ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

“ಶೌಚಾಲಯ: ಗುರಿ ಮುಟ್ಟುವುದು ಎಂದಿಗೆ?’

ಜಿಲ್ಲೆಯಲ್ಲಿ 1.36 ಲಕ್ಷ ಶೌಚಾಲಯ ನಿರ್ಮಾಣದ ಗುರಿ
Last Updated 26 ಅಕ್ಟೋಬರ್ 2017, 5:44 IST
ಅಕ್ಷರ ಗಾತ್ರ

ಬಳ್ಳಾರಿ: ‘ಜಿಲ್ಲೆಯಲ್ಲಿ 1,36,000 ಶೌಚಾಲಯ ನಿರ್ಮಿಸುವ ಗುರಿಯನ್ನು ಮುಟ್ಟಲು ನಿಮಗೆ ಏನು ಕಷ್ಟ?’ ಎಂದು ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಹರ್ಷಗುಪ್ತ ಅಸಮಾಧಾನದಿಂದ ಅಧಿಕಾರಿಗಳನ್ನು ಪ್ರಶ್ನಿಸಿದರು.

ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಬುಧವಾರ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘2018ರ ಗಣರಾಜ್ಯೋತ್ಸವದ ಒಳಗೆ ಬಯಲು ಬಹಿರ್ದೆಸೆ ಮುಕ್ತ ರಾಜ್ಯವನ್ನಾಗಿಸಲು ಸರ್ಕಾರ ಪಣತೊಟ್ಟಿದೆ. ಅದಕ್ಕೆ ಇನ್ನು ಮೂರು ತಿಂಗಳು ಮಾತ್ರ ಉಳಿದಿದೆ. ನಿಗದಿತ ಗುರಿ ತಲುಪಲು ಇರುವ ಸಮಸ್ಯೆಯಾದರೂ ಏನು?’ ಎಂದು ಕೇಳಿದರು.

ಅವರಿಗೆ ಉತ್ತರಿಸಿದ ಮುಖ್ಯಕಾರ್ಯನಿರ್ವಹಣಾಧಿಕರಿ ಡಾ.ಕೆ.ವಿ.ರಾಜೇಂದ್ರ, ‘ಹಣಕಾಸಿನ ಕೊರತೆ ಎದುರಾಗಿದೆ. ಶೌಚಾಲಯ ನಿರ್ಮಿಸಿಕೊಂಡವರಿಗೆ ಸಕಾಲದಲ್ಲಿ ಪ್ರೋತ್ಸಾಹಧನ ದೊರೆಯುತ್ತಿಲ್ಲ. ಸುಮಾರು ₨ 3.12 ಕೋಟಿಯಷ್ಟು ಪ್ರೋತ್ಸಾಹಧನ ನೀಡಬೇಕಾಗಿದೆ. ಅದನ್ನು ಕೂಡಲೇ ಬಿಡುಗಡೆ ಮಾಡಬೇಕು’ ಎಂದು ಕೋರಿದರು.

ಅದಕ್ಕೆ ಪ್ರತಿಕ್ರಿಯಿಸಿದ ಹರ್ಷಗುಪ್ತಾ, ‘ಪ್ರೋತ್ಸಾಹಧನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಕಾರ್ಮಿಕರ ಬಳಕೆ ನಿಷಿದ್ಧ: ‘ಹಳ್ಳಿಗಳಲ್ಲಿ ಶೌಚದ ಗುಂಡಿಗಳನ್ನು ಸ್ವಚ್ಛಗೊಳಿಸಲು ಕಾರ್ಮಿಕರನ್ನು ಬಳಸುವಂತಿಲ್ಲ. ಮಲಹೊರುವ ಪದ್ಧತಿ, ಮಲಬಾಚುವ ಹಾಗೂ ಒಳಚರಂಡಿ ಶುಚಿತ್ವಕ್ಕೆ ಕಾರ್ಮಿಕರನ್ನು ಬಳಸಿಕೊಳ್ಳುವ ಪದ್ಧತಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹೀಗಾಗಿ, ಬಹಳ ಎಚ್ಚರಿಕೆಯಿಂದ ಅಧಿಕಾರಿಗಳು ಕರ್ತವ್ಯ ನಿಭಾಯಿಸಬೇಕು’ ಎಂದು ಸ್ಪಷ್ಟಪಡಿಸಿದರು.

ಎಷ್ಟು ವರ್ಷಕ್ಕೊಮ್ಮೆ?: ಶೌಚಾಲಯದ ಗುಂಡಿ ತುಂಬಲು ಎಷ್ಟು ಕಾಲಾವಧಿ ಬೇಕು ಮತ್ತು ಅದನ್ನು ಸ್ವಚ್ಛಗೊಳಿಸುವುದು ಹೇಗೆ ಎಂಬ ಅವರ ಪ್ರಶ್ನೆಗೆ ಅಧಿಕಾರಿಗಳು ನಿಖರ ಉತ್ತರ ನೀಡಲಿಲ್ಲ.

ಕೆಲವರು ಎರಡು ವರ್ಷಕ್ಕೊಮ್ಮೆ ಎಂದರೆ, ಇನ್ನೂ ಕೆಲವರು ಮೂರು ವರ್ಷಕ್ಕೊಮ್ಮೆ ತುಂಬುತ್ತದೆ ಎಂದರು. ಅವರಿಗೆ ಪ್ರತಿಕ್ರಿಯಿಸಿದ ಹರ್ಷಗುಪ್ತ, ‘ಗುಂಡಿ ಮೂರು ವರ್ಷಕ್ಕೊಮ್ಮೆಯೂ ತುಂಬೋದಿಲ್ಲ. ಕಾರ್ಯಕ್ಷೇತ್ರಕ್ಕೆ ಹೋದರೆ ಮಾತ್ರ ಇಂಥ ವಿಷಯಗಳು ನಿಮಗೆ ಗೊತ್ತಾಗುತ್ತವೆ’ ಎಂದರು.

ಮುಖ್ಯ ಯೋಜನಾಧಿಕಾರಿ ಚಂದ್ರಶೇಖರ ಗುಡಿ ಶೌಚಾಲಯ ನಿರ್ಮಾಣದ ಅಂಕಿ–ಅಂಶ ನೀಡಿದರು. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಎನ್.ರಾಜಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT