ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗಾಂಧಿ ಗ್ರಾಮ’ದಲ್ಲಿ ಸೌಲಭ್ಯವೇ ಮರೀಚಿಕೆ

ಹೆದ್ದಾರಿ ಬದಿ ರಾಶಿ ರಾಶಿ ತ್ಯಾಜ್ಯ, ಮೂಲ ಸೌಲಭ್ಯಕ್ಕೆ ಗ್ರಾಮಸ್ಥರ ಒತ್ತಾಯ
Last Updated 26 ಅಕ್ಟೋಬರ್ 2017, 6:51 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಎರಡು ಬಾರಿ ಗಾಂಧಿ ಗ್ರಾಮ ಪುರಸ್ಕಾರ, ಮಾದರಿ ಗ್ರಾಮ ಪಂಚಾಯಿತಿ ಪುರಸ್ಕಾರ ಮತ್ತು ಜಿ.ಪಿ–ಒನ್ ಸೌಲಭ್ಯದ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹಂಗಳ ಗ್ರಾಮದ ಬಾಬು ಜಗಜೀವನರಾಂ ಬಡಾವಣೆಯಲ್ಲಿ ಮೂಲ ಸಮಸ್ಯೆಗಳು ತಾಂಡವವಾಡುತ್ತಿವೆ.

ಗ್ರಾಮ ಪಂಚಾಯಿತಿ ಕೇಂದ್ರವಾಗಿರುವ ಹಂಗಳ ಗ್ರಾಮ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರವಾಗಿದೆ. ವ್ಯಾಪಾರ ವಹಿವಾಟಿನ ಪ್ರಮುಖ ತಾಣವೂ ಹೌದು. ಬಂಡಿಪುರ ರಾಷ್ಟ್ರೀಯ ಉದ್ಯಾನ, ತಮಿಳುನಾಡಿನ ಊಟಿಗೆ ನಿತ್ಯ ಸಾವಿರಾರು ಜನರು ಈ ಗ್ರಾಮದ ಮೂಲಕವೇ ಓಡಾಡುತ್ತಾರೆ. ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಹಾಗೂ ‘ಕಾಡಾ’ ಅಧ್ಯಕ್ಷರು ವಾಸವಾಗಿದ್ದಾರೆ. ಹಾಗಿದ್ದೂ, ಈ ಗ್ರಾಮದಲ್ಲಿ ಸಮಸ್ಯೆಗಳೇನು ಕಡಿಮೆಯಾಗಿಲ್ಲ.

ಗ್ರಾಮದ ಜಗಜೀವನರಾಂ ಬಡಾವಣೆಯಲ್ಲಿ ಸುಮಾರು 400 ಮನೆಗಳಿವೆ. ಅನೇಕರು ಕೂಲಿ, ಸಣ್ಣಪುಟ್ಟ ವ್ಯಾಪಾರಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇಲ್ಲಿ ಯಾವ ಸೌಲಭ್ಯವೂ ಸಮರ್ಪಕವಾಗಿಲ್ಲ. ಈ ಬಗ್ಗೆ ಗ್ರಾಮ ಪಂಚಾಯಿತಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬಡಾವಣೆಯ ಮುಖಂಡರೊಬ್ಬರು ದೂರಿದರು.

ಬೀದಿ ದೀಪಗಳ ಸಮಸ್ಯೆ: ಬಡಾವಣೆಯಲ್ಲಿ 40ಕ್ಕೂ ಹೆಚ್ಚಿನ ವಿದ್ಯುತ್ ಕಂಬಗಳಿದ್ದು, ಅನೇಕ ಕಂಬಗಳಲ್ಲಿ ದೀಪಗಳು ಉರಿಯುತ್ತಿಲ್ಲ. ಇದರಿಂದಾಗಿ ನಿವಾಸಿಗಳು ರಾತ್ರಿ ಸಮಯದಲ್ಲಿ ಭಯದಿಂದ ಓಡಾಡುವಂತಾಗಿದೆ.

ಕಸ ವಿಲೇವಾರಿಯಾಗುತ್ತಿಲ್ಲ: ಕಸ ವಿಲೇವಾರಿಗಾಗಿ ತೊಟ್ಟಿಗಳನ್ನು ಇಡದ ಕಾರಣ ಜನರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುವಂತಾಗಿದೆ. ಇದರಿಂದ ಅನೇಕ ಕಡೆ ಕಸದ ರಾಶಿ ನಿರ್ಮಾಣವಾಗಿದೆ. ಕೊಳಚೆ ಹೆಚ್ಚಾಗಿ ಸೊಳ್ಳೆಗಳ ಹಾವಳಿ ತೀವ್ರವಾಗಿದೆ. ಸಾಂಕ್ರಾಮಿಕ ರೋಗಗಳನ್ನು ಹರಡುವ ಭೀತಿ ಮೂಡಿಸಿದೆ. ಕೆಲವು ತಿಂಗಳ ಹಿಂದೆ ಬಡಾವಣೆಯ ಹಲವು ಜನರು ಚಿಕೂನ್‌ಗುನ್ಯ ಮತ್ತು ವೈರಲ್ ಜ್ವರಕ್ಕೆ ತುತ್ತಾಗಿದ್ದರು.

‘ಕಸವನ್ನು ಎಲ್ಲೆಂದರಲ್ಲಿ ಬಿಸಾಡಿದ ಪರಿಣಾಮ ಚರಂಡಿಗಳಲ್ಲಿ ಹೂಳು ತುಂಬಿಕೊಂಡಿದೆ. ಇದನ್ನು ಸ್ವಚ್ಛ ಮಾಡಿಸಲು ಗ್ರಾಮ ಪಂಚಾಯಿತಿ ಯವರು ಆಸಕ್ತಿ ತೋರುತ್ತಿಲ್ಲ’ ಎಂದು ಆರ್‌ಟಿಐ ಕಾರ್ಯಕರ್ತ ಸಿದ್ದರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ನೀರು ಬರುತ್ತಿಲ್ಲ: ‘ಪ್ರತಿ ಮನೆಯಲ್ಲಿಯೂ ಶೌಚಾಲಯ ನಿರ್ಮಿಸಿಕೊಳ್ಳಬೇಕು ಎಂದು ಸರ್ಕಾರ ಹೇಳುತ್ತಿದೆ. ಆದರೆ, ಇಲ್ಲಿ ಸರಿಯಾಗಿ ನೀರು ಪೂರೈಕೆಯೇ ಆಗುತ್ತಿಲ್ಲ. ಕಿಲೋ ಮೀಟರ್‌ ದೂರದಲ್ಲಿರುವ ಕೊಳವೆ ಬಾವಿ ಮತ್ತು ಜಮೀನುಗಳನ್ನು ಆಶ್ರಯಿಸಬೇಕಿದೆ. ವಾರಕ್ಕೊಮ್ಮೆಯೂ ನೀರು ಬಿಡುತ್ತಿಲ್ಲ. ಹೀಗಿರುವಾಗ ಹೇಗೆ ಶೌಚಾಲಯ ಕಟ್ಟಿಕೊಳ್ಳುವುದು’ ಎನ್ನುವುದು ಇಲ್ಲಿನ ನಿವಾಸಿಗಳ ಪ್ರಶ್ನೆ.

ನೀರಿನ ಪರ್ಯಾಯ ಮೂಲವಾಗಿರುವ ದೊಡ್ಡಕೆರೆ ಸಮೀಪದ ಕೊಳವೆಬಾವಿ ಸುತ್ತ ಗಿಡಗಂಟಿಗಳು ಬೆಳೆದಿದ್ದು, ಮಳೆ ಬಂದರೆ ನೀರು ನಿಂತು ಕೊಳಚೆ ನಿರ್ಮಾಣವಾಗುತ್ತದೆ ಎಂದು ಸ್ಥಳೀಯರು ಆರೋಪಿಸಿದರು.

‘ಗ್ರಾಮದ ಸಮಸ್ಯೆಗಳನ್ನು ಸರಿಪಡಿಸುವಂತೆ ಗ್ರಾಮ ಪಂಚಾಯಿತಿಯನ್ನು ಕೋರಿದರೆ ಅವರಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ನಾಳೆ ಮಾಡುತ್ತೇವೆ ಎಂದು ಕಾಟಾಚಾರಕ್ಕೆ ಭರವಸೆ ನೀಡುತ್ತಾರೆ’ ಎಂದು ವಕೀಲ ರಾಜೇಶ್ ದೂರಿದರು.

ಮಲ್ಲೇಶ್‌ ಎಂ. ಮೇಲುಕಾಮನಹಳ್ಳಿ

***

<p>ಕೆಲವು ಕಂಬಗಳಿಗೆ ಬಲ್ಬ್‌ಗಳನ್ನು ಹಾಕಿಸಲಾಗಿದೆ. ಶೀಘ್ರದಲ್ಲೇ ಬಡಾವಣೆಯ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಕುಮಾರಸ್ವಾಮಿ</p><p>ಪಿಡಿಒ, ಹಂಗಳ ಗ್ರಾಮ ಪಂಚಾಯಿತಿ</p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT