ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಮಾಣ ತಡೆಗೆ ಹೈಕೋರ್ಟ್ ನಕಾರ

Last Updated 25 ಅಕ್ಟೋಬರ್ 2017, 20:13 IST
ಅಕ್ಷರ ಗಾತ್ರ

ಬೆಂಗಳೂರು: ಶಿವಾನಂದ ವೃತ್ತದ ಬಳಿಯ ಉಕ್ಕಿನ ಮೇಲ್ಸೇತುವೆ ನಿರ್ಮಾಣಕ್ಕೆ ತಡೆ ನೀಡಲು ಹೈಕೋರ್ಟ್‌ ನಿರಾಕರಿಸಿದೆ.

ಈ ಕುರಿತಂತೆ ಕುಮಾರ ಪಾರ್ಕ್ ಪೂರ್ವ ಭಾಗದ ನಿವಾಸಿ ಬಿ.ಪಿ.ಮಹೇಶ್ ಮತ್ತು 19 ಸ್ಥಳೀಯ ನಿವಾಸಿಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್‌.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್‌.ದಿನೇಶ್ ಕುಮಾರ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ಸುಮಾರು 45 ನಿಮಿಷಗಳ ಕಾಲ ವಿಚಾರಣೆ ನಡೆಸಿತು.

ಅರ್ಜಿದಾರರ ವಕೀಲ ಅಶೋಕ ಬಿ.ಪಾಟೀಲ, ‘ಮೇಲ್ಸೇತುವೆ ನಿರ್ಮಾಣದಿಂದ ಪ್ರಯೋಜನವಿಲ್ಲ. ಇದರಿಂದ ಶೇಷಾದ್ರಿಪುರಂ ಕಡೆ ಸಾಗುವ ಮಾರ್ಗದ ತುದಿಯಲ್ಲಿ ಮತ್ತಷ್ಟು ವಾಹನ ದಟ್ಟಣೆ ಹೆಚ್ಚುತ್ತದೆ’ ಎಂದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎ.ಎಸ್.ಪೊನ್ನಣ್ಣ, ‘ಇದು ಎರಡನೇ ಸುತ್ತಿನ ವ್ಯಾಜ್ಯ. ಈಗಾಗಲೇ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಅರ್ಜಿದಾರರ ಅಹವಾಲು ಆಲಿಸಿ ವಿಚಾರಣೆ ನಡೆಸಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಿದೆ. ಹೀಗಿರುವಾಗ ಮತ್ತೆ ಈ ಅರ್ಜಿ ವಿಚಾರಣೆ ನಡೆಸುವುದು ಸೂಕ್ತವಲ್ಲ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ರಮೇಶ್‌, ‘ಈ ಹಿಂದಿನ ಅರ್ಜಿಯಲ್ಲಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಎರಡು ತಿಂಗಳಿನಲ್ಲಿ ವಿಚಾರಣೆ ಮುಗಿಸಬೇಕು ಎಂದು ವಿಭಾಗೀಯ ನ್ಯಾಯಪೀಠ ನಿರ್ದೇಶನ ನೀಡಿದೆ. ಆದರೂ ನೀವು ವಿಚಾರಣೆ ನಡೆಸಿಲ್ಲ. ಆದ್ದರಿಂದ ಈ ಯೋಜನೆಗೆ ತಡೆ ನೀಡುತ್ತೇನೆ’ ಎಂದು ಆದೇಶ ಬರೆಸಲು ಮುಂದಾದರು.

ಇದಕ್ಕೆ ಬಲವಾದ ಆಕ್ಷೇಪ ವ್ಯಕ್ತಪಡಿಸಿದ ಪೊನ್ನಣ್ಣ, ‘ಸ್ವಾಮಿ, ಇದು 2012ರಲ್ಲಿ ಅನುಮೋದನೆ ನೀಡಿದ್ದ ಯೋಜನೆ. ಇದೇ ವರ್ಷದ ಜೂನ್‌ನಲ್ಲಿ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ. ಈ ಹಂತದಲ್ಲಿ ಯೋಜನೆಗೆ ತಡೆ ನೀಡಿದರೆ ಸಾರ್ವಜನಿಕರ ಉಪಯೋಗಕ್ಕೆ ಮಾಡಲಾಗುತ್ತಿರುವ ಬೃಹತ್‌ ಯೋಜನೆಯೊಂದಕ್ಕೆ ಧಕ್ಕೆ ಉಂಟಾಗುತ್ತದೆ. ದಯವಿಟ್ಟು ತಡೆ ನೀಡಬಾರದು’ ಎಂದು ಮನವಿ ಮಾಡಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ‘ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇದೇ 28ಕ್ಕೆ ಅರ್ಜಿದಾರರ ಅಹವಾಲು ಆಲಿಸಿ ವಿಚಾರಣೆ ನಡೆಸಬೇಕು. ನವೆಂಬರ್ 2ಕ್ಕೆ ಅಂತಿಮ ಆದೇಶ ಪ್ರಕಟಿಸಬೇಕು’ ಎಂದು ನಿರ್ದೇಶಿಸಿ ವಿಚಾರಣೆಯನ್ನು ನವೆಂಬರ್ 3ಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT