ್ಪು–138

ಬೀನ್ಸ್ –72

ಟೊಮೆಟೊ–52

ಕೋಸು–80

ಕ್ಯಾಪ್ಸಿಕಂ–98

ಕ್ಯಾರೆಟ್–70

ಹೂಕೋಸು–68

ಮೂಲಂಗಿ–52

(ಹಾಪ್‌ಕಾಮ್ಸ್‌ ಧಾರಣೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT