ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೇಕರ್ ಫೇರ್‌ ಬೆಂಗಳೂರು’ ನ.16ರಿಂದ

Last Updated 26 ಅಕ್ಟೋಬರ್ 2017, 8:30 IST
ಅಕ್ಷರ ಗಾತ್ರ

ಧಾರವಾಡ: ’ರಾಜ್ಯದಲ್ಲಿ ಜನೋಪಯೋಗಿ ತಂತ್ರಜ್ಞಾನ ಅಭಿವೃದ್ಧಿಗೆ ಒತ್ತು ನೀಡುವ ಉದ್ದೇಶದಿಂದ ವಿಭಿನ್ನ ಬಗೆಯ ಆಲೋಚನೆ ಹಾಗೂ ಮಾದರಿಗಳನ್ನು ಅಭಿವೃದ್ಧಿಪಡಿಸಿದ ತಂತ್ರಜ್ಞರಿಗೆ ವೇದಿಕೆ ಕಲ್ಪಿಸಲು ನ.16ರಿಂದ ‘ಮೇಕರ್‌ ಫೇರ್‌ ಬೆಂಗಳೂರು’ ಎಂಬ ಮೂರು ದಿನಗಳ ಮೇಳವನ್ನು ಆಯೋಜಿಸಲಾಗಿದೆ’ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಪಿ.ನಾಗೇಶ್ ತಿಳಿಸಿದರು.

‘ಬೆಂಗಳೂರಿನ ಅರಮನೆ ಮೈದಾನದಲ್ಲಿ ಜರುಗಲಿರುವ ಬೆಂಗಳೂರು ತಂತ್ರಜ್ಞಾನ ಸಮ್ಮೇಳನದಲ್ಲಿ ಇಂಥದ್ದೊಂದು ವಿನೂತನ ಮಾದರಿಯ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅದಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗುತ್ತಿದೆ. ಮೆಕ್ಯಾನಿಕಲ್‌, ಎಲೆಕ್ಟ್ರಿಕಲ್‌, ಎಲೆಕ್ಟ್ರಾನಿಕ್‌ ವಿಭಾಗದಲ್ಲಿ ಅಭಿವೃದ್ಧಿಪಡಿಸಲಾದ ಹಾಗೂ ಅಭಿವೃದ್ಧಿ ಹಂತದಲ್ಲಿರುವ ವಿನೂತನ ಬಗೆಯ ತಂತ್ರಜ್ಞಾನವನ್ನು ಬೆಂಬಲಿಸಲಾಗುವುದು. ಇಂಥವುಗಳ ಪ್ರದರ್ಶನ ಹಾಗೂ ಅದರ ಮುಂದಿನ ಬೆಳವಣಿಗೆಗೆ ವೇದಿಕೆ ಕಲ್ಪಿಸಲು ಈ ಮೇಳ ಸಹಕಾರಿಯಾಗಲಿದೆ’ ಎಂದು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

‘ತಂತ್ರಜ್ಞಾನ ಕುರಿತು ಆಸಕ್ತಿ ಹೊಂದಿರುವ ಯಾರೇ ಆಗಲಿ ಇದರಲ್ಲಿ ಪಾಲ್ಗೊಳ್ಳಬಹುದು. ಅವರು ಸಿದ್ಧಪಡಿಸಿದ ತಂತ್ರಜ್ಞಾನದ ಕಲ್ಪನೆ, ನವೀಕರಣ, ಸಂಶೋಧನೆ ಮತ್ತು ಸಿದ್ಧಾಂತಗಳನ್ನು ಗೌರವಿಸಿ, ಅದು ಉಪಯುಕ್ತವಾಗಬಲ್ಲದಾದರೆ ಅಂಥ ತಂತ್ರಜ್ಞಾನದ ಖರೀದಿ ಅಥವಾ ಅಭಿವೃದ್ಧಿಗೆ ನೆರವು ನೀಡುವುದು ಇದರ ಹಿಂದಿರುವ ಉದ್ದೇಶ’ ಎಂದರು.

ವರ್ಕ್‌ಬೆಂಚ್‌ ಪ್ರಾಜೆಕ್ಟ್‌ನ ಸಿಇಒ ವಸಂತ ಕಾಮತ್ ಮಾತನಾಡಿ, ‘ನೆರೆಯ ರಾಜ್ಯದಲ್ಲಿ ಜನರಿಗೆ ಉಪಯುಕ್ತವಾಗಬಲ್ಲ ಸಾಕಷ್ಟು ಯಂತ್ರೋಪಕರಣಗಳು ತಯಾರಾಗುತ್ತಿವೆ. ಅವುಗಳಿಗೆ ಸಾಕಷ್ಟು ಬೇಡಿಕೆ ಇದೆ. ನಮ್ಮ ರಾಜ್ಯದಿಂದಲೂ ಸಾಕಷ್ಟು ಜನರು ಬೇರೆ ರಾಜ್ಯಗಳಿಂದ ಇಂಥ ತಂತ್ರಜ್ಞಾನವನ್ನು ಖರೀದಿಸುತ್ತಿದ್ದಾರೆ. ಆದರೆ, ನಮ್ಮಲ್ಲೇ ವಿನೂತನ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಬಹಳಷ್ಟು ಪ್ರತಿಭಾವಂತರು ಇದ್ದಾರೆ. ಅವರಿಗೆ ಅವಕಾಶ ನೀಡುವುದರ ಜತೆಗೆ ಹೊಸ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿ ನಿಲ್ಲಬೇಕೆನ್ನುವುದು ಸರ್ಕಾರದ ಆಶಯ’ ಎಂದರು.

‘ಇದಕ್ಕಾಗಿ ಆಸಕ್ತರು ಅಭಿವೃದ್ಧಿಪಡಿಸಿದ ಮಾದರಿ ಹಾಗೂ ವಿವರಗಳನ್ನು ಸ್ವೀಕರಿಸಲಾಗುತ್ತಿದೆ. ಇದರಲ್ಲಿ ಅತ್ಯುತ್ತಮವಾದದ್ದನ್ನು ಆಯ್ಕೆ ಮಾಡಲು ಸಮಿತಿಯನ್ನು ರಚಿಸಲಾಗಿದೆ. ಅತ್ಯುತ್ತಮ ಎಂದೆನಿಸುವ 100 ಮಾದರಿಗಳ ಪ್ರದರ್ಶನಕ್ಕೆ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯುವ ತಂತ್ರಜ್ಞಾನ ಸಮ್ಮೇಳನದಲ್ಲಿ ಅವಕಾಶ ನೀಡಲಾಗುವುದು’ ಎಂದರು.

ಆಸಕ್ತರು 9945002529 ಅಥವಾ 8861612102 ಅಥವಾ www.bengaluru.makerfaire.com ಅಥವಾ info@workbenchprojects.com ಸಂಪರ್ಕಿಸಬಹುದು ಎಂದು ತಿಳಿಸಿದರು. ಹುಬ್ಬಳ್ಳಿ ಐಟಿ ಪಾರ್ಕ್‌ ವ್ಯವಸ್ಥಾಪಕ ನಿರ್ದೇಶಕಿ ಔಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT