ಮಂಗಳವಾರ, ಸೆಪ್ಟೆಂಬರ್ 17, 2019
24 °C

ನ.1ರಿಂದ ದೆಹಲಿಯಲ್ಲಿ ಪ್ರತಿಭಟನೆ

Published:
Updated:

ಮೊಳಕಾಲ್ಮುರು: ಕೇಂದ್ರ ಸರ್ಕಾರ ಕೃಷಿ ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡುತ್ತಿರುವುದನ್ನು ವಿರೋಧಿಸಿ ಅಖಿಲ ಭಾರತ ಕಿಸಾನ್‌ ಸಭಾ ನೇತೃತ್ವದಲ್ಲಿ ದೆಹಲಿಯ ಜಂತರ್ ಮಂಥರ್‌ನಲ್ಲಿ ನ. 1ರಿಂದ ಐದು ದಿನಗಳ ಕಾಲ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಕಿಸಾನ್‌ ಸಭಾ ರಾಜ್ಯ ಅಧ್ಯಕ್ಷ ದೊಡ್ಡ ಉಳ್ಳಾರ್ಥಿ ಕರಿಯಣ್ಣ ಹೇಳಿದರು.

ಇಲ್ಲಿನ ಸಿಪಿಐ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಅತಿವೃಷ್ಟಿ, ಅನಾವೃಷ್ಟಿ, ಬೆಲೆ ಕುಸಿತ, ಬೆಂಬಲ ಬೆಲೆ ನಿಗದಿ ನಿರ್ಲಕ್ಷ್ಯ ಸೇರಿದಂತೆ ಹಲವು ಕಾರಣದಿಂದಾಗಿ ಕೃಷಿ ಕ್ಷೇತ್ರ ತುಂಬಾ ತೊಂದರೆಯಲ್ಲಿದೆ. ಜಿಪಿಡಿಯಲ್ಲಿ ಪ್ರಥಮ ಸ್ಥಾನದಲ್ಲಿದ್ದ ಕೃಷಿಕ್ಷೇತ್ರ ಈಗ ಕೊನೆ ಸ್ಥಾನಕ್ಕೆ ಬಂದಿದೆ. ರಾಷ್ಟ್ರ ಮಟ್ಟದಲ್ಲಿ ಕೃಷಿ ಅವಲಂಭಿತರ ಸಂಖ್ಯೆ ಶೇ 53ಕ್ಕೆ ಇಳಿಕೆಯಾಗಿದೆ. ಇದು ರಾಜ್ಯದಲ್ಲಿ ಶೇ 49ರಷ್ಟಿದೆ ಎಂದು ಹೇಳಿದರು.

ಕೃಷಿ ಕ್ಷೇತ್ರ ಲಾಭದಾಯಕವಾಗಿಲ್ಲದ ಪರಿಣಾಮ 1995ರಿಂದ ಇಲ್ಲಿವರೆಗೆ 5 ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ಸರಿಪಡಿಸಬೇಕಾದ ಕೇಂದ್ರ ಸರ್ಕಾರ ಕೃಷಿ ಭೂಮಿಯನ್ನು ಕಾರ್ಪೊರೇಟ್‌ ಸಂಸ್ಥೆಗಳಿಗೆ ಪರಾಭಾರೆ ಮಾಡಲು ಹೊರಟಿದೆ. ಇಂತಹ ಹತ್ತಾರು ಸಮಸ್ಯೆಗಳ ಬಗ್ಗೆ ಚರ್ಚಿಸಲು ಹಾಗೂ ಪರಿಹಾರ ದಾರಿ ಕಂಡುಕೊಳ್ಳಲು ಈ ಧರಣಿ ಆಯೋಜಿಲಾಗಿದೆ ಎಂದು ಹೇಳಿದರು.

ನೇಕಾರಿಕೆ, ಪಾದರಕ್ಷೆ ತಯಾರಿಕೆ ಸೇರಿದಂತೆ ಗುಡಿ ಕೈಗಾರಿಕೆ ಉತ್ಪನ್ನಗಳ ಮೇಲಿನ ಜಿಎಸ್‌ಟಿ ರದ್ದು ಮಾಡಬೇಕು. ರಾಜ್ಯದ ನೀರಾವರಿ ಯೋಜನೆಗಳಿಗೆ ಚುರುಕು ನೀಡಬೇಕು ಎಂದು ಧರಣಿಯಲ್ಲಿ ಆಗ್ರಹಿಸಲಾಗುವುದು ಎಂದರು.

ಸಿಪಿಐ ತಾಲ್ಲೂಕು ಅಧ್ಯಕ್ಷ ಜಾಫರ್ ಷರೀಫ್‌, ಕೆ.ಟಿ.ನಾಗರಾಜಪ್ಪ, ವೀರೇಶ್‌, ಹೊನ್ನೂರಪ್ಪ ಉಪಸ್ಥಿತರಿದ್ದರು.

Post Comments (+)